ಕೊರೋನಾ : ಪಾವಗಡ ವೈದ್ಯರುಗಳ ತುರ್ತು ಸಭೆ..
ಪಾವಗಡ ತಾಲ್ಲೂಕಿನ ಪರಿಸ್ಥಿತಿಯನ್ನು ಅದರಲ್ಲಿಯೂ ಗ್ರಾಮಾಂತರ ಭಾಗದ ಪ್ರದೇಶದಲ್ಲಿ ಭಯಾನಕ ಕೊರೊನಾ ವೈರಸ್‍ನ ಹರಡುವಿಕೆ ಕಾಲಕ್ರಮೇಣವಾಗಿ ಏರುತ್ತಿದ್ದು ಇಡೀ ಪಾವಗಡ ತಾಲ್ಲೂಕು ತಲ್ಲಣಗೊಂಡಿದೆ.
ಈ ಭಯಾನಕ ಹಾಗೂ ಪ್ರಕ್ಷುಬ್ಧ ಸ್ಥಿತಿಯನ್ನು ವಿಮರ್ಶಿಸಿ ಮುಂದಿನ ಕಾರ್ಯಯೋಜನೆಗಳನ್ನು ಹೇಗೆ ಕೈಗೊಳ್ಳಬೇಕು ಎಂಬ ವಿಚಾರವಾಗಿ ವೈದ್ಯರುಗಳ ತುರ್ತು ಸಭೆ ನಡೆಯಿತು.
ಈ ಸಭೆ ಭಾರತೀಯ ವೈದ್ಯಕೀಯ ಸಂಘ ಹಾಗೂ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ನಡೆಯಿತು. ತಾಲ್ಲೂಕಿನ ಹಿರಿಯ ತಜ್ಞರಾದ ಡಾ.ಜಿ.ವೆಂಕಟರಾಮಯ್ಯರವರು ಹಾಗೂ ವೈದ್ಯಕೀಯ ಸಂಘದ ಕಾರ್ಯದರ್ಶಿಗಳಾದ ಡಾ.ಶ್ರೀಕಾಂತ್ ಪುವ್ವಾಡಿ ರವರು ಹಾಗೂ ಪಟ್ಟಣದ ಮತ್ತು ವೈ.ಎನ್.ಹೊಸಕೋಟೆಯಿಂದ ಎಲ್ಲ ವೈದ್ಯರುಗಳು ಭಾಗವಹಿಸಿದ್ದುದು ವಿಶೇಷವಾಗಿತ್ತು. ಈ ಕಾರ್ಯಕ್ರಮದ ರೂವಾರಿ ಪೂಜ್ಯ ಸ್ವಾಮಿ ಜಪಾನಂದಜೀ ರವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಮೊದಲಿಗೆ ಕಾರ್ಯಕ್ರಮದ ಬಗ್ಗೆ ಸರ್ವ ರೀತಿಯಲ್ಲಿ ಮಾಹಿತಿಯನ್ನು ನೀಡಿ ವೈದ್ಯರುಗಳು ಯಾವ ರೀತಿ ಮುಂದಿನ ಹೆಜ್ಜೆಯನ್ನು ಇಡಬೇಕು ಹಾಗೂ ಪರಿಸ್ಥಿತಿ ಸಂಪೂರ್ಣ ಬಿಗಡಾಯಿಸುವ ಮೊದಲೇ ಎಲ್ಲರೂ ಕೂಡಿ ತಾಲ್ಲೂಕನ್ನು ಸುರಕ್ಷಿತವಾದ ಸ್ಥಿತಿಗೆ ತರಲು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದು ಡಾ.ಪ್ರೇಮಯೋಗಿ ರವರು ತಮ್ಮ ಹೃದಯಾಂತರಾಳದಿಂದ ಇರುವ ವಸ್ತು ಸ್ಥಿತಿಯನ್ನು ವಿವರಿಸಿದರು.
