Session Photos 21 02 2024 3 scaled

ವಿಧಾನ ಪರಿಷತ್‌ : ರಾಜ್ಯಪಾಲರ ಭಾಷಣದ ವಂದನಾನಿರ್ಣಯ ಪ್ರಸ್ತಾವ ಕ್ಕೆ ಮುಖ್ಯಮಂತ್ರಿಗಳ ಉತ್ತರ….!

Genaral POLATICAL STATE

ರಾಜ್ಯಪಾಲರ ಭಾಷಣದ ವಂದನಾನಿರ್ಣಯ ಪ್ರಸ್ತಾವದ ಮೇಲೆ ನಡೆದ ಚರ್ಚೆಗೆ ವಿಧಾನ ಪರಿಷತ್ತಿನಲ್ಲಿ ಮುಖ್ಯಮಂತ್ರಿಗಳ ಉತ್ತರ

ಬೆಂಗಳೂರು, ಫೆಬ್ರವರಿ 21, (ಕರ್ನಾಟಕ ವಾರ್ತೆ) :

ಫೆಬ್ರವರಿ 12ರಂದು ಗೌರವಾನ್ವಿತ ರಾಜ್ಯಪಾಲರು ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಸರ್ಕಾರದ ಆಡಳಿತವನ್ನು ನೋಡಿದ್ದಾರೆ, ಸರ್ಕಾರದಿಂದ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮಗಳನ್ನು ನೋಡಿದ್ದಾರೆ, ಜನಪರ ಆಡಳಿತವನ್ನು ಮೆಚ್ಚಿ ಭಾಷಣ ಮಾಡಿದ್ದಾರೆ. ರಾಜ್ಯಪಾಲರು ಸಂವಿಧಾನದ ಗಾಂಭೀರ್ಯ, ಘನತೆ, ಹಿರಿಮೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದಾರೆ. ರಾಜ್ಯಪಾಲರು, ಸತ್ಯವನ್ನು, ಸದಾಭಿಪ್ರಾಯವನ್ನು ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಅದಕ್ಕಾಗಿ ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಬೇರೆ ರಾಜ್ಯಗಳಲ್ಲಿ ರಾಜ್ಯಪಾಲರ ಭಾಷಣ ಅವರ ಮೂಗಿನ ನೇರಕ್ಕೆ ಇರುತ್ತದೆ. ಆದರೆ, ನಮ್ಮ ರಾಜ್ಯದ ರಾಜ್ಯಪಾಲರು ಸತ್ಯವನ್ನು ನುಡಿದ್ದಾರೆ. ವಿಧಾನ ಮಂಡಲದ ಮುಂದೆ ಸರ್ಕಾರದ ನೀತಿ, ನಿಲುವುಗಳು ಹಾಗೂ ಮುನ್ನೋಟವನ್ನು ಸ್ಪಷ್ಟವಾಗಿ ಜನರ ಮುಂದಿಟ್ಟಿದ್ದಾರೆ. ಮಾಧ್ಯಮದವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ರಾಜ್ಯಪಾಲರು ವಿಧಾನ ಮಂಡಲದಲ್ಲಿ ಮಾಡಿದ ಭಾಷಣದ ಮೇಲೆ 13 ಜನ ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದಾರೆ, ಏಳು ಜನ ಸದಸ್ಯರು ಭಾರತೀಯ ಜನತಾ ಪಕ್ಷದಿಂದ, 5 ಜನ ಕಾಂಗ್ರೇಸ್ ಪಕ್ಷದಿಂದ ಹಾಗೂ ಓರ್ವರು ಜೆ.ಡಿ.ಎಸ್. ಪಕ್ಷದಿಂದ ಮಾತನಾಡಿದ್ದಾರೆ. ಸದಸ್ಯರಾದ ಯು.ಬಿ. ವೆಂಕಟೇಶ್ ಅವರು ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯವನ್ನು ಮಾಡಿದ್ದು, ಸದಸ್ಯೆ ಶ್ರೀಮತಿ ಉಮಾಶ್ರೀ ಅವರು ರಾಜ್ಯಪಾಲರ ಭಾಷಣಕ್ಕೆ ಬೆಂಬಲವಾಗಿ ಮಾತನಾಡಿದ್ದಾರೆ.

