ಸಹಕಾರ ವಲಯದ ಎಲ್ಲ ಬ್ಯಾಂಕ್ ಗಳಿಗೂ ಒಂದೇ ಸಾಫ್ಟ್‌ವೇರ್ ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್ ಹಾಗೂ ವಿಎಸ್ಎಸ್ಎನ್ ಗೆ ಒಂದೇ ಸಾಫ್ಟ್‌ವೇರ್ ಇದರಿಂದ ಎಲ್ಲ ವ್ಯವಹಾರ ಒಂದೇ ವ್ಯವಸ್ಥೆಯಡಿ ಬರಲು ಸಹಾಯಕ – ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಘೋಷಣೆ .
ಚಿಕ್ಕಮಗಳೂರು ಜೂನ್ ೨: ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್ ಹಾಗೂ ವಿಎಸ್ಎಸ್ಎನ್ ಬ್ಯಾಂಕ್ ಗಳ ವ್ಯವಸ್ಥೆಯನ್ನು ಒಂದೇ ಸಾಫ್ಟ್‌ವೇರ್ ಅಡಿ ತರಲಾಗುವುದು.
ಎಲ್ಲಾ ಬ್ಯಾಂಕ್ ಗಳಿಗೂ ಒಂದೇ ಸಾಫ್ಟ್ ವೇರ್
ಇದರಿಂದ ಯಾವುದೇ ಅವ್ಯವಹಾರ ಆಗುವುದನ್ನು ತಡೆಯಬಹುದಾಗಿದೆ. ಜೊತೆಗೆ ಯಾರಿಗೆ ಎಷ್ಟು ಸಾಲ ಕೊಡಲಾಗಿದೆ? ಒಬ್ಬರಿಗೇ ಹೆಚ್ಚು ಸಾಲ ಸಿಕ್ಕಿದೆಯೇ? ಬಡ್ಡಿ ಸೇರಿದಂತೆ ಸಾಲ ವಸೂಲಾತಿ ಎಷ್ಟಿದೆ? ಬ್ಯಾಂಕ್‌ಗಳ ಸ್ಥಿತಿಗತಿ ಏನು ಎಂಬ ನಿಟ್ಟಿನಲ್ಲಿ ತಿಳಿಯಬಹುದು ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಆಶಾ ಕಾರ್ಯಕರ್ತೆಯರಿಗೆ ಸಹಾಯಧನ ವಿತರಣಾ ಸಮಾರಂಭದಲ್ಲಿ ಮಾತನಾಡಿ, ಸಹಕಾರ ಇಲಾಖೆ ಅಡಿಯಲ್ಲಿ ಬರುವ ಬ್ಯಾಂಕ್‌ಗಳ ವಹಿವಾಟುಗಳು ಒಂದೇ ವ್ಯವಸ್ಥೆಯಡಿ ತರುವ ಕೆಲಸ ಇದುವರೆಗೆ ಆಗಿಲ್ಲ. ಈ ಹಿನ್ನೆಲೆಯಲ್ಲಿ ಒಂದೇ ಸಾಫ್ಟ್‌ವೇರ್ ಅಡಿಯಲ್ಲಿ ಎಲ್ಲ ಬ್ಯಾಂಕ್‌ಗಳ ವಹಿವಾಟನ್ನು ತರುವ ಕೆಲಸವನ್ನು ಶೀಘ್ರದಲ್ಲಿ ತರಲಾಗುವುದು ಎಂದು ಸಚಿವರು ತಿಳಿಸಿದರು.
ಸಹಕಾರ ವಲಯದಲ್ಲಿ ಹೊಸತನ ತರುವ ನಿಟ್ಟಿನಲ್ಲಿ ನಾನು ಹಲವು ಯೋಜನೆ ಹಾಕಿಕೊಂಡಿದ್ದೇನೆ. ಮೊದಲಿಗೆ ಎಲ್ಲ 21 ಡಿಸಿಸಿ ಬ್ಯಾಂಕ್‌ಗಳ ಲೆಕ್ಕ ಪರಿಶೋಧನೆ ಮಾಡಲಾಗುತ್ತಿದೆ. ಇಲ್ಲಿ ಯಾವುದೇ ಅಡಚಣೆಗಳು ಕಂಡುಬಂದರೂ ಸರಿಪಡಿಸಲಾಗುವುದು. ಜೊತೆಗೆ ಅವುಗಳ ಸ್ಥಿತಿಗತಿಗಳನ್ನು ನಾವೂ ಅರಿಯಬಹುದಾಗಿದೆ ಎಂದು ಸಚಿವರು ತಿಳಿಸಿದರು.


