ಜೆಡಿಎಸ್ ಗೆ ಬೆಂಬಲ್ ನೀಡಿ: ಹೆಚ್.ಡಿ.ಕುಮಾರಸ್ವಾಮಿ
ವೈ ಎನ್ ಹೊಸಕೋಟೆ : ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳ ಆಡಳಿತ ನೋಡಿದ್ದೀರಾ ಈ ಬಾರಿ ಪ್ರಾದೇಶಿಕ ಪಕ್ಷವಾದ ಜಾತ್ಯತೀತ ಜನತಾದಳಕ್ಕೆ ಬೆಂಬಲಿಸಿ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿಳಿಸಿದರು.
ಗ್ರಾಮಕ್ಕೆ ಭಾನುವಾರ ಸಂಜೆ ಆಗಮಿಸಿ ಪಂಚರತ್ನ ರಥಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ತಾವು ಸಂಪೂರ್ಣ ಬೆಂಬಲ ನೀಡಿದಲ್ಲಿ ಸ್ತ್ರೀ ಶಕ್ತಿ ಸಂಘಗಳ, ನೇಕಾರರ ಮತ್ತು ರೈತರ ಸಾಲ ಮನ್ನಾ ಮಾಡಲಾಗುವುದು. 65 ವರ್ಷ ತುಂಬಿದ ವೃದ್ಧರಿಗೆ ತಿಂಗಳ ಮಾಶಾಸನ 5000 ಹೆಚ್ಚಳ ಮಾಡಲಾಗುವುದು ಎಂದು ಹೇಳಿದರು.
ಪ್ರತಿ ಗ್ರಾಮಪಂಚಾಯಿತಿಯಲ್ಲಿ 30 ಜನ ಸಿಬ್ಬಂದಿಯುಳ್ಳ 30 ಹಾಸಿಗೆಯ ಸುಸಜ್ಜಿತ ಆಸ್ಪತ್ರೆ ಹಾಗೂ 3 ತಜ್ಞವೈದ್ಯ ನೇಮಕ, ಉತ್ತಮ ಗುಣಮಟ್ಟದ ಶಾಲೆ, ಬಿಪಿಎಲ್ ಕಾರ್ಡ್ ದಾರರಿಗೆ ವಿಮೆ, ಉದ್ಯೋಗಗುಳೆ ತಪ್ಪಿಸಲು ಉದ್ಯೋಗಸೃಷ್ಟಿ ಇನ್ನಿತರೆ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು.
ಗ್ರಾಮವು ಪ್ರಗತಿ ಪಥದಲ್ಲಿದ್ದು, ಗ್ರಾಮಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೆ ಏರಿಸಿಲು ಮನವಿ ಮಾಡಿದಾಗ ಅಧಿಕಾರ ಹಿಡಿದ ತಕ್ಷಣವೇ ಈ ಕಾರ್ಯ ಮಾಡಲಾಗುವುದು ಎಂದರು.
ಗ್ರಾಮದಲ್ಲಿನ ಸರ್ಕಾರಿ ಆಸ್ಪತ್ರೆ ದೂರವಿದ್ದು, ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಸ್ಥಳೀಯ ಶಾಸಕರು ಜೆಡಿಎಸ್ ಪಕ್ಷದಿಂದ ಗೆದ್ದರೆ ಶೀಘ್ರವೇ ಸರ್ಕಾರಿ ಆಸ್ಪತ್ರೆಯನ್ನು ಹಳೆಯ ಆಸ್ಪತ್ರೆ ಕಟ್ಟಡದಲ್ಲಿ ಪ್ರಾರಂಭಿಸಿ ಉನ್ನತೀಕರಿಸಲಾಗುವುದು ಎಂದರು.
ನೇಕಾರರು ಶೂನ್ಯ ಬಡ್ಡಿಧರದಲ್ಲಿ ಸಾಲಸೌಲಭ್ಯ, ಸಾಲ ಮನ್ನಾ, ವಸತಿ ಸೌಕರ್ಯಕ್ಕೆ 5 ಲಕ್ಷ, ಕಚ್ಚಾನೂಲು ಖರೀದಿಗೆ 50% ಸಹಾಯಧನ, ಮಗ್ಗ ಖರೀದಿಗೆ 75% ಸಹಾಯಧನ, ಬ್ಯಾಂಕ್ ಸಾಲಕ್ಕೆ 50% ರಿಯಾಯಿತಿ, ವಿದ್ಯುತ್ ಮಗ್ಗಗಳಿಗೆ ಉಚಿತ ವಿದ್ಯುತ್ ಇನ್ನಿತರೆ ಬೇಡಿಕೆಗಳ ಪಟ್ಟಿಯನ್ನು ನೀಡಿದಾಗ ಇವುಗಳ ಬಗ್ಗೆ ಚರ್ಚಿಸಿ ಪ್ರನಾಳಿಕೆಯಕ್ಕೆ ಸೇರಿಸಿ ಸದನದಲ್ಲಿ ಚರ್ಚಿಸಿ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಜೆಡಿಎಸ್ ಮಾಜಿ ಶಾಸಕರಾದ ತಿಮ್ಮರಾಯಪ್ಪ ಮಾತನಾಡಿ ನಿಮ್ಮೆಲ್ಲರ ಆಸೆಯಂತೆ ಜೆಡಿಎಸ್ ಪಕ್ಷದಿಂದ ಇಲ್ಲಿ ಸ್ಪರ್ಧಿಸಲು ನನಗೆ ಈ ಭಾರಿ ಅವಕಾಶ ದೊರೆತಿದೆ. ನಮ್ಮ ಪಕ್ಷ ಗೆದ್ದು, ಕುಮಾರಣ್ಣ ಮುಖ್ಯಮಂತ್ರಿಯಾದರೆ ತಾಲ್ಲೂಕಿನ ಎಲ್ಲಾ ಸಮಸ್ಯೆಗಳ ನಿವಾರಣೆಗೆ ಒತ್ತು ನೀಡಲಾಗುವುದು ಎಂದರು.
ಗ್ರಾಮಕ್ಕೆ ಆಗಮಿಸಿದ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಶೇಂಗಾದ ಹಾರ ಹಾಕುವ ಮೂಲಕ ಸ್ವಾಗತಿಸಲಾಯಿತು.
ವರದಿ: ರಾಮಚಂದ್ರ- YNH