ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್‍ಸೆಂಟರ್’ನಲ್ಲಿ ಯಶಸ್ವಿಯಾಗಿ ಓಪನ್ ಹಾರ್ಟ್ ಸರ್ಜರಿಯನ್ನು ಉಚಿತವಾಗಿ ನಡೆಸಲಾಗಿದೆ
ತುಮಕೂರು: ಜಾಗತಿಕ ಮಟ್ಟಕ್ಕೆ ಸರಿಸಮಾನವಾದ ರೀತಿಯಲ್ಲಿ ತುಮಕೂರಿನ ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನ ‘ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್‍ಸೆಂಟರ್’ನಲ್ಲಿ ಯಶಸ್ವಿಯಾಗಿ ಓಪನ್ ಹಾರ್ಟ್ ಸರ್ಜರಿಯನ್ನು ಉಚಿತವಾಗಿ ನಡೆಸಲಾಗಿದೆ. ಇದು ಇತಿಹಾಸದಲ್ಲಿ ಹೊಸ ಅಧ್ಯಾಯವನ್ನ ಸೃಷ್ಟಿಸಿದೆ ಎಂದು ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಶ್ರೀ ಸಿದ್ದಾರ್ಥ ವೈದ್ಯಕೀಯ ಆಸ್ಪತ್ರ ಮತ್ತು ಕಾಲೇಜಿನಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತುಮಕೂರಿನಂತಹ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಓಪನ್ ಹಾರ್ಟ್ ಸರ್ಜರಿಯನ್ನು ನಡೆಸಿಯಶಸ್ವಿಯಾಗಿರುವುದು ದಾಖಲಾರ್ಹ. ಶಸ್ತ್ರಚಿಕಿತ್ಸೆಯಾದ ಅರ್ಧ ತಾಸಿನಲ್ಲೇ ರೋಗಿ ಚೇತರಿಸಿಕೊಂಡು, ವೈದ್ಯರೊಂದಿಗೆ ಮಾತನಾಡಿದ್ದು, ಗಮನಾರ್ಹ ಸಂಗತಿ ಎಂದರು
ಸಿದ್ದಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಯುಜಿಸಿಯಿಂದ ‘ಎ’ ಗ್ರೇಡ್ ಮಾನ್ಯತೆ ಪಡೆದಿದ್ದು ಸ್ವಾಯತ್ತ ವಿಶ್ವವಿದ್ಯಾಲಯವಾಗಿ ಪರಿವರ್ತನೆಗೊಂಡಿದೆ. ತಂದೆ ಶಿಕ್ಷಣ ಭೀಷ್ಮ ಡಾ.ಎಚ್.ಎಂ ಗಂಗಾಧರಯ್ಯನವರ ಆಶಯ ಮತ್ತು ಸಹೋದರರಾದ ಡಾ.ಜಿ ಶಿವಪ್ರಸಾದ್ ಅವರ ಕನಸಿನ ಕೂಸಾಗಿರುವ ನೂತನ ಹೃದಯರೋಗ ತಪಾಸಣೆ ಕೇಂದ್ರ ಗ್ರಾಮಾಂತರ ಪ್ರದೇಶದ ಬಡಜನತೆ ಮತ್ತು ಸಮುದಾಯದತ್ತ ಆರೋಗ್ಯ ಸೇವೆಗಳನ್ನು ನೀಡುವ ಉದ್ದೇಶವನ್ನಿಟ್ಟುಕೊಂಡು ಮುನ್ನಡೆಯಲ್ಲಿದೆ ಎಂದರು.
