ಇಲ್ಲಿಯವರೆಗೆ ರೈತರಿಗೆ 2027 ಕೋಟಿ ರೂ. ಸಾಲ
* ಸಚಿವ ಎಸ್.ಟಿ. ಸೋಮಶೇಖರ್ ಮಾಹಿತಿ
* ಒಟ್ಟಾರೆ 14 ಸಾವಿರ ಕೋಟಿ ವಿತರಣೆ ಗುರಿ
ಕೋಲಾರ: ಈ ವರ್ಷ ರೈತರಿಗೆ ಏ. 1 ರಿಂದ ಇಂದಿನವರೆಗೆ 2 ಲಕ್ಷ 80 ಸಾವಿರದ 284 ರೈತರಿಗೆ 2027 ಕೋಟಿ ರೂಪಾಯಿಗಳನ್ನು ಸಾಲವನ್ನು ಈಗಾಗಲೇ ನಿಡಲಾಗಿದ್ದು, ಈ ಸಾಲಿನಲ್ಲಿ ಸುಮಾರು 14 ಸಾವಿರ ಕೋಟಿ ರೂಪಾಯಿ ಸಾಲವನ್ನು ನೀಡುವ ಗುರಿ ಇದೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಕೋಲಾರದಲ್ಲಿ ರಾಜ್ಯ ಸರ್ಕಾರದ ವತಿಯಿಂದ ಕೊಡಮಾಡುವ 3 ಸಾವಿರ ರೂಪಾಯಿ ಪ್ರೋತ್ಸಾಹಧನ ಚೆಕ್ ವಿತರಿಸಿ ಮಾತನಾಡಿದ ಸಚಿವರು, ರೈತರಿಗೆ ಯಾವುದೇ ರೀತಿಯಾಗಿ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗಿದ್ದು, ಹೊಸ ರೈತರಿಗೂ ಹೆಚ್ಚಿನ ಸಾಲ ನೀಡಲು ಕ್ರಮ ವಹಿಸುವಂತೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಲಾಕ್ ಡೌನ್ ಬಳಿಕ ಯಾರು ತೊಂದರೆಗೊಳಾಗಿದ್ದಾರೋ ಅಂಥವರಿಗೆ ಪ್ರೋತ್ಸಾಹಧನ ಸಿಗಬೇಕು ಎಂಬುದು ಮುಖ್ಯಮಂತ್ರಿಗಳ ಆಶಯ. ಈ ಹಿನ್ನೆಲೆಯಲ್ಲಿ 42 ಸಾವಿರ ಆಶಾಕಾರ್ಯಕರ್ತರಿಗೆ ತಲಾ 3 ಸಾವಿರ ರೂಪಾಯಿ ಕೊಡಲು ಒಟ್ಟು 12.7 ಲಕ್ಷ ಖರ್ಚಾಗಲಿದ್ದು, ಅದನ್ನು ಸಹಕಾರ ಇಲಾಖೆಯಿಂದ ಭರಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಸಂಸದರಾದ ಮುನಿ ಸ್ವಾಮಿ ಮಾತನಾಡಿ, ಕೊರೋನಾ ಬಗ್ಗೆ ಹೆಚ್ಚು ಗಮನಹರಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರ ಸೇವೆ ಶ್ಲಾಘನೀಯ. ಇನ್ನು ಮುಂದೆಯೂ ನಿಮ್ಮ ಸಹಕಾರ ಹೀಗೆಯೇ ಇರಲಿ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಸತ್ಯಭಾಮ ಮಾತನಾಡಿ, ಕೊರೋನಾ ವಿರಿದ್ಧದ ಹೋರಾಟದಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಬಹಳ ಮುಖ್ಯವಾಗಿದೆ. ಲಾಕ್ ಡೌನ್ ಪ್ರಾರಂಭವಾದಾಗಿನಿಂದ ಸಹ ರೈತರಿಗೆ ತೊಂದರೆ ಕೊಡದೆ ವ್ಯಾಪಾರ- ವಹಿವಾಟು ನಡೆಸಲು ಅನುಮತಿ ಕೊಡಲಾಗಿತ್ತು. ಇದರ ಜೊತೆ ಜೊತೆಗೆ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೆವು. ಈಗಲೂ ಸಹ ಆಂಧ್ರದ ಗಡಿಭಾಗದಲ್ಲಿದ್ದರೂ ಸೂಕ್ತ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದರು.
