ಬೆಳೆ ವಿಮೆ ಯೋಜನೆಗಾಗಿ ರೈತರಿಂದ ಅರ್ಜಿ ಆಹ್ವಾನ
ತುಮಕೂರು(ಕವಾ)ಜೂ.10: ತೋಟಗಾರಿಕೆ ಇಲಾಖೆಯು ಹವಮಾನ ಆಧಾರಿತ ಬೆಳೆ ವಿಮೆ ಯೋಜನೆಗಾಗಿ ರೈತರಿಂದ ಅರ್ಜಿ ಆಹ್ವಾನಿಸಿದೆ.
ಈ ಯೋಜನೆಯಡಿ ಅಧಿಸೂಚಿಸಿದ ಬೆಳೆಗೆ ಸಾಲ ಪಡೆಯುವ ರೈತರನ್ನು ಕಡ್ಡಾಯವಾಗಿ ಬೆಳೆ ವಿಮೆಗೆ ಒಳಪಡಿಸಲಾಗುವುದು. ಬೆಳೆ ಸಾಲ ಪಡೆಯದ ರೈತರಿಗೆ ಈ ವಿಮೆ ಐಚ್ಛಿಕವಾಗಿರುತ್ತದೆ.
ಬೆಳೆ ವಿಮೆ ಯೋಜನೆಗೆ ತಾಲೂಕುವಾರು ಬೆಳೆಗಳನ್ನು ಒಳಪಡಿಸಲಾಗಿದ್ದು, ವಿವರ ಇಂತಿದೆ. ತುಮಕೂರು, ಕುಣಿಗಲ್ ಹಾಗೂ ಕೊರಟಗೆರೆ ತಾಲೂಕಿನಲ್ಲಿ ಅಡಿಕೆ ಮತ್ತು ಮಾವು ಬೆಳೆಯನ್ನು ವಿಮೆಗೆ ಒಳಪಡಿಸಲಾಗಿದೆ. ಅದೇ ರೀತಿ ಗುಬ್ಬಿ, ತುರುವೇಕೆರೆ, ಪಾವಗಡ, ಶಿರಾ, ತಿಪಟೂರು ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಅಡಿಕೆ, ಮಾವು, ಪಪ್ಪಾಯ ಮತ್ತು ದಾಳಿಂಬೆಯನ್ನು ಹಾಗೂ ಮಧುಗಿರಿ ತಾಲೂಕಿನಲ್ಲಿ ಅಡಿಕೆ, ಮಾವು ಮತ್ತು ದಾಳಿಂಬೆ ಬೆಳೆಯನ್ನು ಹವಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ಒಳಪಡಿಸಿದೆ.
ಆಯಾ ತಾಲ್ಲೂಕಿಗೆ ಸಂಬಂಧಪಟ್ಟ ಬೆಳೆಗಳಿಗೆ ವಿಮೆ ಮಾಡಿಸುವ ರೈತರು ಕೂಡಲೇ ನಿಗಧಿತ ಅರ್ಜಿಯೊಂದಿಗೆ ಪ್ರಸಕ್ತ ಸಾಲಿನ ಭೂಮಿ ಹೊಂದಿರುವ ದಾಖಲೆಗಳಾದ ಪಹಣಿ, ಬ್ಯಾಂಕ್ ಖಾತೆ ಪುಸ್ತಕ, ಆಧಾರ್ ನಕಲು ಪ್ರತಿ ಮತ್ತು ಸ್ವಯಂ ಘೋಷಿತ ಬೆಳೆ ವಿವರಗಳೊಂದಿಗೆ ಆಯಾ ತಾಲ್ಲೂಕಿನ ಯಾವುದಾದರು ರಾಷ್ಟ್ರೀಯ ಅಧಿಕೃತ ಬ್ಯಾಂಕ್‍ಗಳಲ್ಲಿ ನೋಂದಣಿ ಮಾಡಿಸಬಹುದಾಗಿದೆ. ಅಡಿಕೆ, ದಾಳಿಂಬೆ, ಪಪ್ಪಾಯ ಬೆಳೆಗಳ ವಿಮೆ ನೋಂದಣಿಗೆ ಜೂನ್ 30 ಹಾಗೂ ಮಾವು ಬೆಳೆಗೆ ಜುಲೈ 31 ಕಡೆಯ ದಿನವಾಗಿದೆ.
ಈ ಯೋಜನೆಯಡಿ 2021ರ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ ಮತ್ತು ಮೇಘ ಸ್ಪೋಟ ಸಂದರ್ಭದಲ್ಲಿ ಟರ್ಮ್ ಶೀಟ್‍ನಲ್ಲಿ ನಮೂದಿಸಿರುವ ರಿಸ್ಕ್ ಅವಧಿಯೊಳಗೆ ಬೆಳೆ ನಷ್ಟ ಸಂಭವಿಸಿದರೆ ವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂಧಪಟ್ಟ ಹಣಕಾಸು ಸಂಸ್ಥೆ -ವಿಮಾ ಸಂಸ್ಥೆಗಳ ಕಛೇರಿಗಳಿಗೆ 72 ಗಂಟೆಯೊಳಗೆ ತಿಳಿಸಬೇಕು. ಯಾವುದೇ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು 72 ಗಂಟೆಗಳೊಳಗಾಗಿ ತಿಳಿಸಬೇಕು.
