ಭೋವಿ ಅಭಿವೃದ್ಧಿ ನಿಗಮಕ್ಕೆ 175 ಕೋಟಿ ರೂ. ಅನುದಾನ
ತುಮಕೂರು(ಕವಾ)ಆ:28: ಭೋವಿ ಸಮುದಾಯದ ಏಳಿಗೆಗಾಗಿ ಭೋವಿ ಅಭಿವೃದ್ಧಿ ನಿಗಮಕ್ಕೆ 175 ಕೋಟಿ ರೂ.ಗಳ ಅನುದಾನವನ್ನು ಕಲ್ಪಿಸಿ ಯೋಜನೆಯನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಶ್ರೀ ಬಸವರಾಜು ಎಸ್.ಬೊಮ್ಮಾಯಿ ಅವರು ತಿಳಿಸಿದರು.
ನಗರದ ಅಮಾನಿಕೆರೆ ಗಾಜಿನಮನೆಯಲ್ಲಿಂದು ಆಯೋಜಿಸಿದ್ದ ರಾಜ್ಯ ಮಟ್ಟದ ಭೋವಿ ಜನ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭೋವಿ ಸಮಾಜದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವಂತಹ ದಕ್ಷ ಅಧ್ಯಕ್ಷರನ್ನು ನಿಗಮಕ್ಕೆ ಇನ್ನೊಂದು ವಾರದೊಳಗಾಗಿ ನೇಮಕ ಮಾಡಲಾಗುವುದೆಂದರು.
ದೇಶ, ನಾಡು ಕಟ್ಟುವಂತಹ ಕಾಯಕಯೋಗಿಗಳಾದ ಭೋವಿ ಸಮುದಾಯದೊಂದಿಗೆ ಸುಮಾರು 40 ವರ್ಷಗಳ ಒಡನಾಟವಿದೆ. ಶ್ರೀ ನಿರಂಜನ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮೀಜಿಗಳು ನನ್ನ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ. ಅವರ ಮಾತುಗಳಿಂದ ಸಾಮಾಜಿಕ ಬದಲಾವಣೆ ತರುವ ಪ್ರೇರಣೆ ಪಡೆದುಕೊಂಡಿದ್ದೇನೆ ಎಂದರು.
ಭೋವಿ ಸಮುದಾಯದ ಏಳಿಗೆಗಾಗಿ ಶ್ರಮಿಸಿದ ಕುಲಗುರು ಮಹಾನ್ ಸಾಮಾಜಿಕ ಚಿಂತಕ ಶಿವಯೋಗಿ ಶ್ರೀ ಸಿದ್ಧರಾಮೇಶ್ವರರನ್ನು ಸ್ಮರಿಸಿದ ಅವರು, ಸಿದ್ಧರಾಮೇಶ್ವರರು ಪವಾಡ ಪುರುಷರೆನಿಸಿಕೊಂಡಿದ್ದರು. ಅವರಿಗೆ ಅನುಭವ ಮಂಟಪದಲ್ಲಿ ಉನ್ನತ ಸ್ಥಾನವನ್ನು ನೀಡಲಾಗಿತ್ತು. ಬದುಕಿನಲ್ಲಿ ಕಷ್ಟ ಕಾರ್ಪಣ್ಯಗಳು ಸಹಜ. ಸವಾಲುಗಳಿಲ್ಲದ, ದುಡಿಮೆಯಿಲ್ಲದ ಬದುಕು ಬದುಕೇ ಅಲ್ಲ. ಮೈಮುರಿದು, ಬೆವರು ಸುರಿಸಿ ದುಡಿದಾಗ ಮಾತ್ರ ದೇವರಿಗೆ ಮೆಚ್ಚುಗೆಯಾಗುತ್ತದೆ ಎಂದು ಸಮಾಜಕ್ಕೆ ಸಾರಿದ ಶ್ರೀ ಸಿದ್ಧರಾಮೇಶ್ವರರ ಹಾದಿಯಲ್ಲಿ ಸಮುದಾಯ ಸಾಗಬೇಕು ಎಂದು ತಿಳಿಸಿದರು.
