65 ಲಕ್ಷ ವೆಚ್ಚದ ಉಪನೋಂದಣಾಧಿಕಾರಿಗಳ ಕಚೇರಿಯ ನೂತನ ಕಟ್ಟಡದ ಉದ್ಘಾಟನೆ
ತುಮಕೂರು ಜೂ.25(ಕ.ವಾ): ಕೊರಟಗೆರೆ ತಾಲ್ಲೂಕಿನಲ್ಲಿ 2020-21ನೇ ಸಾಲಿನಲ್ಲಿ ಸುಮಾರು 8 ಕೋಟಿ ರಾಜಸ್ವ ಸಂಗ್ರಹಣೆ ಮತ್ತು ಪ್ರತಿ ವರ್ಷ 4ರಿಂದ5 ಸಾವಿರ ನೋಂದಣಿಯಾಗುತ್ತಿರುವ ಹಿನ್ನೆಲೆಯಲ್ಲಿ ಉಪನೋಂದಣಾಧಿಕಾರಿಗಳ ಕಚೇರಿಯ ನೂತನ ಕಟ್ಟಡ ನಿರ್ಮಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಆಶೋಕ ತಿಳಿಸಿದರು.
ಕೊರಟಗೆರೆ ಪಟ್ಟಣದಲ್ಲಿಂದು ಉಪ ನೋಂದಣಿ ಕಚೇರಿಯ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ತಾಲೂಕಿಗೆ ಉಪ ನೋಂದಣಿ ಕಚೇರಿ ಅವಶ್ಯಕವಾಗಿದ್ದ ನಿಮಿತ್ತ 65 ಲಕ್ಷ ವೆಚ್ಚದಲ್ಲಿ ಈ ಕಟ್ಟಡ ನಿರ್ಮಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಲಿದೆ. ಕಂದಾಯ ಇಲಾಖೆ ಚುರುಕುಗೊಳಿಸುವ ದೃಷ್ಠಿಯಿಂದ ಕೆಲವು ಕಾಯ್ದೆಗಳಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದು ತಿಳಿಸಿದರು.
ಅಧಿಕಾರಿಗಳೇ ಜನರ ಬಳಿ ಹೋಗಿ ಸಮಸ್ಯೆಗೆ ಸ್ಪಂದಿಸಬೇಕೆಂಬ ಉದ್ದೇಶದಿಂದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಎಂಬ ನೂತನ ಕಾರ್ಯಕ್ರಮ ಮಾಡಲಾಗಿದೆ. ಯಶಸ್ವಿಯಾಗಿ ನಡೆಯುತ್ತಿದ್ದ ಈ ಕಾರ್ಯಕ್ರಮ ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದು, ಮುಂಬರುವ ದಿನಗಳಲ್ಲಿ ಈ ಕಾರ್ಯಕ್ರಮ ಜನರಿಗೆ ಬಹಳ ಅನುಕೂಲವಾಗಲಿದೆ. ಜನರು ಜಿಲ್ಲಾ ಮತ್ತು ತಾಲೂಕು ಕಚೇರಿಗಳಿಗೆ ಅಲೆಯುವುದು ತಪ್ಪಿ ಸಕಾಲಕ್ಕೆ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದರು.
60 ವರ್ಷ ಮೇಲ್ಪಟ್ಟವರಿಗೆ ಮನೆ ಬಾಗಿಲಿಗೆ ವೃದ್ಧಾಪ್ಯ ವೇತನ ತಲುಪಿಸುತ್ತಿರುವುದರಿಂದ ಅಕ್ರಮ ದಾಖಲಾತಿ ನೀಡಿ ಪಡೆಯುತ್ತಿದ್ದ ಸುಮಾರು 400 ರಿಂದ 500 ಕೋಟಿ ರೂ. ಉಳಿತಾಯವಾಗಿದೆ. ಇದಲ್ಲದೆ, ಅರ್ಹ ಫಲಾನುಭವಿಗೆ ಸೌಲಭ್ಯ ತಲುಪುತ್ತಿದ್ದು, ಈಗಾಗಲೇ 40ರಿಂದ50 ಸಾವಿರ ಫಲಾನುಭವಿಗಳು ಸೌಲಭ್ಯ ಪಡೆದಿದ್ದಾರೆ ಎಂದರು.
ಶಾಸಕ ಡಾ. ಜಿ. ಪರಮೇಶ್ವರ್ ಅವರ ಮನವಿಯಂತೆ ತಾಲ್ಲೂಕಿಗೆ ಅವಶ್ಯವಾದ ಬಗರ್ ಹುಕಂ ಸಾಗುವಳಿ ಕಮಿಟಿಯನ್ನು ಇನ್ನೂಂದು ವಾರದಲ್ಲಿ ರಚನೆಮಾಡಲು ಸೂಕ್ತ ಕ್ರಮವಹಿಸಲಾಗುವುದು. ತಾಲ್ಲೂಕಿಗೆ ಅವಶ್ಯಕವಾದ ಆಶ್ರಯ ನಿವೇಶನ, ಸ್ಮಶಾನ, ಶಾಲೆ, ಆಸ್ಪತ್ರೆಗಳ ನಿರ್ಮಾಣಕ್ಕೆ ಅವಶ್ಯವಿರುವ ಜಾಗವನ್ನು ಗುರುತಿಸಿ ಕೊಡಲಾಗುವುದು. ಕೆರೆ, ಸ್ಮಶಾನ, ಸರ್ಕಾರಿ ಜಾಗ ಒತ್ತುವರಿಯಾಗಿದ್ದರೆ, ತೆರವುಗೊಳಿಸಲು ಸೂಕ್ತ ಕ್ರಮ ವಹಿಸಲಾಗುವುದು. ತಾಲ್ಲೂಕಿಗೆ ಅವಶ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ಕಂದಾಯ ಇಲಾಖೆಯಿಂದ ನೀಡಲಾಗುವುದು ಎಂದು ಹೇಳಿದರು.
ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಡಾ|| ಜಿ. ಪರಮೇಶ್ವರ ಮಾತನಾಡಿ, ಕಂದಾಯ ಇಲಾಖೆಯಡಿ ನೆನೆಗುದಿಗೆ ಬಿದ್ದಿರುವ ಸ್ಮಶಾನ, ಬಡ ಜನರಿಗೆ ನಿವೇಶನ ಸಮಸ್ಯೆ ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ತಾಲ್ಲೂಕಿನಲ್ಲಿರುವ ಪೊಲೀಸ್ ತರಬೇತಿ ಕೇಂದ್ರಕ್ಕೆ ಅವಶ್ಯಕ ಇರುವ ಜಾಗ ನೀಡಲು ಜಿಲ್ಲಾಧಿಕಾರಿಗೆ ನಿದೇರ್ಶನ ನೀಡಬೇಕು ಎಂದು ಸಚಿವರಿಗೆ ಮನವಿ ಮಾಡಿದರು.
ತಾಲ್ಲೂಕಿನಲ್ಲಿ ಪೂನಾ -ಬೆಂಗಳೂರು- ಚೆನ್ನೈ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ 16000 ಎಕರೆ ಜಮೀನನ್ನು ಕೈಗಾರಿಕಾ ಅಭಿವೃದ್ಧಿಗಾಗಿ ಭೂ ಸ್ವಾಧೀನಗೊಂಡಿದೆ. ಇದರ ಜೊತೆಗೆ ಇನ್ನು 1000 ಎಕರೆ ಭೂ ಸ್ವಾಧೀನಪಡಿಸಿಕೊಂಡು ಬೃಹತ್ ಜವಳಿ ಕೈಗಾರಿಕೆಗಳಿಗೆ ಅವಕಾಶ ನೀಡಿದರೆ ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಠಿಯಾಗಲಿದೆ. ಅದ್ದರಿಂದ ಈ ಯೋಜನೆಯನ್ನು ಶೀಘ್ರವೇ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದರು.
ಎತ್ತಿಹೊಳೆ ಯೋಜನೆಗಾಗಿ ಭೂ ಸ್ವಾಧೀನ ಪಡಿಸಿಕೊಂಡ ರೈತರಿಗೆ ಪರಿಹಾರ ನೀಡುವುದಲ್ಲಿ ತಾರತಮ್ಯ ಮಾಡದೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡ ಬಳ್ಳಾಪುರ ರೈತರಿಗೆ ನೀಡಿದ ಆಧಾರದಲ್ಲಿಯೇ ಸಮಾನವಾಗಿ ಇಲ್ಲಿಯ ರೈತರಿಗೂ ಪರಿಹಾರ ನೀಡಲು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕ್ರಮ ವಹಿಸುವಂತೆ ಸಚಿವರಿಗೆ ಮನವಿ ಮಾಡಿದರು.
ತಾಲ್ಲೂಕಿನಲ್ಲಿರುವ ಮಿನಿ ವಿಧಾನಸೌಧ (ತಹಸೀಲ್ದಾರ್) ಕಚೇರಿ ಕಟ್ಟಡದ ಎರಡನೇ ಮಹಡಿಯಲ್ಲಿ ನೀರು ಸೋರಿಕೆಯಿಂದ ದುರಸ್ಥಿಗೆ ಬಂದಿದ್ದು, ಕಂದಾಯ ಇಲಾಖೆಯಡಿ ಅನುದಾನ ಮೀಸಲಿಟ್ಟು ದುರಸ್ಥಿ ಕಾರ್ಯ ಮಾಡಬೇಕು ಎಂದು ಕೇಳಿಕೊಂಡದರು.
ಇದಕ್ಕೂ ಮುನ್ನ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವರು ಸಾರ್ವಜನಿಕರಿಗೆ ಮೂರನೆ ಅಲೆಯ ಬಗ್ಗೆ ಎಚ್ಚರಿಕೆಯಿಂದ ಇರಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷೆ ಮಂಜುಳಾ ಸತ್ಯನಾರಾಯಣ್, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್, ಮಧುಗಿರಿ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ಜಿಲ್ಲಾ ನೋಂದಣಾಧಿಕಾರಿ ಸಯ್ಯದ್ ನೂರ್ ಪಾಷಾ, ತಹಸೀಲ್ದಾರ್ ಗೋವಿಂದರಾಜು ಸೇರಿದಂತೆ ತಾಲ್ಲೂಕು ಮತ್ತು ಗ್ರಾಮ ಪಂಚಾಯತಿ ಅದ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.