c3689038 f9d9 4fe7 ad4b 10b7f18c6061

ಬ್ಲಾಕ್‌ ಫಂಗಸ್‌ ಬಗ್ಗೆ ಆತಂಕ ಬೇಡ

DISTRICT NEWS

ಹೆಚ್ಚಿನ ಪ್ರಮಾಣದ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ

ದಾವಣಗೆರೆ ಜಿಲ್ಲೆ ಕೋವಿಡ್‌ ನಿಯಂತ್ರಣ ಪರಿಶೀಲನಾ ಸಭೆ

ದಾವಣಗೆರೆ : ರಾಜ್ಯದ ಕೆಲವೆಡೆ ಕಾಣಿಸಿಕೊಂಡಿರುವ ಬ್ಲಾಕ್‌ ಫಂಗಸ್‌ ರೋಗದ ಬಗ್ಗೆ ಕೆಲವರು ವದಂತಿಗಳನ್ನು ಹರಡಿಸುತ್ತಿದ್ದು ಈ ಬಗ್ಗೆ ಜನತೆ ಭಯ ಭೀತರಾಗುವ ಅಗತ್ಯವಿಲ್ಲ. ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಹೇಳಿದ್ದಾರೆ.

ಇದೊಂದು ಶಿಲೀಂದ್ರದಿಂದ ಉಂಟಾಗುವ ರೋಗ. ಇದಕ್ಕೆ ಅನೇಕ ಕಾರಣಗಳಿವೆ. ಅತಿಯಾದ ಸ್ಟಿರಾಯ್ಡ್‌ ಸೇವನೆ, ಹೆಚ್ಚಿನ ಆಕ್ಸಿಜನ್‌ ಬಳಕೆ, ಹೆಚ್ಚು ಅವಧಿಗೆ ಐಸಿಯುನಲ್ಲಿರುವುದು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು, ಮಧುಮೇಹ, ಮೂತ್ರಪಿಂಡ, ಕ್ಯಾನ್ಸರ್‌ ಮುಂತಾದ ರೋಗಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಆಗಿದ್ದಲ್ಲಿ ಅಂತವರಿಗೆ ಕೋವಿಡ್‌ ಬಂದು ಹೋದ ನಂತರ ಈ ಕಾಯಿಲೆ ಕಾಣಿಸಿಕೊಳ್ಳುತ್ತಿದೆ ಎಂದು ಕೋವಿಡ್‌ ಪರಿಶೀಲನಾ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ದಾವಣಗೆರೆಯಲ್ಲಿ ಮಾತನಾಡಿದರು.

ಈಗಾಗಲೇ ಈ ರೋಗದ ಪತ್ತೆ, ಚಿಕಿತ್ಸೆ ಮತ್ತು ಔಷಧೋಪಚಾರಗಳ ಬಗ್ಗೆ ವರದಿ ನೀಡಲು ತಜ್ಞರ ಸಮಿತಿ ರಚಿಸಲಾಗಿದೆ. ಇಂದು ಅವರು ವರದಿ ನೀಡುವ ನಿರೀಕ್ಷೆಯಿದೆ. ಆರಂಭಿಕ ಹಂತದಲ್ಲಿ ಇಎನ್‌ಟಿ ತಜ್ಞರು ಪರಿಶೀಲನೆ ನಡೆಸಬೇಕು. ಹೀಗಾಗಿ ಕೋವಿಡ್‌ ನಿಂದ ಗುಣಮುಖರಾದ ಎಲ್ಲರಲ್ಲಿ ಈ ಕಾಯಿಲೆ ಸಂಬಂಧ ತಪಾಸಣೆ ನಡೆಸಬೇಕು ಎಂದು ಸೂಚನೆ ನೀಡಿ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.

 