ಹಿಂದುಳಿದ ವರ್ಗದ ಭೋವಿ ಸಮಾಜದಲ್ಲಿ ಹುಟ್ಟಿ ತನ್ನ ಜ್ಞಾನದ ಬಲದ ಮೇಲೆ ಪರಿಶ್ರಮದಿಂದ ಉನ್ನತ ಸ್ಥಾನ ಪಡೆದುಕೊಂಡಿರುವ ತಮ್ಮ ಪ್ರಧಾನ ಕಾರ್ಯದರ್ಶಿ ಮಂಜುನಾಥಪ್ರಸಾದ್ ಅವರನ್ನು ಭೋವಿ ಸಮುದಾಯದ ಯುವ ಜನಾಂಗ ಪ್ರೇರಣೆಯಾಗಿ ತೆಗೆದುಕೊಳ್ಳಬೇಕು. ಕಠಿಣ ಪರಿಸ್ಥಿತಿಗಳನ್ನು ನಿಭಾಯಿಸುವ ನೈಪುಣ್ಯತೆ ಇರುವುದರಿಂದ ಮಂಜುನಾಥ ಪ್ರಸಾದ್ ಅವರಿಗೆ ಅಂತಹ ಜವಾಬ್ದಾರಿಯುತ ಸ್ಥಾನವನ್ನು ನೀಡಲಾಗಿದೆ. ಅವರಲ್ಲಿರುವ ಕಾರ್ಯದಕ್ಷತೆಯಿಂದ ಉನ್ನತ ಹುದ್ದೆ ಅವರನ್ನು ಅರಸಿಕೊಂಡು ಬಂದಿದೆ ಎಂದು ತಿಳಿಸಿದರಲ್ಲದೆ, ರಾಜ್ಯದಲ್ಲಿ ಪ್ರತೀ ಕುಟುಂಬವೂ ಸಂತೋಷವಾಗಿ ನೆಮ್ಮದಿಯಾಗಿ ಬದುಕಬೇಕೆಂಬ ನಿಟ್ಟಿನಲ್ಲಿ ಸಾಮಾಜಿಕ ನ್ಯಾಯ ಒದಗಿಸಲು ಸರ್ಕಾರ ಹಲವಾರು ಯೋಜನೆಗಳನ್ನು ಕೈಗೊಂಡಿದೆ. ಎಲ್ಲರೂ ಸ್ವಾಭಿಮಾನದಿಂದ ಬದುಕುವಂತಾಗಬೇಕು. ದೇಶದ ಅಭಿವೃದ್ಧಿಗೆ ತಲಾದಾಯ ಮಾನದಂಡವಾಗಬಾರದು. ಮಾನವನ ಅಭಿವೃದ್ಧಿಯು ದೇಶದ ಅಭಿವೃದ್ಧಿಯ ಮಾನದಂಡವಾಗಬೇಕೆಂದು ಅಭಿಪ್ರಾಯಪಟ್ಟರು.
ರಾಜ್ಯದ ಕಟ್ಟ ಕಡೆಯ ವ್ಯಕ್ತಿಯ ಬದುಕು ಹಸನಾಗಬೇಕು. ಜೀವನದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಈ ನಿಟ್ಟಿನಲ್ಲಿ ನವ ಕರ್ನಾಟಕದಿಂದ ನವ ಭಾರತ ನಿರ್ಮಾಣಕ್ಕೆ ಎಲ್ಲಾ ಸಮುದಾಯಗಳ ಸಹಕಾರವೂ ಸರ್ಕಾರದೊಂದಿಗಿರಬೇಕೆಂದು ಮನವಿ ಮಾಡಿದರು.
ದುಡ್ಡನ್ನು ದುಡಿಮೆಯಾಗಿ ಪರಿವರ್ತಿಸುವ ಶಕ್ತಿ ಭೋವಿ ಜನಾಂಗಕ್ಕಿದೆ. “ ದುಡ್ಡೆ ದೊಡ್ಡಪ್ಪ ಅಲ್ಲ –ದುಡಿಮೆಯೇ ದೊಡ್ಡಪ್ಪ” ಎಂದು ನಂಬಿರುವ ಭೋವಿ ಸಮುದಾಯದವರಿಂದ ರಸ್ತೆ, ದೇವಸ್ಥಾನ, ಕೆರೆ-ಕಟ್ಟೆಗಳ ನಿರ್ಮಾಣವಾಗುತ್ತಿವೆ. ಶಿಲ್ಪಿ ಹುಳಿಯಿಂದ ಕೆತ್ತಿದ ಕಲ್ಲು ದೇವರ ಮೂರ್ತಿಯಾದರೆ, ಭೋವಿ ಜನಾಂಗ ಹುಳಿಯಿಂದ ಹೊಡೆದ ಕಲ್ಲುಗಳಿಂದ ಮೂರ್ತಿಗೆ ನೆರಳು ನೀಡುವ ದೇಗುಲವಾಗುತ್ತದೆ. ಭೋವಿ ಸಮುದಾಯದಲ್ಲಿ ಅಂತರ್ಗತವಾಗಿರುವ ಕೌಶಲ್ಯತೆಯಿಂದ ಉನ್ನತ ವ್ಯಾಸಂಗ ಪಡೆದು ಆಧುನಿಕ ಜ್ಞಾನ ಪಡೆದರೆ ವಿಶ್ವ ಮಟ್ಟದಲ್ಲಿ ಹೆಸರು ಮಾಡಬಹುದು. ಅಕ್ಷರ ಕಲಿತು ಸಂಘಟಿತರಾಗಿ ಅಭಿವೃದ್ಧಿ ಹೊಂದಿ ಇನ್ನೊಬ್ಬರಿಗೆ ಕೆಲಸ ನೀಡುವಂತಾಗಬೇಕು ತಿಳಿಸಿದರು.
