IMG 20231125 WA0010

Karnataka: ಬೆಂಗಳೂರು ಟೆಕ್ ಶೃಂಗಸಭೆ 2023….!

BUSINESS

ಬೆಂಗಳೂರು ಟೆಕ್ ಶೃಂಗಸಭೆ 2023: “ಮಿತಿಗಳನ್ನು ಮೀರಿ ಮುನ್ನಡೆಯುವುದು”- ಭಾರತದಿಂದ ನಾವೀನ್ಯ, ಜಗತ್ತಿಗೆ ಚೈತನ್


ಸ್ಫೂರ್ತಿದಾಯಕ ಮಾತುಕತೆಗಳು ಮತ್ತು ತಜ್ಞ ಭಾಷಣಕಾರರು: ತಾಂತ್ರಿಕ ಸಂಭಾಷಣೆಗಳಿಗೆ ಉತ್ತೇಜನ ನೀಡುವ, ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದ ಸರಣಿಗಳು


• ದೊಡ್ಡ ಮತ್ತು ಅತ್ಯುತ್ತಮ ಟೆಕ್ ಪ್ರದರ್ಶನವನ್ನು ಬಿಟಿಎಸ್ 2023 ಆಯೋಜಿಸಿದೆ


• ಚಂದ್ರಯಾನ 3 ಇಸ್ರೋ ಇಂಡಸ್ಟ್ರಿ ಪೆವಿಲಿಯನ್: ಬಾಹ್ಯಾಕಾಶ ಸಂಶೋಧನೆಗೆ ಹೊಸ ಪರಿಧಿಯನ್ನು ಅನಾವರಣಗೊಳಿಸಲಿದೆ ಇಸ್ರೋ


• ಗ್ರೀನ್ ಬಿಟಿಎಸ್ ಇನಿಶಿಯೇಟಿವ್: ತಾಂತ್ರಿಕ ಕ್ಷೇತ್ರದಲ್ಲಿ ಪರಿಸರ ಜವಾಬ್ದಾರಿಯತ್ತ ದಿಟ್ಟ ಹೆಜ್ಜೆ

IMG 20231125 WA0011

ಬೆಂಗಳೂರು, 25 ನವೆಂಬರ್, 2023: ಐಟಿ ಇಲಾಖೆ, ಬಿಟಿ, ಕರ್ನಾಟಕ ಸರ್ಕಾರ ಮತ್ತು ಭಾರತದ ಸಾಫ್ಟ್‍ವೇರ್ ಟೆಕ್ನಾಲಜಿ ಪಾರ್ಕ್‍ಗಳು ಆಯೋಜಿಸಿರುವ ಬೆಂಗಳೂರು ಟೆಕ್ ಶೃಂಗಸಭೆ 2023 (ಬಿಟಿಎಸ್ 2023), ಜಾಗತಿಕ ನಾವೀನ್ಯದ ನಾಡಿಯು ಬಲವಾಗಿ ಮಿಡಿಯುವ ಮತ್ತು ಗಡಿಗಳನ್ನು ವಿಸ್ತರಿಸುವ ಜೊತೆಗೆ ಅವುಗಳನ್ನು ಮುರಿಯುವ ತಾಣವಾಗಿದೆ. 30ಕ್ಕೂ ಅಧಿಕ ದೇಶಗಳ ತಾಂತ್ರಿಕ ನಾಯಕರು, ಸ್ಟಾರ್ಟ್‍ಅಪ್‍ಗಳು, ಹೂಡಿಕೆದಾರರು ಮತ್ತು ಸಂಶೋಧನಾ ಪ್ರಯೋಗಾಲಯಗಳ ಕ್ರಿಯಾತ್ಮಕ ಏಕೀಕರಣವಾಗಿರುವ ಈ ಸಮ್ಮೇಳನದಲ್ಲಿ ‘ಮಿತಿಗಳನ್ನು ಮೀರಿ ಮುನ್ನಡೆಯುವುದು’ ಈ ವರ್ಷದ ಥೀಮ್ ಆಗಿದೆ.

ಕರ್ನಾಟಕದ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು, ಬಹುನಿರೀಕ್ಷಿತ ತಂತ್ರಜ್ಞಾನ ಶೃಂಗಸಭೆಯ ಬಗ್ಗೆ ಮಹತ್ವದ ವಿಷಯಗಳನ್ನು ಮಾಧ್ಯಮಗಳೊಂದಿಗೆ ಶನಿವಾರ ಹಂಚಿಕೊಂಡರು.