ಸ್ತ್ರೀಶಕ್ತಿಗಳ ಮಾದರಿ ಆಶಾ ಕಾರ್ಯಕರ್ತೆಯರಿಗೆ ಸಾಲ
ಸ್ತ್ರೀಶಕ್ತಿ ಹಾಗೂ ಸ್ವಸಹಾಯ ಗುಂಪುಗಳಂತೆ ಆಶಾ ಕಾರ್ಯಕರ್ತೆಯರಿಗೆ ಸಾಲ ಕೊಡಿಸುವ ವ್ಯವಸ್ಥೆ ಮಾಡಲಾಗುವುದು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಆಶಾ ಕಾರ್ಯಕರ್ತೆಯರಿಗೆ ಅಭಿನಂದನೆ
ಕರ್ನಾಟಕದಲ್ಲಿ ಮುಂಬೈ, ದೆಹಲಿ ಹಾಗೂ ಮಹಾರಾಷ್ಟ್ರಗಳಿಂದ ಬಂದಂತವರಿಗೆ ಹೆಚ್ಚು ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದ್ದರೂ, ಅವರಲ್ಲಿ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ. ಜೊತೆಗೆ ಸೋಂಕು ಹೆಚ್ಚಿರುವ ಸಂದರ್ಭದಲ್ಲಿ ಜೀವದ ಹಂಗುತೊರೆದು ಆಶಾ ಕಾರ್ಯಕರ್ತೆಯರು ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ಅವರಿಗೆ ನನ್ನ ಅಭಿನಂದನೆಗಳು. ಆಶಾ ಕಾರ್ಯಕರ್ತೆಯರ ಸೇವೆ ಪರಿಗಣಿಸಿ ಅವರಿಗೆ ಗೌರವಧನ ನೀಡುವ ಬಗ್ಗೆ ಮುಖ್ಯಮಂತ್ರಿಗಳು ನನ್ನ ಬಳಿ ಪ್ರಸ್ತಾಪಿಸಿದಾಗ ಸಂಪೂರ್ಣ ವೆಚ್ಚವನ್ನು ಸಹಕಾರ ಇಲಾಖೆ ವತಿಯಿಂದ ಭರಿಸಲಾಗುವುದು ಎಂದು ಹೇಳಿ ಆ ನಿಟ್ಟಿನಲ್ಲಿ ನೀಡಲಾಗುತ್ತಿದೆ ಎಂದು ಹೇಳಿದರು.

ರೈತರಿಗೆ ಉತ್ತಮ ಬೆಲೆ; ಸಚಿವರ ಸಂತಸ
ಚಿಕ್ಕಮಗಳೂರು ಎಪಿಎಂಸಿ ಭೇಟಿ ನೀಡಿದ ಸಮಯದಲ್ಲಿ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತಿರುವ ಬಗ್ಗೆ ಸಂತೋಷವಾಯಿತು. ಈಗ
2 ತಿಂಗಳ ಹಿಂದೆ ಕೋವಿಡ್ ಹಿನ್ನೆಲೆ ಸಂಚಾರ ಸ್ಥಗಿತಗೊಂಡು ವಹಿವಾಟು ನಿಂತ ಪರಿಣಾಮವಾಗಿ 2 ರೂಪಾಯಿಗೆ ಕೆಜಿ ಟೊಮೇಟೊ ದರ ಇಳಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ನಾನು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ ಹಿನ್ನೆಲೆಯಲ್ಲಿ ರೈತರು ಬೆಳೆ ಹಾಗೂ ಉತ್ಪನ್ನಗಳನ್ನು ಕೊಂಡೊಯ್ಯುವಾಗ ಯಾವ ಚೆಕ್ ಪೋಸ್ಟ್ ಸೇರಿದಂತೆ ಎಲ್ಲೂ ಪೊಲೀಸರು ತಡೆ ನೀಡಬಾರದು ಎಂದು ಆದೇಶ ಹೊರಡಿಸಲಾಯಿತು. ಇದರ ಪರಿಣಾಮ ಇಂದು ಟೊಮೇಟೊ ಕೆಜಿಗೆ 16 ರೂಪಾಯಿ ಆಗಿದೆ ಎಂದು ಚಿಕ್ಕಮಗಳೂರು ಎಪಿಎಂಸಿ ಭೇಟಿ ಸಂದರ್ಭದಲ್ಲಿ ತಿಳಿದುಕೊಂಡೆ ಎಂದು ಸಚಿವ ಸೋಮಶೇಖರ್ ಹೇಳಿದರು.
