ಕಾರ್ಮಿಕ ಇಲಾಖೆಯಿಂದ ದಿನಸಿ ಕಿಟ್ ವಿತರಣೆ
ವೈಎನ್ ಹೊಸಕೋಟೆ: ಪ್ರತಿ ತಾಲ್ಲೂಕಿನಲ್ಲಿ ಕಾರ್ಮಿಕ ಕಛೇರಿ ಇದ್ದು, ಅಧಿಕಾರಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ವೆಂಕಟರಮಣಪ್ಪ ತಿಳಿಸಿದರು.
ಹೋಬಳಿಯ ಹೊಸದುರ್ಗದ ಭಂಭಂ ಬಾಬಾ ಆಶ್ರಮದಲ್ಲಿ ಗುರುವಾರ ಶ್ರೀ ಶಿರಡಿ ಸಾಯಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘವು ಹಮ್ಮಿಕೊಂಡಿದ್ದ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಆಹಾರ ದಿನಸಿ ಕಿಟ್ಟು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ತಾಲ್ಲೂಕು ಮಟ್ಟದಲ್ಲಿ ಕಾರ್ಮಿಕ ಇಲಾಖೆ ಕಾರ್ಯಾಲಯ ಆರಂಭವಾಗಿ ಕಾರ್ಮಿಕ ಅಧಿಕಾರಿಗಳು ಸ್ಥಳೀಯವಾಗಿ ಇರಬೇಕು. ಅದಕ್ಕಾಗಿ ಸರ್ಕಾರವು ಅಗತ್ಯ ಕ್ರಮ ಕೈಗೊಳ್ಳಬೇಕು.
ಇಲಾಖೆಯಲ್ಲಿ ನೋಂದಾಯಿಸಿಕೊಂಡ ಕಟ್ಟಡ ಕಾರ್ಮಿಕರು ಗುರುತಿನ ಚೀಟಿಯನ್ನು ಸಕಾಲದಲ್ಲಿ ಪಡೆಯಬೇಕು ಮತ್ತು ನವೀಕರಣ ಮಾಡಿಸಿಕೊಳ್ಳಬೇಕು. ಇದರಿಂದ ಸರ್ಕಾರದಿಂದ ಬರುವ ಎಲ್ಲಾ ಸೌಲಭ್ಯಗಳನ್ನು ಸುಲಭವಾಗಿ ಪಡೆಯಬಹುದು. ಇದರ ಜೊತೆಗೆ ಕಟ್ಟಡ ಕಾರ್ಮಿಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತನ್ನು ನೀಡಬೇಕು. ನಾನು ಈ ಹಿಂದೆ ಕಾರ್ಮಿಕ ಇಲಾಖೆ ಸಚಿವನಾಗಿದ್ದಾಗ ಹಲವು ಕುಲವೃತ್ತಿಯಿಂದಲೇ ಜೀವನ ಸಾಗಿಸುವ ಸಮುದಾಯಗಳನ್ನು ಕಾರ್ಮಿಕ ಇಲಾಖೆ ಅಡಿಯಲ್ಲಿ ತರಲು ಕ್ಯಾಬಿನೆಟ್ ಸಭೆಯಲ್ಲಿ ನಿರ್ಣಯ ಕೈಗೊಂಡು ಜಾರಿಗೊಳಿಸಲಾಯಿತು ಎಂದರು.
ಕಾರ್ಯಕ್ರಮದಲ್ಲಿ ಒಟ್ಟು 185 ಜನರಿಗೆ ಆಹಾರ ಕಿಟ್ಟನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಕಾರ್ಮಿಕ ನಿರೀಕ್ಷಕರು ಅಬ್ದುಲ್ ರಾವುಫ್,
ಕಟ್ಟಡ ಕಾರ್ಮಿಕ ಸಂಘಟನೆಯ ಮುಖಂಡರಾದ ಹೊಸದುರ್ಗ ಕೃಷ್ಣಮೂರ್ತಿ ಜೆ.ಎನ್. ಗುಜ್ಜಾರಹಳ್ಳಿ ಗಿರಿಸ್ವಾಮಿ, ಕೃಷ್ಣಗಿರಿ ಗೌಡ ರಂಗಪ್ಪ, ಗ್ರಾಪಂ ಸದಸ್ಯ ಉಗ್ರನರಸಿಂಹ, ಮುಖಂಡರಾದ ಶಂಕರ ರೆಡ್ಡಿ, ದಿವಾಕರಪ್ಪ, ಎಚ್.ಎಂ. ಮಾರಣ್ಣ, ಎಚ್.ಎಂ. ಕರಿಯಣ್ಣ, ಓಬಣ್ಣ, ನಾಗಣ್ಣ ವೆಂಕಟಾಪುರ ಟಿ.ಪಿ.ರವಿ ಹಾಜರಿದ್ದರು.
ವರದಿ: ಸತೀಶ್