ಶನಿ ದೇವರ ದರ್ಶನ ಪಡೆದು ಪುನೀತರಾದ ಭಕ್ತಾದಿಗಳು………… ಪಾವಗಡ : ಭಾರತದ ಪುರಾತನ ಆಧ್ಯಾತ್ಮಿಕ ಶಾಸ್ತ್ರ ಮತ್ತು ಜ್ಯೋತಿಷ್ಯಶಾಸ್ತ್ರಗಳಲ್ಲಿ ಶನಿ ಗ್ರಹವನ್ನು ಜೀವಂತ ಗ್ರಹವೆಂದು ಭಾವಿಸಿ, ಶನಿ ದೇವರು ಅಥವಾ ಶನೇಶ್ವರ ಎಂದು ಪೂಜಿಸುತ್ತಾರೆ, ಶ್ರಾವಣ ಶನಿವಾರದ ಪ್ರಯುಕ್ತ ಪಟ್ಟಣದ ಶನೈಶ್ಚರಸ್ವಾಮಿ ದರ್ಶನಕ್ಕಾಗಿ ವಿವಿಧ ರಾಜ್ಯಗಳ ನಾನಾ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು .
ಶ್ರಾವಣದ ಪ್ರಯುಕ್ತ ಹೆಚ್ಚಿನ ಭಕ್ತಾದಿಗಳು ಬರುವ ಮುನ್ಸೂಚನೆಯಿಂದಾಗಿ ದೇಗುಲದ ಸುತ್ತ ಮುತ್ತಲ ರಸ್ತೆಗಳಿಗೆ ಪೊಲೀಸ್ ಸಿಬ್ಬಂದಿ ಬ್ಯಾರಿಕೇಟ್ ಹಾಕಿ ಸೂಕ್ತ ಭದ್ರತೆ ಏರ್ಪಡಿಸಿದ್ದರು.
ಶನೈಶ್ಚರ ಸ್ವಾಮಿಗೆ ಮುಡಿ ಸಮರ್ಪಿಸಲು ಬೆಳಗಿನ ಜಾವವೇ ದೀಕ್ಷಾ ಮಂಠಪದಲ್ಲಿ ಜನತೆ ಕಿಕ್ಕಿರಿದಿದ್ದರು.
ಬೆಳಗಿನ ಜಾವದಿಂದಲೇ ತೈಲಾಭಿಷೇಕ, ವಿಶೇಷ ಪೂಜಾ ಕಾರ್ಯಕ್ರಮಗಳು ಆರಂಭವಾಗಿದ್ದವು. ಶುಕ್ರವಾರ ಸಂಜೆಯೇ ಪಟ್ಟಣಕ್ಕೆ ಆಗಮಿಸಿದ ಭಕ್ತಾದಿಗಳು ದೇಗುಲದಲ್ಲಿ ವಿಶೇಷ ಪೂಜೆ ಮಾಡಿಸಿ ದರ್ಶನ ಪಡೆದರು.
ಪೂಜಾ ಸಾಮಗ್ರಿ, ಆಟದ ಸಾಮಗ್ರಿ, ಮಂಡಕ್ಕಿ, ಬೆಂಡು, ಬತ್ತಾಸು ಇತ್ಯಾದಿ ವ್ಯಾಪಾರ ಮಳಿಗೆಗಳಲ್ಲಿ ಭಕ್ತಾದಿಗಳು ತಮಗೆ ಬೇಕಿರುವುದನ್ನು ಕೊಂಡು ಸಂಭ್ರಮಿಸಿದರು.
ತೆಂಗಿನಕಾಯಿ ಹೊಡೆಯುವುದನ್ನು ನಿಷೇಧಿಸಿದ್ದರೂ ಭಕ್ತಾದಿಗಳು ದೇಗುಲದ ಹೊರ ಭಾಗ, ರಸ್ತೆಯಲ್ಲಿ ಹೊಡೆದು ಹರಕೆ ತೀರಿಸಿದರು.
ಶೀತಾಲಾಂಬ, ಶನೈಶ್ಚರ ಸಮೇತ ನವಗ್ರಹಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ವರದಿ: ಶ್ರೀನಿವಾಸಲು ಎ