*ಬಿಜೆಪಿ ಗೆಲ್ಲಿಸಿ, ಹೊಸ ದಾಖಲೆ ಬರೆಯಿರಿ:ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್*
*ಕಾಂಗ್ರೆಸ್ ಎಂದರೆ ಕುಟುಂಬ ರಾಜಕಾರಣ, ಶ್ರೀನಿವಾಸಪುರದ ನಾಟಕ ಕಂಪನಿ ಬಂದ್ ಮಾಡೋಣ*
*ಕೋಲಾರ, ನವೆಂಬರ್ 20, :- ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹಲವೆಡೆ ವಿಧಾನಸಭೆ ಹಾಗೂ ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಗೆದ್ದಿದೆ. ಈಗ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಗೆ ಬಿಜೆಪಿಯನ್ನು ಗೆಲ್ಲಿಸಿ ಹೊಸ ದಾಖಲೆ ಬರೆಯಬೇಕಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಮಾಲೂರಿನಲ್ಲಿ ನಡೆದ ಜನಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಅವರು, ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಹಿಂದೆ ಬಿಜೆಪಿ ಇರಲಿಲ್ಲ. ಆದರೆ ಮೊದಲ ಬಾರಿಗೆ ಬಿಜೆಪಿ ಗೆದ್ದಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲೂ ಮೊದಲ ಬಾರಿಗೆ ಬಿಜೆಪಿ ಅಧಿಕಾರ ಪಡೆದಿದೆ. ಕೋಲಾರ, ಚಿಕ್ಕಬಳ್ಳಾಪುರದ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಗೆಲುವು ಸಾಧಿಸುತ್ತಿದೆ. ಈಗ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಗೆ ಬಿಜೆಪಿಯನ್ನು ಗೆಲ್ಲಿಸಿ ದಾಖಲೆ ಬರೆಯಬೇಕಿದೆ ಎಂದರು.
ವಿಧಾನಪರಿಷತ್ ಚುನಾವಣೆ ಎಂದರೆ ಕಾರ್ಯಕರ್ತರ ಚುನಾವಣೆಯಾಗಿದೆ. ಬಿಜೆಪಿಯು ಈ ಚುನಾವಣೆಯಲ್ಲಿ ಕಾರ್ಯಕರ್ತರಿಗೆ ಉತ್ತಮ ಅವಕಾಶ ನೀಡಿದೆ. *ಡಾ.ವೇಣುಗೋಪಾಲ ಗೌಡ* ಅವರು ಈ ಭಾಗದ ಅಭ್ಯರ್ಥಿಯಾಗಿ ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರ ಗೆಲುವು ಇಡೀ ಕಾರ್ಯಕರ್ತರ ಗೆಲುವು ಆಗಲಿದೆ. ಕಾಂಗ್ರೆಸ್ ಎಂದರೆ ಕುಟುಂಬ ರಾಜಕಾರಣ. ಬಿಜೆಪಿ ಎಂದರೆ ಪ್ರಜಾಪ್ರಭುತ್ವದ ಆಡಳಿತ. ಕುಟುಂಬ ರಾಜಕಾರಣಕ್ಕೆ ಹಾಗೂ ಪ್ರಜಾಪ್ರಭುತ್ವದ ರಾಜಕಾರಣಕ್ಕೂ ಇರುವ ವ್ಯತ್ಯಾಸವೇ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಇದೆ ಎಂದರು.
ಕೋಲಾರದಲ್ಲಿ ಎಲ್ಲರೂ ನಾಟಕ ಕಂಪನಿ ಇಲ್ಲ. ಆದರೆ ಶ್ರೀನಿವಾಸಪುರದಲ್ಲಿ ಈಗಲೂ ನಾಟಕ ಕಂಪನಿ ಇದೆ. ಆ ಕಂಪನಿ ಮುಚ್ಚಿಸಲು ಡಾ.ವೇಣುಗೋಪಾಲ ಅವರನ್ನು ಗೆಲ್ಲಿಸಬೇಕು. ಅವರು ವೈದ್ಯರಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ರೈತರ ಮಕ್ಕಳಿಗಾಗಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದಾರೆ. ಸಾವಿರಾರು ಶಸ್ತ್ರಚಿಕಿತ್ಸೆ ಮಾಡಿ ಸಮಾಜಮುಖಿಯಾಗಿ ಸೇವೆ ಸಲ್ಲಿಸಿದ್ದಾರೆ ಎಂದರು.
ಯಾವುದೇ ನಾಯಕರಿಗೆ ಜಾತಿಯ ಆಲಿಂಗನ ಬೇಕಿಲ್ಲ. ರಾಜ್ಯದಲ್ಲಿ ನಾಯಕರು ಅಹಿಂದ ಎಂದು ಹೇಳಿಕೊಳ್ಳುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರಿಗಿಂತ ದೊಡ್ಡ ಅಹಿಂದ ನಾಯಕರಿಲ್ಲ. ಆದರೆ ಪ್ರಧಾನಿ ಮೋದಿಯವರು ಅಹಿಂದ ಎಂದು ಹೇಳಿಕೊಳ್ಳಲಿಲ್ಲ. ದೇಶದ ಮೇಲೆ ಜವಾಬ್ದಾರಿ ಮಾತ್ರ ನಾಯಕರಿಗೆ ಇರಬೇಕು. ಅಂತಹ ಜವಾಬ್ದಾರಿಯನ್ನು ಪ್ರಧಾನಿ ಮೋದಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದರು.