b70136e9 b84d 4e8a bcf5 54647981e11e

Congress: ʻ ಕೈ ʼ “100 ನಾಟ್ ಔಟ್” ಗೆ ಭರ್ಜರಿ ಸಿದ್ಧತೆ…..!

POLATICAL STATE

ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ “100 ನಾಟ್ ಔಟ್” ಪ್ರತಿಭಟನೆಗೆ ಕಾಂಗ್ರೆಸ್ ಭರ್ಜರಿ ಸಿದ್ಧತೆ

ಬೆಂಗಳೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ದ ರಾಜ್ಯವ್ಯಾಪಿ ಪ್ರತಿಭಟನೆ ನಡೆಸುವ ‘100 ನಾಟ್ ಔಟ್’ ಅಭಿಯಾನಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಗುರುವಾರ ಸರಣಿ ಸಭೆಗಳನ್ನು ನಡೆಸಿದರು.

ಶುಕ್ರವಾರದಿಂದ ಆರಂಭವಾಗಲಿರುವ 5 ದಿನಗಳ ಪ್ರತಿಭಟನೆ ಯಶಸ್ವಿಗೊಳಿಸಲು ಕೆಪಿಸಿಸಿ ಅಧ್ಯಕ್ಷರು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಪಕ್ಷದ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಹಾಗೂ ಪಕ್ಷದ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

”ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆ ಯಶಸ್ವಿಗೊಳಿಸುವ ಸಂಬಂಧ ಉಸ್ತುವಾರಿ ನಾಯಕರುಗಳನ್ನು ನೇಮಕ ಮಾಡಲಾಗಿದೆ. ಒಟ್ಟು 5 ಸಾವಿರ ಪೆಟ್ರೋಲ್ ಬಂಕ್ ಗಳ ಎದುರು ಪ್ರತಿಭಟನೆಗಳು ನಡೆಯಲಿವೆ. ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಸೇರಿ ಎಲ್ಲ ಮುಂಚೂಣಿ ಘಟಕಗಳೂ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗಿಯಾಗಲಿವೆ” ಎಂದು ಶಿವಕುಮಾರ್ ಅವರು ತಿಳಿಸಿದರು.

bca1e9f8 16dc 4275 b329 ade3b10820f2

5 ದಿನಗಳ ಕಾಲ ನಡೆಯಲಿರುವ ಪ್ರತಿಭಟನೆಯ ಸಮನ್ವಯ ಜವಾಬ್ದಾರಿಯನ್ನು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ನೀಡಲಾಗಿದೆ.

”ಪ್ರತಿಭಟನೆ ಸಂದರ್ಭದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕು” ಎಂದು ಕೆಪಿಸಿಸಿ ಅಧ್ಯಕ್ಷರು ಸೂಚನೆ ನೀಡಿದರು.

”ಪಕ್ಷದ ಪ್ರತಿಯೊಬ್ಬ ನಾಯಕರೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು. ಪ್ರತಿಭಟನೆಯ 1 ನಿಮಿಷದ ವಿಡಿಯೋವನ್ನು ಕೆಪಿಸಿಸಿ ಸಾಮಾಜಿಕ ಜಾಲ ಘಟಕಕ್ಕೆ ಕಳಿಸಬೇಕು” ಎಂದು ಶಿವಕುಮಾರ್ ಸೂಚಿಸಿದರು.

ಈ ವೇಳೆ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಪೆಟ್ರೋಲಿಯಂ ಉತ್ಪನ್ನಗಳ ದರ ಹೆಚ್ಚಳದ ಮೂಲಕ ಬಿಜೆಪಿ ಸರ್ಕಾರ ಜನಸಾಮಾನ್ಯರ ಬೆನ್ನುಮೂಳೆಯನ್ನೇ ಮುರಿದಿದೆ. ಕೊರೊನಾ ಸಂಕಷ್ಟದಿಂದ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿರುವ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಲಾಗಿದೆ. ಇದರ ವಿರುದ್ದ ರಾಜ್ಯಾದ್ಯಂತ ಪ್ರತಿಭಟನೆಗೆ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಮುಂದಾಗಬೇಕು” ಎಂದರು.

”ಕೊರೊನಾ ಸಾಂಕ್ರಾಮಿಕದ ಅವಧಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ ₹25.72 ರೂ. ಹಾಗೂ ಡೀಸೆಲ್ ಗೆ ₹23.93 ರೂ. ಹೆಚ್ಚಳ ಮಾಡುವ ಮೂಲಕ ಸರಕಾರ ತೆರಿಗೆ ನೆಪದಲ್ಲಿ ಸಾರ್ವಜನಿಕರನ್ನು ಲೂಟಿ ಮಾಡಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಒಂದು ವರ್ಷದಲ್ಲಿ ಬಿಜೆಪಿ ಸರ್ಕಾರ 48 ಬಾರಿ ತೈಲ ದರ ಹೆಚ್ಚಳ ಮಾಡಿದೆ. ಕಳೆದ ಜನವರಿಯಲ್ಲಿ 10 ಬಾರಿ, ಫೆಬ್ರವರಿ ಯಲ್ಲಿ 16 ಬಾರಿ, ಮೇ ತಿಂಗಳಲ್ಲೂ 16 ಬಾರಿ, ಜೂನ್ ತಿಂಗಳಲ್ಲಿ ಕೇವಲ 9 ದಿನಗಳಲ್ಲಿ 6 ಬಾರಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಮಾಡಲಾಗಿದೆ. ಈ ಮೂಲಕ ಕಳೆದ ಜನವರಿ ತಿಂಗಳಿಂದೀಚೆಗೆ ನರೇಂದ್ರ ಮೋದಿ ಸರ್ಕಾರ 21.60 ಲಕ್ಷ ಕೋಟಿ ರೂ.ಗಳನ್ನು ಸಂಪಾದಿಸಿದೆ.