IMG 20220105 WA0025

ಕಾಂಗ್ರೆಸ್ :ನಾವು ಪಾದಯಾತ್ರೆ ಮಾಡಿದರೆ ಈ ಸರ್ಕಾರ ಜನರೆದುರು ಬೆತ್ತಲಾಗಲಿದೆ….!

POLATICAL STATE

ಬೆಂಗಳೂರು : ಕೆಪಿಸಿಸಿ ಕಚೇರಿಯಲ್ಲಿ ಇಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರು ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಮಾಧ್ಯಮಗಳಿಗೆ ಹೇಳಿದ್ದಿಷ್ಟು:

ನಿನ್ನೆ ರಾಜ್ಯ ಸರ್ಕಾರ ಕೆಲವು ನಿರ್ಬಂಧಗಳನ್ನು ರಾಜ್ಯಾದ್ಯಂತ ಹೇರಿದೆ. ವಾರಾಂತ್ಯದಲ್ಲಿ ಕರ್ಫ್ಯೂ ಜಾರಿ ಇನ್ನಿತರ ನಿರ್ಬಂಧಗಳನ್ನು ಮುಂದಿನ ಹದಿನೈದು ದಿನಗಳ ವರೆಗೆ ಹೇರಲಾಗಿದೆ. ಕಾಂಗ್ರೆಸ್ ಪಕ್ಷ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ “ನೀರಿಗಾಗಿ ನಡಿಗೆ” ಪಾದಯಾತ್ರೆಯನ್ನು ಹಮ್ಮಿಕೊಂಡಿತ್ತು. ನಮ್ಮ ಪಾದಯಾತ್ರೆ ಕೂಡ 19ನೇ ತಾರೀಖು ಕೊನೆಗೊಳ್ಳಲಿದೆ. ಸರ್ಕಾರದ ಕೊವಿಡ್ ನಿಬಂಧನೆಗಳು ಕೂಡ ಅದೇ ದಿನ ಬೆಳಿಗ್ಗೆ ಐದು ಗಂಟೆಗೆ ಕೊನೆಗೊಳ್ಳಲಿದೆ.

ನಾವು ಕೇಂದ್ರ ಮತ್ತು ರಾಜ್ಯದಲ್ಲಿ ದೀರ್ಘ ಕಾಲ ಆಡಳಿತ ನಡೆಸಿದ್ದೇವೆ. ನಮಗೂ ನಮ್ಮದೇ ಆದ ಜವಾಬ್ದಾರಿ ಇದೆ. ಸರ್ಕಾರ ರೂಪಿಸಿರುವ ನಿಯಮಗಳನ್ನು ಮೀರುವುದು, ಕಾನೂನು ಕೈಗೆತ್ತಿಕೊಳ್ಳುವುದು ನಮ್ಮ ಉದ್ದೇಶವಾಗಿಲ್ಲ. ಹೀಗಾಗಿ ಮಾಸ್ಕ್ ಧರಿಸುವುದು, ಕನಿಷ್ಠ ಅಂತರ ಕಾಪಾಡಿಕೊಳ್ಳುವುದು, ಗ್ಲೌಸ್, ಸ್ಯಾನಿಟೈಸರ್ ಬಳಕೆ ಹೀಗೆ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳೊಂದಿಗೆ ಪಾದಯಾತ್ರೆ ಮಾಡುತ್ತೇವೆ.

ನಾವು ಪಾದಯಾತ್ರೆ ಮಾಡಿದರೆ ಈ ಸರ್ಕಾರ ಜನರೆದುರು ಬೆತ್ತಲಾಗಲಿದೆ. ಹೀಗಾಗಿಯೇ ಕಾಂಗ್ರೆಸ್ ಪಕ್ಷ ಪಾದಯಾತ್ರೆ ಮಾಡಬಾರದು ಎಂದು ಸರ್ಕಾರ ಷಡ್ಯಂತ್ರ ರೂಪಿಸಿದೆ. ರಾಜ್ಯದಿಂದ 25 ಜನ ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ, ಇವರಲ್ಲಿ ಯಾರೊಬ್ಬರು ಕೂಡ ಕಳೆದ ಎರಡೂವರೆ ವರ್ಷಗಳಲ್ಲಿ ಒಮ್ಮೆಯೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಥವಾ ಕೇಂದ್ರದ ಜಲ ಸಂಪನ್ಮೂಲ ಸಚಿವರನ್ನು ಭೇಟಿಮಾಡಿ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯ ಮಾಡಿಲ್ಲ. ಕೇಂದ್ರ ಸರ್ಕಾರ ಮಹದಾಯಿ, ಕೃಷ್ಣ ಮೇಲ್ದಂಡೆ, ಮೇಕೆದಾಟು ಯೋಜನೆಗಳನ್ನು ಒಳಗೊಂಡಂತೆ ಒಟ್ಟಾರೆ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ.