ಸಚಿವ ನಾಗೇಶ್ ಮಾತನಾಡಿ, ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು, ತಮ್ಮ ಇಲಾಖೆಯಿಂದ ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ದಾಖಲೆಯ 53 ಕೋಟಿ ರೂಪಾಯಿಯನ್ನು ಸಂಗ್ರಹ ಮಾಡಿ ಕೊಟ್ಟಿದ್ದಾರೆ. ಇದು ಅನುಕರಣೀಯ. ಅಲ್ಲದೆ, ಮೈಸೂರು ಮೃಗಾಲಯಕ್ಕೂ 3.23 ಕೋಟಿ ರೂಪಾಯಿಯನ್ನು ದಾನಿಗಳಿಂದ ಸಂಗ್ರಹಿಸಿ ಕೊಟ್ಟಿದ್ದಾರೆ. ಇದು ನಮಗೆ ಮಾದರಿಯಾಗಬೇಕು. ನಮ್ಮಲ್ಲೂ ಸಹ ಆಹಾರ ಧಾನ್ಯ ವಿತರಣೆಗೆ ದಾನಿಗಳು ಮುಂದೆ ಬರಲಿ. ನಾವೂ ಈ ಮಾದರಿಯನ್ನು ಅನುಸರಿಸೋಣ ಎಂದು ಹೇಳಿದರು.
ಬಾಕ್ಸ್))))
ಕೋಲಾರ ಡಿಸಿಸಿ ಬ್ಯಾಂಕ್ ಅವ್ಯವಹಾರ ತನಿಖೆ
ಕೆರೆ ಅನುದಾನ ಹೆಸರಲ್ಲಿ ಸೇರಿದಂತೆ ಇನ್ನಿತರ ವಿಷಯಗಳ ಮೇಲೆ ಅವ್ಯವಹಾರ ಮಾಡಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಶೀಘ್ರ ತನಿಖೆ ನಡೆಸಿ ಕ್ರಮ ಜರುಗಿಸಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಸಹಕಾರ ಕ್ಷೇತ್ರ ಎನ್ನುವುದು ಸಹಕಾರ ನೀಡಲು ಇರುವುದು. ಇಲ್ಲಿ ಅಸಹಕಾರ ಸಲ್ಲ. ಡಿಸಿಸಿ ಬ್ಯಾಂಕ್ ಇರುವುದು ರೈತರಿಗೆ ಸಾಲ ಕೊಡಲು, ಅವ್ಯವಹಾರ ಮಾಡಲು ಅಲ್ಲ. ಆದರೆ, ಕೋಲಾರ ಡಿಸಿಸಿ ಬ್ಯಾಂಕ್ ನಲ್ಲಿ ರೈತರಿಗೆ ಸಹಕಾರ ನೀಡುವ ಬದಲು ಕೆಲವು ಸ್ವಂತ ವಿಚಾರಕ್ಕೆ ಹಾಗೂ ಬೇರೆ ಬೇರೆ ವಿಷಯಕ್ಕೆ ಸಂಬಂಧಿಸಿ ನಿಯಮಗಳನ್ನು ಮೀರಿ ಸಾಲವನ್ನು ಕೊಡಲಾಗುತ್ತಿದೆ. ಇಂತಹವುಗಳಿಗೆ ಕಡಿವಾಣ ಹಾಕಬೇಕಿದ್ದು, ತನಿಖೆ ನಡೆಸಲಾಗುವುದು ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.
ರಾಜ್ಯಸಭೆಯ ಆಯ್ಕೆಯನ್ನು ಹೈಕಮಾಂಡ್ ಮಾಡಿದೆ. ಅದನ್ನು ನಾವು ಒಪ್ಪಲೇಬೇಕು. ದೆಹಲಿಯ ಕೋರ್ ಕಮಿಟಿ ಆಯ್ಕೆಯನ್ನು ಎಲ್ಲರೂ ಸ್ವಾಗತಿಸಿದ್ದೇವೆ. ಇಲ್ಲಿ ಯಾರ ಅಸಮಾಧಾನವೂ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೋಚಿಮುಲ್ ಪ್ರತ್ಯೇಕಕ್ಕೆ ಅಪಸ್ವರ ಇಲ್ಲ
ಕೋಚಿಮುಲ್ ಪ್ರತ್ಯೇಕಕ್ಕೆ ಕೋಲಾರದಿಂದ ಯಾವುದೇ ಅಪಸ್ವರ ಇಲ್ಲ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟವನ್ನು ಬೇರ್ಪಡಿಸಲು ಎರಡೂ ಕಡೆಯವರಿಂದ ಸ್ವಾಗತವಿದೆ. ಆದರೆ, ಈ ಬಗ್ಗೆ ಇನ್ನೂ ಪ್ರಾಥಮಿಕ ಹಂತದಲ್ಲೇ ಚರ್ಚೆಗಳು ನಡೆಯುತ್ತಿವೆ. ಸಚಿವರಾದ ಡಾ.ಸುಧಾಕರ್ ಹಾಗೂ ಎಚ್. ನಾಗೇಶ್ ಅವರ ಜೊತೆ ಸಭೆ ನಡೆಸಿ ತೀರ್ಮಾನ ಪ್ರಕಟಿಸಲಾಗುವುದು ಎಂದು ಸಚಿವ ಸೋಮಶೇಖರ್ ತಿಳಿಸಿದರು.