IMG 20220815 WA0040

ದೇಶಕ್ಕೆ ನಿಮ್ಮ ಶ್ರಮ, ಶ್ರದ್ಧೆ, ಅಭಿಮಾನ ಮುಖ್ಯ:

Genaral STATE

ದೇಶಕ್ಕೆ ನಿಮ್ಮ ಶ್ರಮ, ಶ್ರದ್ಧೆ, ಅಭಿಮಾನ ಮುಖ್ಯ:

ನಾಡಿನಜನತೆಗೆ ಮುಖ್ಯಮಂತ್ರಿ* ಬಸವರಾಜ ಬೊಮ್ಮಾಯಿ ಕರೆ
ಬೆಂಗಳೂರು, ಆಗಸ್ಟ್ 15: ದೇಶಕ್ಕೆ ಜನತೆಯ ಶ್ರಮ, ಶ್ರದ್ಧೆ, ಅಭಿಮಾನ, ಬೆವರಿನ ಹನಿ ಮುಖ್ಯ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.

ಅವರು ಇಂದು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 76 ನೇ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು.

ದೇಶ ಮೊದಲು ಎನ್ನುವ ಭಾವನೆ ಇರಬೇಕು. ದೇಶ ಸ್ವಾಭಿಮಾನ ಸಂಕೇತ. ನಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದರು.

ಸಿಂಹಾವಲೋಕನ, ಆತ್ಮಾವಲೋಕನದ ಅವಶ್ಯಕತೆ ಇದೆ
ಎಪ್ಪತ್ತೈದು ವರ್ಷಗಳಾದ ಹಿನ್ನೆಲೆಯಲ್ಲಿ ಹಿಂದಿರುಗಿ ನೋಡಬೇಕು. ನಡೆದು ಬಂದ ಈ ದಾರಿಯಲ್ಲಿನ ಕೊರತೆಗಳನ್ನು ಸರಿಪಡಿಸಿಕೊಂಡು ಅಮೃತ ಕಾಲಕ್ಕೆ ಕೊರತೆಗಳ್ನು ನೀಗಿಸಿ ಮುಂದೆ ಹೋಗಲು ಸಿಂಹಾವಲೋಕನ, ಆತ್ಮಾವಲೋಕನದ ಅವಶ್ಯಕತೆ ಇದೆ. ದೇಶಕ್ಕೆ ನಾನು ಏನು ಮಾಡಿದ್ದೇನೆ ಎಂಬ ಪ್ರಶ್ನೆ ಹಾಕಿಕೊಳ್ಳಬೇಕು. ದೇಶಕ್ಕೆ ಚರಿತ್ರೆ ಇದೆ. ಚಾರಿತ್ಯ ಬೇಕಾಗಿದೆ. ಆಚಾರರಿದ್ದಾರೆ, ಬೇಕಾಗಿರುವುದು ಆಚರಣೆ, ಒಳ್ಳೆಯ ಆಚರಣೆ ದೇಶಕ್ಕೆ ಸದ್ಚಾರಿತ್ಯ ಕೊಡುತ್ತಿದೆ. . ಮುಂದಾಲೋಚನೆಯಲ್ಲಿ ಈ ದೇಶಕ್ಕೆ ಒಂದು ದೃಷ್ಟಿಕೋನ ಇದೆ ಎಂದರು.