ಸ್ವಾತಂತ್ರ್ಯ ತಂದು ಕೊಟ್ಟವರು ರಾಷ್ಟ್ರವಾದಿಗಳಲ್ಲ, ಸುಮ್ಮನೇ ಕುಳಿತವರು ರಾಷ್ಟ್ರವಾದಿಗಳು ಎಂದ ಮುಖ್ಯಮಂತ್ರಿಗಳು ರಾಜ್ಯದ ಜನ ತೀರ್ಮಾನ ಮಾಡಿ, ಸರ್ಕಾರದ ರಚನೆಗೆ ಬಹುಮತದಿಂದ ಆಯ್ಕೆ  ಮಾಡಿ ಕಳುಹಿಸಿಕೊಟ್ಟಿದ್ದಾರೆ. ಅವರ ಆಶೋತ್ತರಗಳಿಗೆ ಸ್ಪಂದಿಸಿ ಇಂದು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ನಮ್ಮ ಕಾರ್ಯವೈಖರಿಯನ್ನು ರಾಜ್ಯಪಾಲರು ಮೆಚ್ಚಿ ಭಾಷಣ ಮಾಡಿದ್ದಾರೆ. ಆದರೆ ಕೆಲವರು ರಾಜ್ಯಪಾಲರು ಮಾಡಿರುವ ಭಾಷಣಕ್ಕೆ ಟೀಕೆ ಮಾಡಿದ್ದಾರೆ, ಕೆಲವರು ದುರುದ್ದೇಶದಿಂದ ಮಾತನಾಡಿದ್ದಾರೆ, ಕೆಲವರು ಒಳ್ಳೆಯ ಸಲಹೆಗಳನ್ನು ನೀಡಿದ್ದಾರೆ. ನಾನು ಎಲ್ಲಾ ಟೀಕೆಗಳನ್ನು ಸಹ ಸ್ವಾಗತಿಸುತ್ತೇನೆ.  ಟೀಕೆಗಳನ್ನು ಮಾಡಿ, ದೋಷಗಳನ್ನು ಎತ್ತಿ ತೋರಿಸಿದಾಗ ಅದನ್ನು ಸರಿಪಡಿಸಿಕೊಂಡು ಕೆಲಸ ನಿರ್ವಹಿಸಲಾಗುವುದು ಎಂದು ತಿಳಿಸಿದರು.

