ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ. ಪಾವಗಡ : ತಾಲ್ಲೂಕಿನ ಕೋಡಬಂಡೆ ಗ್ರಾಮದಲ್ಲಿ `ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ, ಕಾರ್ಯಕ್ರಮದ ಅಂಗವಾಗಿ ಇಂದು ಜಿಲ್ಲಾ ಉಪ ವಿಭಾಗಾಧಿಕಾರಿ ಸೋಮಪ್ಪ ಕಡಕೋಳ ಗ್ರಾಮ ವಾಸ್ತವ್ಯ ಮಾಡಿದರು.
ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡುತ್ತಾ, ಗ್ರಾಮೀಣ ಭಾಗದ ಜನರು ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಕಚೇರಿಗೆ ಆಗಮಿಸಿದಾಗ ಕಚೇರಿಯ ಅಧಿಕಾರಿಗಳು ಹೆಚ್ಚಿನ ತಾಳ್ಮೆಯಿಂದ ಜನರ ಸಮಸ್ಯೆಗಳನ್ನು ಆಲಿಸಿ, ಅವರ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಸೂಚಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು. ಗ್ರಾಮ ವಾಸ್ತವ್ಯ ಒಂದು ಉತ್ತಮವಾದ ಕಾರ್ಯಕ್ರಮ ಈ ಕಾರ್ಯಕ್ರಮದಲ್ಲಿ ಜನರು ಯಾವುದೇ ಅಂಜಿಕೆ, ಭಯವಿಲ್ಲದೆ, ಅಧಿಕಾರಿಗಳಿಗೆ ಅರ್ಜಿ ನೀಡಿ ತಮ್ಮಕೆಲಸಗಳನ್ನು ಮಾಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮವನ್ನು ಉದ್ದೇಶಿಸಿ ರೈತ ಸಂಘದ ಅಧ್ಯಕ್ಷ ನರಸಿಂಹ ರೆಡ್ಡಿ ಮಾತನಾಡುತ್ತಾ, ಗುಂಡಾರ್ಲ ಹಳ್ಳಿ ಕೆರೆ ಕಟ್ಟೆ ಒಡೆದು, ಹೆಚ್ಚಿನ ಮಳೆ ನೀರು ಪೋಲಾಗುತ್ತಿರುವುದು ಎಂದು, ಇದರ ಬಗ್ಗೆ ಅಧಿಕಾರಿಗಳಿಗೆ ಎಷ್ಟು ಸಲ ಮನವರಿಕೆ ಮಾಡಿದರು ಪ್ರಯೋಜನವಾಗುತ್ತಿಲ್ಲ , ಹಾಗೂ ಕೋಟ ಬಂಡೆ ಗ್ರಾಮದಲ್ಲಿ ವಿದ್ಯುತ್ ದೀಪಗಳು ಬೆಳಗ್ಗೆ ರಾತ್ರಿ ಎಂಬ ವ್ಯತ್ಯಾಸವಿಲ್ಲದೆ ಒಂದೇ ಸಮನೆ ಉರಿಯುತ್ತಿರುತ್ತವೆ , ಎಂದು ದೂರಿದರು.
ಪಿಡಿಒ ಸರಿಯಾದ ರೀತಿಯಲ್ಲಿ ಗ್ರಾಮ ಸ್ವಚ್ಛತಾ ಕಾರ್ಯಗಳನ್ನು ಮಾಡಿಸುತ್ತಿಲ್ಲವೆಂದು ದೂರಿದರು . ಸ್ವತಂತ್ರ ಬಂದು ಹಲವಾರು ವರ್ಷಗಳಾದರೂ ಗಾಂಧೀಜಿಯ ಕನಸು ನನಸಾಗಿಲ್ಲ. ಇಂದಿಗೂ ಹಲವಾರು ಬಡಜನರು ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ಅಕ್ರಮ ಸಕ್ರಮದಡಿ ಅರ್ಜಿ ಸಲ್ಲಿಸಿದ್ದರೂ ಟಿಸಿ ಅಳವಡಿಸಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ನೀಡುವಲ್ಲಿ ಬೆಸ್ಕಾಂ ಅಧಿಕಾರಿಗಳು ವಿಫಲಾರಾಗಿದ್ದಾರೆ ಎಂದು ದೂರಿದರು.
ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಿ, ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಕೆಲಸ ಮಾಡಬೇಕು. ಕುಡಿಯುವ ನೀರಿನ ಘಟಕ ಅಳವಡಿಸಿ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.ನಿವೃತ್ತ ಮುಖ್ಯ ಶಿಕ್ಷಕ ನರಸಪ್ಪ ಮಾತನಾಡಿ, ಗುಂಡಾರ್ಲಹಳ್ಳಿಯಂದ ಕಣಿವೇನಹಳ್ಳಿ, ಚಿಕ್ಕನಾಯಕನಹಳ್ಳಿಗೆ ಸುಸಜ್ಜಿತ ರಸ್ತೆ ವ್ಯವಸ್ಥೆ ಮಾಡಿಕೊಡಬೇಕು. ಗ್ರಾಮಗಳಿಗೆ ಬಸ್ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.ತಹಶೀಲ್ದಾರ್ ಕೆ.ಆರ್.ನಾಗರಾಜು, ಗ್ರೇಡ್ 2 ತಹಶೀಲ್ದಾರ್ ಸುಮತಿ, ಸರ್ವೆ ಇಲಾಖೆ ಮೇಲ್ವಿಚಾರಕ ಜಿ.ಸಿ.ಕೃಷ್ಣ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜು, ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪೂಜಾರಪ್ಪ ಮಾತನಾಡಿದರು.
ವಿವಿದ ಯೋಜನೆಗಳ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ತ್ರಿವೇಣಿ, ಉಪಾಧ್ಕಕ್ಷೆ ಅಕ್ಕಮ್ಮ, ಸದಸ್ಯ ಗಂಗಾಧರಪ್ಪ, ಶೃತಿ, ಕೃಷ್ಣ,ಮೂರ್ತಿ, ನರಸಿಂಹಮೂರ್ತಿ, ದೇವರಾಜು, ವೇಣುಗೋಪಾಲರೆಡ್ಡಿ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ತಿಮ್ಮಪ್ಪ, ಬಲರಾಮರೆಡ್ಡಿ, ಕಾರ್ಯ ನಿರ್ವಹಣಾಧಿಕಾರಿ ಶಿವರಾಜಯ್ಯ, ಕಂದಾಯ ನಿರೀಕ್ಷಕ ರಾಜಗೋಪಾಲ್, ಸಹಾಯಕ ನಿರ್ದೇಶಕರಾದ ವಿಜಯಮೂರ್ತಿ, ಶಂಕರಮೂರ್ತಿ, ಭಾಗ್ಯರಾಜು ಉಪಸ್ಥಿತರಿದ್ದರು.