images

ಅಕ್ರಮ ಆಸ್ತಿ ಸಾಬೀತು: ಆರೋಪಿಗೆ 4 ವರ್ಷ ಶಿಕ್ಷೆ

DISTRICT NEWS ತುಮಕೂರು

ಅಕ್ರಮ ಆಸ್ತಿ ಸಾಬೀತು: ಆರೋಪಿಗೆ 4 ವರ್ಷ ಶಿಕ್ಷೆ

ತುಮಕೂರು(ಕವಾ)ಆ:26: ತಮ್ಮ ಸೇವಾವಧಿಯಲ್ಲಿ ಬಲ್ಲಮೂಲಗಳ ಆದಾಯಕ್ಕಿಂತ ಹೆಚ್ಚಿನ ಅಕ್ರಮ ಆಸ್ತಿ ಹೊಂದಿದ್ದಾರೆಂದು ಸಾಬೀತಾದ ಕಾರಣ ತಿಪಟೂರು ತಾಲ್ಲೂಕಿನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಿರಿಯ ಸಹಾಯಕ ತಿಮ್ಮಯ್ಯ ಅವರಿಗೆ 7ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 4 ವರ್ಷ ಸಾಧಾರಣ ಶಿಕ್ಷೆ ಮತ್ತು 50,00,000 ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದೆ.
ನ್ಯಾಯಾಧೀಶರಾದ ಟಿ.ಪಿ. ರಾಮಲಿಂಗೇಗೌಡ ಅವರು ಈ ತೀರ್ಪು ನೀಡಿ ಇಂದು ಆದೇಶ ಹೊರಡಿಸಿದ್ದಾರೆ. ಆರೋಪಿ ತಿಮ್ಮಯ್ಯ ಅವರ ವಿರುದ್ಧ 2015ರ ಏಪ್ರಿಲ್ 27ರಂದು ದಾಳಿ ನಡೆಸಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿತ್ತು. ವಿಚಾರಣೆಯಲ್ಲಿ ಆರೋಪ ಸಾಬೀತಾದ ಕಾರಣ ದೋಷಿ ಎಂದು ಘೋಷಿಸಿ, ಕಲಂ 13(1)(ಇ) ಜೊತೆಗೆ 13(2) ಪಿ.ಸಿ.ಆಕ್ಟ್ ಅಡಿ ಆರೋಪಿತನಿಗೆ ಶಿಕ್ಷೆ ವಿಧಿಸಲಾಗಿದೆ.
ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಶೇಷ ಅಭಿಯೋಜಕರಾದ ಆರ್.ಎಸ್. ಪ್ರಕಾಶ್ ವಾದ ಮಂಡಿಸಿದ್ದರು. ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಎಂ.ಆರ್.ಗೌತಮ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಲೋಕಾಯುಕ್ತ ಡಿವೈಎಸ್‍ಪಿ ಶಿವಕುಮಾರ್ ಆರೋಪಿತನ ವಿರುದ್ಧ ದೋಷಾರೋಪಣ ಪತ್ರ ತಯಾರಿಸಿ 2017ರ ಮಾರ್ಚ್ 24ರಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದರು ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಸಿ.ಆರ್. ರವೀಶ್ ತಿಳಿಸಿದ್ದಾರೆ.