IMG 20220827 WA0007

ನಮ್ಮ ಸಂವಿಧಾನ ಎಲ್ಲ ಸಮಾಜ ವರ್ಗದವರಿಗೂ ಸಮಾನ ಅವಕಾಶ ಕಲ್ಪಿಸಿದೆ…!

DISTRICT NEWS ತುಮಕೂರು

ನಮ್ಮ ಸಂವಿಧಾನ ಎಲ್ಲ ಸಮಾಜ ವರ್ಗದವರಿಗೂ ಸಮಾನ ಅವಕಾಶ ಕಲ್ಪಿಸಿದೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ತುಮಕೂರು(ಕವಾ)ಆ:26: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲ ಸಮಾಜ ವರ್ಗದವರು ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಸಬಲರಾಗಲು ನಮ್ಮ ಸಂವಿಧಾನ ಸಮಾನ ಅವಕಾಶವನ್ನು ಕಲ್ಪಿಸಿಕೊಟ್ಟಿದೆ ಎಂದು ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

IMG 20220827 WA0009


ನಗರದ ಅಮಾನಿಕೆರೆಯ ಗಾಜಿನ ಮನೆಯಲ್ಲಿಂದು ನಡೆದ ‘ತಿಗಳ ಕ್ಷತ್ರಿಯರ ಜಾಗೃತಿ ಸಮಾವೇಶ ಮತ್ತು ಗುರುವಂದನಾ’ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ವರ್ಗದ ಜನರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಏನೆಲ್ಲಾ ಅವಕಾಶವಿದೆ ಎಲ್ಲವನ್ನೂ ಸಹ ಸರ್ಕಾರದ ವತಿಯಿಂದ ಮಾಡಲಾಗುವುದು ಎಂದರಲ್ಲದೆ, ನಮ್ಮ ಶ್ರಮಕ್ಕೆ ನಮ್ಮ ಬೆವರಿಗೆ ತಕ್ಕ ಪ್ರತಿಫಲ ಸಿಕ್ಕಾಗ ಮಾತ್ರ ನಮ್ಮ ಬದುಕಿನಲ್ಲಿ ಮಹತ್ತರ ಬದಲಾವಣೆ ಕಾಣಬಹುದು ಎಂದರು.
21ನೇ ಶತಮಾನವು ಜ್ಞಾನಾಧಾರಿತ ಯುಗವಾಗಿದ್ದು, ಸಮಾಜದ ಕುಲಕಸುಬಾದ ತೋಟಗಾರಿಕೆಯೊಂದಿಗೆ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಿ ಉನ್ನತ ಹುದ್ದೆಗಳಿಗೇರವುದರತ್ತ ಚಿಂತಿಸಬೇಕೆಂದರು.
ಬದುಕಿನಲ್ಲಿ ಬದಲಾವಣೆ ತರಬೇಕಾದರೆ ಬೆವರಿಗೆ ಬೆಲೆ ಸಿಗುವಂತಾಗಬೇಕು. ದುಡಿಮೆಯಿಂದ ಮಾತ್ರ ಆದಾಯಗಳಿಸಲು ಸಾಧ್ಯ ಎಂದ ಅವರು ದುಡ್ಡು ದೊಡ್ಡಪ್ಪನಲ್ಲ, ದುಡಿಮೆಯೇ ದೊಡ್ಡಪ್ಪ. ಇದರಿಂದ ರಾಜ್ಯಾದಾಯ ವೃದ್ಧಿಯಾಗುತ್ತದೆ ಎಂದರು.
ಸಮಾಜದ ಆರಾಧ್ಯದೈವ ಅಗ್ನಿಬನ್ನಿರಾಯ ಸ್ವಾಮಿ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಅಗ್ನಿಬನ್ನಿರಾಯ, ತಿಗಳರ ಇತಿಹಾಸ, ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಹೆಚ್ಚಿನ ಅಧ್ಯಯನ ಕೈಗೊಳ್ಳಲು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ಕೇಂದ್ರ ತೆರೆಯಲಾಗುವುದು ಎಂದರು.

IMG 20220827 WA0010


ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶಿಕ್ಷಣ, ಉದ್ಯೋಗ, ಸಬಲೀಕರಣಕ್ಕಾಗಿ ವಿಶೇಷ ಅನುದಾನವನ್ನು ನೀಡಿ ಅವರ ಅಭ್ಯುದಯಕ್ಕೆ ಸರ್ಕಾರ ಶ್ರಮಿಸುತ್ತಿದೆ ಎಂದರಲ್ಲದೇ ಕೃಷಿಯಾಧರಿತ ಕಸುಬುದಾರರಿಗೆ ವಿಶೇಷ ಘಟಕ ಯೋಜನೆಯಡಿ ಅನುದಾನವನ್ನು ನೀಡಲಾಗುತ್ತಿದ್ದು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ತಿಗಳ ಸಮಾಜದ ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರಗಳಲ್ಲಿರುವ ವಿದ್ಯಾರ್ಥಿ ನಿಲಯಗಳಿಗೆ 4.45 ಕೋಟಿ ಅನುದಾನವನ್ನು ನೀಡಿ ಅವರ ಶೈಕ್ಷಣಿಕ ಸಾಧನೆಗೆ ಸರ್ಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ ಅವರಿಗೆ ರಜತ ಕತ್ತಿಯನ್ನು ನೀಡಿ ಗೌರವಿಸಲಾಯಿತು. ತಿಗಳ ಸಮಾಜದ ಜ್ಞಾನನಂದಪುರಿ ಸ್ವಾಮಿಗಳಿಗೆ ಗುರುವಂದನೆಯನ್ನು ಸಲ್ಲಿಸಲಾಯಿತು. ಜತೆಗೆ ಲೇಖಕ ಸೂರ್ಯಪ್ರಕಾಶ್ ಬರೆದಿರುವ ಅಗ್ನಿಬನ್ನಿರಾಯ ಸ್ವಾಮಿಯ ಕುರಿತ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠಾಧೀಶರಾದ ಡಾ ಸಿದ್ದಲಿಂಗ ಮಹಾಸ್ವಾಮಿಗಳು, ವಿವಿಧ ಮಠಗಳ ಮಠಾಧೀಶರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಆಶಿರ್ವಚನ ನೀಡಿದರು. ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಸಂಸದ ಜಿ.ಎಸ್. ಬಸವರಾಜು, ವಿಧಾನ ಪರಿಷತ್ತು ಸದಸ್ಯರಾದ ಸಿ.ಪಿ ಯೋಗೀಶ್ವರ್, ಪಿ.ಆರ್ ರಮೇಶ್, ಶಾಸಕರಾದ ಜ್ಯೋತಿಗಣೇಶ್, ಡಾ|| ಸಿ ಎಂ ರಾಜೇಶ್ ಗೌಡ, ಮಸಾಲ ಜಯರಾಂ, ಮಾಜಿ ಶಾಸಕರಾದ ನೆ.ಲ ನರೇಂದ್ರಬಾಬು, ಬಿ ಸುರೇಶ್ ಗೌಡ ಎಂ.ಡಿ ಲಕ್ಷ್ಮೀನಾರಾಯಣ, ಮುಖಂಡರಾದ ಮುರುಳಿಧರ್ ಹಾಲಪ್ಪ ಮುಂತಾದವರು ಹಾಜರಿದ್ದರು.