ವರಿಷ್ಠರು ನೀಡಿದ ಜವಾಬ್ದಾರಿ ಯಶಸ್ವಿಯಾಗಿ ನಿಭಾಯಿಸುವೆ: ಬಸವರಾಜ ಬೊಮ್ಮಾಯಿ
ಬೆಂಗಳೂರು: ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ, ಶ್ರೀ ರಾಜನಾಥ್ ಸಿಂಗ್, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆ.ಪಿ.ನಡ್ಡಾ, ಪಕ್ಷದ ಹಿರಿಯರಾದ ಶ್ರೀ ಯಡಿಯೂರಪ್ಪ ಅವರು ನನ್ನನ್ನು ಗುರುತಿಸಿ ಈ ಜವಾಬ್ದಾರಿ ನೀಡಿದ್ದಾರೆ. ಇದಕ್ಕಾಗಿ ನಾನು ದೆಹಲಿಗೆ ಹೋಗಿರಲಿಲ್ಲ. ರಾಜ್ಯದಲ್ಲಿ ಒಂದು ಕಡೆ ಕೋವಿಡ್ ಮತ್ತು ಇನ್ನೊಂದೆಡೆ ಪ್ರವಾಹದ ಪರಿಸ್ಥಿತಿ ಇದ್ದು, ಈ ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ಮತ್ತು ಯಶಸ್ವಿಯಾಗಿ ನಿಭಾಯಿಸಲು ಶ್ರಮಿಸುವೆ ಎಂದು ಕರ್ನಾಟಕದ ನೂತನ ಮುಖ್ಯಮಂತ್ರಿಗಳಾಗಿ ಆಯ್ಕೆಯಾಗಿರುವ ಶ್ರೀ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಇಂದು ರಾತ್ರಿ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ಕ್ಕೆ ಅವರು ಭೇಟಿ ನೀಡಿದರು. ಅಲ್ಲಿ ಅವರು ಅವರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ಬಡವರ ಪರ, ರೈತ, ದೀನದಲಿತರ, ಹಿಂದುಳಿದ ವರ್ಗದ ಮತ್ತು ಮಹಿಳೆಯರ ಪರವಾಗಿರುವ ಸರಕಾರವನ್ನು ಶ್ರೀ ಯಡಿಯೂರಪ್ಪ ಮತ್ತು ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಸುತ್ತೇನೆ. ಈ ಸವಾಲುಗಳನ್ನು ಹಿಮ್ಮೆಟ್ಟಿಸಿ ಜನಪರ ಉತ್ತಮ ಆಡಳಿತ ನೀಡಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾಳೆ ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದೇನೆ ಎಂದರು. ನನ್ನ ತಂದೆಯವರ ಮಾರ್ಗದರ್ಶನ ಸದಾ ನನಗೆ ದಾರಿದೀಪ ಎಂದು ತಿಳಿಸಿದರು. ಪಕ್ಷದ ವರಿಷ್ಠರ ಜೊತೆ ಚರ್ಚಿಸಿದ ಬಳಿಕ ಸಂಪುಟದ ಬಗ್ಗೆ ನಿರ್ಧರಿಸಲಾಗುವುದು ಎಂದರು.
ಜನಪರ ಆಡಳಿತ ನೀಡಲಿದ್ದೇನೆ. ಪಕ್ಷದ ಎಲ್ಲರ ಸಹಕಾರದಿಂದ ಸರಕಾರವನ್ನು ಮುನ್ನಡೆಸಲಿದ್ದೇನೆ ಎಂದು ಅವರು ತಿಳಿಸಿದರು.
ರಾಜ್ಯ ಕಾರ್ಯಾಲಯಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್‍ಕುಮಾರ್ ಕಟೀಲ್, ಮಾಜಿ ಸಚಿವರಾದ ಶ್ರೀ ಆರ್.ಅಶೋಕ್, ಶ್ರೀ ಎಸ್.ಟಿ.ಸೋಮಶೇಖರ್, ಶ್ರೀ ಭೈರತಿ ಬಸವರಾಜು, ಪಕ್ಷದ ಹಿರಿಯ ಮುಖಂಡರು ಭಾಗವಹಿಸಿದ್ದರು.