Screenshot 2022 01 06 23 36 28 763 com.google.android.apps .photos

ಪಾದಯಾತ್ರೆ ತಡೆಯಲು ಗೃಹ ಸಚಿವರು ಮತ್ತೊಂದು ಜನ್ಮ ತಾಳಿ ಬರಬೇಕು….!

POLATICAL STATE

ಪಾದಯಾತ್ರೆ ತಡೆಯಲು ಗೃಹ ಸಚಿವರು ಮತ್ತೊಂದು ಜನ್ಮ ತಾಳಿ ಬರಬೇಕು: ಡಿ.ಕೆ ಶಿವಕುಮಾರ್

ಬೆಂಗಳೂರು:

‘ಜನರ ನೀರಿಗಾಗಿ, ರಾಜ್ಯದ ಹಿತಕ್ಕಾಗಿ ಕಾಂಗ್ರೆಸ್ ಪಕ್ಷ ನಡಿಗೆ ಮಾಡುತ್ತಿದ್ದು, ಇದನ್ನು ತಡೆಯಲು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಮತ್ತೊಂದು ಜನ್ಮ ಹುಟ್ಟಿ ಬರಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಖಡಕ್ ಆಗಿ ಹೇಳಿದ್ದಾರೆ.

ಮೇಕೆದಾಟು ಪಾದಯಾತ್ರೆಗೆ ಅನುಮತಿ ಇಲ್ಲ, ಪಾದಯಾತ್ರೆ ಮಾಡಿದರೆ ಕಾಂಗ್ರೆಸ್ ನಾಯಕರನ್ನು ಬಂಧಿಸುತ್ತೇವೆ ಎಂದು ಗೃಹ ಸಚಿವರು ನೀಡಿರುವ ಎಚ್ಚರಿಕೆಗೆ ಕೆಂಡಾಮಂಡಲರಾ್ ಶಿವಕುಮಾರ್ ಅವರು ಹೇಳಿದ್ದಿಷ್ಟು;

‘ಅವರು ಯಾರನ್ನು ಬೇಕಾದರೂ ಬಂಧಿಸಲಿ, ನನ್ನನ್ನು ಬೇಕಾದರೂ ಬಂಧಿಸಲಿ, ಸಿದ್ದರಾಮಯ್ಯ ಅವರನ್ನಾದರೂ ಬಂಧಿಸಲಿ, ಶಾಸಕರನ್ನಾದರೂ ಬಂಧಿಸಲಿ. ನಾವು ಕೋವಿಡ್ ನಿಯಮ ಗೌರವಿಸಿ ಕಾರ್ಯಕ್ರಮ ಮಾಡುತ್ತೇವೆ. ರಾಜ್ಯದಲ್ಲಿ ಕೋವಿಡ್ ಇದೆ ಎಂದು ನಿರ್ಬಂಧ ಹಾಕಿದ್ದರೂ ವಿಧಾನಸೌಧದ ಬ್ವ್ಯಾಂಕ್ವೆಟ್ ಹಾಲ್ ನಲ್ಲಿ ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುತ್ತಿದೆ. ಅಲ್ಲಿ ಸಾವಿರಾರು ಜನ ಸೇರಿದ್ದಾರೆ. ಸರ್ಕಾರ ಏನು ಮಾಡುತ್ತಿದೆ. ಗೃಹ ಮಂತ್ರಿಗಳು ಇಲ್ಲಿರುವ ಯಾರನ್ನಾದರೂ ಮುಟ್ಟಲು ಸಾಧ್ಯವೇ? ಇವರ ಮೇಲೆ ಯಾಕೆ ಪ್ರಕರಣ ದಾಖಲಿಸಿಲ್ಲ? ಇದು ಸಭೆ, ಸಮಾರಂಭವಲ್ಲವೇ?

ವಿಧಾನ ಪರಿಷತ್ ನೂತನ ಸದಸ್ಯರು ಚುನಾವಣೆಯಲ್ಲಿ ಗೌರವದಿಂದ ಗೆದ್ದಿದ್ದಾರೆ. ಅವರು ಬರಬಾರದು ಎಂದು ಹೇಳುತ್ತಿಲ್ಲ. ನೂತನ ಸದಸ್ಯರಿಗೆ ಪ್ರಮಾಣ ವಚನ ನೀಡುವುದಾದರೆ ವರ್ಚುವಲ್ ಸಭೆ ಮಾಡಬೇಕಿತ್ತು. ಅಥವಾ ಪರಿಷತ್ ಒಳಗೆ ಪ್ರಮಾಣ ಬೋಧಿಸಬೇಕಿತ್ತು. ಆದರೆ ಇಲ್ಲಿ ಈ ರೀತಿ ಮಾಡುತ್ತಿರುವುದು ಯಾವ ಆಟ? ಗೃಹ ಸಚಿವರು ಏನು ಮಾಡುತ್ತಿದ್ದಾರೆ? ನಮ್ಮನ್ನು ಹೆದರಿಸುತ್ತಾರಾ? ಇಂತಹ ಗೊಡ್ಡು ಬೆದರಿಕೆಗೆ ಕಾಂಗ್ರೆಸ್ ಹೆದರುವುದಿಲ್ಲ. ನಾನು ಜೈಲಿಗೆ ಹೋಗಿ ಹೋರಾಡಲು ಸಿದ್ಧ. ಈ ರಾಜ್ಯದ ಜನರಿಗಾಗಿ ಹೋರಾಟ ಮಾಡುತ್ತಿದ್ದು, ನಾವು ನಡಿಗೆ ಮಾಡುತ್ತೇವೆ. ರಾಜ್ಯದ ಜನ, ಪಕ್ಷಾತೀತವಾಗಿ ನಾಯಕರು ಬರುತ್ತಾರೆ. ಗೃಹ ಸಚಿವರು ಈ ಬೆದರಿಕೆಯನ್ನು ದೂರದಲ್ಲಿ ಎಲ್ಲಾದರೂ ಇಟ್ಟುಕೊಳ್ಳಲಿ, ಇಲ್ಲಲ್ಲ.