1988ರಲ್ಲಿ ಆರಂಭವಾದ ವೈದ್ಯಕೀಯ ಕಾಲೇಜಿನಿಂದ 5500 ವಿದ್ಯಾರ್ಥಿಗಳು ವೃತ್ತಿಪರರಾಗಿದ್ದು ದೇಶ-ವಿದೇಶದ ಹೆಸರಾಂತ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ಆರೋಗ್ಯ ಸೇವೆಗೆ ಒತ್ತು ನೀಡಲು ಹಾಗೂ ಸಮಾಜದ ಜನರಿಗೆ ಸೇವೆ ಒದಗಿಸಲು ಅಡ್ವಾನ್ಸ್ ಕಾರ್ಡಿಯಾಕ್ ಹಾರ್ಟ್ ಸೆಂಟರ್ ಆರಂಭಿಸಿದ್ದೆವೆ. ಪರಿಣಿತ ಯುವ ವೈದ್ಯರ ತಂಡ ಕಾರ್ಯೋನ್ಮುಖವಾಗಿದೆ ಎಂದು ಅವರು ವಿವರಿಸಿದರು.
ದೇಶದ ಪ್ರತಿಷ್ಠಿತ ಹೃದಯರೋಗ ಸಂಬಂಧಿ ಆಸ್ಪತ್ರೆಗಳ ವೈದ್ಯರು ಮತ್ತು ಮಾಲೀಕರೊಂದಿಗೆ ಸಮಾಲೋಚಿಸಿ ಅವರ ಸಲಹೆಗಳ ಆಧಾರದ ಮೇಲೆ ಬೆಂಗಳೂರಿನ ಕಾರ್ಡಿಯಾಕ್ ಪ್ರಾಂಟಿಡ ನಿರ್ದೇಶಕ ಡಾ.ತಮಿಮ್ ಅಹಮದ್ ನೇತೃತ್ವದ ತಂಡದೊಂದಿಗೆ ಪರಸ್ಪರ ಸಹಕಾರದಿಂದ ಆಸ್ಪತ್ರೆಯಲ್ಲಿ ಹಾರ್ಟ್ ಸೆಂಟರ್ ಆರಂಭಿಸಲಾಯಿತು. ವಿದೇಶಿ ಗುಣಮಟ್ಟದ ಸಲಕರಣೆಗಳನ್ನು ಒಳಗೊಂಡಂತೆ ಸುಮಾರು 16 ಕೋಟಿ ವೆಚ್ಚದಲ್ಲಿ ಸಂಸ್ಥೆ ಪ್ರಾರಂಭ ಮಾಡಿದ್ದು, ಸಂಸ್ಥೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಗುರಿ ಹೊಂದಿದ್ದೇವೆ ಎಂದು ಡಾ. ಜಿ ಪರಮೇಶ್ವರ್ ವಿವರಿಸಿದರು.
ಸರ್ಕಾರದ ಸೇವೆಗಳಿಗೂ ಒತ್ತು:
ಗ್ರಾಮಾಂತರ ಪ್ರದೇಶದ ಬಡವರ್ಗವನ್ನು ಪರಿಗಣಿಸಿ ಸರ್ಕಾರದ ಆರೋಗ್ಯ ಸೇವೆಗಳನ್ನು ಆಸ್ಪತ್ರೆಯಲ್ಲಿ ನೀಡಲು ನಿರ್ಧರಿಸಲಾಗಿದೆ. ಬಿ.ಪಿ.ಎಲ್, ಆಯುಷ್ಮನ್‍ಕಾರ್ಡ್ ಹೊಂದಿರುವ ಸಾವಿರಾರು ರೋಗಿಗಳಿಗೆ ಉಚಿತವಾಗಿ ಸೇವೆ ನೀಡಲಾಗಿದೆ. ಮುಂದೆ ಖಾಸಗಿ ಸಂಸ್ಥೆಗಳ ನೌಕರರು ಹಾಗೂ ಆರೋಗ್ಯ ವಿಮೆ ಹೊಂದಿರುವವರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲು ಚಿಂತಿಸಲಾಗುತ್ತಿದೆ. ಸಂಸ್ಥೆಯಲ್ಲಿ ಬಡಜನರಿಗೆ ಅವರ ಅನುಕೂಲಕ್ಕೆ ತಕ್ಕಂತೆ ಸಬ್ಸಿಡಿ ದರದಲ್ಲಿ ಸೇವೆಗಳನ್ನು ನೀಡಲಾಗುವುದು ಎಂದು ತಮ್ಮ ಸಂಸ್ಥೆಯ ಗ್ರಾಮಾಂತರ ಆರೋಗ್ಯ ಸೇವೆಯ ಗುರಿಯನ್ನು ಅವರು ತೆರೆದಿಟ್ಟರು.
