ಪಾವಗಡ:- ಅತ್ಯಂತ ವಿಜೃಂಭಣೆಯಿಂದ ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ರಜತ ಮಹೋತ್ಸವ ಸಂಕೀರ್ಣದ ದೇವತಾ ಕಾರ್ಯಗಳು, ಹೋಮಾದಿಗಳು ನೆರವೇರಿದವು.
ಎಲ್ಲಾ ದೇವತಾ ಕಾರ್ಯಗಳು ಶ್ರೀ ಶ್ರೀ ಮಾಧವಾಶ್ರಮ ಸ್ವಾಮೀಜಿ, ಪೀಠಾಧಿಪತಿಗಳು, ಶ್ರೀ ಕೋದಂಡಾಶ್ರಮ, ಹೆಬ್ಬೂರು ರವರ ಮಾರ್ಗದರ್ಶನದಲ್ಲಿ ನೆರವೇರಿದವು. ಮುಂಜಾನೆ ಆರಂಭವಾದ ಗಣ ಹೋಮ, ಸುದರ್ಶನ ಹೋಮ ಹಾಗೂ ಧನ್ವಂತರಿ ಹೋಮಗಳ ಜೊತೆಯಲ್ಲಿ ಶ್ರೀ ಲಲಿತಾರ್ಚನೆಯು ಶ್ರೀ ಚಕ್ರದ ಯಂತ್ರದ ಮೂಲಕ ನೆರವೇರಿದವು. ಶ್ರೀ ಸತ್ಯನಾರಾಯಣ ಹಾಗೂ ಅವರ ತಂಡ ಶ್ರೀ ಶ್ರೀ ಗುರುಗಳ ಮಾರ್ಗದರ್ಶನದಲ್ಲಿ ಸಕಲ ದೇವತಾ ಕಾರ್ಯಗಳನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆಸಿಕೊಟ್ಟರು. ಕಾರ್ಯಕ್ರಮದ ಅಂತಿಮ ಘಟ್ಟವಾದ ಪೂರ್ಣಾಹುತಿ ಸಂದರ್ಭದಲ್ಲಿ ಶ್ರೀ ಶ್ರೀ ಮಾಧವಾಶ್ರಮ ಸ್ವಾಮೀಜಿ ಹಾಗೂ ಶ್ರೀ ಶ್ರೀ ಜಪಾನಂದ ಸ್ವಾಮೀಜಿಯವರ ಅಮೃತಹಸ್ತದಿಂದ ನೆರವೇರಿತು.
ಆಶ್ರಮದ ನಿಕಟ ಭಕ್ತರೆಲ್ಲರೂ ಭಾಗಿಗಳಾದರು. ಇದೇ ಸಂದರ್ಭದಲ್ಲಿ ಪಾವಗಡ ಬ್ರಾಹ್ಮಣ ಸಂಘದ ಸದಸ್ಯರುಗಳಿಂದ ಪೂಜ್ಯ ಸ್ವಾಮೀಜಿಯವ್ವರಿಗೆ ಸ್ವಸ್ತಿ ವಾಚನ ಹಾಗೂ ಫಲ ಪುಷ್ಪ ಸಮರ್ಪಣೆ ನೆರವೇರಿತು. ಈ ಕಾರ್ಯಕ್ರಮದಲ್ಲಿ ಹಿರಿಯರಾದ ಶ್ರೀ ಚೆಲುವರಾಜನ್, ಶ್ರೀ ಅನಂತರಾಮ ಭಟ್ಟರು, ಶ್ರೀ ಯಜ್ಞನಾರಾಯಣ ಶರ್ಮ, ಶ್ರೀ ಆನಂದರಾವ್, ಶ್ರೀ ಸುಬ್ಬುನರಸಿಂಹ, ಶ್ರೀ ಜಯಸಿಂಹ, ಶ್ರೀ ಪ್ರಸನ್ನಮೂರ್ತಿ ಮತ್ತಿತರರು ಭಾಗಿಗಳಾಗಿ ಕಾರ್ಯಕ್ರಮಕ್ಕೆ ಪರಂಪರೆಯ ಮೆರುಗನ್ನು ನೀಡಿದರು. ಪೂರ್ಣಾಹುತಿಯ ನಂತರ ಪಾವಗಡದ ನಾಗರಿಕರ ಪರವಾಗಿ ಹಿರಿಯ ವೈದ್ಯರಾದ ಡಾ.ಜಿ.ವೆಂಕಟರಾಮಯ್ಯ, ಶ್ರೀ ಸುದೇಶ್ ಬಾಬು, ಶ್ರೀ ಲೋಕೇಶ್ ದೇವರಾಜ್, ಶ್ರೀ ರಾಮನಾಥ ಶೆಟ್ಟಿ, ಶ್ರೀರಾಮಮೂರ್ತಿ, ಶ್ರೀ ಗೋಪಾಲಕೃಷ್ಣ ಶೆಟ್ಟಿ ಮುಂತಾದವರು ಭಾಗವಹಿಸಿದ್ದರು.