ಈ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಗೃಹ ಸಚಿವರು ಹೇಗೆ ಅನುಮತಿ ಕೊಟ್ಟರು? ಯಾವುದೇ ಸಭೆ ಸಮಾರಂಭ ಮಾಡುವಂತಿಲ್ಲ ಎಂದು ನಿರ್ಬಂಧ ಹಾಕಿದ ಮೇಲೆ ಪ್ರಮಾಣ ವಚನ ಕಾರ್ಯಕ್ರಮವನ್ನು ಪರಿಷತ್ ನಲ್ಲಿ ಮಾಡಬೇಕಾಗಿತ್ತು. ಬ್ಯಾಂಕ್ವೆಟ್ ಹಾಲ್ ನಲ್ಲಿ ಇಷ್ಟು ಜನ ಸೇರಿದ್ದಾರೆ, ಇಲ್ಲಿ ಕೋವಿಡ್ ಹರಡುವುದಿಲ್ಲವೇ? ಗೃಹ ಸಚಿವರು, ಆರೋಗ್ಯ ಸಚಿವರು, ಮುಖ್ಯಮಂತ್ರಿಗಳು ಏನು ಮಾಡುತ್ತಿದ್ದಾರೆ? ಗೃಹ ಸಚಿವರು ಈ ಕಾರ್ಯಕ್ರಮ ಆಧಾರದ ಮೇಲೆ ಮೊದಲು ಪ್ರಕರಣ ದಾಖಲಿಸಲಿ.

ನಾವು 40 ವರ್ಷಗಳಿಂದ ರಾಜಕಾರಣ ಮಾಡಿಕೊಂಡು ಬಂದಿದ್ದೇವೆ. ಅವರು ಯಾರನ್ನು ಹೆದರಿಸುತ್ತಿದ್ದಾರೆ? ನಾವು ನಾಡಿನ ಜನರ ನೀರಿಗಾಗಿ ಹೋರಾಟ ಮಾಡುತ್ತಿದ್ದೇವೆ. ಅವರು ರಾಜ್ಯದ ಜನರಿಗೆ ನ್ಯಾಯ ಒದಗಿಸದಿದ್ದಾಗ, ನ್ಯಾಯ ಒದಗಿಸುವಂತೆ ಮನವಿ ಮಾಡಿ ಪಾದಯಾತ್ರೆ ಮಾಡುತ್ತಿದ್ದೇವೆ. ಈ ಪಾದಯಾತ್ರೆ ತಡೆಯಲು ಗೃಹ ಸಚಿವರು ಮತ್ತೊಂದು ಜನ್ಮ ಹುಟ್ಟಬೇಕು. ನಮ್ಮನ್ನು ಬಂಧಿಸಲಿ, ಅವರ ತಾಕತ್ತು ತೋರಿಸಲಿ, ನಂತರ ನಾವು ಏನು ಮಾಡುತ್ತೇವೆ ಎಂಬುದನ್ನು ನಾವು ತೋರಿಸುತ್ತೇವೆ.

ಸರ್ಕಾರ ಜನರಿಗೆ ತೊಂದರೆ ನೀಡಬೇಕು ಎನ್ನುವ ಉದ್ದೇಶದಿಂದಲೇ ನಿರ್ಬಂಧ ಹಾಕುತ್ತಿದೆ. ಮುಖ್ಯಮಂತ್ರಿಗಳು ಈ ವಿಚಾರವಾಗಿ ಏನು ಹೇಳುತ್ತಾರೆ ನೋಡಿಕೊಂಡು ನಂತರ ನಾನು ಮಾತನಾಡುತ್ತೇನೆ. ಹರಿಯೋ ನದಿ, ಬೀಸೋ ಗಾಳಿ, ಉದಯಿಸುವ ಸೂರ್ಯನನ್ನು ತಡೆಯಲು ಹೇಗೆ ಸಾಧ್ಯವಿಲ್ಲವೋ ಅದೇ ರೀತಿ ನೀರಿಗಾಗಿ ನಡಿಗೆ ತಡೆಯಲು ಗೃಹಮಂತ್ರಿ ಕೈಯಿಂದ ಸಾಧ್ಯವಿಲ್ಲ. ಇವರಿಗೆ, ಇವರ ಪಕ್ಷಕ್ಕೆ ಅನುಕೂಲವಾಗುವಂತೆ ಬೇಕಾದಂತೆ ನಿಯಮ ಮಾಡಿಕೊಂಡರೆ ಆಗುವುದಿಲ್ಲ. ಅವರು ತಮಗೆ ಬೇಕಾದ ಅಧಿಕಾರಿ ಹಾಕಿಸಿಕೊಂಡು, ನಮ್ಮನ್ನು ಬಂಧಿಸಿಸಲಿ. ಆಮೇಲೆ ನಮ್ಮ ಮಾತು. ಪಾದಯಾತ್ರೆ ನಡೆಯುತ್ತದೆ, ಬಸವನಗುಡಿ ತಲುಪುತ್ತೇವೆ.’