ಪೂಜ್ಯ ಸ್ವಾಮಿ ಜಪಾನಂದಜೀ ರವರು ಕಾರ್ಯಕ್ರಮದ ವಿವರಗಳನ್ನು ನೀಡುತ್ತಾ ಪಾವಗಡ ತಾಲ್ಲೂಕು ಕಳೆದ ಶನಿವಾರದವರೆಗೆ ಸುರಕ್ಷಿತವಾದ ತಾಲ್ಲೂಕು ಎಂದು ಹೆಸರನ್ನು ಪಡೆದಿತ್ತು. ತದನಂತರದ ಮೂರು ದಿನಗಳಲ್ಲಿ ಸಂಪೂರ್ಣ ಚಿತ್ರ ಬದಲಾಗಿ ಗ್ರಾಮಾಂತರ ಪ್ರದೇಶಗಳಿಗೂ ಈ ಭಯಾನಕ ವೈರಸ್ ತಲುಪಿರುವುದು ನಿಜಕ್ಕೂ ಎಲ್ಲ ನಾಗರಿಕರ ಮನಸ್ಸನ್ನು ತಲ್ಲಣಗೊಳಿಸಿದೆ ಎಂದು ಹಂತ ಹಂತವಾಗಿ ಎಲ್ಲ ಘಟನೆಗಳನ್ನು ವಿವರಿಸುತ್ತಾ ಬಂದರು. ಇದೇ ನಿಟ್ಟಿನಲ್ಲಿ ವೈದ್ಯಕೀಯ ಸಮೂಹ ಯಾವ ರೀತಿ ಎಚ್ಚರ ವಹಿಸಿ ವೈದ್ಯಕೀಯ ಸೇವೆಯನ್ನು ನೀಡಬೇಕು ಹಾಗೂ ಸ್ವಾಮಿ ವಿವೇಕಾನಂದ ಗ್ರಾಮಾಂತರ ಆರೋಗ್ಯ ಕೇಂದ್ರ ಯಾವ ಯಾವ ಕ್ರಮಗಳನ್ನು ಈ ನಿಟ್ಟಿನಲ್ಲಿ ತೆಗೆದುಕೊಂಡಿದೆ ಎಂಬುದನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಮಾನ್ಯ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳಾದ ತಹಶೀಲ್ದಾರ್ ಕಛೇರಿ, ಪುರಸಭಾ ಸಂಸ್ಥೆ, ಆರೋಗ್ಯ ಇಲಾಖೆ, ಪೆÇಲೀಸ್ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಕಂದಾಯ ಇಲಾಖೆಗಳ ಒಂದು ಒಕ್ಕೂಟ ನಿರ್ಮಾಣವಾಗಿ ಪ್ರತಿಯೊಂದು ಇಲಾಖೆಗಳು ಪರಸ್ಪರ ಸೌಹಾರ್ದತೆಯಿಂದ ಈಗಾಗಲೇ ಕಾರ್ಯಗಳನ್ನು ಕೈಗೊಂಡಿದ್ದಾಗ್ಯೂ ಪರಿಸ್ಥಿತಿ ಭಯಾನಕ ಸ್ಥಿತಿಯನ್ನು ತಲುಪಿರುವ ಹಂತದಲ್ಲಿ ಸಾಮಾನ್ಯ ಪ್ರಜೆಗಳ ರಕ್ಷಣೆ ಹೇಗೆ ಮಾಡಬಹುದು ಎಂಬುದನ್ನು ಪ್ರತಿಯೊಬ್ಬರೂ ಚಿಂತನ ಮಂಥನ ಮಾಡಿ ವಿವರ ನೀಡಬಹುದು ಎಂದು ಸಭೆಗೆ ಕರೆಕೊಟ್ಟರು.