ಶ್ರೀ ಸ್ವಾಮಿ ಜಪಾನಂದಜಿ ರವರ ಭಗವನ್ನಾಮ ಸಂಕೀರ್ತನೆಯ ನಂತರ ಪರಮ ಪೂಜ್ಯ ಶ್ರೀ ಶ್ರೀ ಮಾಧವಾಶ್ರಮ ಸ್ವಾಮೀಜಿ ರವರು ನೆರೆದ ಭಕ್ತರಿಗೆ ಆಶೀರ್ವಚನ ನೀಡುತ್ತಾ ಒಂದಾನೊAದು ಕಾಲದಲ್ಲಿ ತಾವು ಪಾವಗಡದ ಬಗ್ಗೆ ತಿಳಿದಾಗ ತೋಳಗಳ ನಾಡು ಎಂಬುದು ಪ್ರಚಲಿತವಾಗಿತ್ತು. ಆದರೆ, ಇಂದು ಸ್ವಾಮಿ ಜಪಾನಂದಜೀ ರವರ ಆಧ್ಯಾತ್ಮಿಕ, ಸಾಮಾಜಿಕ ಸೇವೆ, ಸುಸಜ್ಜಿತ ಆಸ್ಪತ್ರೆಯ ಸೇವೆ ಹೀಗೆ ಸೇವಾ ಕಾರ್ಯಗಳು ಹೆಸರನ್ನು ತಂದಿದ್ದಲ್ಲದೆ ಭಾರತೀಯ ಸಂಸ್ಕöÈತಿ, ಪರಂಪರೆ ಹಾಗೂ ಶ್ರೀರಾಮಕೃಷ್ಣ ವಿವೇಕಾನಂದ ವೇದಾಂತದ ಅನುಷ್ಠಾನ ಕಾರ್ಯ ನಿರಂತರವಾಗಿ ನಡೆಯುತ್ತಿರುವುದು ಜಗಜ್ಜಾಹೀರಾಗಿದೆ ಎಂದು ಪೂಜ್ಯ ಜಪಾನಂದಶ್ರೀಗಳ ಕಾರ್ಯವೈಖರಿಯನ್ನು ಹೃತ್ಪೂರ್ವಕವಾಗಿ ಶ್ಲಾಘಿಸಿದರು. ತದನಂತರ ಭಾರತೀಯ ಸಂಸ್ಕೃತಿಯ, ಪರಂಪರೆಯನ್ನು ಉಳಿಸಿಕೊಳ್ಳಲು ನಾವೆಲ್ಲರೂ ಕಟಿಬದ್ದರಾಗಿರಬೇಕೆಂದು ಕಿವಿಮಾತು ತಿಳಿಸಿದರು.