Session Photos 21 02 2024 15

ರಾಜ್ಯಪಾಲರು ತಮ್ಮ ಭಾಷಣದಲ್ಲಿ ನಮ್ಮ 5 ಗ್ಯಾರಂಟಿಗಳನ್ನು ಜಾರಿ ಮಾಡಿರುವ ಬಗ್ಗೆ ಮಾತನಾಡಿದ್ದಾರೆ, ಸರ್ಕಾರದ ನೀತಿ ನಿಲುವುಗಳನ್ನು ಸ್ಪಷ್ಟಪಡಿಸಿದ್ದಾರೆ. ರಾಜ್ಯಪಾಲರ ಭಾಷಣಕ್ಕೆ  ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ವಾರ್ತಾ ಭಾರತಿ, ವಿಜಯ ಕರ್ನಾಟಕ, ಇಂಡಿಯನ್ ಎಕ್ಸ್‍ಪ್ರೆಸ್, ಕನ್ನಡ ಪ್ರಭ  ಮುಂತಾದ ಹಲವಾರು ಪತ್ರಿಕೆಗಳಲ್ಲಿ ಹಲವಾರು ಶೀರ್ಷಿಕೆಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ನಮ್ಮ ಸರ್ಕಾರವು ಹಮ್ಮಿಕೊಂಡಿರುವ ಜನಪರ ಯೋಜನೆಗಳು, ಗ್ಯಾರೆಂಟಿ ಯೋಜನೆÀಗಳ ಫಲವಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸಂವಿಧಾನ ಬಂದು 75 ವರ್ಷಗಳೇ ಕಳೆದಿವೆ, ಆದರೂ ಕೂಡ ಇವತ್ತಿಗೂ ಆರ್ಥಿಕ, ಸಾಮಾಜಿಕ ಸಮಾನತೆ ಇಲ್ಲ. ಸಂವಿಧಾನವೇ ನಮ್ಮ ಧರ್ಮ ಅದರಂತೆ ನಾವು ನಡೆದುಕೊಳ್ಳಬೇಕು. ಡಾ. ಬಿ.ಆರ್. ಅಂಬೇಡ್ಕರ್ ಅವರು ದೇಶದ ಸಮಾಜಿಕ, ಆರ್ಥಿಕ ಪರಿಸ್ಥಿತಿಗಳನ್ನು ಅರಿತು ಉತ್ತಮವಾದ ಸಂವಿಧಾನವನ್ನು ನಮಗೆ ನೀಡಿದ್ದಾರೆ. ಅವರು ಸಂವಿಧಾನವನ್ನು ನೀಡುವುದಕ್ಕೂ ಮೊದಲು ನವೆಂಬರ್ 25, 1949ರ ತಮ್ಮ ಕೊನೆಯ ಭಾಷಣದಲ್ಲಿ 1950, ಜನವರಿ 26ರಂದು ಸಂವಿಧಾನ ಜಾರಿಗೆ ಬರುತ್ತದೆ. ಅಂದು ನಾವು ವೈರುದ್ಯತೆ ಇರುವಂತಹ ಸಮಾಜಕ್ಕೆ ಕಾಲಿಡುತ್ತಿದ್ದೇವೆ. ಸಾಮಾಜಿಕ, ರಾಜಕೀಯ, ಆರ್ಥಿಕ ಅಸಮಾನತೆಗಳಿರುವಂತಹ ಸಮಾಜಕ್ಕೆ ಕಾಲಡುತ್ತಿದ್ದೇವೆ. ಈ ಅಸಮಾನತೆಗಳನ್ನು ತೊಡೆದು ಹಾಕುವುದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಕೆಲಸ ಎಂದು ತಿಳಿಸಿದ್ದರು. ಯಾರು ಸಾಮಾಜಿಕ, ಆರ್ಥಿಕ, ಅಸಮಾನತೆಗಳಿಂದ ನರಳುತ್ತಾರೋ ಅವರು ಸೌಧವನ್ನು ಧ್ವಂಸ ಮಾಡುತ್ತಾರೆ ಎಂದು ಅಂದೇ ಸಮಾಜಕ್ಕೆ ಹಾಗೂ ರಾಜಕಾರಣಿಗಳಿಗೆ ಎಚ್ಚರಿಕೆಯನ್ನು ನೀಡಿದ್ದರು. ಆದರೆ ಈ ಅಸಮಾನತೆಗಳನ್ನು ನಾವು ಇಂದಿಗೂ ಹೋಗಲಾಡಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.

ಸ್ವಾತಂತ್ರ್ಯ ಸಾರ್ಥಕವಾಗಬೇಕಾದರೆ, ದುರ್ಬಲರಿಗೆ ಸಾಮಾಜಿಕ, ಆರ್ಥಿಕ ರಾಜಕೀಯ ಸ್ವಾತಂತ್ರ್ಯ ಸಿಗಬೇಕು ಎಲ್ಲಿಯವರೆಗೂ ಇವುಗಳು ದುರ್ಬಲರಿಗೆ ದೊರಕುವುದಿಲ್ಲವೋ ಅಲ್ಲಿಯ ತನಕ ಸ್ವಾತಂತ್ರ್ಯ ಸಿಗುವುದಿಲ್ಲ ಎಂದು ತಿಳಿಸಿದ ಮುಖ್ಯಮಂತ್ರಿಗಳು ಕುವೆಂಪು ಅವರ “ಸರ್ವೋಯದಯವಾಗಿಲಿ ಸರ್ವರಲಿ” ಎಂಬ ಸಾಲುಗಳನ್ನು ಮೆಲಕು ಹಾಕಿದರು. ಇದೇ ಆಶಯದೊಂದಿಗೆ ಸರ್ವರಿಗೂ ಎಲ್ಲಾ ರೀತಿಯ ಸವಲತ್ತುಗಳು ಸಿಗಲಿ ಎಂದು ನಾವು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಅದನ್ನೇ ರಾಜ್ಯಪಾಲರು ತಮ್ಮ ಭಾಷಣದಲ್ಲಿ ನುಡಿದಿದ್ದಾರೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರವು ನೇರವಾಗಿ ತೆರಿಗೆಯನ್ನು ಉತ್ಪಾದನೆ ಮಾಡುವುದಿಲ್ಲ. ರಾಜ್ಯಗಳಿಂದ ತೆರಿಗೆ ರೂಪದಲ್ಲಿ ಸಂಗ್ರಹಿಸುವ ಮೊತ್ತವೇ ಕೇಂದ್ರದ ಉತ್ಪಾದನೆ. ನಮ್ಮ ಕರ್ನಾಟಕ ಸರ್ಕಾರದಿಂದ ಈ ವರ್ಷ ನಲವತ್ತು ಲಕ್ಷ ಮೂವತ್ತು ಸಾವಿರಕ್ಕೂ ಹೆಚ್ಚು ತೆರಿಗೆಯನ್ನು ಕೇಂದ್ರ ಸರ್ಕಾರಕ್ಕೆ ನೀಡಿದ್ದೇವೆ. ಆದರೆ ಕೇಂದ್ರ ಸರ್ಕಾರದಿಂದ ರಾಜ್ಯದ ಅಭಿವೃದ್ಧಿಗಾಗಿ ನೀಡುವ ಅನುದಾನವೆಷ್ಟು? ಕೇವಲ ಐವತ್ತು ಸಾವಿರದ ಎರಡುನೂರ ಐವತ್ತ ಏಳು ಕೋಟಿ ಮಾತ್ರ. ಇದರಿಂದ ರಾಜ್ಯಕ್ಕೆ ತುಂಬಾ ಅನ್ಯಾಯವಾಗಿದೆ. ಇದನ್ನೇ ರಾಜ್ಯಪಾಲರು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ ಎಂದು ತಿಳಿಸಿದರು.