26ನೇ ಬೆಂಗಳೂರು ಟೆಕ್ ಶೃಂಗಸಭೆಯನ್ನು ಕರ್ನಾಟಕದ ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ. ಪಾಟೀಲ್; ವಿಜ್ಞಾನ ಮತ್ತು ತಂತ್ರಜ್ಞಾನ, ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಐಎಎಸ್; ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ಎಸ್&ಟಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ. ಏಕರೂಪ್ ಕೌರ್, ಐಎಎಸ್, ಎಸ್‍ಟಿಪಿಐ, ಬೆಂಗಳೂರು ಇದರ ನಿರ್ದೇಶಕ ಶೈಲೇಂದ್ರ ತ್ಯಾಗಿ, ಮತ್ತು ಕರ್ನಾಟಕ ಇನ್ನೋವೇಶನ್ ಅಂಡ್ ಟೆಕ್ನಾಲಜಿ ಸೊಸೈಟಿ (ಕಿಟ್ಸ್) ವ್ಯವಸ್ಥಾಪಕ ನಿರ್ದೇಶಕ ದರ್ಶನ್ ಎಚ್.ವಿ., ಐಎಎಸ್ ಅವರ ಘನ ಉಪಸ್ಥಿತಿಯಲ್ಲಿ ಶೃಂಗಸಭೆಗೆ ಚಾಲನೆ ದೊರೆಯಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿವರಿಸಿದರು.

ಕಝಾಕಿಸ್ತಾನದ ಡಿಜಿಟಲ್ ಅಭಿವೃದ್ಧಿ, ನಾವೀನ್ಯ ಮತ್ತು ಏರೋಸ್ಪೇಸ್ ಉದ್ಯಮದ ಸಚಿವ ಬಾಗ್ದತ್ ಮುಸ್ಸಿನ್, ಎಎಂಡಿ ಸಂಸ್ಥೆಯ ಇವಿಪಿ ಮತ್ತು ಸಿಟಿಒ ಮಾಕ್ರ್ಪೇಪರ್ ಮಾಸ್ಟರ್ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿರುವರು. ಫಿನ್‍ಲ್ಯಾಂಡ್ ದೇಶದ ವಿಜ್ಞಾನ ಮತ್ತು ಸಂಸ್ಕೃತಿ ಸಚಿವೆ ಸೀರಿ ಮುಲ್ತಾ ಹಾಗೂ ಜರ್ಮನಿಯ ಡಿಜಿಟಲ್ ವ್ಯವಹಾರಗಳು ಮತ್ತು ಸಾರಿಗೆ ಸಚಿವ ವೋಲ್ಕರ್ ವಿಸ್ಸಿಂಗ್ ಅವರು ಸಂದೇಶಗಳನ್ನು ದಾಖಲಿಸಿ ಕಳುಹಿಸಲಿದ್ದಾರೆ.

ವಿಪ್ರೋ ಲಿಮಿಟೆಡ್ ಕಾರ್ಯನಿರ್ವಾಹಕ ಅಧ್ಯಕ್ಷ ರಿಷದ್ ಪ್ರೇಮ್‍ಜಿ ಸಹಿತ ಭಾರತೀಯ ಉದ್ಯಮದ ಪ್ರಮುಖ ವ್ಯಕ್ತಿಗಳಿಗೆ ಈ ಶೃಂಗಸಭೆಯು ಆತಿಥ್ಯ ವಹಿಸಲಿದೆ. ಬಯೋಟೆಕ್ನಾಲಜಿ ಕುರಿತ ವಿಷನ್ ಗ್ರೂಪ್ ಅಧ್ಯಕ್ಷರು, ಕರ್ನಾಟಕ ಸರ್ಕಾರ ಮತ್ತು ಬಯೋಕಾನ್ ಲಿಮಿಟೆಡ್ ಕಾರ್ಯನಿರ್ವಾಹಕ ಅಧ್ಯಕ್ಷರಾದ ಡಾ. ಕಿರಣ್ ಮಜುಂದಾರ್ ಶಾ; ಕರ್ನಾಟಕ ಸರ್ಕಾರದ ಐಟಿ ವಿಷನ್ ಗ್ರೂಪ್ ಅಧ್ಯಕ್ಷ ಮತ್ತು ಇನ್ಫೋಸಿಸ್‍ನ ಸಹ-ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್, ಕರ್ನಾಟಕ ಸರ್ಕಾರದ ಸ್ಟಾರ್ಟ್‍ಅಪ್‍ಗಳ ಕುರಿತ ವಿಷನ್ ಗ್ರೂಪ್ ಅಧ್ಯಕ್ಷ ಮತ್ತು ಎಸಿಇಎಲ್ ಪಾಟ್ರ್ನರ್ಸ್ ಇಂಡಿಯಾದ ಸಂಸ್ಥಾಪಕ ಪಾಲುದಾರ ಪ್ರಶಾಂತ್ ಪ್ರಕಾಶ್; ಇನ್ವೆಸ್ಟ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಒ ನಿವೃತಿ ರೈ; ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಅಧ್ಯಕ್ಷ ಬಿ.ವಿ. ನಾಯ್ಡು; ಮತ್ತು ಭಾರತದ ಸಾಫ್ಟ್‍ವೇರ್ ಟೆಕ್ನಾಲಜಿ ಪಾಕ್ರ್ಸ್ (ಎಸ್‍ಟಿಪಿಐ) ಮಹಾನಿರ್ದೇಶಕ ಅರವಿಂದ್ ಕುಮಾರ್ ಭಾಗವಹಿಸಲಿದ್ದಾರೆ.