ರೈತರಿಗೇ ಹೆಚ್ಚು ಸಾಲ ನೀಡಿ
ಡಿಸಿಸಿ ಬ್ಯಾಂಕ್ ಇರುವುದು ಸ್ವಲ್ಪ ಲಾಭಾಂಶದ ಜೊತೆಗೆ ರೈತರಿಗೆ ಅನುಕೂಲ ಮಾಡಿಕೊಡುವುದಾಗಿದೆ. ಆದರೆ, ಹಲವಾರು ಬ್ಯಾಂಕ್‌ಗಳು ರೈತರಿಗೆ ಅಲ್ಪ ಪ್ರಮಾಣದಲ್ಲಿ ಸಾಲ ವಿತರಣೆ ಮಾಡುತ್ತಿವೆ. ಬದಲಾಗಿ ಸಕ್ಕರೆ ಕಾರ್ಖಾನೆಗಳಿಗೆ ಹೆಚ್ಚು ಸಾಲ ಕೊಟ್ಟಿರುವುದನ್ನು ನಾನು ಗಮನಿಸಿದ್ದೇನೆ. ಆದರೆ ಅವರಿಂದ ಒಂದು ರೂಪಾಯಿ ಸಾಲ ವಸೂಲಾಗಿಲ್ಲ. ಸಕ್ಕರೆ ಫ್ಯಾಕ್ಟರಿಗಳಿಗೆ ಈವರೆಗೆ ನೀಡಿದ ಸುಮಾರು 700-800 ಕೋಟಿ ಹಣ ಇನ್ನೂ ವಾಪಸ್ ಆಗಿಲ್ಲ. ಕೇವಲ ಎರಡ್ಮೂರು ಕಾರ್ಖಾನೆಗಳು ಮಾತ್ರ ಮರುಪಾವತಿ ಮಾಡಿವೆ. ಹೀಗಾಗಿ ರೈತರಿಗೇ ಸಾಲ ವಿತರಣೆ ಮಾಡುವ ಕೆಲಸ ಆಗಬೇಕು ಎಂದು ಸಚಿವರು ತಿಳಿಸಿದರು.
ಸಾಲ ಮನ್ನಾಕ್ಕೆ ಬೇಗ ದಾಖಲೆ ಸಲ್ಲಿಸಿ
ಒಂದೂವರೆ ವರ್ಷವಾದರೂ 2.20 ಸಾವಿರ ರೈತರು ಇನ್ನೂ ಸಾಲಮನ್ನಾಕ್ಕೆ ದಾಖಲೆ ಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಈಗ ನಿಗದಿಪಡಿಸಿರುವ ಅವಧಿಯೊಳಗೆ ದಾಖಲೆ ಕೊಡದಿದ್ದರೆ ಸಾಲಮನ್ನಾ ಸೌಲಭ್ಯ ಸಿಗದು ಎಂದು ಸಚಿವ ಸೋಮಶೇಖರ್ ತಿಳಿಸಿದರು.
53 ಕೋಟಿ ನೀಡಿದ ಸಚಿವ ಸೋಮಶೇಖರ್ ಅವರಿಗೆ ಧನ್ಯವಾದ
ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 125 ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಅದರಲ್ಲಿ 53 ಕೋಟಿ ರೂಪಾಯಿ ಸಂಗ್ರಹಿಸಿ ಕೊಡುವ ಕೆಲಸ ಮಾಡಿದ್ದಾರೆ. ಇದಕ್ಕೆ ನನ್ನ ಅಭಿನಂದನೆ ಎಂದು ತಿಳಿಸಿದರು.
ಆಶಾ ಕಾರ್ಯಕರ್ತೆಯರಿಗೆ ವಿಶೇಷವಾಗಿ ಸಾಲ ಸೌಲಭ್ಯ ಕೊಡುವ ನಿಟ್ಟಿನಲ್ಲಿ ಹೊಸ ಸಹಕಾರ ಸಂಘವನ್ನು ಸ್ಥಾಪಿಸಿದರೆ ಉತ್ತಮ ಎಂಬ ಸಲಹೆಯನ್ನು ನಾನು ಸಚಿವ ಸೋಮಶೇಖರ್ ಅವರ ಗಮನಕ್ಕೆ ತಂದಿದ್ದು, ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವುದನ್ನು ನಾನು ಶ್ಲಾಘಿಸುತ್ತೇನೆ ಎಂದು ಹೇಳಿದರು.