ನಮ್ಮ ಸರ್ಕಾರ ಪರಿಶಿಷ್ಟರ ಅಭ್ಯುದಯಕ್ಕಾಗಿ ಕಟಿಬದ್ಧವಾಗಿದೆ. ಪರಿಶಿಷ್ಟರ ಶೈಕ್ಷಣಿಕ ಅಭಿವೃದ್ಧಿಗಾಗಿ ಬಹಳಷ್ಟು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಗಳಿಗಾಗಿ ರಾಜ್ಯದಲ್ಲಿ 100 ಹೊಸ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಲು ಸಂಕಲ್ಪಿಸಲಾಗಿದೆಯಲ್ಲದೆ, ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಗುಲ್ಬರ್ಗಾ ಸೇರಿದಂತೆ 5 ಜಿಲ್ಲೆಗಳಲ್ಲಿ 1000 ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಸಾಮಥ್ರ್ಯ ಇರುವಂತಹ ದೊಡ್ಡ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರ ಉನ್ನತ ಶಿಕ್ಷಣ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ವಿದ್ಯಾರ್ಥಿ ವೇತನವನ್ನು ಹೆಚ್ಚಿಸಲಾಗಿದೆ ಎಂದರಲ್ಲದೆ, ಬಡತನ ರೇಖೆಗಿಂತ ಕೆಳಗಿರುವ ಪರಿಶಿಷ್ಟ ಜಾತಿ/ಪಂಗಡದ ಜನಾಂಗಕ್ಕೆ 75 ಯುನಿಟ್‍ವರೆಗೂ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸುವ ಯೋಜನೆಗೆ ಮುಂದಿನ ತಿಂಗಳು ಚಾಲನೆ ನೀಡಲಾಗುವುದು. ಮಹಿಳೆಯರ ಅಭಿವೃದ್ಧಿಗಾಗಿ ಪರಿಶಿಷ್ಟ ಜಾತಿ/ಪಂಗಡದ ಸ್ತ್ರೀಶಕ್ತಿ ಸಂಘಗಳಿಗೆ 10 ಲಕ್ಷ ರೂ.ಗಳವರೆಗೆ ಬ್ಯಾಂಕ್ ಸಾಲ ಒದಗಿಸುವ, ಸಮುದಾಯ ಭವನ ನಿರ್ಮಾಣ ಮಾಡುವ ಭರವಸೆ ನೀಡಿದರು.
ಬಾಗಲಕೋಟೆ, ಚಿತ್ರದುರ್ಗ ಭೋವಿ ಗುರುಪೀಠದ ಶ್ರೀಶ್ರೀಶ್ರೀ ನಿರಂಜನ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ತಮ್ಮ ಸಮುದಾಯದ ಏಳಿಗೆಗಾಗಿ ಶ್ರಮಿಸಿದ ಕುಲಗುರು ಶ್ರೀ ಶಿವಯೋಗಿ ಸಿದ್ಧರಾಮೇಶ್ವರರು, ದಿವಂಗತ ಮಂಜರಿ ಹನುಮಂತಪ್ಪ, ದಿ|| ಜಿ.ವೈ.ಕೃಷ್ಣನ್, ದಿ|| ಸಿ.ಮುನಿಸ್ವಾಮಿ, ಮತ್ತಿತರ ಮಹನೀಯರನ್ನು ಸ್ಮರಿಸುತ್ತಾ, ತೋಳ್ಬಲವನ್ನು ನಂಬಿ ಕಲ್ಲು ಹೊಡೆದು ಅತ್ಯಂತ ಸ್ವಾಭಿಮಾನದಿಂದ ಕಾಯಕ ಯೋಗಿಗಳಾಗಿ ಬದುಕುತ್ತಿರುವ ಭೋವಿ ಸಮಾಜದವರು ಕಾಯಕ ಯೋಗಿಗಳಷ್ಟೇ ಅಲ್ಲದೆ ಅಕ್ಷರದ ವಾರಸುದಾರರಾಗಬೇಕು. ಅಕ್ಷರ ಕ್ರಾಂತಿಯಿಂದ ಸಮುದಾಯಗಳು ಇತಿಹಾಸ ಸೃಷ್ಟಿ ಮಾಡುತ್ತವೆ. ಅಕ್ಷರ ಜ್ಞಾನದಿಂದ ಸಮಾಜದ ಉನ್ನತ ಸ್ಥಾನಕ್ಕೆ ತಲುಪಬಹುದೆಂಬುದಕ್ಕೆ ಮಂಜುನಾಥ ಪ್ರಸಾದ್ ಅವರು ಉತ್ತಮ ನಿದರ್ಶನ. ಈ ನಿಟ್ಟಿನಲ್ಲಿ ಭೋವಿ ಸಮುದಾಯದವರು ವಿದ್ಯಾವಂತರಾಗಬೇಕು ಎಂದು ಕರೆ ನೀಡಿದರಲ್ಲದೆ, ವಿಶ್ವವಿದ್ಯಾಲಯದಲ್ಲಿ ಶ್ರೀ ಸಿದ್ಧರಾಮೇಶ್ವರರ ಅಧ್ಯಯನ ಪೀಠ ಹಾಗೂ ಸಂಶೋಧನ ಕೇಂದ್ರ ಸ್ಥಾಪನೆ, ನಿಗಮಕ್ಕೆ ಅಧ್ಯಕ್ಷರ ನೇಮಕ, ಪರಿಶಿಷ್ಟ ಜಾತಿಗೆ ಮೀಸಲಿರುವ ಅನುದಾನದಲ್ಲಿ ಶೇ. 