ಮಳೆ ನಡುವೆಯೂ ಶನೈಶ್ಚರ ಸ್ವಾಮಿ ದರ್ಶನಕ್ಕೆ ಮುಗಿಬಿದ್ದ ಭಕ್ತಾದಿಗಳು…...
ಪಾವಗಡ: ತಾಲೂಕಿನಾದ್ಯಂತ ರಣ ಮಳೆಯ ಆರ್ಭಟದಿಂದಾಗಿ ಕೆರೆಕಟ್ಟೆಗಳು ಒಡೆದು ಮುಖ್ಯ ರಸ್ತೆಗಳೆಲ್ಲವೂ ಜಲಮಯವಾಗಿದ್ದು ಶನಿವಾರದಂದು ಪಟ್ಟಣದ ಶನೈಶ್ಚರ ಸ್ವಾಮಿ ದರ್ಶನಕ್ಕೆ ದೂರದ ಊರುಗಳಿಂದ ಭಕ್ತಾದಿಗಳು ಆಗಮಿಸಿದ್ದರು. ಮಳೆ ನಡುವೆಯೇ ಭಕ್ತಾದಿಗಳು ದೇವರ ದರ್ಶನ ಪಡೆದುಕೊಂಡರು.
ಕಳೆದ ವಾರಕ್ಕಿಂತ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ದೇಗುಲಕ್ಕೆ ಆಗಮಿಸಿದ್ದ ಪರಿಣಾಮ ವಾಹನ ದಟ್ಟಣೆ ಹೆಚ್ಚಿತ್ತು.
ಶುಕ್ರವಾರ ವರಮಹಲಾಕ್ಷ್ಮಿ ಪ್ರಯುಕ್ತ ಶೀಲತಾಂಬ ದೇವಿಗೆ ವಿಶೇಷ ಅಲಂಕಾರ, ಅಭಿಷೇಕ ವಿಶೇಷ ಪೂಜೆ ನಡೆಯಿತು.
ಶ್ರಾವಣ ಶನಿವಾರದ ಪ್ರಯುಕ್ತ ಶನೈಶ್ಚರ ಸ್ವಾಮಿಗೆ ತೈಲಾಭಿಷೇಕ, ಸರ್ವ ಸೇವೆ ಪೂಜೆ ಸಲ್ಲಿಸಿ ಭಕ್ತಾದಿಗಳು ಹರಿಕೆ ತೀರಿಸಿದರು.
ದೇವಸ್ಥಾನದ ಮುಖ್ಯ ರಸ್ತೆಯಲ್ಲಿರುವ ಕೋಟೆ ಆಂಜನೇಯಸ್ವಾಮಿ, ಹಾಗೂ ತಾಲೂಕಿನ ಅಂತ್ಯ ಸುಬ್ರಮಣ್ಯ ಎಂದೇ ಹೆಸರಾಗಿರುವ ನಾಗಲಮಡಿಕೆ ಸುಬ್ರಹ್ಮಣ್ಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಭಕ್ತರು ದೇವರ ದರ್ಶನ ಪಡೆದು , ನಾಗಲಮಡಿಕೆ ಡ್ಯಾಮ್ ನಲ್ಲಿರುವ ನೀರನ್ನು ವೀಕ್ಷಿಸಿ ಆನಂದಪಟ್ಟರು. ಅದೇ ರೀತಿ ತಾಲೂಕಿನ ಸುವರ್ಚಲಾ ಆಂಜನೇಯಸ್ವಾಮಿ ದೇಗುಲಗಳಲ್ಲಿಯೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ದರ್ಶನ ಪಡೆದರು.
ವರದಿ-_ಶ್ರೀನಿವಾಸಲು ಎ