1dc7c330 5635 41a5 bad0 ef486dadcdcd

ಬೆಳಗಾವಿ ಜಿಲ್ಲೆಯಲ್ಲಿ ಇಂದು 22 ಕೊರೊನಾ ಪಾಸಿಟಿವ್..ಬೆಚ್ಚಿ ಬಿದ್ದ ಬೆಳಗಾವಿ ಜನ

DISTRICT NEWS

ಬೆಳಗಾವಿ ಮೇ ೧೦ ;_ಮಹಾಮಾರಿ ಕೊರೊನಾ ಬೆಳಗಾವಿ ಜಿಲ್ಲೆಯನ್ನು ಬಿಟ್ಟು ಬಿಡದೇ ಕಾಡುತ್ತಿದೆ.ಒಂದು ಕಡೆ ತಬ್ಲಿಗಿ ಜಮಾತ್ ಸದಸ್ಯರು ಕುಡಚಿ ಮತ್ತು ಹಿರೆಬಾಗೇವಾಡಿಯಲ್ಲಿ ಇಲ್ಲಿಯವರೆಗೆ ಎಪ್ಪತ್ತಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿತ್ತು.ಮೊನ್ನೆಯಷ್ಟೇ 11 ಕೊರೊನಾ ಸೋಂಕು ಪತ್ತೆಯಾಗಿದ್ದರಿಂದ ಬೆಚ್ಚಿ ಬಿದ್ದಿದ್ದ ಕುಂದಾನಗರಿ ಜನರಿಗೆ ಇಂದು ಮತ್ತೆ ಕೊರೊನಾ ಬಿಗ್ ಶಾಕ್ ಕೊಟ್ಟಿದೆ.ರಾಜಸ್ಥಾನದ ಅಜ್ಮೀರ ಪ್ರವಾಸಕ್ಕೆ ತೆರಳಿದ್ದ 22 ಜನರಿಗೆ ಇಂದು ಕೊರೊನಾ ಸೋಂಕು ದೃಢ ಪಟ್ಟಿದ್ದು. ಈ ಮೂಲಕ ಬೆಳಗಾವಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 107ಕ್ಕೆ ಏರಿಕೆಯಾಗಿದೆ.

ಹೌದು ರವಿವಾರ ಬೆಳಗಾವಿ ಜಿಲ್ಲೆಯ ಪಾಲಿಗೆ ಕರಾಳ ದಿನವಾಗಿ ಹೊಮ್ಮಿದ್ದು ಇಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಹೊರಡಿಸಿದೆ. ವೈದ್ಯಕೀಯ ಇಲಾಖೆಯ ವರದಿಯಲ್ಲಿ ಒಂದೇ ದಿನ 22 ಜನರಿಗೆ ಮಹಾಮಾರಿ ಕೊರೊನಾ ವಕ್ಕರಿಸಿಕೊಂಡಿದ್ದು ದೃಢಪಟ್ಟಿದೆ. ಈ ಎಲ್ಲರೂ ಕೂಡ ರಾಜಸ್ಥಾನದ ಅಜ್ಮೀರ ದರ್ಗಾಗೆ ಪ್ರವಾಸ ಬೆಳೆಸಿದ್ದರು. ಬೆಳಗಾವಿ ಜಿಲ್ಲೆಯಿಂದ ಸುಮಾರು 38 ಜನರು ರಾಜಸ್ಥಾನದ ಅಜ್ಮೀರ್ ಪ್ರವಾಸಕ್ಕೆ ತೆರಳಿದ್ದು ಲಾಕ್‍ಡೌನ್ ಹಿನ್ನೆಲೆ ಅವರು ದರ್ಗಾದಲ್ಲಿಯೇ ಸಿಕ್ಕಿ ಹಾಕಿಕೊಂಡಿದ್ದರು. ಆದರೆ ರಾಜಸ್ಥಾನ ಸರ್ಕಾರ 1 ತಿಂಗಳ ಬಳಿಕ ಪರೀಕ್ಷೆ ನಡೆಸಿ ಕೊರೊನಾ ನೆಗೆಟಿವ್ ಸರ್ಟಿಫಿಕೇಟ್ ನೀಡಿ ಕರ್ನಾಟಕಕ್ಕೆ ಕಳಿಸಿಕೊಟ್ಟಿತ್ತು. ಇದಾದ ಬಳಿಕ ನಿಪ್ಪಾಣಿಯ ಕೊಗನೊಳ್ಳಿ ಚೆಕ್‍ಪೋಸ್ಟ್ನಲ್ಲಿ ಇವರನ್ನು ತಡೆಹಿಡಿಯಲಾಗಿತ್ತು..