113b6735 beca 43b0 be53 031ac88eadf2

ಕೇಂದ್ರಕ್ಕೆ ಮನವಿ

ಫಂಗಸ್‌ ಚಿಕಿತ್ಸೆಗೆ ಸಂಬಂಧಿಸಿದ ಔಷಧದ ಸರಬರಾಜು ಕಡಿಮೆಯಿದೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ರಾಜ್ಯಕ್ಕೆ ಕಳುಹಿಸಿಕೊಡುವಂತೆ ಕೇಂದ್ರ ಸಚಿವ ಸದಾನಂದಗೌಡರಿಗೆ ಮನವಿ ಮಾಡಲಾಗಿದೆ. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಔಷಧ ಲಭ್ಯವಾಗಲಿದೆ. ಈಗಾಗಲೇ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವಂತೆ ಸೂಚನೆಯನ್ನೂ ನೀಡಲಾಗಿದೆ. ಹೀಗಾಗಿ ಜನರು ಆತಂಕ ಪಡುವ ಭಯಭೀತರಾಗುವ ಅಗತ್ಯವಿಲ್ಲ ಎಂದರು.
ಇನ್ನೂ ಕೋವಿಡ್‌ ಎರಡನೇ ಅಲೆ ಕೆಲ ಜಿಲ್ಲೆಗಳಲ್ಲಿ ಹೊರತುಪಡಿಸಿ ಹೆಚ್ಚಿನ ಜಿಲ್ಲೆಗಳಲ್ಲಿ ಇಳಿಮುಖ ಸ್ಥಿತಿಯಲ್ಲಿದೆ. ಇದು ಸಮಾಧಾನಕರ ಅಂಶ. ರಾಜ್ಯ ಸರ್ಕಾರ ಕೈಗೊಂಡ ಕಠಿಣ ಕ್ರಮ ಮತ್ತು ಜನತೆಯ ಸಹಕಾರದಿಂದ ಇದು ಸಾಧ್ಯವಾಗಿದೆ. ಇದೇ ರೀತಿ ಜನತೆ ಸಹಕಾರ ನೀಡಿದರೆ ಎರಡನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಬಹುದಾಗಿದೆ ಎಂದು ತಿಳಿಸಿದರು.

ಕೆಲ ಲೋಪಗಳಿವೆ
ಕೋವಿಡ್‌ ನಿಯಂತ್ರಣ ವಿಷಯಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲೆಯಲ್ಲಿ ಕೆಲ ನ್ಯೂನ್ಯತೆಗಳಿವವೆ. ಅವುಗಳ ನಿವಾರಣೆಗೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಆರು ತಿಂಗಳ ಹಿಂದೆಯೇ ಕಳುಹಿಸಿಕೊಟ್ಟಿದ್ದ ವೆಂಟಿಲೇಟರ್‌ಗಳನ್ನು ಕೆಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಅಳವಡಿಸಿಲ್ಲ. ಹಾಗೆಯೇ ಗ್ರಾಮ ಮಟ್ಟದ ಟಾಸ್ಕ್‌ಫೋರ್ಸ್‌ಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿಲ್ಲ. ರೋಗ ಲಕ್ಷಣಗಳಿಲ್ಲದ ಸೋಂಕಿತರನ್ನು ಕೋವಿಡ್‌ ಆರೈಕೆ ಕೇಂದ್ರಗಳಿಗೆ ಕಡ್ಡಾಯವಾಗಿ ದಾಖಲು ಮಾಡಿ ಔಷಧೋಪಚಾರ ನೀಡಲು ಸೂಚಿಸಲಾಗಿದೆ. ಮುಂದಿನ ವಾರದೊಳಗೆ ಈ ಎಲ್ಲಾ ಲೋಪಗಳನ್ನು ಸರಿಪಡಿಸಲು ಗಡುವು ನೀಡಲಾಗಿದೆ ಎಂದರು.709643d5 f9df 4b88 9642 a962ed371a6b

 

