07aa169b 134b 4078 b704 221250bb1893

ʻ ನಿತ್ಯೋತ್ಸವ ʼಕವಿ ನಿಸಾರ್ ಅಹಮದ್ ಇನ್ನಿಲ್ಲ

STATE

ಬೆಂಗಳೂರು ಮೇ ೩: ಕನ್ನಡ ಹಿರಿಯ ಸಾಹಿತಿ ನಿತ್ಯೋತ್ಸವ ಕವಿ ಎಂದೇ ಖ್ಯಾತಿ ಗಳಿಸಿದ್ದ ಕೆ.ಎಸ್ ನಿಸಾರ್ ಅಹಮದ್(84) ಇಂದು ಬೆಂಗಳೂರಿನ ಪದ್ಮನಾಭ ನಗರದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಿಸಾರ್ ಅಹಮದ್ ಈ ಹಿಂದೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು

ಪ್ರೊ ಕೆ.ಎಸ್‌ ನಿಸಾರ್‌ ಅಹಮದ್‌ ಅವರ ಪೂರ್ಣ ಹೆಸರು ಕೊಕ್ಕರೆ ಹಳ್ಳಿ ಹೈದರ್‌ ನಿಸಾರ್‌ ಅಹಮದ್‌,ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ಫೆಬ್ರುವರಿ ೫. ೧೯೩೬ ಜನಿಸಿದರು. ೧೯೫೯ ಭೂ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು, ೧೯೯೪ ವರೆಗೆ ಸರ್ಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗೂ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದರು.

. ನಿಸಾರ್ ಅಹಮದ್ ಅವರ ಸಾಹಿತ್ಯಾಸಕ್ತಿ ೧೦ನೇ ವಯಸ್ಸಿನಲ್ಲೇ ಆರಂಭ ವಾಗಿತ್ತು, .’ಜಲಪಾತ’ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅವರು ಇಲ್ಲಿಯವರೆಗೆ (೨೦೧೮) ೨೧ ಕವನ ಸಂಕಲನಗಳು, ೧೪ ವೈಚಾರಿಕೆ ಕೃತಿಗಳು, ೫ ಮಕ್ಕಳ ಸಾಹಿತ್ಯ ಕೃತಿಗಳು, ೫ ಅನುವಾದ ಕೃತಿಗಳು, ೧೩ ಸಂಪಾದನಾ ಗ್ರಂಥಗಳನ್ನು ಹೊರತಂದಿದ್ದಾರೆ

ಅವುಗಳಲ್ಲಿ ಮನಸು ಗಾಂಧಿಬಜಾರು ಹಾಗು ನಿತ್ಯೋತ್ಸವ ಇವು ಪ್ರಸಿದ್ಧ ಕವನ ಸಂಕಲನಗಳಾಗಿವೆ. ಕುರಿಗಳು ಸಾರ್ಕುರಿಗಳು, ರಾಜಕೀಯ ವಿಡಂಬನೆ ಕವನ  ಪ್ರಖ್ಯಾತಿ ಗಳಿಸಿದ್ದವು.

ನಿಸಾರ್‌ ಅಹಮದ್‌ ಅವರಿಗೆ ರಾಜ್ಯೋತ್ಸವ, ನಾಡೋಜ, ಪದ್ಮಶ್ರೀ ಪ್ರಶಸ್ತಿ, ಪಂಪ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಒಲಿದು ಬಂದಿದೆ. 1974ರಲ್ಲಿ ಪ್ರಕಟವಾದ ‘ನಿತ್ಯೋತ್ಸವ’ ಕವನ ಸಂಕಲನ ನಿಸಾರ್ ಅವರಿಗೆ ಬಹಳ ಜನಪ್ರಿಯತೆ ತಂದು ಕೊಟ್ಟಿತು. ಇಂದು ಕೂಡ ಕನ್ನಡದ ಹಬ್ಬ ಎಲ್ಲೇ ನಡೆದರು ನಿತ್ಯೋತ್ಸವ ಕವಿತೆಯ ಗಾಯನವಿಲ್ಲದೆ ಅದು ಅಪೂರ್ಣ. ಕೆಎಸ್‍ಆರ್ ಅವರ ಅನೇಕ ಕವಿತೆಗಳು ಸುಗಮ ಸಂಗೀತದ ಧ್ವನಿ ಸುರುಳಿಗಳ ಮೂಲಕ ಕನ್ನಡಿಗರನ್ನು ತಲುಪಿವೆ. ಜನಪ್ರಿಯತೆ ಗಳಿಸಿರುವ ‘ಸುಮಧುರ’ ಮತ್ತು ‘ನವೋಲ್ಲಾಸ’ ಕನ್ನಡದ ಮೊದಲ ಜೋಡಿ ಧ್ವನಿ ಸುರುಳಿಗಳು. ಈವರೆಗೆ ಅವರ ಕವನಗಳ ಏಳು ಧ್ವನಿ ಸುರುಳಿಗಳು ಬಿಡುಗಡೆ ಗೊಂಡಿವೆ.

