ಚಿಕ್ಕಬಳ್ಳಾಪುರ: ವಿವಾದಿತ ಯಲಹಂಕ ಡೈರಿ ವೃತ್ತದ ಮೇಲ್ಸುತೇವೆಗೆ ವೀರ ಸಾವರ್ಕರ್ ಹೆಸರಿಟ್ರೇ ತಪ್ಪೇನು? ವೀರ ಸಾವರ್ಕರ್ ರಾಷ್ಟ್ರವಾದಿ, ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದವರು, ಜೈಲುವಾಸ ಅನುಭವಿಸಿದವರು. ಅಂತಹವರ ಹೆಸರಿಟ್ಟರೆ ತಪ್ಪೇನು ಅಂತ ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ಪ್ರಶ್ನೆ ಮಾಡಿದ್ದಾರೆ.
ಚಿಕ್ಕಬಳ್ಳಾಪುರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಬಿ.ಎನ್.ಬಚ್ಚೇಗೌಡ, ವೀರ್ ಸಾವರ್ಕರ್ ಹೆಸರಿಡಬೇಕು ಅಂತ ನಾನು ಒತ್ತಾಯಿಸುತ್ತೇನೆ. ಕೆಲವರು ವಿನಾಕಾರಣ ವಿರೋಧ ಮಾಡ್ತಿದ್ದು, ಅದು ಅನಾವಶ್ಯಕ ವಿಚಾರ. ಇಡೀ ದೇಶದಲ್ಲಿ ಯಾರ ಹೆಸರನ್ನ ಎಲ್ಲಿ ಬೇಕಾದರೂ ಇಡಬಹುದು. ಆಯಾ ರಾಜ್ಯದವರ ಹೆಸರನ್ನ ಆಯಾ ರಾಜ್ಯದಲ್ಲಿಯೇ ಇಡಬೇಕು ಅಂತ ಏನಾದ್ರೂ ಇದೆಯಾ ಅಂತ ಪ್ರಶ್ನಿಸಿದರು.
ಇದೇ ವೇಳೆ ಬಿಜೆಪಿಯಲ್ಲಿನ ಭಿನ್ನಮತದ ಬಗ್ಗೆ ಪ್ರತಿಕ್ರಿಯಿಸಿ, ಪಕ್ಷದಲ್ಲಿ ಯಾವುದೇ ಬಣಗಳೂ ಇಲ್ಲ. ಅವರೇ ಸರಿ ಹೋಗ್ತಾರೆ. ಸಿಎಂ ಯಡಿಯೂರಪ್ಪನವರು ತಮ್ಮ ಮೂರೂವರೆ ವರ್ಷದ ಅವಧಿ ಸಂಪೂರ್ಣ ಸಿಎಂ ಆಗಿ ಪೂರ್ಣಗೊಳಿಸುತ್ತಾರೆ ಎಂದರು. ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದರು, ಕೇಂದ್ರ ಸರ್ಕಾರದ ಎರಡನೇ ಅವಧಿಯ ಮೊದಲ ವರ್ಷದ ಸಾಧನೆಗಳ ಬಗ್ಗೆ ಮಾತನಾಡಿದರು. ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಉತ್ತಮ ಕೆಲಸ ಮಾಡ್ತಿವೆ ಅಂತ ಪ್ರಶಂಸೆ ವ್ಯಕ್ತಪಡಿಸಿದರು.
ವರದಿ- ಅರುಣ್ ಕುಮಾರ್