ಮಧುಗಿರಿ : ತಾಲೂಕಿನಲ್ಲಿರುವ ಎಲ್ಲಾ ವಸತಿ ನಿಲಯಗಳ ಮೂಲಭೂತ ಸೌಕರ್ಯಗಳ ಕೊರತೆ, ಸಮಸ್ಯೆಗಳ ಬಗ್ಗೆ ಪಟ್ಟಿ ತಯಾರಿಸಿ ಕೊಡಿ, ಯಾವುದಾರೊಂದು ರೂಪದಲ್ಲಿ ಅನುಧಾನ ಬಿಡುಗಡೆ ಮಾಡಿಸುವುದಾಗಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ಕೆಎಸ್.ಆರ್.ಟಿ.ಸಿ ಸಮೀಪ ಇರುವ ಸಮಾಜ ಕಲ್ಯಾಣ ಇಲಾಖೆಯ ಸಾರ್ವಜನಿಕ ವಿದ್ಯಾರ್ಥಿ ನಿಲಯಕ್ಕೆ ದಿಡೀರ್ ಬೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು ತಾಲೂಕಿನಲ್ಲಿರುವ ಹಾಸ್ಟೆಲ್ ಗಳಲ್ಲಿ ಎಲ್ಲೆಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ಕೊಠಡಿಗಳ ಕೊರತೆ ಮತ್ತು ದುರಸ್ಥಿ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಅಂದಾಜು ಪಟ್ಟಿ ತಯಾರಿಸಿ ನನ್ನ ಗಮನಕ್ಕೆ ತಂದಲ್ಲಿ ಅನುಧಾನ ಬಿಡುಗಡೆ ಮಾಡಿಸುತ್ತೇನೆ. ಮುಂದಿನ ಶೈಕ್ಷಣಿಕ ವರ್ಷದೊಳಗೆ ಎಲ್ಲಾ ಹಾಸ್ಟೆಲ್ ಗಳು ಸುಸ್ಥಿತಿಯಲ್ಲಿರುವಂತೆ ಕ್ರಮ ಕೈಗೊಳ್ಳಬೇಕು. ಎಲ್ಲಾ ಹಾಸ್ಟೆಲ್ ಗಳಲ್ಲೂ ಮೆನ್ಯು ಚಾರ್ಟ್ ಅಳವಡಿಸಿ ಅದರ ಪ್ರಕಾರವೇ ಊಟ ತಿಂಡಿಯನ್ನು ನೀಡಬೇಕು. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ವಾರಕ್ಕೆ ಒಮ್ಮೆ ಯಾವುದಾದರೊಂದು ಹಾಸ್ಟೆಲ್ ಗೆ ಬೇಟಿ ನೀಡುತ್ತೇನೆ. ಸಮಸ್ಯೆಗಳ ಕಂಡು ಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕ ಕೃಷ್ಣಪ್ಪನವರಿಗೆ ಸೂಚನೆ ನೀಡಿದರು.
ಹಾಸ್ಟೆಲ್ ಮುಂಭಾಗದ ರಾಯಗಾಲುವೆ ಚರಂಡಿಯಲ್ಲಿ ಕೊಳಕು ನೀರು ಕಟ್ಟಿಕೊಂಡು ವಾಸನೆ ಬರುತ್ತಿರುವುದನ್ನು ಗಮನಿಸಿದ ಸಚಿವರು ಸ್ಥಳಕ್ಕೆ ಪುರಸಭೆ ಆರೋಗ್ಯ ನಿರೀಕ್ಷಕ ಬಾಲಾಜಿರವರನ್ನು ಕರೆಸಿ ತಕ್ಷಣ ಸ್ವಚ್ಚಗೊಳಿಸುವಂತೆ ಸೂಚನೆ ನೀಡಿದರು.