ಬೆಂಗಳೂರು ಟೆಕ್ ಶೃಂಗಸಭೆ 2023 ಐಟಿ ಮತ್ತು ಎಲೆಕ್ಟ್ರಾನಿಕ್ಸ್, ಡೀಪ್‍ಟೆಕ್, ಸ್ಟಾರ್ಟ್-ಅಪ್ ಗಳು ಮತ್ತು ಬಯೋಟೆಕ್, ಅಂತಾರಾಷ್ಟ್ರೀಯ ಪ್ರದರ್ಶನ, ಜಾಗತಿಕ ನಾವೀನ್ಯ ಒಕ್ಕೂಟ, ಭಾರತ-ಯುಎಸ್‍ಎ ಟೆಕ್ ಸಮಾವೇಶ, ಆರ್&ಡಿ – ಲ್ಯಾಬ್2ಮಾರ್ಕೆಟ್, ಬಿ2ಬಿ ಸಭೆಗಳು, ಎಸ್‍ಟಿಪಿಐ ಐಟಿ ರಫ್ತು ಪ್ರಶಸ್ತಿಗಳು, ಸ್ಮಾರ್ಟ್ ಬಯೋ ಪ್ರಶಸ್ತಿಗಳು, ವಿಸಿ ಪ್ರಶಸ್ತಿಗಳು, ಎಟಿಎಫ್ ಪ್ರಶಸ್ತಿಗಳು, ಗ್ರಾಮೀಣ ಐಟಿ ರಸಪ್ರಶ್ನೆ, ಜೈವಿಕ ರಸಪ್ರಶ್ನೆ ಮತ್ತು ಜೈವಿಕ ಪೋಸ್ಟರ್‍ಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ.

`ಲೆಜೆಂಡ್, ಲೆಗಸಿ & ಲೀಡರ್‍ಶಿಪ್’ ಶೀರ್ಷಿಕೆಯಲ್ಲಿ ವಿಶೇಷ ಫೈರ್ ಸೈಡ್ ಚಾಟ್, ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರು, ಜೆರೋಧದ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರೊಂದಿಗೆ ನಡೆಸಲಿರುವ ಸಂವಾದ ತಾಂತ್ರಿಕ ಕ್ಷೇತ್ರದ ವಿಸ್ತಾರ, ಹಿನ್ನೆಲೆ ಮತ್ತು ನಾಯಕತ್ವ ತತ್ವಗಳ ಬಗ್ಗೆ ಆಳವಾದ ಒಳನೋಟಗಳನ್ನು ಒದಗಿಸುವ ಭರವಸೆ ನೀಡಿದೆ. ಭಾರತ ಸರ್ಕಾರದ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹಾಗೂ ಎಎಂಡಿ ಇಂಡಿಯಾದ ಸಿಲಿಕಾನ್ ಡಿಸೈನ್ ಎಂಜಿನಿಯರಿಂಗ್ ವಿಭಾಗದ ದೇಶೀಯ ಮುಖ್ಯಸ್ಥೆ ಮತ್ತು ಹಿರಿಯ ಉಪಾಧ್ಯಕ್ಷೆ ಜಯಾ ಜಗದೀಶ್ ಅವರು ಪಾಲ್ಗೊಳ್ಳುವ ಮತ್ತೊಂದು ಆಸಕ್ತಿದಾಯಕ ಫೈರ್ ಸೈಡ್ ಚಾಟ್ ಅನ್ನು ಬಿಟಿಎಸ್ 2023 ಹೊಂದಿದ್ದು, ಒಳನೋಟವುಳ್ಳ ಸಂಭಾಷಣೆಯಲ್ಲಿ, ಭಾರತದಲ್ಲಿ ಸರ್ಕಾರದ ಉಪಕ್ರಮಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಕುರಿತು ವಿಶಿಷ್ಟ ದೃಷ್ಟಿಕೋನವನ್ನು ನೀಡಲಿದೆ.

