WhatsApp Image 2024 09 17 at 4.46.50 PM

ತುಮಕೂರು : ಐದು ಗ್ರಾಮ ಪಂಚಾಯತಿಗಳ ದತ್ತು ಸ್ವೀಕಾರ….!

DISTRICT NEWS ತುಮಕೂರು

ತುಮಕೂರು ಗ್ರಾಮಾಂತರ ಕ್ಷೇತ್ರದ ಐದು ಗ್ರಾಮ ಪಂಚಾಯತಿಗಳನ್ನು ದತ್ತು ತೆಗೆದುಕೊಂಡ ಕೇಂದ್ರ ಸಚಿವ ವಿ ಸೋಮಣ್ಣ

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೆಳಗುಂಬ, ಊರುಕೆರೆ ಯಲ್ಲಾಪುರ, ಹೆಗ್ಗೆರೆ, ಹೆತ್ತೇನಹಳ್ಳಿ ಹಾಗೂ ಗೂಳೂರು ಗ್ರಾಮ ಪಂಚಾಯಿತಿಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಸಲುವಾಗಿ ದತ್ತು ತೆಗೆದುಕೊಳ್ಳುವುದಾಗಿ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಮಂಗಳವಾರ ಇಲ್ಲಿ ಘೊಷಿಸಿದರು.

ಅವರು ಬೆಳಗುಂಬ ಗ್ರಾಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ತವಾಗಿ ಆಯೋಜಿಸಲಾಗಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ತುಮಕೂರು ಲೋಕಸಭಾ ಕ್ಷೇತ್ರದ ಸಂಸದನಾಗಿ ಕೇಂದ್ರದಲ್ಲಿ ಸಚಿವನಾಗುವ ಅವಕಾಶ ಮಾಡಿಕೊಡಲು ತಾವು ಅತಿ ಹೆಚ್ಚಿನ ಬಹುಮತದಲ್ಲಿ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ನಾನು ಕ್ಷೇತ್ರದ ಜನತೆಗೆ ಜೀವನ ಪರ್ಯಂತ ಋಣಿಯಾಗಿರುತ್ತೇನೆ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಈ ಕ್ಷೇತ್ರದ ಪ್ರತಿಯೊಬ್ಬ ಮತದಾರರಿಗೂ ಕೂಡ ಕಟಿಬದ್ಧನಾಗಿ ಉತ್ತಮ ಕೆಲಸ ಕಾರ್ಯ ಮಾಡುವ ಪಣ ತೊಟ್ಟಿರುವೆ ಎಂದು ಅವರು ಹೇಳಿದರು. ಈ ನಿಟ್ಟಿನಲ್ಲಿ ಜನರ ಸಹಕಾರ ಅತ್ಯಗತ್ಯ ಎಂದರು.
ಬೆಳಗುಂಬ ಗ್ರಾಮದ ಇತಿಹಾಸ ಪ್ರಸಿದ್ಧ ಗುರು ಸಿದ್ದರಾಮೇಶ್ವರ ದೇವಸ್ಥಾನದ ಬಳಿ ನೂತನ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ಬಿ.ಸುರೇಶ್ ಗೌಡರ ಮನವಿಯಂತೆ ರೂ 50 ಲಕ್ಷ ರೂಪಾಯಿ ಅನುದಾನವನ್ನು ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿ ಅಡಿಯಲ್ಲಿ ಬಿಡುಗಡೆ ಮಾಡಿಕೊಡುವುದಾಗಿ ಅವು ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಬಿ ಸುರೇಶ್ ಗೌಡರು ಬೆಳಗುಂಬ, ಹೆಗ್ಗೆರೆ, ಗೂಳೂರು, ಊರುಕೆರೆ, ಸ್ವಾಂದೇನಹಳ್ಳಿಯ ಎಲ್ಲಾಪುರ ಹಾಗೂ ಹೇತ್ತೇನಹಳ್ಳಿ ಗ್ರಾಮ ಪಂಚಾಯಿತಿಯ ಹಳ್ಳಿಗಳು ನಗರದಂತೆ ಅಭಿವೃದ್ಧಿಯಾಗಬೇಕಿದೆ. ಇಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಒಳಚರಂಡಿ, ಹಾಗೂ ಕುಡಿಯುವ ನೀರಿನ ಸಮಸ್ಯೆ ಇದೆ. ಹಾಗಾಗಿ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯುವಂತೆ ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಶಾಸಕ ಬಿ. ಸುರೇಶ್ ಗೌಡ ಅವರು ಮನವಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿಯವರು ಈ ದೇಶದ ಹೆಮ್ಮೆಯ ಸುಪುತ್ರ ಅವರ ಜನ್ಮ ದಿನದ ನಿಮಿತ್ತವಾಗಿ ಸೇವಾ ಸಪ್ತಾಹ ಹೆಸರಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಅತ್ಯಂತ ಸಂತೋಷದಾಯಕ ಸಂಗತಿ. ಸ್ವಚ್ಛತೆಯ ಬಗ್ಗೆ  ಅರಿವು ಮೂಡಿಸುವ ನಿಟ್ಟಿನಲ್ಲಿ ಸ್ವತಃ ಗಾಂಧೀಜಿಯವರೇ ರಸ್ತೆಗಿಳಿದು ಸ್ವಚ್ಛ ಮಾಡುವ ಮುಖೇನ ಪ್ರಪಂಚಕ್ಕೆ ಒಂದು ಮೇಲ್ಪಂಕ್ತಿ ಹಾಕಿ ಕೊಟ್ಟಂತಹ ಮೇರು ವ್ಯಕ್ತಿತ್ವ ಅವರದ್ದು. ಅವರು ಕಂಡ ಕನಸನ್ನು ನನಸಾಗಿಸುತ್ತಿರುವ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಎಂದು ಸುರೇಶಗೌಡರು ಹೇಳಿದರು.