‘ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್‍ಸೆಂಟರ್’ನ ಮೇಲ್ವಿಚಾರಕರಾದ ಹಾಗೂ ‘ಕಾರ್ಡಿಯಾಕ್ ಫ್ರಾಂಟಿ¬ಡಾ’ ಸಂಸ್ಥೆಯ ನಿರ್ದೇಶಕ ಡಾ.ತಮಿಮ್ ಅಹಮದ್ ಮಾತನಾಡಿ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿ ರೈತ ರಂಗಸ್ವಾಮಿ (56ವರ್ಷ) ಅವರ ಚಿಕಿತ್ಸೆಯ ವಿವರಗಳನ್ನು ಪ್ರಕಟಿಸಿದರು.
ತುಮಕೂರು ತಾಲ್ಲೂಕಿನ ಮರಳೇನಹಳ್ಳಿ ಗ್ರಾಮದ ಕೃಷಿಕರಾದ ರಂಗಸ್ವಾಮಿಗೆ ಮೂವರು ಮಕ್ಕಳು. ಒರ್ವ ಗಂಡು ಮಗು ಸಾವನ್ನಪ್ಪಿದ್ದು, ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಬಡ ರೈತಾಪಿ ಕುಟುಂಬದ ರಂಗಸ್ವಾಮಿ ಎದೆನೋವಿನಿಂದ ಇದೇ ತಿಂಗಳ 14ರಂದು ಆಸ್ಪತ್ರೆಗೆ ದಾಖಲಾಗುತ್ತಾರೆ. ಆರಂಭದಲ್ಲಿ ರೋಗಿಯ ತಪಾಸಣೆ, ಇಸಿಜಿ ನಡೆಸಿದಾಗ ಲಘು ಹೃದಯಾಘಾತವಾಗಿರುವುದು ಖಚಿತವಾಯಿತು. ಮೂರು ಮುಖ್ಯ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಉಂಟಾದ ತೊಂದರೆಯನ್ನು ಸರಿಪಡಿಸಲು ರೋಗಿಯ ಆಪೇಕ್ಷೆಯಂತೆ ಇದೇ ತಿಂಗಳ 16ರಂದು ಹಾರ್ಟ್ ಕೀಮೋ ಪ್ರೊಸೆಸ್ ಮೂಲಕ ತೆರೆದ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಇದೀಗ ರೋಗಿಯು ಸಂಪೂರ್ಣ ಆರೋಗ್ಯದಿಂದಿದ್ದು ವಾರ್ಡ್‍ನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.
ಹಾರ್ಟ್ ಕೀಮೋ ಪ್ರೊಸೆಸ್:
ಹಾರ್ಟ್ ಕೀಮೋ ಪ್ರೊಸೆಸ್ ಮೂಲಕ ಓಪನ್ ಹಾರ್ಟ್ ಸರ್ಜರಿ ನಡೆಸಿರುವುದು ಭಾರತದಲ್ಲೇ ಪ್ರಪ್ರಥಮ ಎಂದು ವಿವರಿಸಿದ ಡಾ. ತಮೀಮ್ ಅಹಮದ್ ಸುಮಾರು ನಾಲ್ಕು ತಾಸುಗಳ ಸುದೀರ್ಘ ಶಸ್ತ್ರಚಿಕಿತ್ಸೆಯ ನಂತರ ರಂಗಸ್ವಾಮಿ ಈಗ ಗುಣಮುಖರಾಗುತ್ತಿದ್ದಾರೆ ಎಂದರು.