ಕೃಷ್ಣ ಮೇಲ್ದಂಡೆ ಯೋಜನೆಗೆ ನ್ಯಾಯಾಲಯದ ಆದೇಶ ಆಗಿ ಹಲವು ವರ್ಷ ಕಳೆದರೂ ನೋಟಿಫಿಕೇಷನ್ ಮಾಡಿಲ್ಲ. ಮಹದಾಯಿ ಯೋಜನೆ ನೋಟಿಫಿಕೇಷನ್ ಆಗಿದೆ, ಆದರೆ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥ ಮಾಡುವ ಕೆಲಸವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಾಡಿಲ್ಲ.

IMG 20220105 WA0026

ನಮ್ಮ ಸರ್ಕಾರ ಮೇಕೆದಾಟು ಯೋಜನೆ ಜಾರಿ ಮಾಡಬೇಕೆಂದು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಕೇಂದ್ರದ ಅನುಮೋದನೆಗೆ ಕಳಿಸಿತ್ತು, ಆ ನಂತರ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ಡಿ.ಕೆ ಶಿವಕುಮಾರ್ ಅವರು ಕೂಡ ಪರಿಷ್ಕೃತ ಯೋಜನಾ ವರದಿ ಸಿದ್ಧಪಡಿಸಿ ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಕಳಿಸಿದ್ದರು. ಯಡಿಯೂರಪ್ಪ ಅವರು ಒಮ್ಮೆ ಮೇಕೆದಾಟು ವಿಚಾರ ಪ್ರಸ್ತಾಪ ಮಾಡಿದ್ದು ಬಿಟ್ಟರೆ ಬಿಜೆಪಿಯವರು ಎಲ್ಲಿಯೂ ಮೇಕೆದಾಟು ಬಗ್ಗೆ ಮಾತನಾಡಿಲ್ಲ, ಯೋಜನೆ ಅನುಷ್ಠಾನಕ್ಕೆ ಆಸಕ್ತಿ ತೋರಿಸಿಲ್ಲ.

ಬೆಂಗಳೂರು ನಗರದ 30% ಜನರಿಗೆ ಈಗಲೂ ಕಾವೇರಿ ನೀರು ಸಿಗುತ್ತಿಲ್ಲ, ಜೊತೆಗೆ ಅಕ್ಕಪಕ್ಕದ ಜಿಲ್ಲೆಗಳಿಗೂ ಕಾವೇರಿ ನೀರು ಒದಗಿಸಬೇಕು ಎಂದು ಕಾಂಗ್ರೆಸ್ ಪಕ್ಷ ಯೋಜನೆಗೆ ಮುಂದಡಿ ಇಟ್ಟಿತ್ತು. ಸುಮಾರು ಎರಡೂವರೆ ಕೋಟಿ ಜನರಿಗೆ ಅನುಕೂಲವಾಗುವಂತ ಇಂತಹ ಮಹತ್ವದ ಯೋಜನೆ ಜಾರಿ ಮಾಡದೆ ಸರ್ಕಾರ ಕಾಲಾಹರಣ ಮಾಡುತ್ತಿದೆ.

ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಮೇಕೆದಾಟು ಯೋಜನೆ ಜಾರಿ ಮಾಡಬಾರದು ಎಂದು ಧರಣಿ ಕೂತಿದ್ದಾರೆ. ಬಿಜೆಪಿಯವರಿಗೆ ನಿಜವಾಗಿ ರಾಜ್ಯದ ಬಗ್ಗೆ ಕಾಳಜಿ ಇದ್ದಿದ್ದರೆ ಪ್ರತಿಭಟನೆ ಕೈಬಿಡುವಂತೆ ಅಣ್ಣಾಮಲೈ ಅವರ ಮನವೊಲಿಕೆ ಮಾಡುತ್ತಿದ್ದರು. ಅಣ್ಣಾಮಲೈ ಅವರ ಪ್ರತಿಭಟನೆಗೆ ರಾಜ್ಯ ಸರ್ಕಾರದ ಬೆಂಬಲವೂ ಇದೆ ಎಂಬುದು ಇದರಿಂದ ಸಾಬೀತಾಗಿದೆ.