ಇದೇ ಸಂದರ್ಭದಲ್ಲಿ ಶ್ರೀರಾಮಕೃಷ್ಣ ಆಶ್ರಮದ ಪರಂಪರೆಯಲ್ಲಿ ಅತಿ ಕಿರಿಯ ವಯಸ್ಸಿನಲ್ಲಿಯೇ ಅಂದರೆ 1974ರಲ್ಲಿಯೇ ಆಶ್ರಮ ವಾಸಿಗಳಾಗಿ ಹಿರಿಯ ಸಂನ್ಯಾಸಿಗಳ ಮಾರ್ಗದರ್ಶನದಲ್ಲಿ ಜೀವನ ನಡೆಸಿಕೊಂಡು 1986ರಲ್ಲಿ ಶ್ರೀರಾಮಕೃಷ್ಣ ಮಠದ ಕೇಂದ್ರ ಸ್ಥಾನವಾದ ಬೇಲೂರು ಮಠ ಕಲ್ಕತ್ತಾದಲ್ಲಿ ಎರಡು ವರ್ಷಗಳ ಕಠಿಣ ತರಬೇತಿ ಪಡೆದ ನಂತರ ಸಂನ್ಯಾಸವನ್ನು ಸ್ವೀಕರಿಸಿ ನಿರಂತರವಾಗಿ ತಮ್ಮ ಜೀವನವನ್ನು ಆಧ್ಯಾತ್ಮಿಕ ಜೀವನದ ಹಿನ್ನೆಲೆಯಲ್ಲಿ ಸೇವಾ ಕೈಂಕರ್ಯವನ್ನು ನಡೆಸಿಕೊಂಡು ಬರುತ್ತಿರುವ ಜಪಾನಂದಜೀ ರವರಿಗೆ ತಮ್ಮ ಸಹಕಾರ ಸದಾ ಇರುತ್ತದೆ ಎಂದು ಭರವಸೆಯಿತ್ತರು.
ನಂತರ ಮಾತನಾಡಿದ ಪೂಜ್ಯ ಸ್ವಾಮಿ ಜಪಾನಂದಜಿ ರವರು ಭಗವಂತನು ತಮ್ಮನ್ನು ಈ ಸೇವಾ ಕಾರ್ಯಗಳನ್ನು ನಡೆಸಲು ಆಯ್ದುಕೊಂಡಿದ್ದು ನಿತ್ಯನಿರಂತರವಾಗಿ ಈ ಸೇವೆಯ ಯಜ್ಞ ನಡೆಯುತ್ತಾ ಮುಂದುವರೆಯುತ್ತದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಶ್ರೀಮತಿ ಸುಧಾಮೂರ್ತಿ, ಅಧ್ಯಕ್ಷರು, ಇನ್ಫೋಸಿಸ್ ಫೌಂಡೇಷನ್ ರವರ ಅತ್ಯಮೂಲ್ಯ ಸಹಕಾರದಿಂದ ದಕ್ಷಿಣ ಭಾರತದಲ್ಲಿಯೇ ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಗ್ರಾಮಾಂತರ ಪ್ರದೇಶದ ಆಧುನಿಕ ಕಣ್ಣಿನ ಆಸ್ಪತ್ರೆ ಸಂಕೀರ್ಣದ ಪ್ರಾಯೋಜಕತ್ವವನ್ನು ನೀಡಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಈ ಆಸ್ಪತ್ರೆ ಮುಂದೆ ಸಹಸ್ರಾರು ಜನರಿಗೆ ಸೇವೆಯನ್ನು ಸಲ್ಲಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ ಎಂದು ತಿಳಿಸಿದರು. ಈ ಸಂಕೀರ್ಣಕ್ಕೆ ಸಹಾಯ ನೀಡಿದ ಎಲ್ಲರಿಗೂ ಧನ್ಯವಾದವನ್ನು ಸಲ್ಲಿಸಿದರು. ಕಾರ್ಯಕ್ರಮವು ಅತ್ಯಂತ ಶಿಸ್ತುಬದ್ದವಾಗಿ, ಶುಚಿತ್ವವನ್ನು ಪರಿಪಾಲಿಸಿಕೊಂಡು ಯಾವುದೇ ತೆರನಾದ ಅಶಿಸ್ತಿಲ್ಲದೆ ಶ್ರೀರಾಮಕೃಷ್ಣ ಆಶ್ರಮದ ಪರಂಪರೆಯAತೆ ನೆರವೇರಿತು ಎನ್ನಬಹುದು.