ಸಹಕಾರ ಸಂಘಗಳಿಗೆ ಆದಾಯ ತೆರಿಗೆ ವಿಧಿಸುತ್ತಿರುವುದು ಸರಿಯಲ್ಲ. ಆದಾಯ ತೆರಿಗೆ ವ್ಯಾಪ್ತಿಯಿಂದ ಸಹಕಾರ ವಲಯವನ್ನು ಹೊರಗಿಡುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಸಚಿವ ಸೋಮಶೇಖರ್ ಅವರೂ ಸಹ ಹಿಂದಿನಿಂದಲೂ ಹೋರಾಟ ಮಾಡಿಕೊಂಡು ಬಂದಿದ್ದಾರೆ. ನಾನೂ ಸಹ ಈ ಅಂಶವನ್ನು ಪಕ್ಷದ ಸಂಸದರ ಗಮನಕ್ಕೆ ತಂದು ರಾಷ್ಟ್ರ ಮಟ್ಟಕ್ಕೆ ಮುಟ್ಟಿಸುವ ಕೆಲಸ ಮಾಡುತ್ತೇನೆ ಎಂದು ಸಚಿವರಾದ ಸಿ.ಟಿ.ರವಿ ಹೇಳಿದರು.
ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷರು, ವಿಧಾನಪರಿಷತ್ ಉಪಸಭಾಪತಿಗಳಾದ ಧರ್ಮೇಗೌಡ, ವಿಧಾನಪರಿಷತ್ ಸದಸ್ಯರಾದ ಭೋಜೇಗೌಡ ಇತರರು ಇದ್ದರು.
ಆಶಾ ಕಾರ್ಯಕರ್ತೆಯರಿಗೆ ಪುಷ್ಪಾರ್ಚನೆ
ಆಶಾ ಕಾರ್ಯಕರ್ತೆಯರ ಸೇವೆ ಗಣನೀಯ. ಈ ನಿಟ್ಟಿನಲ್ಲಿ ಸಮಾರಂಭದಲ್ಲಿ ಭಾಗಿಯಾಗಿದ್ದ ಎಲ್ಲ ಆಶಾ ಕಾರ್ಯಕರ್ತೆಯರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.
ಪಕ್ಷದೊಳಗೆ ಗೊಂದಲ ಇಲ್ಲ
ವಿಧಾನಪರಿಷತ್ ಸ್ಥಾನದ ಆಯ್ಕೆ ಬಗ್ಗೆ ಯಾವುದೇ ಗೊಂದಲ ಇಲ್ಲ. ಎಲ್ಲ ಜಿಲ್ಲೆಗಳಲ್ಲಿ ಆಕಾಂಕ್ಷಿತರಿದ್ದು, ಆಯಾ ಉಸ್ತುವಾರಿ ಸಚಿವರ ಬಳಿ ಚರ್ಚೆ ನಡೆಸುವುದನ್ನು ತಪ್ಪು ಎನ್ನಲಾದೀತೇ? ಪಕ್ಷದೊಳಗೆ ಯಾವುದೇ ಅಸಮಾಧಾನ ಇಲ್ಲ. ಇನ್ನು ಆರ್.ಶಂಕರ್, ಎಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಸೇರಿದಂತೆ ಎಲ್ಲರಿಗೂ ನಮ್ಮ ಬೆಂಬಲ ಇದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್ ಹಾಗೂ ವಿಎಸ್ಎಸ್ಎನ್ ಗೆ ಒಂದೇ ಸಾಫ್ಟ್‌ವೇರ್ ಎಲ್ಲ ವ್ಯವಹಾರ ಒಂದೇ ವ್ಯವಸ್ಥೆಯಡಿ ಬರಲು ಸಹಾಯಕ ಚಿಕ್ಕಮಗಳೂರು: ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್ ಹಾಗೂ ವಿಎಸ್ಎಸ್ಎನ್ ಬ್ಯಾಂಕ್ ಗಳ ವ್ಯವಸ್ಥೆಯನ್ನು ಒಂದೇ ಸಾಫ್ಟ್‌ವೇರ್ ಅಡಿ ತರಲಾಗುವುದು. ಇದರಿಂದ ಯಾವುದೇ ಅವ್ಯವಹಾರ ಆಗುವುದನ್ನು ತಡೆಯಬಹುದಾಗಿದೆ. ಜೊತೆಗೆ ಯಾರಿಗೆ ಎಷ್ಟು ಸಾಲ ಕೊಡಲಾಗಿದೆ? ಒಬ್ಬರಿಗೇ ಹೆಚ್ಚು ಸಾಲ ಸಿಕ್ಕಿದೆಯೇ? ಬಡ್ಡಿ ಸೇರಿದಂತೆ ಸಾಲ ವಸೂಲಾತಿ ಎಷ್ಟಿದೆ? ಬ್ಯಾಂಕ್‌ಗಳ ಸ್ಥಿತಿಗತಿ ಏನು ಎಂಬ ನಿಟ್ಟಿನಲ್ಲಿ ತಿಳಿಯಬಹುದು ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.