ಕೊರೊನಾ ಮೂರನೇ ಅಲೆ ಜನವರಿ – ಫೆಬ್ರವರಿ ಅಲ್ಲಿ ಬರುತ್ತದೆ ಎಂದು ತಜ್ಞರು ಮೂರ್ನಾಲ್ಕು ತಿಂಗಳ ಹಿಂದೆಯೇ ಎಚ್ಚರಿಕೆ ಕೊಟ್ಟಿದ್ದರೂ ಕೂಡ ಸರಿಯಾದ ತಪಾಸಣೆ ಮಾಡದೆ, ಅಂತರರಾಷ್ಟ್ರೀಯ ವಿಮಾನ ಸಂಚಾರ ತಡೆಯದೆ, ಮಾಸ್ಕ್ ಬಳಕೆ ಕಟ್ಟುನಿಟ್ಟು ಮಾಡದೆ ಈಗ ವಿರೋಧ ಪಕ್ಷವೊಂದು ತನ್ನ ಜವಾಬ್ದಾರಿ ನಿರ್ವಹಿಸಲು ಹೊರಟಾಗ ದುರುದ್ದೇಶದಿಂದ ನಿರ್ಬಂಧಗಳನ್ನು ಹೇರುವುದು ಖಂಡನೀಯ.

ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್ ನಲ್ಲಿ ಚುನಾವಣಾ ರ‌್ಯಾಲಿಯಲ್ಲಿ ಭಾಗವಹಿಸುವವರಿದ್ದರು, ರೈತರ ಪ್ರತಿಭಟನೆ ಇಂದಾಗಿ ಸಭೆ ರದ್ದಾಯಿತು. ಒಂದು ವೇಳೆ ಯಾವುದೇ ತೊಂದರೆ ಆಗದೆ ಇದ್ದರೆ ಅವರು ಸಭೆ ಮಾಡುತ್ತಿರಲಿಲ್ಲವೇ? ಬಿಜೆಪಿ ಅವರು ಪ್ರಚಾರ ಸಭೆ ಮಾಡಿದರೆ ಕೊರೊನಾ ಬರೋದಿಲ್ವಾ? ನರೇಂದ್ರ ಮೋದಿ ಅವರಿಗೆ ಒಂದು ಕಾನೂನು ಬೇರೆ ಪಕ್ಷಗಳಿಗೆ ಒಂದು ಕಾನೂನು ಅಂತ ಇದೆಯಾ? ನರೇಂದ್ರ ಮೋದಿ ಅವರ ಪ್ರಚಾರ ಸಭೆಗಳಿಗೂ 144 ಸೆಕ್ಷನ್ ಅನ್ವಯವಾಗುತ್ತೋ ಇಲ್ಲವೋ? ಇದು ಬಿಜೆಪಿಯವರ ದ್ವಂದ್ವ ನೀತಿ.

20220105 225815

ಕಾಂಗ್ರೆಸ್ ಪಕ್ಷ ಪಾದಯಾತ್ರೆಯನ್ನು ಮಾಡಬಾರದು ಎಂದು ಬಿಜೆಪಿ ಸರ್ಕಾರ ಸಂಚು ರೂಪಿಸಿರುವುದರಿಂದ ನಾವು ಅಗತ್ಯ ಕೊವಿಡ್ ಮುಂಜಾಗ್ರತಾ ಕ್ರಮಗಳೊಂದಿಗೆ ಪಾದಯಾತ್ರೆ ಮಾಡಿಯೇ ಮಾಡುತ್ತೇವೆ. ಇದು ರಾಜ್ಯದ ಜನರ ಹಿತದೃಷ್ಟಿಯಿಂದ ಮಾಡುತ್ತಿರುವ ಹೋರಾಟ, ರಾಜಕೀಯ ಉದ್ದೇಶದ ಪ್ರತಿಭಟನೆ ಅಲ್ಲ. ನಮ್ಮ ಪಾದಯಾತ್ರೆ ಘೋಷಣೆಯಾಗಿ ತಿಂಗಳಾಗುತ್ತಾ ಬಂತು, ಸರ್ಕಾರ ಕೊವಿಡ್ ನಿರ್ಬಂಧಗಳನ್ನು ಹೇರಿದ್ದು ನಿನ್ನೆ. ಹಾಗಾಗಿ ನಮ್ಮ ಕೆಲಸವನ್ನು ನಾವು ಮಾಡುತ್ತೇವೆ.

ನಾವು ಹೈಕಮಾಂಡ್ ಜೊತೆ ಚರ್ಚೆ ನಡೆಸಿಯೇ ಪಾದಯಾತ್ರೆ ಮಾಡುತ್ತಿದ್ದೇವೆ. ರಾಜ್ಯದ ಜನರಿಗೆ ಕೊರೊನಾ ಬರಬಾರದು ಎಂಬುದು ನಮ್ಮ ಆಶಯ ಕೂಡ ಹೌದು, ಹಾಗಾಗಿ ಎಲ್ಲಾ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮವನ್ನು ಅನುಸರಿಸಿ ಪಾದಯಾತ್ರೆ ಮಾಡುತ್ತೇವೆ.

