EVUFkkIUwAEm6G2

20 ಲಕ್ಷ ಕೋಟಿ ರೂ.ಸಮಗ್ರ ಪ್ಯಾಕೇಜ್ ಪ್ರಕಟಿಸಿದ ಪ್ರಧಾನಮಂತ್ರಿ : ಮೋದಿ ಮಾತಿನ ಒಟ್ಟಾರೆ ಸಾರಾಂಶ ಇಲ್ಲಿದೆ..!

National - ಕನ್ನಡ

ನವದೆಹಲಿ ಮೇ೧೨ ;- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೇಶವನ್ನುದ್ದೇಶಿಸಿ ಭಾಷಣ ಮಾಡಿದರು. ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಾ ಮಡಿದವರನ್ನು ಸ್ಮರಿಸಿದ ಪ್ರಧಾನಮಂತ್ರಿ, ಕೋವಿಡ್ 19ರಿಂದ ಹೊರಹೊಮ್ಮಿರುವ ಬಿಕ್ಕಟ್ಟು ಅಭೂತಪೂರ್ವವಾದ್ದು, ಆದರೆ ಈ ಹೋರಾಟದಲ್ಲಿ ನಾವು ಕೇವಲ ನಮ್ಮನ್ನು ಮಾತ್ರ ರಕ್ಷಿಸಿಕೊಂಡರೆ ಸಾಲದು, ಜೊತೆಗೆ ಮುಂದಡಿ ಇಡಬೇಕು ಎಂದರು.

ಸ್ವಾವಲಂಬಿ ಭಾರತ

ಕೋವಿಡ್ ಪೂರ್ವ ಮತ್ತು ಕೋವಿಡ್ ನಂತರದ ವಿಶ್ವದ ಬಗ್ಗೆ ಮಾತನಾಡಿದ, ಪ್ರಧಾನಮಂತ್ರಿಯವರು ಭಾರತವನ್ನು 21ನೇ ಶತಮಾನದ ರಾಷ್ಟ್ರವಾಗಿ ಮಾಡುವ ಕನಸು ನನಸು ಮಾಡುವ ನಿಟ್ಟಿನಲ್ಲಿ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವ ಮೂಲಕ ಮುಂದಿನ ದಾರಿಯಲ್ಲಿ ಸಾಗಬಹುದು ಎಂದರು. ಸಂಕಷ್ಟವನ್ನು ಅವಕಾಶವಾಗಿ ಪರಿವರ್ತಿಸುವ ಕುರಿತಂತೆ ಮಾತನಾಡಿದ ಅವರು, ಪಿಪಿಇ ಕಿಟ್ ಮತ್ತು ಎನ್. 95 ಮಾಸ್ಕ್ ಉದಾಹರಣೆ ನೀಡಿ, ಅವುಗಳ ಉತ್ಪಾದನೆ ಭಾರತದಲ್ಲಿ ಅತ್ಯಲ್ಪದಿಂದ ಈಗ ನಿತ್ಯ ತಲಾ 2 ಲಕ್ಷಕ್ಕೆ ಮುಟ್ಟಿದೆ ಎಂದು ತಿಳಿಸಿದರು.

ಸ್ವಾವಲಂಬನೆಯ ವ್ಯಾಖ್ಯೆ ಈಗ ಜಾಗತಿಕ ವಿಶ್ವದಲ್ಲಿ ಬದಲಾವಣೆಯಲ್ಲಿ ಸಾಗಿದೆ ಎಂದ ಪ್ರಧಾನಮಂತ್ರಿ, ದೇಶ ಸ್ವಾವಲಂಬನೆಯ ಬಗ್ಗೆ ಮಾತನಾಡಿದಾಗಲೆಲ್ಲಾ, ಅದು ಸ್ವಯಂ ಕೇಂದ್ರಿತವಾಗಿರುವುದಕ್ಕಿಂತ ಭಿನ್ನವಾಗಿರುತ್ತದೆ ಎಂದರು. ಭಾರತದ ಸಂಸ್ಕೃತಿ ವಿಶ್ವವನ್ನೇ ಒಂದು ಕುಟುಂಬ ಎಂದು ಪರಿಗಣಿಸುತ್ತದೆ, ಮತ್ತು ಭಾರತದ ಭಾಗದ ಪ್ರಗತಿ, ಇಡೀ ವಿಶ್ವದ ಪ್ರಗತಿಗೆ ಕೊಡುಗೆ ನೀಡುತ್ತದೆ ಎಂದು ಅವರು ಹೇಳಿದರು. ಇಡೀ ಮಾನವ ಕುಲದ ಅಭಿವೃದ್ಧಿಗೇ ಭಾರತ ಅತಿ ದೊಡ್ಡ ಕೊಡುಗೆ ನೀಡುತ್ತದೆ ಎಂಬ ನಂಬಿಕೆ ವಿಶ್ವಕ್ಕಿದೆ ಎಂದು ಅವರು ಉಲ್ಲೇಖಿಸಿದರು.