Session Photos 21 02 2024 9

ಕನ್ನಡಿಗರ ಹಿತ ಕಾಪಾಡುವುದು ರಕ್ಷಣೆ ಮಾಡುವುದು ನಮ್ಮ ಸರ್ಕಾರದ ಕರ್ತವ್ಯ. ರಾಜ್ಯಗಳು ಬಲಿಷ್ಠವಾದಲ್ಲಿ ಮಾತ್ರ ಕೇಂದ್ರ ಬಲಿಷ್ಠವಾಗಿರುತ್ತದೆ. ರಾಜ್ಯಗಳು ದುರ್ಬಲವಾದರೆ ಕೇಂದ್ರವು ದುರ್ಬಲವಾಗುತ್ತದೆ. ನಮಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ತೆರಿಗೆ ಪಾಲಿನಲ್ಲಿ ಅನ್ಯಾಯವಾಗಿದೆ. ಸರಿಯಾದ ಪಾಲು ಸಿಗುತ್ತಿಲ್ಲ. ಹೆಚ್ಚು ತೆರಿಗೆ ಸಂಗ್ರಹ ಮಾಡುವ ರಾಜ್ಯ ನಮ್ಮ ಕರ್ನಾಟಕ. ಮೊದಲನೆಯ ರಾಜ್ಯ ಮಹರಾಷ್ಟ್ರ. ನಮ್ಮ ಕರ್ನಾಟಕ ರಾಜ್ಯ ಬಲಿಷ್ಠವಾಗಬೇಕು. ಆದ್ದರಿಂದ ನಮಗೆ ಸಿಗಬೇಕಾದ ತೆರಿಗೆ ಪಾಲು ಸಿಗಬೇಕು. ನಾವು 100 ರೂ ಕೊಟ್ಟರೆ ನಮಗೆ ಕೇವಲ 13 ರೂ ಮಾತ್ರ ಸಿಗುತ್ತಿದೆ. ಇದರಿಂದ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ತಿಳಿಸಿದರು.