ತುಮಕೂರಿನಿಂದ ಹಾಸನ, ಶಿವಮೊಗ್ಗದಿಂದ ಬೆಂಗಳೂರು ನಡುವೆ ಹೃದಯಕ್ಕೆ ಸಂಬಂಧಿಸಿದ ಯಾವುದೇ ಆಸ್ಪತ್ರೆ ಇಲ್ಲದಿರುವುದನ್ನು ಮನಗಂಡು ಸಿದ್ಧಾರ್ಥ ಸಂಸ್ಥೆ ಪ್ರಥಮವಾಗಿ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್ ಆರಂಭಿಸಿದ್ದು ಸಾರ್ವಜನಿಕರಿಗೆ ಬಹಳ ಉಪಯುಕ್ತ ಸೇವೆ ನೀಡುತ್ತಿದೆ.
ವೈದ್ಯರ ತಂಡ:
‘ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್‍ಸೆಂಟರ್’ನ ಮೇಲ್ವಿಚಾರಕರಾದ ಹಾಗೂ ‘ಕಾರ್ಡಿಯಾಕ್ ಫ್ರಾಂಟಿ¬ಡಾ’ ಸಂಸ್ಥೆಯ ನಿರ್ದೇಶಕ ಡಾ.ತಮಿಮ್ ಅಹಮದ್, ಹಾಗೂ ಡಾ. ನವೀನ್, ಡಾ. ಸುರೇಶ್, ಡಾ. ಒರಿಟ ಕಾಮತ್, ಡಾ. ನಾಗಾರ್ಜುನ, ಡಾ. ಪ್ರತಿಮಾ, ವಿವೇಕ್, ಜಾನ್ ಅವರನ್ನೊಳಗೊಂಡ ತಂಡ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ಮಾಡುವಲ್ಲಿ ಶ್ರಮಿಸಿದೆ.
ಹೃದಯ ರೋಗಿಗಳಿಗೆ ಔಷಧಿಗಳ ಮೂಲಕ ಗುಣಪಡಿಸುವುದಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ವಿದೇಶಿ ಗುಣಮಟ್ಟದ ಆಧುನಿಕ ಸಲಕರಣೆಗಳನ್ನು ಅಳವಡಿಕೆಯಿಂದಾಗಿ ಸಕಾಲದಲ್ಲಿ ತಪಾಸಣೆ ಮತ್ತು ಚಿಕಿತ್ಸೆ ಸೌಲಭ್ಯ ನೀಡುವುದಕ್ಕೆ ಅವಕಾಶವಿದೆ. ಬೆಂಗಳೂರಿನಿಂದ-ಶಿವಮೊಗ್ಗ, ತುಮಕೂರಿನಿಂದ-ಮೈಸೂರು, ತುಮಕೂರಿನಿಂದ ದಾವಣಗೆರೆ, ಬಳ್ಳಾರಿ ಮಾರ್ಗ ಮಧ್ಯೆ ಕೇಂದ್ರಿಕೃತ ಸ್ಥಳವಾಗಿದ್ದು ಸಕಾಲದಲ್ಲಿ ಈ ಭಾಗದ ಜನಕ್ಕೆ ಹೃದಯಕ್ಕೆ ಸಂಬಂಧಿಸಿದಂತೆ ಚಿಕಿತ್ಸೆಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ ಎಂದು ಡಾ.ತಮಿಮ್ ಅಹಮದ್ ವಿವರಿಸಿದರು.
ಸಿದ್ಧಾರ್ಥ ಆಸ್ಪತ್ರೆ ಮತ್ತು ಕಾಲೇಜಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ದೇವದಾಸ್, ಪ್ರಾಂಶುಪಾಲರಾದ ಡಾ.ಶ್ರೀನಿವಾಸ್ ಮೂರ್ತಿ, ಅಡ್ವಾನ್ಸ್ಡ್ ಹಾರ್ಟ್ ಸೆಂಟರ್‍ನ ಮುಖ್ಯ ಕಾರ್ಯನಿರ್ವಾಹಕ ವೈದ್ಯಾಧಿಕಾರಿ ಡಾ. ಪ್ರಭಾಕರ್ ಹಾಗೂ ವೈದ್ಯರ ತಂಡ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.