ಸ್ವಾವಲಂಬಿ ಭಾರತಕ್ಕೆ ಐದು ಆಧಾರಸ್ತಂಭಗಳು

ಕಚ್ ನಲ್ಲಿ ಭೂಕಂಪದ ತರುವಾಯ ಆಗಿದ್ದ ಸಂಪೂರ್ಣ ಹಾನಿಯನ್ನು ಸ್ಮರಿಸಿದ ಪ್ರಧಾನಮಂತ್ರಿ, ದೃಢ ನಿರ್ಣಯ ಮತ್ತು ಸಂಕಲ್ಪದಿಂದ ಇಡೀ ಪ್ರದೇಶ ಈಗ ಮತ್ತೆ ತನ್ನ ಕಾಲ ಮೇಲೆ ನಿಂತಿದೆ. ಇದೇ ರೀತಿಯ ಸಂಕಲ್ಪ ಈಗ ದೇಶವನ್ನು ಸ್ವಾವಲಂಬಿ ಮಾಡಲು ಬೇಕಾಗಿದೆ ಎಂದರು.

ಸ್ವಾವಲಂಬಿ ಭಾರತ ಐದು ಆಧಾರಸ್ತಂಭಗಳ ಮೇಲೆ ನಿಂತಿದೆ, ಅವುಗಳೆಂದರೆ, ಆರ್ಥಿಕತೆ, ಅದು ಇಂಕ್ರಿಮೆಂಟರ್ ಚೇಂಜ್ ಬದಲಾಗಿ ಕ್ವಾಟಂ ಜಂಪ್ ತರುವಂತಿರಬೇಕು; ಮೂಲಸೌಕರ್ಯ, ಭಾರತದ ಗುರುತಾಗಿರಬೇಕು; ವ್ಯವಸ್ಥೆ 21ನೇ ಶತಮಾನದ ತಂತ್ರಜ್ಞಾನ ಚಾಲಿತವಾದ ವ್ಯವಸ್ಥೆಯಾಗಿರಬೇಕು; ಇನ್ನು ಚೈತನ್ಯಶೀಲ ಜನಸಂಖ್ಯೆ, ಅದು ನಮ್ಮ ಸ್ವಾವಲಂಬಿ ಭಾರತದ ಚೈತನ್ಯದ ಮೂಲವಾಗಿರಬೇಕು; ಮತ್ತು ಬೇಡಿಕೆ, ನಮ್ಮ ಬೇಡಿಕೆ ಮತ್ತು ಪೂರೈಕೆ ಸರಪಣಿಯ ಬಲದ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವಂತಗಿ, ಬೇಡಿಕೆಯನ್ನು ಪೂರೈಸಬೇಕು ಎಂದರು.

ಆತ್ಮನಿರ್ಭರ ಭಾರತ ಅಭಿಯಾನ

ಪ್ರಧಾನಮಂತ್ರಿಯವರು ವಿಶೇಷ ಆರ್ಥಿಕ ಪ್ಯಾಕೇಜ್ ಪ್ರಕಟಿಸಿದರು ಮತ್ತು ಆತ್ಮ ನಿರ್ಭರ ಭಾರತಕ್ಕೆ ಕರೆ ನೀಡಿದರು. ಈ ಪ್ಯಾಕೇಜ್ ಅನ್ನು ಈ ಹಿಂದೆ ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸರ್ಕಾರ ಘೋಷಿಸಿದ ಪ್ಯಾಕೇಜ್ ಮತ್ತು ಆರ್.ಬಿ.ಐ. ನಿರ್ಣಯಗಳನ್ನು ಒಟ್ಟಾಗಿ ತೆಗೆದುಕೊಂಡರೆ, ಅದು 20 ಲಕ್ಷ ಕೋಟಿ ರೂ. ಆಗುತ್ತದೆ ಮತ್ತು ಅದು ಭಾರತದ ಜಿಡಿಪಿಯ ಶೇ.10 ರಷ್ಟಾಗುತ್ತದೆ ಎಂದರು. ಈ ಪ್ಯಾಕೇಜ್ ಆತ್ಮ ನಿರ್ಭರ ಭಾರತದ ಗುರಿ ಸಾಧನೆಯ ನಿಟ್ಟಿನಲ್ಲಿ ಅಗತ್ಯವಾದ ಚೈತನ್ಯ ನೀಡುತ್ತದೆ ಎಂದರು.