ಈ ವೇಳೆ ಅನುಮಾನಗೊಂಡ ನಿಪ್ಪಾಣಿ ಪೊಲೀಸರು ಮತ್ತು ವೈದ್ಯರು ಇವರೆಲ್ಲರನ್ನು ಕ್ವಾರಂಟೈನ್‍ನಲ್ಲಿ ಇಡುವ ಮೂಲಕ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಿದ್ದರು.ಆದರೆ ಮಾದರಿ ಪಡೆಯುವ ವೇಳೆ ಅಜ್ಮೇರದಿಂದ ಆಗಮಿಸಿದ್ದವರೆಲ್ಲ ಈ ವೇಳೆ ನಮ್ಮದು ನೆಗೆಟಿವ್ ರಿಪೋರ್ಟ್ ಬಂದಿದೆ ನಮ್ಮನ್ನು ಊರಿಗೆ ಕಳಿಸಿಕೊಡಿ ಎಂದು ಕೇಳಿಕೊಂಡಿದ್ದರು. ಆಗ ಪೊಲೀಸರು ನಿಮಗೆ ರಾಜ್ಯಕ್ಕೆ ಪ್ರವೇಶಿಸಲು ಅನುಮತಿ ಇಲ್ಲ ಎಂದು ಹೇಳಿ ಕ್ವಾರಂಟೈನ್‍ನಲ್ಲಿ ಇಟ್ಟಿದ್ದರು. ಇದಾದ ಬಳಿಕ ಬಳಿಕ ಮೇ 6 ರಂದು ಅಷ್ಟೂ ಜನರ ಗಂಟಲು ದ್ರವದ ಮಾದರಿ ಪರೀಕ್ಷೆಗೆ ಕಳಿಸಲಾಗಿತ್ತು. ಒಟ್ಟು 38 ಜನರಲ್ಲಿ 22 ಜನರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.

 ಈ 38 ಜನರಲ್ಲಿ ಕೆಲವರು ಸರ್ಕಾರಿ ಐಬಿಯಲ್ಲಿ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ರಾಜಸ್ಥಾನದ ವರದಿಯನ್ನು ಆಧರಿಸಿ ರಾಜ್ಯದೊಳಗೆ ಬಿಟ್ಟುಕೊಂಡಿದ್ದರೆ ಜಿಲ್ಲೆಯಲ್ಲಿ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು. ಆದ್ರೆ ನಿಪ್ಪಾಣಿ ಪೊಲೀಸರು ಮತ್ತು ಆರೋಗ್ಯ ಇಲಾಖೆ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಡೆಯಲು ಸಾಧ್ಯವಾಗಿದೆ. ನಮ್ಮ ರಾಜ್ಯದಿಂದ ಮೊದಲು ಇವರು ಹೊರ ಹೋಗಲಿ ಎಂಬ ಏಕೈಕ ಉದ್ದೇಶದಿಂದ ರಾಜಸ್ಥಾನ ಸರ್ಕಾರ ಸುಳ್ಳು ಸರ್ಟಿಫಿಕೇಟ್ ನೀಡಿ ಕಳಿಸಿದ್ದು ಸಧ್ಯ ತೀವ್ರ ಟೀಕೆಗೆ ಗುರಿಯಾಗಿದೆ.