ಪ್ರತಿ ಪಕ್ಷದವರು ರಾಜ್ಯದ ಜನತೆಯ ಹಿತ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ರಾಜ್ಯದಲ್ಲಿ ಬೀಕರ ಬರಗಾಲವಿರುವುದು ಸತ್ಯ. ಬರ ಅಧ್ಯಯನಕ್ಕಾಗಿ ಕೇಂದ್ರದಿಂದ ತಂಡಗಳನ್ನು ಸಹ ಕಳುಹಿಸಿದ್ದರು. ಬರ ವೀಕ್ಷಿಸಿದ ತಂಡಗಳು ತಮ್ಮ ವರದಿಗಳನ್ನು ಸಹ ನೀಡಿದ್ದಾರೆ. ರಾಜ್ಯದಲ್ಲಿನ 240 ತಾಲ್ಲೂಕುಗಳಲ್ಲಿ 220 ತಾಲೂಕುಗಳನ್ನು ಬರ ಪರಿಸ್ಥಿತಿಯಲ್ಲಿವೆ ಎಂದು ಘೋಷಿಸಲಾಗಿದೆ. ಅದರಲ್ಲಿ 196 ತಾಲ್ಲೂಕುಗಳು ತೀವ್ರ ಬರಗಾಲವನ್ನು ಎದುರಿಸುತ್ತಿದೆ. ನಲವತ್ತ ಎಂಟು ಲಕ್ಷಕ್ಕೂ ಹೆಚ್ಚು ಹೆಕ್ಟೆರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿ ಮೂವತ್ತ ಐದು ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚು ನಷ್ಟವಾಗಿದೆ. ಕುಡಿಯಲು ನೀರಿಲ್ಲ, ದನಕರುಗಳಿಗೆ ಮೇವಿಲ್ಲ, ಪರಿಹಾರ ಕೋರಿ 2023, ಅಕ್ಟೋಬರ್ 20 ಹಾಗೂ 2023 ನವೆಂಬರ್ 16 ರಂದು ಎರಡು ಮನವಿಗಳನ್ನು ಕೇಂದ್ರ ಸರ್ಕಾರಕ್ಕೆ ನೀಡಿದ್ದೇವೆ, ಮಾನ್ಯ ಪ್ರಧಾನಮಂತ್ರಿಗಳು, ಗೃಹ ಮಂತ್ರಿಗಳು, ಹಣಕಾಸು ಮಂತ್ರಿಗಳನ್ನು ಸಹ ಭೇಟಿ ಮಾಡಿ ರಾಜ್ಯದ ಬರ ಪರಿಸ್ಥಿತಿಯನ್ನು ತಿಳಿಸಿದ್ದೇವೆ. ಆದರೆ ಇದುವರೆಗೂ ಕೇಂದ್ರ ಸರ್ಕಾರ ಪರಿಹಾರ ಘೋಷಿಸಿಲ್ಲ. ನರೇಗಾ ಯೋಜನೆಯಡಿ 100 ದಿನಗಳ ಕೆಲಸವನ್ನು 150 ದಿನಗಳಿಗೆ ಹೆಚ್ಚಿಸುವಂತೆ ಮನವಿಯನ್ನು ಮಾಡಿದ್ದೇವೆ ಆದರೆ ಇದುವರೆಗೂ ಯಾವುದಕ್ಕೂ ಕೇಂದ್ರ ಸರ್ಕಾರ ಇಲ್ಲಿಯವರೆಗೂ ಸ್ಪಂದಿಸಿಲ್ಲ ಎಂದು ತಿಳಿಸಿದರು.

ಮೊದಲನೇ ಮನವಿಯಲ್ಲಿ 17,900 ಕೋಟಿ ಎರಡನೇ ಮನವಿ ಪತ್ರದಲ್ಲಿ 18171 ಕೋಟಿ ರೂಗಳನ್ನು ಎನ್.ಡಿ.ಆರ್.ಎಫ್ ನಡಿ ಮಂಜೂರು ಮಾಡಲು ಕೋರಲಾಗಿತ್ತು ಆದರೆ ಕೇಂದ್ರ ಸರ್ಕಾರದಿಂದ ಇದುವರೆಗೂ ಯಾವುದೇ ರೀತಿಯ ಪರಿಹಾರ ದೊರಕಿಲ್ಲ. ರಾಜ್ಯ ಸರ್ಕಾರದಿಂದ ಈಗಾಗಲೇ 324 ಕೋಟಿ ಬಿಡುಗಡೆ ಮಾಡಿದ್ದೇವೆ. 867.82 ಕೋಟಿ ರೂಪಾಯಿಗಳನ್ನು ಬರ ನಿರ್ವಹಣೆಗಾಗಿ ಕುಡಿಯುವ ನೀರಿನ ಪೂರೈಕೆಗಾಗಿ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಮೂವತ್ತ ಮೂರು ಲಕ್ಷ ಒಂಭತ್ತು ಸಾವಿರ ರೈತರಿಗೆ 628.03 ಕೋಟಿ ರೂ ಪರಿಹಾರವಾಗಿ ಬಿಡುಗಡೆ ಮಾಡಿ ಪ್ರತಿ ರೈತರಿಗೆ 2000 ರೂ.ಗಳಂತೆ ತಾತ್ಕಾಲಿಕ ಪರಿಹಾರ ಬಿಡುಗಡೆ ಮಾಡಿದ್ದೇವೆ. ಗ್ಯಾರಂಟಿ ಯೋಜನೆಗಳು ಬರಗಾಲದ ತೀವ್ರತೆಯನ್ನು ಕಡಿಮೆ ಮಾಡಿವೆ ಎಂದು ತಿಳಿಸಿದರು.