ಈ ಪ್ಯಾಕೇಜ್ ಭೂಮಿ, ಕಾರ್ಮಿಕರು, ಲಿಕ್ವಿಡಿಟಿ ಮತ್ತು ಕಾನೂನಿನ ಮೇಲೆ ಗಮನ ಹರಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಇದು ಗುಡಿ ಕೈಗಾರಿಕೆ, ಎಂ.ಎಸ್.ಎಂ.ಇ.ಗಳು, ಕಾರ್ಮಿಕರು, ಮಧ್ಯಮವರ್ಗ, ಕೈಗಾರಿಕೆಗಳು, ಮತ್ತಿತರು ಸೇರಿ ವಿವಿಧ ವರ್ಗದ ಆಶೋತ್ತರ ಈಡೇರಿಸುತ್ತದೆ ಎಂದರು. ಈ ಪ್ಯಾಕೇಜ್ ನ ವಿವರಗಳನ್ನು ನಾಳೆಯಿಂದ ಮುಂದಿನ ಕೆಲವು ದಿನಗಳಲ್ಲಿ ಹಣಕಾಸು ಸಚಿವರು ಸ್ಪಷ್ಟಪಡಿಸಲಿದ್ದಾರೆ ಎಂದೂ ತಿಳಿಸಿದರು.

ಕಳೆದ ಆರು ವರ್ಷಗಳಲ್ಲಿ ಜಾಮ್ ಮತ್ತು ಇತರ ಸುಧಾರಣೆಗಳ ಧನಾತ್ಮಕ ಪರಿಣಾಮಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಹಲವು ಕಠಿಣ ಸುಧಾರಣೆಗಳು ದೇಶವನ್ನು ಸ್ವಾವಲಂಬಿ ಮಾಡಲು ಅಗತ್ಯವಾಗಿದ್ದು, ಅದರಿಂದ ಭವಿಷ್ಯದಲ್ಲೂ ಕೋವಿಡ್ ನಂತ ಬಿಕ್ಕಟ್ಟಿನ ಪರಿಣಾಮವನ್ನು ಇಲ್ಲದಂತೆ ಮಾಡಬಹುದಾಗಿದೆ ಎಂದು ಹೇಳಿದರು. ಈ ಸುಧಾರಣೆಗಳು ಕೃಷಿ ಉತ್ಪನ್ನಗಳ ಪೂರೈಕೆ ಸರಪಣಿಯ ಸುಧಾರಣೆಗಳು, ತರ್ಕಬದ್ಧ ತೆರಿಗೆ ವ್ಯವಸ್ಥೆ, ಸರಳ ಮತ್ತು ಸ್ವಚ್ಛ ಕಾನೂನು, ಸಮರ್ಥ ಮಾನವ ಸಂಪನ್ಮೂಲ ಮತ್ತು ಬಲಿಷ್ಠ ಆರ್ಥಿಕ ವ್ಯವಸ್ಥೆಯನ್ನು ಒಳಗೊಂಡಿರುತ್ತವೆ ಎಂದರು. ಈ ಎಲ್ಲ ಸುಧಾರಣೆಗಳೂ ವಾಣಿಜ್ಯವನ್ನು ಉತ್ತೇಜಿಸಿ, ಹೂಡಿಕೆ ಆಕರ್ಷಿಸಿ ಮೇಕ್ ಇನ್ ಇಂಡಿಯಾ ಕಲ್ಪನೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದರು.

ಸ್ವಾವಲಂಬನೆಯು ದೇಶವನ್ನು ಜಾಗತಿಕ ಪೂರೈಕೆ ಸರಪಳಿಯ ಸ್ಪರ್ಧೆಗೆ ಸಜ್ಜುಗೊಳಿಸುತ್ತದೆ ಮತ್ತು ದೇಶ ಈ ಸ್ಪರ್ಧೆಯಲ್ಲಿ ಗೆಲ್ಲುವುದು ಮುಖ್ಯ ಎಂದು ಪ್ರಧಾನಿ ಹೇಳಿದರು.ಈ ಪ್ಯಾಕೇಜ್ ರೂಪಿಸುವಾಗ ಇದನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ ಎಂದೂ ಅವರು ತಿಳಿಸಿದರು. ಇದು ವಿವಿಧ ವಲಯಗಳಲ್ಲಿ ಕೇವಲ ಸಾಮರ್ಥ್ಯವನ್ನು ಮಾತ್ರವೇ ಹೆಚ್ಚಿಸುವುದಿಲ್ಲ ಜೊತೆಗೆ ಗುಣಮಟ್ಟವನ್ನೂ ಹೆಚ್ಚಿಸುತ್ತದೆ ಎಂದರು.