ಬಿಟಿಎಸ್ ಶೃಂಗಸಭೆಯ ಗಣ್ಯರು ಮತ್ತು ವಾಗ್ಮಿಗಳ ಪಟ್ಟಿಯಲ್ಲಿ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್‍ಐಆರ್) ಮಾಜಿ ಮಹಾನಿರ್ದೇಶಕ ಡಾ. ಆರ್.ಎ. ಮಾಶೇಳ್ಕರ್; ನೊಬೆಲ್ ಪ್ರಶಸ್ತಿ ವಿಜೇತ ಅಮೆರಿಕದ ಜೀವಶಾಸ್ತ್ರಜ್ಞ ಡಾ. ಎಚ್. ರಾಬರ್ಟ್ ಹಾರ್ವಿಟ್ಜ್ ಸೇರಿದ್ದಾರೆ.

ಐಟಿಇ & ಡೀಪ್‍ಟೆಕ್ ಟ್ರ್ಯಾಕ್ ಜಿಸಿಸಿಗಳು, ಎಐ, ಸುಸ್ಥಿರತೆಗಾಗಿ ತಂತ್ರಜ್ಞಾನ, ಭವಿಷ್ಯದ ಚಲನಶೀಲತೆ, ಸೈಬರ್ ಭದ್ರತೆ ಮತ್ತು ಸೈಬರ್ ಸಮರ, 5ಜಿ ಅಳವಡಿಕೆ ಮತ್ತು ಭವಿಷ್ಯದ ನಿಸ್ತಂತು ತಂತ್ರಜ್ಞಾನಗಳು, ಎಲೆಕ್ಟ್ರಾನಿಕ್ಸ್ ಮತ್ತು ಸೆಮಿ ಕಂಡಕ್ಟರ್‍ಗಳು, ಸ್ಪೇಸ್‍ಟೆಕ್, ವೆಬ್ 3.0, ಅನಿಮೇಷನ್, ಗೇಮಿಂಗ್ ಮತ್ತು ವಿಎಫ್‍ಎಕ್ಸ್‍ನಂತಹ ಕೆಲವು ಆಸಕ್ತಿದಾಯಕ ಗೋಷ್ಠಿಗಳಿರುತ್ತವೆ.

ಬಯೋಟೆಕ್ ಟ್ರ್ಯಾಕ್ ಪಳೆಯುಳಿಕೆ ಇಂಗಾಲದಿಂದ ಮುಕ್ತವಾದ ಭವಿಷ್ಯಕ್ಕಾಗಿ ಜೈವಿಕ ತಂತ್ರಜ್ಞಾನ, ಸಂಶ್ಲೇಷಿತ ಜೀವಶಾಸ್ತ್ರ, ಸುಸ್ಥಿರ ಆಹಾರ ಮತ್ತು ಕೃಷಿ-ವ್ಯವಸ್ಥೆಗಳು, ಅನಾರೋಗ್ಯ ಮತ್ತು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವುದು, ಬಯೋಟೆಕ್‍ನಲ್ಲಿ ಹೂಡಿಕೆ, ಕೌಶಲ್ಯಾಭಿವೃದ್ಧಿ, ನೀತಿ ಮತ್ತು ನಿಯಂತ್ರಕಗಳು ಮತ್ತು ಭವಿಷ್ಯಕ್ಕಾಗಿ ಜೈವಿಕ ತಂತ್ರಜ್ಞಾನದಂತಹ ಕ್ಷೇತ್ರಗಳ ಮೇಲೆ ಗಮನ ಹರಿಸುವ ಗೋಷ್ಠಿಗಳನ್ನು ಒಳಗೊಂಡಿರುತ್ತದೆ.