WhatsApp Image 2024 09 17 at 4.46.50 PM 1
ಅಜ್ಜಗೊಂಡನಹಳ್ಳಿ ವಿಲೇವಾರಿ ಘಟಕಕ್ಕೆ ಕಸ ರವಾನೆ
ಮೇಲ್ಕಂಡ ಐದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಂಗ್ರಹವಾಗುತ್ತಿರುವ ಕಸವನ್ನು ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಜ್ಜಗೊಂಡನಹಳ್ಳಿ ಕಸ ವಿಲೇವಾರಿ ಘಟಕಕ್ಕೆ ಸಾಗಾಟ ಮಾಡಲು ಪಂಚಾಯಿತಿ ಪಿಡಿಒಗಳಿಗೆ ಶಾಸಕರು ನಿರ್ದೇಶನ ನೀಡಿದರು.
ಈಗಾಗಲೇ ಮಹಾನಗರ ಪಾಲಿಕೆಯ ಆಯುಕ್ತರಿಗೆ ಈ ಬಗ್ಗೆ ಮನವರಿಕೆ ಮಾಡಲಾಗಿದ್ದು ತಕ್ಷಣದಿಂದ ಜಾರಿಗೆ ಬರುವಂತೆ ಅಜಗೊಂಡನಹಳ್ಳಿಗೆ ಕಸ ವಿಲೇವಾರಿ ಮಾಡುವಂತೆ ಶಾಸಕರು ಸೂಚಿಸಿದರು.

ಕಾರ್ಯಕ್ರಮದಲ್ಲಿ ತುಮಕೂರು ನಗರ ಕ್ಷೇತ್ರದ ಶಾಸಕ ಜ್ಯೋತಿ ಗಣೇಶ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರಭು, ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕರವಿ, ತಾಲೂಕು ಪಂಚಾಯಿತಿ ಇ.ಒ ಹರ್ಷಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಲತಾ ರವಿ, ತಾಲೂಕು ಬಿಜೆಪಿ ಘಟಕ ಅಧ್ಯಕ್ಷ ಶಂಕರ್, ಮುಖಂಡರಾದ ಪ್ರಭಾಕರ, ಸುರೇಶ, ರಾಮಚಂದ್ರು, ಗಂಗಾಜನೇಯ ಸಿದ್ದೇಗೌಡ, ತಿಮ್ಮರಾಯಪ್ಪ, ರಾಜು, ರವೀಶ್, ಬ್ಯಾಟರಂಗೇಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.