50ರಷ್ಟು ಭೋವಿ ಸಮಾಜದ ಅಭಿವೃದ್ಧಿಗೆ ಅನುದಾನ ಕಲ್ಪಿಸುವ, ಕೆಪಿಎಸ್‍ಸಿ ಸದಸ್ಯ ಸ್ಥಾನ ಹಾಗೂ ಯಾವುದೇ ವಿಶ್ವವಿದ್ಯಾಲಯಕ್ಕೆ ಕುಲಪತಿಯ ಸ್ಥಾನಕ್ಕೆ ಸಮುದಾಯದವರನ್ನು ನೇಮಕ ಮಾಡುವ, ಭೋವಿ ಭವನ ನಿರ್ಮಿಸುವ ಬಗ್ಗೆ ಕ್ರಮವಹಿಸಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಸಮಾವೇಶದಲ್ಲಿ ಭೋವಿ ರತ್ನ ಪ್ರಶಸ್ತಿಯನ್ನು ಸ್ವೀಕರಿಸಿ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಮಾತನಾಡುತ್ತಾ, ರಾಜ್ಯದ ಜನರು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಮುಂದೆ ಬರಬೇಕೆಂಬ ದೃಷ್ಟಿಯಿಂದ ಮುಖ್ಯಮಂತ್ರಿಗಳು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಚಿತ್ರದುರ್ಗದ ಭೋವಿ ಮಠಕ್ಕೆ 21 ಕೋಟಿ ರೂ.ಗಳ ಅನುದಾನಕ್ಕೆ ಅನುಮೋದನೆ ನೀಡಿದ್ದಾರೆ. ಸರ್ಕಾರದ ಕರ್ತವ್ಯ ನಿರ್ವಹಿಸುವುದು ಅಧಿಕಾರಿಗಳ ಹೊಣೆಗಾರಿಕೆಯಾಗಿರುತ್ತದೆ. ಇಂತಹ ಜವಾಬ್ದಾರಿಯನ್ನು ನನ್ನ ಮೇಲೆ ವಹಿಸಿರುವುದೇ ನನಗೆ ಪ್ರಶಸ್ತಿ ಲಭಿಸಿದಂತಾಗಿದೆ ಎಂದು ತಿಳಿಸಿದರು.
ಚಿತ್ರದುರ್ಗ ಮಾಜಿ ಸಂಸದ ಜನಾರ್ಧನಸ್ವಾಮಿ, ರವಿ ಮಾಕಳಿ, ನೆಲಮಂಗಲ ಮಾಜಿ ಶಾಸಕ ನಾಗರಾಜು ಸೇರಿದಂತೆ ಸಮುದಾಯದ ಮುಖಂಡರು ಮಾತನಾಡಿದರು.
ರಾಷ್ಟ್ರೀಯ ಶ್ರೀ ಸಿದ್ಧರಾಮೇಶ್ವರ ಓಡ್(ಭೋವಿ) ಯುವ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಕೊತ್ತೂರು ಹನುಮಂತರಾಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಾಧ್ಯಕ್ಷ ಕೆ.ಆರ್. ನಾಗೇಶ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸಂಸದ ಜಿ.ಎಸ್.ಬಸವರಾಜು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಶಾಸಕ ಜಿ.ಬಿ. ಜ್ಯೋತಿ ಗಣೇಶ್, ತುಮಕೂರು ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ಓಂಕಾರ್, ಪಾಲಿಕೆ ಸದಸ್ಯ ಮಂಜುನಾಥ್, ಮಂಗಮ್ಮ ಮುನಿಸ್ವಾಮಿ, ಸಮುದಾಯದ ಪದಾಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.