IMG 20231125 WA0013

ಸ್ಟಾರ್ಟ್-ಅಪ್ ಟ್ರ್ಯಾಕ್ ಡಿಜಿಟಲ್ ಪಬ್ಲಿಕ್ ಗೂಡ್ಸ್, ಐಡಿಯಾ ಟು ಐಪಿಒ, ಎಮರ್ಜಿಂಗ್ ಟೆಕ್, ಫಿನ್‍ಟೆಕ್, ಅಗ್ರಿಟೆಕ್ 4.0, ಭಾರತ್ ಆಪರ್ಚುನಿಟಿ ಮತ್ತು ಸ್ಟಾರ್ಟ್ ಅಪ್ ಇಂಡಿಯಾ ಮುಂತಾದ ಗೋಷ್ಠಿಗಳನ್ನು ಒಳಗೊಂಡಿರುತ್ತದೆ. ಗ್ಲೋಬಲ್ ಇನ್ನೋವೇಶನ್ ಅಲೈಯನ್ಸ್ (ಜಿಐಎ) ಪಾಲುದಾರ ರಾಷ್ಟ್ರಗಳ ದೊಡ್ಡ ನಿಯೋಗಗಳು ಭಾಗವಹಿಸುವ ನಿರೀಕ್ಷೆಯಿದೆ. ಸಮ್ಮೇಳನದಲ್ಲಿ ಜಿಐಎ ಟ್ರ್ಯಾಕ್ ಆಸ್ಟ್ರೇಲಿಯಾ, ಫಿನ್‍ಲ್ಯಾಂಡ್, ನೆದರ್‍ಲ್ಯಾಂಡ್ಸ್, ದಕ್ಷಿಣ ಕೊರಿಯಾ, ಡೆನ್ಮಾರ್ಕ್, ಸ್ವೀಡನ್, ಯುನೈಟೆಡ್ ಕಿಂಗ್ಡಮ್, ಫ್ರಾನ್ಸ್, ಇಸ್ರೇಲ್, ಪೋಲೆಂಡ್, ಆಸ್ಟ್ರಿಯಾ, ಜರ್ಮನಿ ಮತ್ತು ಎನ್‍ಆರ್‍ಡಬ್ಲ್ಯು, ಜಪಾನ್, ಸ್ವಿಟ್ಜರ್‍ಲ್ಯಾಂಡ್, ಲಿಥುವೇನಿಯಾ, ಇಯು ಮುಂತಾದ ಪಾಲುದಾರ ರಾಷ್ಟ್ರಗಳು ಮತ್ತು ಪ್ರದೇಶಗಳಿಗೆ ಸಂಬಂಧಿಸಿದ 17 ಆಕರ್ಷಕ ಗೋಷ್ಠಿಗಳು ನಡೆಯಲಿವೆ. ಬರ್ಲಿನ್‍ನ ಆರ್ಥಿಕ ವ್ಯವಹಾರಗಳು, ಇಂಧನ ಮತ್ತು ಸಾರ್ವಜನಿಕ ಉದ್ಯಮಗಳ ಸೆನೆಟ್ ವಿಭಾಗದ ಸೆನೆಟರ್ ಫ್ರಾಂಜಿಸ್ಕಾ ಗಿಫಿ; ಜರ್ಮನಿಯ ಡಸೆಲ್ಡಾರ್ಫ್ ಮೇಯರ್ ಡಾ. ಸ್ಟೀಫನ್ ಕೆಲ್ಲರ್; ಕೆನಡಾದ ಒಂಟಾರಿಯೊದ ಆರ್ಥಿಕ, ಉದ್ಯೋಗ ಸೃಷ್ಟಿ ಮತ್ತು ವ್ಯಾಪಾರ ಸಚಿವ ವಿಕ್ಟರ್ ಫೆಡೆಲಿ ಅವರು ಜಿಐಎ ಅಧಿವೇಶನಗಳಲ್ಲಿ ಭಾಷಣ ಮಾಡಲಿದ್ದಾರೆ. ಸಚಿವರ ನೇತೃತ್ವದ ಮುಂದಿನ ನಿಯೋಗಗಳನ್ನು ಸೂಕ್ತ ಸಮಯದಲ್ಲಿ ಘೋಷಿಸಲಾಗುವುದು. ವೈವಿಧ್ಯಮಯ ಟೆಕ್ ರಾಷ್ಟ್ರಗಳು ಪ್ರದರ್ಶನದಲ್ಲಿ ತಮ್ಮ ತಾಂತ್ರಿಕ ಪರಾಕ್ರಮವನ್ನು ಪ್ರದರ್ಶಿಸುತ್ತವೆ. ಇದು ಶೃಂಗಸಭೆಯ ರೋಮಾಂಚಕ ಅಂತರಾಷ್ಟ್ರೀಯ ಉಪಸ್ಥಿತಿಯನ್ನು ವೃದ್ಧಿಸುತ್ತದೆ.