ಅಮೃತ ಕಾಲಕ್ಕೆ ಸಶಕ್ತ ಭಾರತ
ನೈಸರ್ಗಿಕವಾಗಿ ಸಂಪತ್ಭರಿತವಾದ ದೇಶ, ಶ್ರಮಜೀವಿಗಳ ದೇಶ ನಮ್ಮದು. ಸರಿಯಾದ ದಿಕ್ಸೂಚಿ, ಗುರಿ, ಛಲ ಅತ್ಯಂತ ಅವಶ್ಯಕವಿದೆ. ಈ ಅಮೃತಕಾಲದಲ್ಲಿ ಮೋದಿಯವರ ನಾಯಕತ್ವ ಇದೆ. ಎಂಟು ವರ್ಷದಲ್ಲಿ ಹಲವು ಸವಾಲುಗಳನ್ನು ಎದುರಿಸಿದ್ದಾರೆ. ಸ್ವಚ್ಛ ಭಾರತದ ಮೂಲಕ ಸ್ವಚ್ಛತೆಯ ಸಾಧನೆ ಮೋದಿಯವರು ಮಾಡಿದ್ದಾರೆ. ನಲವತ್ತು ಕೋಟಿ ಜನರಿಗೆ ಖಾತೆಗಳನ್ನು ತೆರೆದು ಡಿಜಿಟಲ್ ವ್ಯವಹಾರ ಪ್ರಾರಂಭಿಸಿದ್ದಾರೆ. ದೇಶದ ಆರ್ಥಿಕತೆ, ಜಿಡಿಪಿ ಹೆಚ್ಚಾಗಿದೆ. ವಿದೇಶಿ ವಿನಿಮಯ ಹೆಚ್ಚಾಗಿ ದೇಶದ ರಕ್ಷಣೆಯಲ್ಲಿ ಆತ್ಮನಿರ್ಭರ್ ಆಗಿದೆ. ರಕ್ಷಣೆಯ ಸಾಮರ್ಥ್ಯವನ್ನು ರಫ್ತು ಮಾಡುತ್ತಿದ್ದೇವೆ. ಸ್ಟಾರ್ಟ್ ಅಪ್, ಯೂನಿಕಾರ್ನ್ ಪ್ರಾರಂಭವಾಗಿದೆ. ಸಶಕ್ತ ಭಾರತ ಹೊರಹೊಮ್ಮಿದೆ. ಅಮೃತ ಭಾರತಕ್ಕೆ ಭದ್ರ ಬುನಾದಿ ಹಾಕಲಾಗುತ್ತಿದೆ ಎಂದರು.

IMG 20220815 WA0038
ನಜ

ಅವರ ಈ ಪ್ರಯತ್ನದಲ್ಲಿ ಕರ್ನಾಟಕವೂ ಭದ್ರ ಬುನಾದಿ ಹಾಕಲು ಎಲ್ಲರ ಪ್ರಯತ್ನವೂ ಬೇಕು. ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ , ಸಬ್ ಕಾ ಪ್ರಯಾಸ್ ಎಂಬ ತತ್ವ ಆಧರಿಸಿ ಮುನ್ನಡೆಯಬೇಕು. ಕರ್ನಾಟಕ ವಿಶಿಷ್ಟ ರಾಜ್ಯ. ಕೃಷಿಯಲ್ಲಿ ಅತಿಹೆಚ್ಚು ಉತ್ಪಾದನೆ, ಅತಿ ಹೆಚ್ಚು ಸ್ಟಾರ್ಟ್ ಅಪ್, ಯೂನಿಕಾರ್ನ್ ,ಡೆಕಾಕಾರ್ನ್ ಇಲ್ಲಿವೆ. ತಂತ್ರಜ್ಞಾನದಲ್ಲಿ ಕರ್ನಾಟಕ ನಂ.1 ಇದೆ. ನಮ್ಮ ರಾಜ್ಯದ ಒಟ್ಟು ತಲಾವಾರು ಆದಾಯ ಇಡೀ ದೇಶದಲ್ಲಿ 3ನೇ ಸ್ಥಾನದಲ್ಲಿದೆ. ಜಿಡಿಪಿ ಶೇ.9 ರಷ್ಟು ಬೆಳೆಯುತ್ತಿದೆ. ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಹರಿದು ಬಂದ ರಾಜ್ಯ ನಮ್ಮದು. ನಮ್ಮ ಸರ್ಕಾರ ಕೋವಿಡ್ ನಲ್ಲಿ ನಾಯಕರಾದ ಯಡಿಯೂರಪ್ಪನವರ ನೇತೃತ್ವದಲ್ಲಿ ಅವರ ಮಾರ್ಗದರ್ಶನದಲ್ಲಿ ಉತ್ತಮವಾಗಿ ನಿರ್ವಹಿಸಿ ಮುನ್ನಡೆಯುತ್ತಿದ್ದೇವೆ. ವೈದ್ಯರು ಆಶಾ ಕಾರ್ಯಕರ್ತರು, ನರ್ಸುಗಳು, ಪೊಲೀಸ್, ಸರ್ಕಾರಿ ನೌಕರರು ಕೋವಿಡ್ ಸಂದರ್ಭದಲ್ಲಿ ಅವರ ಶ್ಲಾಘನೀಯ ಕಾರ್ಯ ಮಾಡಿದ್ದಾರೆ. ಒಂದು ಜನಾಂಗವನ್ನು ಉಳಿಸುವ ಕಾರ್ಯ ನಡೆದಿದೆ. ರಾಜ್ಯದಲ್ಲಿ ಎಂಟು ಕೋಟಿ ಲಸಿಕೆ ನೀಡಲಾಗಿದೆ ಎಂದರು.