ಹಾಸ್ಟೆಲ್ ನ ಎಲ್ಲಾ ಕೊಠಡಿಗಳನ್ನು ಪರಿಶೀಲಿಸಿದ ಸಚಿವರು ವಿದ್ಯಾರ್ಥಿಗಳು ತಂಗಿದ್ದ ಕೊಠಡಿಯ ಕಿಟಕಿಯ ರೆಕ್ಕೆಗಳು ಮುಚ್ಚಿಕೊಂಡಿದ್ದುದನ್ನು ಗಮನಿಸಿ, ಹುಳ ಹುಪ್ಪಟೆಗಳು ಬರದಂತೆ ಕಿಟಕಿಗಳನ್ನು ಮುಚ್ಚಿರಬಹುದು, ಆದರೆ ಕಿಟಕಿಗಳು ಮುಚ್ಚಿದರೆ ವಿದ್ಯಾರ್ಥಿಗಳಿಗೆ ಉತ್ತಮ ಗಾಳಿ ದೊರೆಯುವುದಿಲ್ಲ. ಕಿಟಕಿಗಳಿಗೆ ಮೆಶ್ ಅಳವಡಿಸಿ ಕಿಟಕಿಯ ರೆಕ್ಕೆಗಳನ್ನು ತೆಗೆದು ಉತ್ತಮ ಗಾಳಿ ಬೆಳಕು ಇರುವಂತೆ ನೋಡಿಕೊಳ್ಳಿ, ಹಾಸ್ಟೆಲ್ ನ ಕೆಲ ಕೊಠಡಿಗಳು ತನುವು ತೆಗೆದುಕೊಂಡಿದ್ದು, ಇದನ್ನು ತಕ್ಷಣ ಸರಿಪಡಿಸಿ ಕೊಠಡಿಗಳಿಗೆ ಬಣ್ಣ ಬಳಿಸಿ ಎಂದು ವಾರ್ಡನ್ ಚಿಕ್ಕರಂಗಪ್ಪ ನವರಿಗೆ ಸೂಚಿಸಿದರು.
ಹಾಸ್ಟೆಲ್ ನಲ್ಲಿ ಏನಾದರೂ ಸಮಸ್ಯೆಗಳಿವೆಯಾ ಎಂದು ವಿದ್ಯಾರ್ಥಿಗಳನ್ನು ಕೇಳಿದಾಗ ಯಾವುದೇ ಸಮಸ್ಯೆಯಿಲ್ಲ. ಯಾವುದೇ ಸಮಸ್ಯೆಗಳಿಲ್ಲ. ಮೆನ್ಯೂ ಪ್ರಕಾರವೇ ಊಟವನ್ನು ನೀಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ತಿಳಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬನ ಕೈಯಲ್ಲಿ ಫಂಗಸ್ ಗುಳ್ಳೆಗಳಾಗಿರುವುದನ್ನು ಕಂಡ ಸಚಿವರು ಸ್ಥಳಕ್ಕೆ ಟಿ. ಹೆಚ್. ಓ ಶ್ರೀನಿವಾಸ್ ರವರನ್ನು ಕರೆಸಿ ಹಾಸ್ಟೆಲ್ ನಲ್ಲಿ ಆರೋಗ್ಯ ತಪಾಸಣೆ ವೇಳೆ ವಿದ್ಯಾರ್ಥಿಗಳ ಎತ್ತರ, ತೂಕ ಅಳೆಯುವುದಲ್ಲ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಬೇಕು. ಫಂಗಸ್ ಗುಳ್ಳೆಗಳಾಗಿರುವ ವಿದ್ಯಾರ್ಥಿಗೆ ತಕ್ಷಣ ಚರ್ಮ ವೈದ್ಯರಲ್ಲಿ ಚಿಕಿತ್ಸೆ ಕೊಡಿಸಿ ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಂಟಿ ನಿರ್ದೇಶಕರು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಕೃಷ್ಣಮೂರ್ತಿ. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಿವಣ್ಣ, ತಾ.ಪಂ ಲಕ್ಷ್ಮಣ್, ಎಡಿಓ ಮಧುಸೂಧನ್, ಪುರಸಭೆ ಮಾಜಿ ಅಧ್ಯಕ್ಷರಾದ ಎನ್. ಗಂಗಣ್ಣ, ಎಂ.ಕೆ. ನಂಜುಂಡಯ್ಯ, ಪಿಡಬ್ಲ್ಯೂಡಿ ಇಇ ಸುರೇಶ್ ರೆಡ್ಡಿ, ಎಇಇ ರಾಜಗೋಪಾಲ್, ದಸಾಪ ತಾಲೂಕು ಅಧ್ಯಕ್ಷ ಮಹಾರಾಜು, ಸಹಾಯಕ ನಿಲಯ ಪಾಲಕ ಕೃಷ್ಣಮೂರ್ತಿ ಇತರರಿದ್ದರು.
ವರದಿ ಲಕ್ಷ್ಮಿಪತಿ ದೊಡ್ಡ ಯಲ್ಕೂರು.