ರೈತ ಬೆಳೆದ ಬೆಳೆ ಕೊಳ್ಳುವವರಿಲ್ಲ, ಕೇಳುವವರಿಲ್ಲ
ರೈತನ ಗೋಳು ಬೇಕಿಲ್ಲ ಜನಪ್ರತಿನಿಧಿಗಳಿಗೆ.
ಪಾವಗಡ : ಬರ ಪೀಡಿತ ಪ್ರದೇಶವಾದ ತಾಲ್ಲೂಕಿನಲ್ಲಿ ಸರಿಯಾದ ಸಮಯಕ್ಕೆ ಉತ್ತಮ ಮಳೆ ಬಾರದೆ ಸಂಕಷ್ಟ ದಲ್ಲಿರುವ ಹಿಂದುಳಿದ ತಾಲ್ಲೂಕು ಪಾವಗಡ, ಇಲ್ಲಿನ ರೈತನ ಪರಿಸ್ಥಿತಿ ಲಾಕ್ ಡೌನ್ ನಿಂದ ಇನ್ನು ಸಂಕಷ್ಟಕ್ಕೆ ದೂಡಿದೆ.
ಮಳೆ ಆಶ್ರಿತ ಪ್ರದೇಶವಾದ ತಾಲೂಕಿನಲ್ಲಿ ಶೇಂಗಾ ಬೆಳೆಯನ್ನು ನೆಚ್ಚಿಕೊಂಡಿದ್ದ ರೈತರು ಸಕಾಲಕ್ಕೆ ಮಳೆ ಬರದೆ ಇಟ್ಟ ಖರ್ಚು ಸಹಾ ಕೈಗೆಟಕುತ್ತಿರಲಿಲ್ಲ ಇದರಿಂದ ಬೇಸತ್ತ ಕೆಲವು ರೈತರು ತಮ್ಮ ಕೊಳವೆಬಾವಿಯಲ್ಲಿ ಬರುವ ಅಲ್ಪ ಸ್ವಲ್ಪ ನೀರನ್ನು ನೆಚ್ಚಿಕೊಂಡು ತೋಟಗಾರಿಕೆ ಬೆಳೆಗಳಾದ ಕಲ್ಲಂಗಡಿ, ಕರಬೂಜ ಹಾಗೂ ಟಮೋಟ ಗಳಂತಹ ಬೆಳೆಗಳನ್ನು ಬೆಳೆಯಲಾರಂಭಿಸಿದರು ಆದರೆ ಈ ವರ್ಷವೂ ಸಹಾ ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯ ಲಾಕ್ ಡೌನ್ ನಿಂದ ಮತ್ತೊಮ್ಮೆ ರೈತರ ಸ್ಥಿತಿ ಚಿಂತಾಜನಕವಾಗಿದೆ.
ವಾಸ್ತವತೆ
ತಾಲೂಕಿನ ಚನ್ನಕೇಶವಪುರ ಗ್ರಾಮದ ವ್ಯಾಪ್ತಿಯ ರೈತ ಪ್ರಭಾಕರ್ ಎಂಬುವರು ಹರಿಹರಪುರ ಗ್ರಾಮದ 31 ನೇ ಸರ್ವೆ ನಂಬರ್ ನಲ್ಲಿ 3 ಎಕರೆ ಪ್ರದೇಶದಲ್ಲಿ 1 ಎಕರೆಗೆ 1 ಲಕ್ಷದಂತೆ 3 ಲಕ್ಷದ ವೆಚ್ಚದಲ್ಲಿ ಕಲ್ಲಂಗಡಿ ಬೆಳೆದಿದ್ದು ,ಬೇಸಿಗೆ ಹಾಗೂ ರಂಜನ್ ಹಬ್ಬದ ಪ್ರಯುಕ್ತ ಒಳ್ಳೆಯ ಲಾಭ ನಿರೀಕ್ಷೆಯಲ್ಲಿದ್ದರು ಆದರೆ ಈ ರೈತನಿಗೆ ಲಾಕ್ ಡೌನ್ ನಿಂದ ಮಾರುಕಟ್ಟೆಯ ವ್ಯವಸ್ಥೆ ಇಲ್ಲದೆ ಜಮೀನಿನ ರಸ್ತೆ ಬದಿಯಲ್ಲಿ ಒಂದು ಕೆಜಿಗೆ 4 ರಿಂದ 5 ರೂಪಾಯಿಯಂತೆ ಮಾರಾಟ ಮಾಡಲಾಗುತ್ತಿದೆ.