ಜಿಲ್ಲೆಯಲ್ಲಿ ಇರುವ ಖಾಸಗಿ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ಶೇಕಡಾ ಎಪ್ಪತ್ತೈದರಷ್ಟು ಹಾಸಿಗೆಗಳನ್ನು ನೀಡಬೇಕು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡಾ ಐವತ್ತರಷ್ಟು ಹಾಸಿಗೆ ನೀಡಬೇಕು ಎಂಬ ವಿಷಯ ಸರಿಯಾಗಿ ಪಾಲನೆ ಆಗಿಲ್ಲ. ಒಂದೆರಡು ದಿನದಲ್ಲಿ ಜಿಲ್ಲಾಡಳಿತ ಈ ಬಗ್ಗೆ ಕ್ರಮ ಜರುಗಿಸಬೇಕು. ಅಗತ್ಯವಾದರೆ ಕಾನೂನು ಮೂಲಕ ಶಿಸ್ತುಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರಿಗೆ ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಕೊರತೆ ಪ್ರಶ್ನೆಯಿಲ್ಲ
ಜಿಲ್ಲೆಯಲ್ಲಿ ಆಕ್ಸಿಜನ್‌ ಮತ್ತು ಔಷಧಗಳ ಕೊರತೆಯಿಲ್ಲ. ಅಗತ್ಯ ಪ್ರಮಾಣದ ಎಲ್ಲ ನೆರವನ್ನೂ ಒದಗಿಸಲಾಗಿದೆ. ಜಿಲ್ಲೆಯ ವ್ಯಾಪ್ತಿಗೆ ಸೇರಿರುವ ಎಲ್ಲಾ ತಾಲ್ಲೂಕುಗಳಲ್ಲಿ ಕನಿಷ್ಟ ನೂರು ಹಾಸಿಗೆಗಳಿಗೆ ಆಕ್ಸಿಜನ್‌ ಸಂಪರ್ಕ ನೀಡುವ ಆಲೋಚನೆ ಇದೆ. ಮೆಡಿಕಲ್‌ ಕಾಲೇಜು ಆಸ್ಪತ್ರೆಗಳಲ್ಲಿ ಎಲ್ಲಾ ಹಾಸಿಗೆಗಳಿಗೆ ಆಕ್ಸಿಜನ್‌ ಅಳವಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ವ್ಯಾಕ್ಸಿನ್‌ ವಿಷಯದಲ್ಲೂ ಕೊರೋನಾ ಮುಂಚೂಣಿ ಕಾರ್ಯಕರ್ತರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುವುದು. ಶಿಕ್ಷಕರನ್ನೂ ಆ ಪಟ್ಟಿಗೆ ಸೇರಿಸಲಾಗಿದೆ. ಒಟ್ಟಾರೆ ಮೂರನೇ ಅಲೆ ಬರುವ ವೇಳೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಪೂರ್ಣಗೊಳಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.c29cb5c2 c46b 4336 b1e9 5b2183a87a43

ಖಾಲಿ ಇರುವ ವೈದ್ಯರ ಬಹುತೇಕ ಎಲ್ಲಾ ಹುದ್ದೆಗಳನ್ನು ಒಂದು ವಾರದಲ್ಲಿ ತುಂಬಲಾಗುವುದು. ಹಾಗೆಯೇ ತಜ್ಞರ ಹುದ್ದೆಗಳನ್ನು ನೇಮಕ ಮಾಡಲಾಗುತ್ತಿದೆ. ಕೆಲ ದಿನಗಳಲ್ಲಿ ಆ ಪ್ರಕ್ರಿಯೆ ಕೂಡ ಮುಗಿಯಲಿದೆ. ಗುತ್ತಿಗೆ ಆಧಾರದಲ್ಲಿ ಅಗತ್ಯ ಸಂಖ್ಯೆ ಸಿಬ್ಬಂದಿ ನೇಮಕ ಅಧಿಕಾರವನ್ನೂ ಜಿಲ್ಲಾಡಳಿತಗಳಿಗೆ ನೀಡಲಾಗಿದೆ ಎಂದು ಸಚಿವ ಸುಧಾಕರ್‌ ವಿವರಿಸಿದರು.

ಸಂಸದರಾದ ಜಿ.ಎಂ, ಸಿದ್ದೇಶ್ವರ್‌, ನಗರಪಾಲಿಕೆ ಮೇಯರ್‌ ಎಸ್‌,ಟಿ ವಿರೇಶ್‌, ಚನ್ನಗಿರಿ ಶಾಸಕರಾದ ಮಾಡಾಳು ವಿರುಪಾಕ್ಷಪ್ಪ, ದಾವಣಗೆರೆ ಶಾಸಕ ರವೀಂದ್ರನಾಥ್‌, ಮಾಯಕೊಂಡ ಶಾಸಕರಾದ ಪ್ರೊ.ಲಿಂಗಣ್ಣ, ಹರಿಹರ ಶಾಸಕರಾದ ಎಸ್. ರಾಮಪ್ಪ, ವಿಧಾನಪರಿಷತ್‌ ಸದಸ್ಯರಾದ ಭೋಜೇಗೌಡ, ಜಿಲ್ಲಾಧಿಕಾರಿ ಮಹಂತೇಶ್‌ ಬೀಳಗಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯಮಹಂತೇಶ್‌, ಎಸ್ಪಿ ಹನುಮಂತರಾಯ, ಡಿಎಚ್‌ಒ ಡಾ. ನಾಗರಾಜ್‌ ಅವರು ಸಭೆಯಲ್ಲಿ ಹಾಜರಿದ್ದರು.