ಭಾರತ-ಯುಎಸ್‍ಎ ಟೆಕ್ ಸಮಾವೇಶದ ಮೂರನೇ ಆವೃತ್ತಿಯು ಬಿಟಿಎಸ್ 2023ರ ಮಹತ್ವದ ಭಾಗವಾಗಲಿದೆ ಮತ್ತು ಉಭಯ ರಾಷ್ಟ್ರಗಳ ನಡುವೆ ಅರ್ಥಪೂರ್ಣ ಸಂವಾದವನ್ನು ನಡೆಸುವ ಗುರಿಯನ್ನು ಹೊಂದಿದೆ. ವಾಣಿಜ್ಯ ಬಾಹ್ಯಾಕಾಶ, ಇ-ಕಾಮರ್ಸ್, ಸಪ್ಲೈ ಚೈನ್, ಮತ್ತು ಲಾಜಿಸ್ಟಿಕ್ಸ್, ಹೆಲ್ತ್ ಟೆಕ್, ಎವಿಜಿಸಿ ಇತ್ಯಾದಿಗಳ ಜೊತೆಗೆ ಭವಿಷ್ಯದ ಆವಿಷ್ಕಾರಗಳು, ಚಿಂತನೆಗಳ ವಿನಿಮಯ ಮತ್ತು ಸಹಯೋಗವನ್ನು ಸಮಾವೇಶವು ಸಾಧ್ಯವಾಗಿಸಲಿದೆ. ಈ ಸಮಾವೇಶವನ್ನು ಅಮೆರಿಕದ ಯುಎಸ್ ಕಾನ್ಸುಲ್ ಜನರಲ್ ಕ್ರಿಸ್ಟೋಫರ್ ಹಾಡ್ಜಸ್, ಯುಎಸ್-ಇಂಡಿಯಾ ಬಿಸಿನೆಸ್ ಕೌನ್ಸಿಲ್ (ಯುಎಸ್‍ಐಬಿಸಿ) ವ್ಯವಸ್ಥಾಪಕ ನಿರ್ದೇಶಕ ಅಲೆಕ್ಸಾಂಡರ್ ಸ್ಲೇಟರ್ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರು ನವೆಂಬರ್ 29, 2023ರಂದು ಮಧ್ಯಾಹ್ನ 03.00ರಿಂದ 03.50ರ ನಡುವಿನ ಅವಧಿಯಲ್ಲಿ ಉದ್ಘಾಟಿಸಲಿದ್ದಾರೆ.

ಈ ವರ್ಷದ ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಚಂದ್ರಯಾನ 3 ಇಸ್ರೋ-ಇಂಡಸ್ಟ್ರಿ ಪೆವಿಲಿಯನ್ ಪ್ರಮುಖ ಅಂಶವಾಗಲಿದೆ. ಇದು ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತದ ಸಾಧನೆಗಳನ್ನು ಸಂಕೇತಿಸುತ್ತದೆ. ಈ ಪೆವಿಲಿಯನ್ ಇಸ್ರೋದ ಗಮನಾರ್ಹ ಸಾಧನೆಗಳನ್ನು ಪ್ರದರ್ಶಿಸುವ ಜೊತೆಗೆ, ಚಂದ್ರಯಾನ-3 ಯೋಜನೆಯ ಯಶಸ್ಸಿನಲ್ಲಿ ಎಸ್‍ಎಂಇಗಳು, ಸ್ಟಾರ್ಟ್‍ಅಪ್‍ಗಳು ಮತ್ತು ಖಾಸಗಿ ಕೈಗಾರಿಕೆಗಳ ನಿರ್ಣಾಯಕ ಕೊಡುಗೆಗಳನ್ನು ಶ್ಲಾಘಿಸುತ್ತದೆ. ಚಂದ್ರಯಾನ 3 ಲ್ಯಾಂಡರ್‍ನ 1:1 ಸ್ಕೇಲ್ ಮಾದರಿಯನ್ನು ಇದೇ ಮೊದಲ ಬಾರಿಗೆ ಪ್ರದರ್ಶಿಸಲಾಗುವುದು. ಹಾಗೆಯೇ, ಎಆರ್/ವಿಆರ್ ತಂತ್ರಜ್ಞಾನವನ್ನು ಬಳಸಿಕೊಂಡು ವಿಶೇಷವಾಗಿ ನಿರ್ಮಿಸಲಾದ ಜಿಯೋಡೆಸಿಕ್ ಗುಮ್ಮಟದಲ್ಲಿ, ಚಂದ್ರಯಾನ, ಈ ಹಿಂದಿನ ಚಂದ್ರಯಾನ ಕಾರ್ಯಾಚರಣೆಗಳು, ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ತಿಳಿಯಲು ತಲ್ಲೀನಗೊಳಿಸುವ ಅನುಭವವನ್ನು ರಚಿಸಲಾಗಿದೆ. ವಿನೋದ ಮತ್ತು ಸಮೃದ್ಧ ಕಲಿಕೆಯ ಅನುಭವಕ್ಕಾಗಿ ಸಂದರ್ಶಕರು ಸಿಮ್ಯುಲೇಶನ್ ಗಳ ಜೊತೆಗೆ ತೊಡಗಿಸಿಕೊಳ್ಳಬಹುದು.

