ಶಿಕ್ಷಣ ಮತ್ತು ಆರೋಗ್ಯದಿಂದ ದೇಶದ ಪ್ರಗತಿ
ವೈ.ಎನ್.ಹೊಸಕೋಟೆ: ದೇಶದ ಪ್ರಗತಿಗೆ ಮತ್ತು ಮುಂದಿನ ಪೀಳಿಗೆಯ ಉತ್ತಮ ಭವಿಷ್ಯ ಕ್ಕೆ ಆರೋಗ್ಯ ಮತ್ತು ಶಿಕ್ಷಣ ಅತ್ಯಗತ್ಯ ಎಂದು ಪಾವಗಡ ತಾಲೂಕು ಸಮಗ್ರ ಸೇವಾ ಅಭಿವೃದ್ಧಿ ಟ್ರಸ್ಟ್ ಮಾರ್ಗದರ್ಶಕರಾದ ಎಸ್. ಆರ್.ರಾಘವೇಂದ್ರ ತಿಳಿಸಿದರು.
ಗ್ರಾಮದ ಶ್ರೀ ಕನ್ನಿಕಾಪರಮೇಶ್ವರಿ ಕಲ್ಯಾಣಮಂಟಪದಲ್ಲಿ ಬೆಂಗಳೂರಿನ ಸಂಜೀವಿನಿ ಆಸ್ಪತ್ರೆ ಮತ್ತು ಪಾವಗಡ ತಾಲೂಕು ಸಮಗ್ರ ಸೇವಾ ಅಭಿವೃದ್ಧಿ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಾವಗಡ ತಾಲೂಕು ಗಡಿ ಪ್ರದೇಶವಾಗಿದ್ದು, ಇಲ್ಲಿನ ಜನತೆಯ ಅನಾರೋಗ್ಯಕ್ಕೆ ತುತ್ತಾದರೆ ತುರ್ತುಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗಳಿಗೆ ಹೋಗುವ ಪರಿಸ್ಥಿತಿ ಇದೆ. ಆಯುಷ್ಮಾನ್ ಭಾರತ್ ಹಾಗೂ ಬಿಪಿಎಲ್ ಪಡಿತರ ಚೀಟಿ ಉಪಯೋಗಿಸಿ ಸೂಕ್ತ ಚಿಕಿತ್ಸೆ ನೀಡುವ ಆಸ್ಪತ್ರೆಗಳಲ್ಲಿ ಒಂದಾದ ಸಂಜೀವಿನಿ ಆಸ್ಪತ್ರೆಯ ವೈದ್ಯರ ತಂಡವನ್ನು ಇಂದು ಹೊಸಕೋಟೆ ಗ್ರಾಮಕ್ಕೆ ಕರೆತಂದು ಜನರು ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಎಲ್ಲಾ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಮುಖಂಡರಾದ ಟಿ.ಉಮೇಶ್ ಮಾತನಾಡಿ ಪಾವಗಡ ತಾಲೂಕು ಸಮಗ್ರ ಅಭಿವೃದ್ಧಿ ಟ್ರಸ್ಟ್ ಹಲವಾರು ಗ್ರಾಮೀಣ ಪ್ರದೇಶದ ಜನಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ತಾಲೂಕಿನ ಸಮಗ್ರ ಅಭಿವೃದ್ಧಿ ಅವರ ಗುರಿಯಾಗಿದೆ. ಈ ನಿಟ್ಟಿನಲ್ಲಿ ಇನ್ನಷ್ಟು ಉತ್ತಮ ಕಾರ್ಯಗಳನ್ನು ಮಾಡಲಿ ಎಂದರು.
ಕಾರ್ಯಕ್ರಮದಲ್ಲಿ ಸಂಘಟನಾ ಕಾರ್ಯದರ್ಶಿ ಶಶಾಂಕ್ ಮಾತನಾಡಿ ವೈ.ಎನ್.ಹೊಸಕೋಟೆ ಸರ್ಕಾರಿ ಆಸ್ಪತ್ರೆ ಮತ್ತು ಜಾಲೋಡಿನ ಸರ್ಕಾರಿ ಶಾಲೆಯಲ್ಲಿ ಒಂದೊಂದು ಶುದ್ಧ ಕುಡಿಯುವ ನೀರಿನ ಘಟಕವನ್ನು ಟ್ರಸ್ಟ್ ನ ವತಿಯಿಂದ ನಿರ್ಮಿಸಲಾಗುವುದು. ಇದೇ ಸಂದರ್ಭದಲ್ಲಿ ವೈ.ಎನ್.ಹೊಸಕೋಟೆ ಹೋಬಳಿ ಘಟಕದ ಅಧ್ಯಕ್ಷರನ್ನಾಗಿ ಜಾಲೋಡು ಸುಧಿಯನ್ನು ಆಯ್ಕೆ ಮಾಡಲಾಯಿತು. ಆರೋಗ್ಯ ತಪಾಸಣಾ ಶಿಬಿರದಲ್ಲಿ ಸುಮಾರು 500 ಜನ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಕಾರ್ಯಕ್ರಮದಲ್ಲಿ ಟ್ರಸ್ಟಿನ ಅಧ್ಯಕ್ಷರಾದ ತಿಪ್ಪೇಸ್ವಾಮಿ, ಸಂಜೀವಿನಿ ಆಸ್ಪತ್ರೆ ವೈದ್ಯರಾದ ಮಂಜುನಾಥ, ಸುನಿಲ್, ಮಹೇಶ್ , ಮತ್ತು ಸಿಬ್ಬಂದಿ, ಗ್ರಾ.ಪಂ ಸದಸ್ಯರಾದ ರಾಮಚಂದ್ರಪ್ಪ, ನಂದೀಶ್, ಮುಖಂಡರಾದ ಬಿ.ಹೊಸಹಳ್ಳಿ ನಾಗರಾಜು, ವೆಂಕಟೇಶ್, ಎ.ಓ.ನಾಗರಾಜು, ಮಾಜಿ ಜಿಲ್ಲಾಪಂಚಾಯಿತಿ ಸದಸ್ಯೆ ಗೌರಮ್ಮ ತಿಮ್ಮಪ್ಪ, ಟ್ರಸ್ಟ್ ನ ನಿರ್ದೇಶಕರು, ಪದಾಧಿಕಾರಿಗಳು ಭಾಗವಹಿಸಿದ್ದರು.
ವರದಿ : ಸತೀಶ್