ಸರ್ಕಾರದ ಷಡ್ಯಂತ್ರವನ್ನು ಸಮರ್ಥನೆ ಮಾಡಿಕೊಳ್ಳಲು ಕೊರೊನಾ ಸ್ಪೋಟವಾದರೆ ಅದಕ್ಕೆ ಕಾಂಗ್ರೆಸ್ ಹೊಣೆಯಾಗಲಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ. ಇದೇ ಸುಧಾಕರ್ ಚಾಮರಾಜನರದಲ್ಲಿ ಆಕ್ಸಿಜನ್ ಸಿಗದೆ 36 ಸತ್ತಾಗ, ಸತ್ತವರು ಮೂರೇ ಮೂರು ಜನ ಅಂತ ಸುಳ್ಳು ಹೇಳಿದ್ದು. ಕೊರೊನಾ ಒಂದು, ಎರಡನೇ ಅಲೆ ಸಮಯದಲ್ಲಿ ನಾವು ಸರ್ಕಾರಕ್ಕೆ ಸಹಕಾರು ಕೊಟ್ಟಿದ್ವಿ, ಆಗಲೂ ಲಕ್ಷಾಂತರ ಜನ ಸತ್ತಿಲ್ಲವೇ?

ಮೊನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಮನಗರದಲ್ಲಿ ಸಾರ್ವಜನಿಕ ಸಭೆ ಮಾಡುವಾಗ ಕೊರೊನಾ ರೋಗ ಇರಲಿಲ್ವ? ಇಂದು ನಾಗಮಂಗಲದಲ್ಲಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಒಬ್ಬ ಮುಖ್ಯಮಂತ್ರಿ ತಮ್ಮ ಸರ್ಕಾರದ ನಿಬಂಧನೆಗಳನ್ನು ತಾನೇ ಗೌರವಿಸಲ್ಲ ಎಂದರೆ ಇತರರು ಅದನ್ನು ಪಾಲನೆ ಮಾಡಿ ಎಂದು ಹೇಳುವುದರಲ್ಲಿ ಅರ್ಥ ಇಲ್ಲ. ಕೊರೊನಾ ತಡೆಯುವುದೇ ಸರ್ಕಾರದ ನಿಜವಾದ ಉದ್ದೇಶ ಆಗಿದ್ದರೆ ಮುಖ್ಯಮಂತ್ರಿಗಳು ಹೀಗೆ ಸಮಾರಂಭದಲ್ಲಿ ಭಾಗವಹಿಸುತ್ತಿದ್ದರೆ? ಈ ನಿಬಂಧನೆಗಳನ್ನು ಹೇರಿರೋದು ನಮ್ಮ ಪಾದಯಾತ್ರೆಯನ್ನು ತಡೆಯಬೇಕು ಎಂದು ಇದರಿಂದಲೇ ಗೊತ್ತಾಗುತ್ತದೆ.

ನಾವು ಸರ್ಕಾರದ ಕೊವಿಡ್ ನಿಯಮಗಳನ್ನು ಅನುಸರಿಸುತ್ತಾ, ಜನರ ಹಿತದೃಷ್ಟಿಯಿಂದ ಪಾದಯಾತ್ರೆ ಮಾಡಿ ಬಿಜೆಪಿಯವರ ಷಡ್ಯಂತ್ರವನ್ನು ಬಯಲು ಮಾಡುತ್ತೇವೆ.
ಡಿ.ಎಂ.ಕೆ ಒಂದು ಪ್ರಾದೇಶಿಕ ಪಕ್ಷ, ಸ್ವಂತ ಬಲದಿಂದ ಅಧಿಕಾರ ನಡೆಸುತ್ತಿದೆ. ಅವರಿಗೆ ನಾವು ಬುದ್ದಿ ಹೇಳೋಕಾಗುತ್ತಾ? ಸ್ಟಾಲಿನ್ ನಮ್ಮ ಪಕ್ಷದವರ? ನಮ್ಮ ಮಾತು ಕೇಳ್ತಾರ?

ಡಾ. ಸುಧಾಕರ್, ಈಶ್ವರಪ್ಪ ಹೇಳಿದ್ದನ್ನೆಲ್ಲಾ ಕೇಳೋಕಲ್ಲ ನಾವಿರೋದು. ನಮ್ಮ ಕರ್ತವ್ಯ ಏನು ಎಂದು ನಮಗೆ ಗೊತ್ತು, ಅದನ್ನು ನಾವು ಮಾಡ್ತೇವೆ ಎಂದರು.