ಹಲವು ಕ್ಷೇತ್ರಗಳಲ್ಲಿ ರಾಜ್ಯ ನಂಬರ್ 1

ಸರ್ಕಾರ ಕೋವಿಡ್ ನಿಂದಾದ ಆರ್ಥಿಕ ಹಿಂಜರಿತವನ್ನು ಹಿಮ್ಮೆಟ್ಟಿಸಿ ಸುಮಾರು ಹದಿನೈದು ಸಾವಿರ ಕೋಟಿ ಅಧಿಕ ಆದಾಯವನ್ನು ರಾಜ್ಯಕ್ಕೆ ತಂದಿದೆ. ಅಮೃತ ಯೋಜನೆಗಳನ್ನು ಕಳೆದ ಬಾರಿ ಘೋಷಣೆ ಮಾಡಲಾಯಿತು. ಒಂದು ವರ್ಷದಲ್ಲಿ ಅವುಗಳನ್ನು ನಾವು ಮಾಡಿ ಪೂರೈಸಿದ್ದೇವೆ. ಅಮೃತ ಯೋಜನೆಯಡಿಯಲ್ಲಿ 750 ಗ್ರಾಮ ಪಂಚಾಯತಿ ಅಭಿವೃದ್ಧಿಗೆ 25 ಲಕ್ಷ ರೂ.ಶಾಲೆಗಳ ಅಭಿವೃದ್ಧಿ, ಎಪ್ಪತ್ತೈದು ಸಾವಿರ ಯುವಕರಿಗೆ ಕೌಶಲ್ಯಾಭಿವೃದ್ಧಿ ಒದಗಿಸಲಾಗಿದೆ ಎಂದರು.

ಅಮೃತ ಮಹೋತ್ಸವದ ನಮ್ಮ ಕೆಲಸ ಮುಂದಿನ ದಿನಗಳಿಗೆ ಸ್ಪೂರ್ತಿ. ಈ ವರ್ಷ ಭರಸೆಯ ಬಜೆಟ್ ಮಂಡಿ ಸಲಾಗಿದೆ. ಅಗತ್ಯ ಯೋಜನೆಗಳನ್ನು ರೂಪಿಸಲಾಗಿದೆ. ಕರ್ನಾಟಕದ 8101 ಶಾಲಾ ಕೊಠಡಿಗಳು ಈ ವರ್ಷವೇ ಪೂರ್ಣಗೊಳ್ಳಲಿದೆ. 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಿಹೆಚ್ ಸಿ ಗಳಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಪೌಷ್ಟಿಕ ಆಹಾರಕ್ಕೆ ಒತ್ತು ನೀಡಿದೆ. ಗ್ರಾಮಗಳಲ್ಲಿ ಸ್ತ್ರೀ ಶಕ್ತಿ ಸಂಘಕ್ಕೆ ಹಣಕಾಸು, ಮಾರುಕಟ್ಟೆ ಸೌಲಭ್ಯ, 4 ಲಕ್ಷ ಮಹಿಳೆಯರಿಗೆ ಉದ್ಯೋಗ ನೀಡಿದ್ದೇವೆ. ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ ಮೂಲಕ ಯುವಕರಿಗೆ ಸುಮಾರು 5 ಲಕ್ಷ ಕೈಗಳಿಗೆ ಕೆಲಸವನ್ನು 1.5 ಲಕ್ಷ , ಹತ್ತು ಲಕ್ಷ ರೂ.ಗಳ ಯೋಜನೆ, ಅವರ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಮೂಲಕ ಇವರಿಗೆ ಬೆಂಬಲ ನೀಡಿದರೆ ನಾಡಿನ ಅಭಿವೃದ್ಧಿ ಸಾಧ್ಯವಾಗುತ್ತದೆ. ಆರ್ಥಿಕತೆ ಎಂದರೆ ದುಡ್ಡಲ್ಲ, ಜನರ ದುಡಿಮೆ ಎಂದು ಅರಿತಿದ್ದೇವೆ. ಹತ್ತು ಲಕ್ಷ ರೈತರ ಮಕ್ಕಳಿಗೆ 430 ಕೋಟಿ ರೂ. ರೈತ ವಿದ್ಯಾನಿಧಿ ಮೂಲಕ ವಿತರಿಸಲಾಗಿದೆ. ಕಾರ್ಮಿಕರಿಗೆ, ದೀನದಲಿತರರಿಗೆ ಸ್ವಯಂ ಉದ್ಯೋಗ ಯೋಜನೆ, ಹಿಂದುಳಿದ ವರ್ಗದವರಿಗೆ ಕನಕದಾಸ ವಿದ್ಯಾರ್ಥಿನಿಲಯ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ದೀನ್ ದಯಾಳ್ ಉಪಾಧ್ಯಾಯ ಸೌಹಾರ್ದ’ ಸಾವಿರ ಕೊಠಡಿಗಳ ಸಾಮರ್ಥ್ಯದ ವಿದ್ಯಾರ್ಥಿ ನಿಲಯ ನಿರ್ಮಿಸಲಾಗುತ್ತಿದೆ ಎಂದರು.