ಶಕ್ತಿ ಯೋಜನೆ ಜಾರಿಗೆ ತಂದಾಗಿನಿಂದ 160 ಕೋಟಿ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು  ರಾಜ್ಯದಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಇದರಿಂದಾಗಿ ಕೆಲಸಕ್ಕೆ ಹೋಗುವ ಮಹಿಳೆಯರಿಗೆ, ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿನಿಯರಿಗೆ ಅನುಕೂಲವಾಗಿದೆ. ಗೃಹ ಜ್ಯೋತಿ ಯೋಜನೆಯಿಂದ ಒಂದು ಕೋಟಿ ಅರವತ್ತು ಲಕ್ಷ ಕುಟುಂಬಗಳಿಗೆ ಪ್ರಯೋಜನವಾಗಿದೆ. ಯಾವುದೇ ರೀತಿಯ ವಿದ್ಯುತ್ ಶುಲ್ಕ ಪಾವತಿಸದೇ ನಿರಾತಂಕವಾಗಿದೆ. ಅನ್ನ ಭಾಗ್ಯ ಯೋಜನೆಯಡಿ –  ಯಾರೂ ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಒಂದು ಕೋಟಿ ಮೂವತ್ತ ಎಂಟು ಲಕ್ಷ ಕುಟುಂಬಗಳಿಗೆ 5 ಕೆ.ಜಿ. ಅಕ್ಕಿಯನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಅಕ್ಕಿ ಪೂರೈಕೆ ಮಾಡಲು ಸಾಧ್ಯವಾಗದಿದ್ದಾಗ, ಪ್ರತಿ ಕೆ.ಜಿ.ಗೆ 34 ರೂ ನಂತೆ 174 ರೂಗಳನ್ನು ನೇರವಾಗಿ ಅವರ ಖಾತೆಗಳಿಗೆ ಜಮೆ ಮಾಡಲಾಗಿದೆ. ಗೃಹ ಲಕ್ಷ್ಮಿ ಯೋಜನೆಯಡಿ ಒಂದು ಕೋಟಿ ಇಪ್ಪತ್ತೊಂದು ಲಕ್ಷ ನೊಂದಣಿಯಾಗಿದ್ದು ಇದರಲ್ಲಿ ಒಂದು ಕೋಟಿ ಹದಿನೇಳು ಲಕ್ಷ ಮಹಿಳೆಯರಿಗೆ ನೇರ ನಗದು ವರ್ಗಾವಣೆ ಮುಖಾಂತರ ಅವರ ಖಾತೆಗಳಿಗೆ ಹಣ ಪಾವತಿಸಲಾಗಿದೆ. ಯುವ ನಿಧಿ ಯೋಜನೆಯಡಿ ನಿರುದ್ಯೋಗಿ ಯುವಕ ಯುವತಿಯರಿಗೆ ಏಳು ಕೋಟಿ ಮೂವತ್ತ ನಾಲ್ಕು ಲಕ್ಷ ರೂಗಳನ್ನು ಡಿ.ಬಿ.ಟಿ ಮೂಲಕ ಪಾವತಿ ಮಾಡಲಾಗಿದೆ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.

ನಾವು ಹಮ್ಮಿಕೊಂಡಿರುವ ಜನಪರ ಕಾಳಜಿಯ ಗ್ಯಾರಂಟಿ ಯೋಜನೆಗಳನ್ನು ರಾಜ್ಯಪಾಲರು ತಮ್ಮ ಭಾಷಣದಲ್ಲಿ ಬಿಚ್ಚಿಟ್ಟಿದ್ದಾರೆ. ಕೇಂದ್ರದ ಅನ್ಯಾಯದ ಬಗ್ಗೆ ತಿಳಿಸಿದ್ದಾರೆ ಎಂದು ಮುಖ್ಯ ಮಂತ್ರಿಗಳು ಸದನದಲ್ಲಿ ತಿಳಿಸಿದರು.