ಗ್ರೀನ್ ಬಿಟಿಎಸ್- ಮುಂಬರುವ ವರ್ಷಗಳಲ್ಲಿ ನಿವ್ವಳ ಶೂನ್ಯ ಹೊರಸೂಸುವಿಕೆಯನ್ನು ಸಾಧಿಸುವ ಗುರಿಯೊಂದಿಗೆ ಬೆಂಗಳೂರು ಟೆಕ್ ಶೃಂಗಸಭೆಯು ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಈ ಮಹತ್ವಾಕಾಂಕ್ಷೆಯ ಗುರಿಯು ತ್ಯಾಜ್ಯ ಉತ್ಪಾದನೆಯನ್ನು ಕಡಿಮೆ ಮಾಡಲು, ಸಂಗ್ರಹಣೆಯಲ್ಲಿ ಪರಿಸರ ಪ್ರಜ್ಞೆಯನ್ನು ಸಂಯೋಜಿಸಲು ಮತ್ತು ವಿವಿಧ ಪಾಲುದಾರರಿಗೆ ಸುಸ್ಥಿರತೆಯ ಸಲಹೆಯನ್ನು ಸ್ಥಾಪಿಸಲಿದೆ. ಇಂಗಾಲ, ನೀರು, ಇಂಧನ, ತ್ಯಾಜ್ಯ, ಆಹಾರ ಮತ್ತು ಅನುಭವದಂತಹ ಪ್ರಮುಖ ಸ್ತಂಭಗಳ ಮೇಲೆ ಗಮನಹರಿಸುವುದು ಸುಸ್ಥಿರತೆಗೆ ಬಿಟಿಎಸ್ ನ ಬದ್ಧತೆಯನ್ನು ಒತ್ತಿಹೇಳುತ್ತದೆ – ಇದು ಪ್ರವರ್ತಕ ಉಪಕ್ರಮವಾಗಿದ್ದು, ಭಾರತದಲ್ಲೇ ಮೊದಲನೆಯದೆನಿಸಿದೆ.

ಬಿಟಿಎಸ್ ಪ್ರದರ್ಶನ- ಟೆಕ್ ಮಾರುಕಟ್ಟೆಯು ಕಂಟ್ರಿ ಪೆವಿಲಿಯನ್ ಗಳು, ಐಟಿ ಮತ್ತು ಬಯೋಟೆಕ್ ಕ್ಷೇತ್ರದ ಪ್ರಮುಖ ಸಂಸ್ಥೆಗಳು, ಯುನಿಕಾರ್ನ್ ಗಳು, ಸ್ಟಾರ್ಟ್-ಅಪ್ ಗಳು, ಆರ್ & ಡಿ ಲ್ಯಾಬ್ ಗಳು, ಶೈಕ್ಷಣಿಕ ಸಂಸ್ಥೆಗಳನ್ನು ಒಳಗೊಂಡಿರುತ್ತದೆ. ಈ ತಾಂತ್ರಿಕ ಮಹೋತ್ಸವದಲ್ಲಿ ಭಾಗವಹಿಸುವ ಡಿಆರ್ ಡಿಒ, ಐಸಿಎಂಆರ್, ಸಿಡಾಕ್, ಬಿರಾಕ್, ಐಐಎಪಿ, ಐಐಐಟಿ-ಬಿ ಮತ್ತು ಎನ್ ಆರ್ ಡಿಸಿ ಮುಂತಾದ ಸಂಸ್ಥೆಗಳೊಂದಿಗೆ ಭಾರತದ ಸಂಶೋಧನೆ ಮತ್ತು ಅಭಿವೃದ್ಧಿಯ ಶ್ರೇಷ್ಠತೆಯನ್ನು ಮನಗಾಣಬಹುದು. ಕೈಂಡ್ರಿಲ್, ಇನ್ಫೋಸಿಸ್, ಬಾಷ್, ಮೈಕ್ರೋಸಾಫ್ಟ್ ಸ್ಟಾರ್ಟ್ ಅಪ್, ಕ್ಯಾಶ್ ಫ್ರೀ, ಬಿಲ್ಡರ್ ಎಐ, ಬಯೋಕಾನ್ ಮತ್ತಿತರ ಉದ್ಯಮಗಳೊಂದಿಗೆ ಸಹಯೋಗದ ಅಭೂತಪೂರ್ವ ಅವಕಾಶಗಳನ್ನು ಇದು ಸೃಷ್ಟಿಸುತ್ತವೆ. ಎಸ್ ಟಿಪಿಐ, ಇಎಲ್‍ಸಿಐಎ, ಟಿಐಇ ಬೆಂಗಳೂರು, ಐ-ಬಿಐಒಎಂ, ಬಿಬಿಸಿ ಮತ್ತು ವಾಯ್ಸ್ ಕನ್ಸೋರ್ಟಿಯಂ ನಂತಹ ತಮ್ಮ ತಾಂತ್ರಿಕ ಶ್ರೇಷ್ಠತೆ ಮತ್ತು ಎಕ್ಸ್‍ಪೋ ಪೆವಿಲಿಯನ್‍ಗಳನ್ನು ಪ್ರದರ್ಶಿಸುವ ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರದಿಂದ ಒಂದು ಪ್ರದರ್ಶನವು ಸದಸ್ಯರು ಮತ್ತು ಕ್ಲಸ್ಟರ್‍ಗಳ ತಾಂತ್ರಿಕ ನೈಪುಣ್ಯವನ್ನು ನೀಡುತ್ತದೆ. ಹೆಲ್ತ್ ಟೆಕ್, ಎಡಿಟೆಕ್, ಅಗ್ರಿಟೆಕ್, ಮೊಬಿಲಿಟಿ, ಇ-ಕಾಮರ್ಸ್, ಗ್ರಾಮೀಣ ತಂತ್ರಜ್ಞಾನಗಳ ಕ್ಷೇತ್ರಗಳ ಪ್ರಗತಿಯನ್ನು ಪ್ರದರ್ಶಿಸುವ, ತಲ್ಲೀನಗೊಳಿಸುವ ಅನುಭವ ನೀಡುವ ಸ್ಟಾರ್ಟ್ ಅಪ್‍ಗಳು ಇರುತ್ತವೆ.

ಶೃಂಗಸಭೆಯು 75ಕ್ಕೂ ಹೆಚ್ಚು ಗೋಷ್ಠಿಗಳು, 400+ ಭಾಷಣಕಾರರು, 350+ ಸ್ಟಾರ್ಟ್‍ಅಪ್‍ಗಳು, 600 + ಪ್ರದರ್ಶಕರು ಮತ್ತು 20,000+ ವ್ಯಾಪಾರಿಗಳು ಪಾಲ್ಗೊಳ್ಳಲಿದ್ದು, ಪ್ರೇಕ್ಷಕರಿಗೆ ಮತ್ತು ಆಸಕ್ತರಿಗೆ ನಾವೀನ್ಯ ಮತ್ತು ಸಹಯೋಗದ ಸಾಟಿಯಿಲ್ಲದ ಪರಿಶೋಧನೆಗೆ ವೇದಿಕೆಯನ್ನು ಕಲ್ಪಿಸಲಿದೆ.

ಮುಂದಿನ ಎರಡು ಆವೃತ್ತಿಗಳು 2024 ಮತ್ತು 2025ರಲ್ಲಿ ನವೆಂಬರ್ 19-21ರ ವರೆಗೆ ನಡೆಯಲಿವೆ ಎಂದು ಘೋಷಿಸಲಾಯಿತು. ಈ ದಿನಾಂಕಗಳನ್ನು ಮೊದಲೇ ಘೋಷಿಸುವುದರಿಂದ ಅಂತಾರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳು ತಮ್ಮ ಭಾಗವಹಿಸುವಿಕೆಯನ್ನು ಯೋಜಿಸಲು ಸಹಾಯವಾಗುತ್ತದೆ. ಸಹಯೋಗದ ಮೂಲಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗಡಿಗಳನ್ನು ಮೀರಿ ಈ ಕ್ಷೇತ್ರದ ಬೆಳವಣಿಗೆಗೆ ಕರ್ನಾಟಕದ ನಿರಂತರ ಬದ್ಧತೆಗೆ ಇದು ಸಾಕ್ಷಿಯಾಗಿದೆ.