ಲಕ್ಷಾಂತರ ರೂಪಾಯಿ ಲಾಭದ ನಿರೀಕ್ಷೆಯಲ್ಲಿ ಇದ್ದ ರೈತ ಪ್ರಭಾಕರ್ ರವರಿಗೆ ಬೆಲೆ ಕುಸಿತದಿಂದ ಹಾಕಿದ ಬಂಡವಾಳವು ಬಾರದಂತೆ ಆಗಿರುವುದು ಚಿಂತೆಗೀಡು ಮಾಡಿದೆ. ಬೆಲೆ ಕುಸಿತದಿಂದ ಹಾಗೂ ಮಾರುಕಟ್ಟೆಯ ವ್ಯವಸ್ಥೆ ಇಲ್ಲದಿರುವುದರಿಂದ ಕಲ್ಲಂಗಡಿ ಹಣ್ಣು ಹೊಲದಲ್ಲೇ ಕೊಳೆಯುವಂತಾಗಿದೆ.
ಕಲ್ಲಂಗಡಿ ಹಣ್ಣು ಅರವತ್ತು ದಿನಗಳಲ್ಲಿ ಬರುವ ಬೆಳೆಯಾಗಿದ್ದು, ಸಿರುಗುಪ್ಪದ ವ್ಯಾಪಾರಸ್ಥರು ಹಣ್ಣು ಖರೀದಿಗೆ ಬರುವುದಾಗಿ ತಿಳಿಸಿದ್ದರು ಆದರೆ ಲಾಕ್ ಡೌನ್ ನಿಂದ ಕೊಳ್ಳುವವರು ಬಾರದ್ದರಿಂದ ಕಲ್ಲಂಗಡಿ ಹೊಲದಲ್ಲಿಯೇ ಉಳಿಯುವಂತೆ ಆಗಿದೆ. ಇದರಿಂದ ರೈತ ನಷ್ಟದ ಸುಳಿಯಲ್ಲಿ ಸಿಲುಕಿದಂತಾಗಿದೆ.
ರೈತರ ನೆರವಿಗೆ ಬಾರದ ಸರ್ಕಾರ
ರಾಜ್ಯದ ಕೇಸರಿ ಸರ್ಕಾರ ಲಾಕ್ ಡೌನ್ ಪದ ಬಳಸದೆ ಬಿಗಿಕ್ರಮ ಎಂದು ಎಲ್ಲವನ್ನು ಲಾಕ್ ಮಾಡಿದ್ದು ಆಯ್ತು ಆದರೆ ಈಗ ರೈತರ ನೆರವಿಗೆ ಮಾತ್ರ ಬರಲು ರೆಡಿಯಿಲ್ಲ.
ಶಾಸಕ ವೆಂಕಟರಮಣಪ್ಪ , ತೆನೆಹೊತ್ತ ಮಹಿಳೆ,ಮಣ್ಣಿನ ಮಕ್ಕಳ ಪಕ್ಷ ವಾದ ಜೆಡಿ ಎಸ್ ನ ಮಾಜಿ ಶಾಸಕ ತಿಮ್ಮರಾಯಪ್ಪ, ಸಂಸದ ನಾರಾಯಣ ಸ್ವಾಮಿ ಗೆ ರೈತರ ಕಷ್ಟದ ಅರಿವೆ ಇಲ್ಲದಂತಾಗಿದೆ.