ದೇಶಕ್ಕೆ ಅದರ ಕೊಡುಗೆಗಳನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ, ಈ ಪ್ಯಾಕೇಜ್ ಸಂಘಟಿತ ಮತ್ತು ಅಸಂಘಟಿತ ವಲಯಗಳೆರಡರ ಬಡವರು, ಶ್ರಮಿಕರು, ವಲಸೆ ಕಾರ್ಮಿಕರು ಮೊದಲಾದವರ ಸಬಲೀಕರಣಕ್ಕೂ ಗಮನ ಹರಿಸಲಿದೆ ಎಂದರು.

ಈ ಬಿಕ್ಕಟ್ಟು ನಮಗೆ ಸ್ಥಳೀಯ ಉತ್ಪಾದನೆಯ, ಸ್ಥಳೀಯ ಮಾರುಕಟ್ಟೆ ಮತ್ತು ಸ್ಥಳೀಯ ಪೂರೈಕೆ ಸರಪಣಿಯ ಮಹತ್ವವನ್ನು ಕಲಿಸಿತು ಎಂದು ಅವರು ಹೇಳಿದರು. ಸಂಕಷ್ಟದ ಕಾಲದಲ್ಲಿನ ನಮ್ಮ ಎಲ್ಲ ಬೇಡಿಕೆಗಳನ್ನು ಸ್ಥಳೀಯವಾಗಿ ಪೂರೈಸಲಾಗಿದೆ. ಈಗ, ಸ್ಥಳೀಯ ಉತ್ಪನ್ನಗಳ ಬಗ್ಗೆ ಧ್ವನಿ ಎತ್ತುವುದು ಮತ್ತು ಈ ಸ್ಥಳೀಯ ಉತ್ಪನ್ನಗಳನ್ನು ಜಾಗತಿಕಗೊಳಿಸಲು ಸುಸಮಯವಾಗಿದೆ ಎಂದು ಹೇಳಿದರು.

ಕೋವಿಡ್ ನೊಂದಿಗೆ ಜೀವನ

ಈ ವೈರಾಣು ದೀರ್ಘಕಾಲ ನಮ್ಮ ಬದುಕಿನ ಭಾಗವಾಗಿರುತ್ತದೆ ಎಂದು ಹಲವು ತಜ್ಞರು ಮತ್ತು ವಿಜ್ಞಾನಿಗಳು ಹೇಳಿದ್ದಾರೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಆದರೆ, ನಮ್ಮ ಜೀವನ ಅದರ ಸುತ್ತ ಮಾತ್ರ ಸುತ್ತುತ್ತಿರುವುದಿಲ್ಲ ಎಂಬುದನ್ನು ಖಾತ್ರಿ ಪಡಿಸುವುದೂ ಅಷ್ಟೇ ಮುಖ್ಯ ಎಂದರು. ಜನರು ತಮ್ಮ ಗುರಿಗಳತ್ತ ಕೆಲಸ ಮಾಡುವಾಗ ಎರಡು ಗಜ ದೂರ ಅಂತರ ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದು ಇತ್ಯಾದಿ ಮುನ್ನಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಪ್ರತಿಪಾದಿಸಿದರು.

ನಾಲ್ಕನೇ ಹಂತದ ಲಾಕ್ ಡೌನ್ ಕುರಿತಂತೆ ಮಾತನಾಡಿದ ಅವರು, ಇದು ಯಾರೂ ಕಾಣದ ರೀತಿ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ರಾಜ್ಯಗಳಿಂದ ಪಡೆದ ಶಿಫಾರಸುಗಳ ಆಧಾರದ ಮೇಲೆ, ಹೊಸ ನಿಯಮಗಳನ್ನು ರೂಪಿಸಲಾಗುವುದು ಮತ್ತು ಅದರ ಬಗ್ಗೆ ಮಾಹಿತಿಯನ್ನು ಮೇ 18ಕ್ಕೆ ಮೊದಲು ತಿಳಿಯಪಡಿಸಲಾಗುವುದು ಎಂದು ಹೇಳಿದರು.