ರೈತರಿಗೆ ಯಶಸ್ವಿನಿ, ಕ್ಷೀರಸಮೃದ್ಧಿ ಬ್ಯಾಂಕ್, ಮೂವತ್ತು ಲಕ್ಷ ರೈತರಿಗೆ ಸಾಲ. 3 ಸಾವಿರ ಕೋಟಿ ರೂ.ಗಳಲ್ಲಿ ರಾಜ್ಯ ಹೆದ್ದಾರಿ, ರೈಲ್ವೆ ಮಾರ್ಗ, ಬಂದರು, ಮೂಲಸೌಲಭ್ಯ ಅಭಿವೃದ್ಧಿ ಕೈಗೊಳ್ಳಲಾಗಿದೆ.

ಪ್ರತಿಯೊಬ್ಬ ಹಿರಿಯ ನಾಗರಿಕರಿಗೆ ಕಣ್ಣು ತಪಾಸಣೆ ಮಾಡಿ ಕನ್ನಡಕ ನೀಡುವ ಮೂಲಕ ಕಟ್ಟಕಡೆಯ ವ್ಯಕ್ತಿಗೂ ದೃಷ್ಟಿ ನೀಡುವ ಕೆಲಸ ಪ್ರಾರಂಭಗೊಂಡಿದೆ. ಆಸಿಡ್ ದಾಳಿಗೆ ತುತ್ತಾದವರಿಗೆ ಮೂರರಿಂದ ಹತ್ತು ಸಾವಿರ ರೂ.ಗಳ ಹೆಚ್ಚಳ, ಪೌರಕಾರ್ಮಿಕರ ಗೌರವಧನ ಹೆಚ್ಚಿಸಿದೆ. ಕಳೆದ ವರ್ಷ, ಅತಿ ವೃಷ್ಟಿ ಹಾಗೂ ಪ್ರವಾಹದಿಂದ , ಮನೆ ಕಳೆದುಕೊಂಡಿರುವವರಿಗೆ ಎನ್.ಡಿ.ಆರ್.ಎಫ್ ಮಾರ್ಗಸೂಚಿಗಳಿಗಿಂತ ಹೆಚ್ವಿನ ಪರಿಹಾರ ನೀಡಿದೆ ಎಂದರು.

ಅಭಿವೃದ್ಧಿಗೆ ಮೂರು ‘ಇ’ ಗಳು

ನಾಡಿನ ಅಭಿವೃದ್ಧಿಗೆ 3 ಇ ಗಳು- ಈಸ್ ಆಫ್ ಲಿವಿಂಗ್, ಈಸ್ ಆಫ್ ಡೂಯಿಂಗ್ ಬಿಸಿನೆಸ್, ಈಸ್ ಆಫ್ ಅಪ್ ಬ್ರಿಂಗಿಂಗ್ ಗಳನ್ನು ಆಧಾರಿಸಿದ್ದೇವೆ. ಹಾಗೂ ದೀನದಲಿತರನ್ನು ಸಶಕ್ತಗೊಳಿಸಲು 3 ಇಗಳು,- ಶಿಕ್ಷಣ, ಉದ್ಯೋಗ , ಸಬಲೀಕರಣದ ಮಂತ್ರವನ್ನು ಅಳವಡಿಸಿಕೊಂಡಿದ್ದೇವೆ.