 ಕೆ ಎಸ್‌ ನಿಸಾರ್‌ ಅಹಮದ್‌ ನಿಧನಕ್ಕೆ ಗಣ್ಯರು ಸಂತಾಪ

ಖ್ಯಾತ ಕವಿ  ಹಾಗೂ ಬರಹಗಾರ ಕೆ ಎಸ್‌ ನಿಸಾರ್‌ ಅಹಮದ್‌ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಸಂತಾಪ ಸೂಚಿಸಿದ್ದು ನಿಸಾರ್‌ ಅಹಮದ್‌ ನಿಧನದಿಂದ ಕನ್ನಡ ಸಾರಸ್ವತ ಲೋಕದ ಕೊಂಡಿಯೊಂದು ಕಳಚಿದಂತಾಗಿದೆ. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ, ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಮುಖ್ಯಮಂತ್ರಿಗಳು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಮಾಜಿ ಪ್ರಧಾನಿ ಹೆಚ್‌ ಡಿ ದೇವೆಗೌಡರು ಸಂತಾಪ ಸೂಚಿಸಿದ್ದಾರೆ ನಿತ್ಯೋತ್ಸವದ ಮೂಲಕ ಕನ್ನಡದ ಹಿರಿಮೆಯನ್ನು ಜಗತ್ತಿಗೆ ಸಾರಿದ ಕನ್ನಡದ ಹಿರಿಯ ಸಾಹಿತಿ ಕೆ.ಎಸ್ ನಿಸಾರ್ ಅಹಮದ್ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕ ಅಮೂಲ್ಯವಾದ ರತ್ನವೊಂದನ್ನು ಕಳೆದುಕೊಂಡಿದೆ. ಅಜಾತಶತ್ರುವಾಗಿದ್ದ ನಿಸಾರ್ ಅಹಮದ್ ಅವರ ಆತ್ಮಕ್ಕೆ ಶಾಂತಿ ದೊರಕಲಿ. ಅವರ ಬಂಧು ಮಿತ್ರರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದಿದ್ದಾರೆ

 ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ – ನಿತ್ಯೋತ್ಸವದ ಕವಿ ಪ್ರೊ. ಕೆ.ಎಸ್. ನಿಸಾರ್ ಅಹಮದ್  ಅವರ ನಿಧನಕ್ಕೆ ತೀವ್ರ ಕಂಬನಿ ಮಿಡಿಯುತ್ತೇನೆ. ಮನಸು ಗಾಂಧಿಬಜಾರು ಹಾಗು ನಿತ್ಯೋತ್ಸವ ಇವು ನಿಸಾರ್ ಅವರ ಪ್ರಸಿದ್ಧ ಕವನ ಸಂಕಲನಗಳಾಗಿವೆ. ನಿಸಾರ್‍ ಅಹಮದ್ ಸಂವೇದನಾಶೀಲ ಹಾಗೂ ಜನಪ್ರಿಯ ಕವಿ. ಇವರ ನಿಧನದಿಂದ ಬಹುಮುಖ ಪ್ರತಿಭೆಯ ಸಾಹಿತ್ಯ ಪ್ರಭೆ ಮುಸುಕಾದಂತಾಗಿದೆ.