ಈ ಯೋಜನೆಯಲ್ಲಿ ಒಳಪಡಿಸಲಾಗುವ ಎಲ್ಲಾ ಬೆಳೆಗಳಿಗೆ ಬೆಳೆ ಸಾಲ ಪಡೆಯುವ/ಪಡೆದ ರೈತರನ್ನು ಕಡ್ಡಾಯವಾಗಿ ಬೆಳೆ ವಿಮೆಗೆ ಒಳಪಡಿಸಲಾವುದು ಹಾಗೂ ಬೆಳೆ ಸಾಲ ಪಡೆಯದ ರೈತರಿಗೆ ಐಚ್ಚಿಕವಾಗಿ ಬೆಳೆ ವಿಮೆಗೆ ಒಳಪಡಿಸಲಾಗುವುದು. ಮಾರ್ಗಸೂಚಿ ಅನ್ವಯ ಬ್ಯಾಂಕಿನಲ್ಲಿ ಸಾಲ ಮಂಜೂರಾದ ಎಲ್ಲಾ ರೈತರನ್ನು ಈ ಯೋಜನೆಗೆ ಒಳಪಡಿಸಲಾಗುವುದು. ಸಾಲ ಪಡೆದ ರೈತರು ಯೋಜನೆಯಲ್ಲಿ ನೊಂದಾಯಿಸಿಕೊಳ್ಳಲು ಇಚ್ಚಿಸದೇ ಇದ್ದಲ್ಲಿ ಬೆಳೆ ನೋಂದಣಿಯ ಅಂತಿಮ ದಿನಾಂಕಕ್ಕಿಂತ 7 ದಿನಗಳ ಮುಂಚಿತವಾಗಿ ಸಂಬಂಧಿಸಿದ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರಿಗೆ ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಿದಲ್ಲಿ ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈಬಿಡಲಾಗುವುದು.
ಅಡಿಕೆ ಬೆಳೆಗೆ ಪ್ರತಿ ಹೆಕ್ಟೇರ್‍ಗೆ 128000 ರೂ. ಗಳ ವಿಮಾ ಮೊತ್ತ ನಿಗಧಿಪಡಿಸಲಾಗಿದ್ದು, ರೈತರು 6400 ರೂ.ಗಳ ವಿಮಾ ಕಂತಿನ ಮೊತ್ತವನ್ನು ಪಾವತಿಸಬೇಕು. ದಾಳಿಂಬೆ ಬೆಳೆಗೆ ಪ್ರತಿ ಹೆಕ್ಟೇರ್‍ಗೆ 127000 ರೂ.ಗಳ ವಿಮಾ ಮೊತ್ತ ನಿಗಧಿಯಾಗಿದ್ದು, ರೈತರು 6350 ರೂ.ಗಳ ವಿಮಾ ಕಂತಿನ ಮೊತ್ತವನ್ನು ಪಾವತಿಸಬೇಕು. ಪಪ್ಪಾಯ ಬೆಳೆಗೆ ಪ್ರತಿ ಹೆಕ್ಟೇರ್‍ಗೆ 134000 ರೂ.ಗಳ ವಿಮಾ ಮೊತ್ತ ನಿಗಧಿಪಡಿಸಿದ್ದು, ರೈತರು 6700 ರೂ.ಗಳ ವಿಮಾ ಕಂತಿನ ಮೊತ್ತ ಹಾಗೂ ಮಾವು ಬೆಳೆಗೆ ಪ್ರತಿ ಹೆಕ್ಟೇರ್‍ಗೆ 80000 ರೂ.ಗಳ ವಿಮಾ ಮೊತ್ತವನ್ನು ನಿಗಧಿಪಡಿಸಲಾಗಿದ್ದು, ರೈತರು 4000 ರೂ.ಗಳ ವಿಮಾ ಕಂತನ್ನು ಪಾವತಿಸಬೇಕು.
ಹೆಚ್ಚಿನ ಮಾಹಿತಿಗಾಗಿ ತುಮಕೂರು ತಾಲೂಕಿನ ರೈತರು ಮೊ.ಸಂ. 9844042356, ಗುಬ್ಬಿ(9686056705), ಚಿಕ್ಕನಾಯಕನಹಳ್ಳಿ (9538273964), ಕುಣಿಗಲ್(9448660766), ತಿಪಟೂರು(9964791910), ತುರುವೇಕೆರೆ(9448416334), ಕೊರಟಗೆರೆ (9535781963), ಮಧುಗಿರಿ(9448448970), ಶಿರಾ(9844042356) ಹಾಗೂ ಪಾವಗಡ ತಾಲೂಕಿನ ರೈತರು ಮೊ.ಸಂ. 9482222090ಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.