ಪ್ರಧಾನಮಂತ್ರಿಗಳು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ ಹೊಂದಿದ್ದು, ಇದಕ್ಕೆ ಕರ್ನಾಟಕ 1 ಟ್ರಿಲಿಯನ್ ಡಾಲರ್ ಆರ್ಥಿಕತೆ ಕೊಡುಗೆ ನೀಡುವ ವಿಶ್ವಾಸವಿದೆ. ನಮ್ಮಲ್ಲಿ ಸಂಕಲ್ಪ, ಛಲ. ದೂರದೃಷ್ಟಿ ಇದೆ. ನವಕರ್ನಾಟಕದಿಂದ ನವಭಾರತ ನಿರ್ಮಾಣ ಮಾಡಲಾಗುತ್ತಿದೆ. 6 ಇಂಜಿನಿಯರ್ ಕಾಲೇಜುಗಳನ್ನು ಐಐಟಿ ಮಾದರಿಯ ಕಾಲೇಜುಗಳನ್ನಾಗಿ ಮಾಡಲಾಗುತ್ತಿದೆ, 5 ಹೊಸ ಅಂತರರಾಷ್ಟ್ರೀಯ ಮಟ್ಟದ ನಗರಗಳನ್ನು ಕಟ್ಟುತ್ತಿದ್ದೇವೆ. ನೀರಾವರಿ ಯೋಜನೆಗಳನ್ನು ಸಮಯದಲ್ಲಿ ಪೂರ್ಣ ಮಾಡಿ, ರಾಜ್ಯದ ಪ್ರತಿಯೊಂದು ಹನಿ ನೀರನ್ನು ಸಮಪರ್ಕವಾಗಿ ಬಳಸಲು ಸಂಕಲ್ಪ ಮಾಡಲಾಗಿದೆ. ವಿದ್ಯುಚ್ಛಕ್ತಿ, ನೀರಾವರಿಯಲ್ಲಿ ಕ್ಷಮತೆ ಕಾಯ್ದುಕೊಳ್ಳಲಾಗಿದೆ ಎಂದರು.

ಸುದೀರ್ಘ ಅನುಭವದ ರಾಷ್ಟ್ರ

ಒಬ್ಬ ವ್ಯಕ್ತಿಯ ಜೀವನದಲ್ಲಿ ಎಪ್ಪತ್ತೈದು ವರ್ಷವಾದರೆ ಅದು ಹಿರಿಯ ವಯಸ್ಸು. ದೇಶವೊಂದಕ್ಕೆ 75 ವರ್ಷಗಳಾದರೆ, ಅದು ಅನುಭವ ಇರುವ ಯೌವನದ ವಯಸ್ಸು. 75 ವರ್ಷದ ಅನುಭವ ,ಮುಂದಿನ ನಡೆಯ ಬೇಕಾಗಿರುವ ದಾರಿಯ ಕುರಿತು ದಿಕ್ಸೂಚಿ ಹಾಕಿಕೊಳ್ಳಲು ಅಮೃತ ಕಾಲ. ದೇಹ ಮನಸ್ಸು ಎಲ್ಲಿ ಒಂದು ಕಡೆ ಇರುವುದೋ ಅದು ಅಮೃತ ಘಳಿಗೆ. ಈಗ ಅಮೃತ ಘಳಿಗೆ ಬಂದಿದೆ ಎಂದರು.