ಲಾಕ್ ಡೌನ್ ನಿಂದ ಜನರ ರೈತರ ಸಂಕಷ್ಟಕ್ಜೆ ಸ್ಪಂದಿಸುವ ಗೋಜಿಗೆ ತಾಲ್ಲೂಕಿ ಹಾಲಿ, ಮಾಜಿ ಜನ ಪ್ರತಿನಿಧಿಗಳು ಹೋಗಿಲ್ಲ ಎನ್ನುತ್ತಿದ್ದಾರೆ ಸಾರ್ವಜನಿಕರು.
ತೋಟಗಾರಿಕಾ ಇಲಾಖೆಯ ಅವ್ಯವಸ್ಥೆ
ಕಳೆದ ಲಾಕ್ ಡೌನ್ ಸಮಯದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆದು ಸಂಕಟಕ್ಕೆ ಸಿಲುಕಿದ್ದ ಅರ್ಹ ರೈತ ಫಲಾನುಭವಿಗಳಿಗೆ ಇಲ್ಲಿಯವರೆಗೂ ಪರಿಹಾರ ಸಿಕ್ಕಿಲ್ಲ.
ರಾಜಕೀಯ ವ್ಯಕ್ತಿಗಳ ಸಂಬಂದಿಕರಿಗೆ , ರಾಜಕೀಯ ಪಕ್ಷಗಳ ಕಾರ್ಯಕರ್ತರ ಹಿನ್ನೆಲೆಯಿಂದ ಬಂದ ರೈತರಿಗೆ ಮಾತ್ರ ಪರಿಹಾರಗಳು ಸಿಗುವ ಪರಿಸ್ಥಿತಿ ಇಂದು ತಾಲ್ಲೂಕಿನಲ್ಲಿ ನಿರ್ಮಾಣ ವಾಗಿದೆ. ಇದಕ್ಕೆ ಒಂದು ಸ್ಪಷ್ಟ ಉದಾಹರಣೆ ಇಲ್ಲಿದೆ……
ಹರಿಹರಪುರ ಗ್ರಾಮದ ನಾಗಲಿಂಗಪ್ಪ ಎಂಬವರು ಎರಡೂವರೆ ಎಕರೆಯಲ್ಲಿ ಕರ್ಬೂಜ ಬೆಳೆದು ಲಾಕ್ ಡೌನ್ ಕಾರಣದಿಂದ ಭಾರಿ ನಷ್ಟಕ್ಕೆ ಒಳಗಾಗಿದ್ದರು..
ಸಂಬಂಧಪಟ್ಟ ಎಲ್ಲಾ ದಾಖಲಾತಿಗಳನ್ನು ತೋಟಗಾರಿಕೆ ಇಲಾಖೆಗೆ ಸಲ್ಲಿಸಿದರೂ ಸಹ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ನಾಗಲಿಂಗಪ್ಪ ತಿಳಿಸುತ್ತಾರೆ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕದ ಅಧ್ಯಕ್ಷರು ಹಾಗು ಪದಾಧಿಕಾರಿಗಳು ರೈತ ಪ್ರಭಾಕರ್ ತೋಟಕ್ಕೆ ಭೇಟಿ ನೀಡಿ ರೈತನ ಸಂಕಷ್ಟವನ್ನು ಕಣ್ಣಾರೆ ಕಂಡರು.
ಈಗಲಾದರೂ ರಾಜ್ಯಸರ್ಕಾರ ತೋಟಗಾರಿಕೆ ಇಲಾಖೆ ಎಚ್ಚೆತ್ತುಕೊಂಡು ಯೋಗ್ಯ ರೈತ ಫಲಾನುಭವಿಗಳಿಗೆ ಪರಿಹಾರ ನೀಡಲು ಮುಂದಾಗಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಅಧ್ಯಕ್ಷ ಪೂಜಾರಪ್ಪ ಆಗ್ರಹಿಸಿದ್ದಾರೆ.
ವರದಿ ಬುಲೆಟ್ ವೀರಸೇನಯಾದವ್