ಈ ಸಭೆಯಲ್ಲಿ ಡಾ.ಜಿ.ವಿ.ಶಶಿಕಿರಣ್, ಡಾ.ಚಂದ್ರಕಲಾ ಜಿ.ಆರ್., ಡಾ.ವಿ.ಕೆ.ಶಿವಕುಮಾರ್, ಡಾ.ಜಯಂತಿ, ಡಾ.ಸುಧೀರ್, ಡಾ.ಜಗದೀಶ್, ಡಾ.ಅಭಿಷೇಕ್, ಡಾ.ಶರತ್ ಬಿ, ಡಾ.ಪ್ರೇಮಯೋಗಿ, ಡಾ.ಅತಾವುಲ್ಲಾ, ಡಾ.ಶರತ್ ಚಂದ್ರಮೌಳಿ, ಡಾ.ನರೇಂದ್ರ, ಡಾ.ನರಸಿಂಹರೆಡ್ಡಿ, ಮಾತನಾಡಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಾಗೂ ಅನುಭವಗಳನ್ನು ವಿವರಿಸುತ್ತಾ ನಿಜಕ್ಕೂ ಭಯಾನಕ ಸ್ಥಿತಿಯಲ್ಲಿ ವೈದ್ಯರ ಹಾಗೂ ವೈದ್ಯರೇತರ ಸಿಬ್ಬಂದಿಗೆ ಯಾವುದೇ ರೀತಿಯ ರಕ್ಷಣೆ ಹಾಗೂ ಅಭಯ ದೊರೆಯುತ್ತಿಲ್ಲದ ಸ್ಥಿತಿಯಲ್ಲಿ ಹೇಗೆ ಮುಂದುವರೆಯಬೇಕು ಎಂಬುದನ್ನು ಅತ್ಯಂತ ಮನಮುಟ್ಟುವಂತೆ ವಿವರಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ಹಿರಿಯ ತಜ್ಞರು ಆದ ಡಾ.ಜಿ.ವೆಂಕಟರಾಮಯ್ಯ ರವರು ಸವಿಸ್ತಾರವಾಗಿ ಮಾತನಾಡಿ ಘನ ಸರ್ಕಾರದ ಸಹಕಾರ ಅತ್ಯಂತ ಮುಖ್ಯ, ಈ ಕಾರಣದಿಂದ ತುರ್ತಾಗಿ ಉಪವಿಭಾಗಾಧಿಕಾರಿಗಳವರ ನೇತೃತ್ವದಲ್ಲಿ ಎಲ್ಲ ಸರ್ಕಾರಿ ಘಟಕಗಳ ಅಧಿಕಾರಿಗಳನ್ನು ಕೂಡಿಕೊಂಡು ವೈದ್ಯರುಗಳು ಹಾಗೂ ಅಧಿಕಾರಿಗಳು ಒಂದು ಸಮನ್ವಯತೆಯ ಹಾದಿಯಲ್ಲಿ ತಾಲ್ಲೂಕನ್ನು ರಕ್ಷಿಸುವ ಮಹತ್ಕಾರ್ಯಕ್ಕೆ ಟೊಂಕ ಕಟ್ಟಬೇಕೆಂದು ಸೂಚಿಸಿದರು.
ಈ ಕಾರ್ಯಕ್ರಮವನ್ನು ಮುಕ್ತಾಯಗೊಳಿಸುವ ಹಂತದಲ್ಲಿ ಎಲ್ಲರೂ ಕೂಡಿ ಪೂಜ್ಯ ಸ್ವಾಮಿ ಜಪಾನಂದಜೀ ರವರಿಗೆ ಪೂರ್ಣ ಜವಾಬ್ಧಾರಿಯನ್ನು ನೀಡಿ ಮುಂಬರುವ ತುರ್ತು ಸಭೆಯ ಎಲ್ಲ ವ್ಯವಸ್ಥೆಯನ್ನು ನಡೆಸಬೇಕು ಹಾಗೂ ಮುಂದಿನ ದಿನಗಳಲ್ಲಿ ಮಾರ್ಗದರ್ಶನ ನೀಡಬೇಕೆಂದು ಕೋರಿಕೊಂಡಾಗ ಪೂಜ್ಯ ಸ್ವಾಮೀಜಿಯವರು ತಾಲ್ಲೂಕಿನ ಹಿತದೃಷ್ಟಿಯಲ್ಲಿ ಹಾಗೂ ಜನತೆಯ ರಕ್ಷಣೆಗಾಗಿ ತಾವು ಸರ್ಕಾರ ಹಾಗೂ ಭಾರತೀಯ ವೈದ್ಯಕೀಯ ಸಂಘದ ಸಹಕಾರದೊಂದಿಗೆ ಕಾರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.
ಸಮಾರಂಭದ ವಂದನಾರ್ಪಣೆ ಡಾ.ಶ್ರೀಕಾಂತ್ ರವರಿಂದ ನೆರವೇರಿತು.