ಈ ಸ್ವಾತಂತ್ರ್ಯ ಸುಲಭವಾಗಿ ಬಂದಿಲ್ಲ. ಹಲವಾರು ಅನಾಮಧೇಯರು ಹೋರಾಟ, ಸತ್ಯಾಗ್ರಹಗಳನ್ನು ಮಾಡಿದ್ದಾರೆ. ಹಲವು ಹೋರಾಟಗಾರರು ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಬ್ರಿಟೀಷರ ಗುಂಡಿಗೆ ಬಲಿಯಾಗಿದ್ದಾರೆ. ಆಸ್ತಿ ಪಸ್ತಿ ಕಳೆದುಕೊಂಡಿದ್ದಾರೆ. ರೈತರು ಕರ ನಿರಾಕರಣೆಯ ಚಳವಳಿ, ಬಾರ್ದೋಲಿ, ಇಂಡಿಗೋ ಸತ್ಯಾಗ್ರಹ, ದಕ್ಷಿಣ ಭಾರತದಲ್ಲಿ , ಡೆಕ್ಕನ್ ಸತ್ಯಾಗ್ರಹ, ಹೀಗೆ ರೈತ ಚಳವಳಿಯು ಮುಂಚೂಣಿಯಲ್ಲಿದ್ದಾಗ ನಮ್ಮ ಸಿಪಾಯಿ ದಂಗೆಯೂ ಕೂಡ ಇದಕ್ಕೆ ಪೂರಕವಾಗಿತ್ತು. ತದನಂತರದ ಘಟನೆಗಳ ಪರಿಣಾಮವಾಗಿ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಮತ್ತು ತಂಡದವರಿಂದ ಇಡೀ ಭಾರತ ಜಾಗೃತಗೊಂಡಿತ್ತು. ನಂತರ ಮೂಲ ತಾತ್ವಿಕ ನಿಲುವನ್ನು ‘ ಸ್ವತಂತ್ರ ನನ್ನ ಜನ್ಮ ಸಿದ್ದ ಹಕ್ಕು’ ಎಂದ ಬಾಲಗಂಗಾಧರ ತಿಲಕ್ ಅವರಿಂದ ವೀರ್ ಸರ್ವಾಕರ್, ತತ್ಯಾ ಟೋಪಿ, ಜಾನ್ಸಿರಾಣಿ ಲಕ್ಷ್ಮೀಬಾಯಿ ಅವರುಗಳು ಸ್ವಾತಂತ್ರ್ಯದ ಕಿಚ್ಚು ಹಚ್ಚಿದರು ಎಂದರು.

ಕರ್ನಾಟಕದ ಕೊಡುಗೆ
ಇವೆಲ್ಲಕ್ಕೂ ಮುನ್ನ 1824 ರಲ್ಲಿ ಮೊದಲ ಸಿಪಾಯಿ ದಂಗೆ, ಕನ್ನಡ ನಾಡಿನ ವೀರ ರಾಣಿ ಕಿತ್ತೂರು ಚೆನ್ನಮ್ಮ ಬ್ರಿಟಿಷರ ಮೊದಲು ಸಡ್ಡು ಹೊಡೆದಿದ್ದು, ಬ್ರಿಟೀಷ್ ಕಮೀಷನರ್ ಥ್ಯಾಕರೆಯನ್ನು ಯುದ್ಧದಲ್ಲಿ ಮಾರಣಹೋಮವನ್ನು ಮಾಡಿ, ಇಡೀ ದೇಶಕ್ಕೆ ನಮ್ಮ ಸಣ್ಣ ರಾಜ್ಯ ಬ್ರಿಟಿಷ್ ರನ್ನು ಸಹ ಸೋಲಿಸಬಹುದು ಎಂದು ತೋರಿಸಿಕೊಟ್ಟರು ಎಂದರು.

ದೇಶ ಕಟ್ಟಿದ ಎಲ್ಲರಿಗೂ ನಮನಗಳು
ದೇಶ ಕಟ್ಟಲು ಕೊಡುಗೆ ನೀಡಿರುವ ಮಹಾನ್ ವ್ಯಕ್ತಿಗಳು, ಆಹಾರ ಭದ್ರತೆ ನೀಡಿದ ರೈತರು, ಗಡಿ ಕಾಯುವ ಸೈನಿಕರು ದೇಶದ ಆಂತರಿಕ ಭದ್ರತೆ ಕಾಪಾಡುತ್ತಿರುವ ಪೊಲೀಸ್ ಪಡೆ, ಶಿಕ್ಷಕರು , ವಿಜ್ಞಾನಿಗಳು, ಇಂಜಿನಿಯರ್ ಗಳು, ವೈದ್ಯರು , ಕೈಗಾರಿಕೆಗಳು, ಕೂಲಿ ಕಾರ್ಮಿಕರು, ದೀನ ದಲಿತರು ಸೇರಿದಂತೆ ಈ ದೇಶವನ್ನು ಕಟ್ಟಲು ತಮ್ಮ ಕೊಡುಗೆ ನೀಡಿರುವ ಎಲ್ಲರಿಗೂ ನನ್ನ ನಮನಗಳನ್ನು ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.