23 10 24 Anantapura floodhit areas 12

ಸನಾತನ ಧರ್ಮದ ಅನುಷ್ಠಾನದ ಸಾಕಾರ ರೂಪವಾದ “ಮಹಾಕುಂಭ ಮೇಳ….!

Genaral National - ಕನ್ನಡ STATE
ಸನಾತನ ಧರ್ಮದ ಅನುಷ್ಠಾನದ ಸಾಕಾರ ರೂಪವಾದ “ಮಹಾಕುಂಭ”ದಲ್ಲಿ ಭಾಗಿಯಾಗಿ ಇದೀಗ ಪೂಜ್ಯ ಸ್ವಾಮಿ ಜಪಾನಂದಜೀ
ಪಾವಗಡ : ಸನಾತನ ಧರ್ಮದ ಸಾವಿರಾರು ವರ್ಷಗಳ ಪರಂಪರೆಯುಳ್ಳ ಹಾಗೂ ಸಮುದ್ರ ಮಂಥನದ ಸಂದರ್ಭದಲ್ಲಿ ಉದ್ಭವಿಸಿದ ಅಮೃತ ಕಲಶವನ್ನು ಹೊತ್ತೊಯ್ಯುವಾಗ ನಾಲ್ಕು ಕಡೆ ಕೆಲ ಹನಿಗಳು ಭೂಸ್ಪರ್ಶವಾಗಿದ್ದ ಪರಮಪವಿತ್ರ ಪುಣ್ಯ ಸ್ಥಾನಗಳಲ್ಲಿ ಪ್ರಯಾಗರಾಜ ಮಹತ್ತರವಾದ ಸ್ಥಾನವನ್ನು ಪಡೆದಿದೆ. ಸರಿಸುಮಾರು ಐದು ಸಹಸ್ರ ವರ್ಷಗಳ ಇತಿಹಾಸ, ಪರಂಪರೆ, ಸಂಸ್ಕೃತಿ ಮತ್ತೆಲ್ಲದಕ್ಕಿಂತ ಮಿಗಿಲಾಗಿ ಸನಾತನ ಧರ್ಮದ ಅನುಷ್ಠಾನ ರೂಪದ ಪ್ರತಿರೂಪವಾಗಿರುವ ಮಹಾಕುಂಭಕ್ಕೆ ಈವರೆವಿಗಿನ ಲೆಕ್ಕದ ಪ್ರಕಾರ ಸುಮಾರು 45 ಕೋಟಿಗೂ ಮಿಗಿಲಾದ ಹಿಂದೂ ಭಕ್ತರು ಈ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಪುನೀತರಾಗಿರುತ್ತಾರೆ.
WhatsApp Image 2025 02 25 at 11.49.04 AM
ಈ ಸಂದರ್ಭದಲ್ಲಿ ಶ್ರೀ ಶ್ರೀ ಶಂಕರ ಭಗವತ್ಪಾದಾಚಾರ್ಯರು ಅಧಿಕೃತವಾಗಿ ಸಾಧು-ಸಂತರಿಗೆ, ಮಹಾತ್ಮರಿಗೆ, ಋಷಿ ಮುನಿಗಳಿಗೆ, ಸಾಧಕರಿಗೆ 12 ವರ್ಷಗಳಿಗೊಮ್ಮೆ ಕಲೆತು ಸನಾತನ ಧರ್ಮದ ವಿಚಾರಧಾರೆಗಳ ವಿನಿಮಯ ಮಾಡಿಕೊಳ್ಳುವಂತಹ ವೇದಿಕೆಯನ್ನು ನಿರ್ಮಿಸಿದ್ದು ಇತಿಹಾಸ. ಆ ಹಿನ್ನೆಲೆಯಲ್ಲಿ ಕೋಟ್ಯಂತರ ಜನರು ಯಾವುದೇ ಆಹ್ವಾನವಿಲ್ಲದೆ, ಯಾವುದೇ ಒತ್ತಡವಿಲ್ಲದೆ ಕೇವಲ ಹೃದಯಾಂತರಾಳದಲ್ಲಿ ಚಿಮ್ಮುವ ಆಧ್ಯಾತ್ಮಿಕದ ಚಿಲುಮೆಗೆ ಓಗೊಟ್ಟು ತ್ರಿವೇಣಿ ಸಂಗಮವಾದ ಗಂಗಾ, ಯಮುನಾ ಹಾಗೂ ಗುಪ್ತಗಾಮಿನಿ ಸರಸ್ವತಿ ಸಂಗಮದಲ್ಲಿ ಮಿಂದೆದ್ದು ಸಕಲ ದುಷ್ಟ ಶಕ್ತಿಗಳು, ಪಾಪಗಳನ್ನು ತೊಳೆದು ಮನಃಶುದ್ಧಿ ಮಾಡಿಕೊಂಡು ಸನಾತನ ಧರ್ಮದಲ್ಲಿ ತಿಳಿಸಿರುವಂತೆ ಸಾಧನೆಯ ಪಥದಲ್ಲಿ ಸಂನ್ಯಾಸಿ, ಸಂಸಾರಿ ಎಂಬ ಭೇದ ಭಾವವಿಲ್ಲದೆ, ಮನುಜ ಕುಲ ದೈವತ್ವದೆಡೆಗೆ ಸಾಗಲು ಇದೊಂದು ಅತ್ಯಂತ ಮಹತ್ತರವಾದ ಶಕ್ತಿಯುತವಾದ ಹಾಗೂ ಆಧ್ಯಾತ್ಮಿಕದ ಸ್ಫೂರ್ತಿಯ ಚಿಲುಮೆಯಾದ ಮಹಾಕುಂಭ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಎಂದರೆ ಜನ್ಮ ಜನ್ಮಾಂತರದ ಪುಣ್ಯದ ಫಲ ಎನ್ನಬಹುದು.
ಸ್ವಾಮಿ ಜಪಾನಂದಜೀ ಮಹಾರಾಜ್ ರವರಿಗೆ ಇದು ನಾಲ್ಕನೆಯ ಮಹಾಕುಂಭ ದರ್ಶನ. ಸಂನ್ಯಾಸವನ್ನು ಸ್ವೀಕರಿಸಿದ ಅಂದರೆ 1986ರಲ್ಲಿ ಋಷಿಕೇಶದಲ್ಲಿ ಮಂದಾಕಿನಿಯ ತೀರದಲ್ಲಿ ಪವಿತ್ರ ಗಂಗೆಯ ದಡದಲ್ಲಿ ಕುಂಭದಲ್ಲಿ ಭಾಗವಹಿಸಿದ ನಂತರ ಪ್ರಯಾಗರಾಜಕ್ಕೆ ಮೂರು ಬಾರಿ ಕುಂಭದ ಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುನೀತರಾದ ಪೂಜ್ಯ ಸ್ವಾಮಿ ಜಪಾನಂದಜೀ ರವರಿಗೆ ಮಹಾಕುಂಭದಲ್ಲಿ ಭಾಗವಹಿಸಿ ಬರುವುದು ಎಂದರೆ ಧಮನಿ ಧಮನಿಗಳಲ್ಲಿ ಭಾರತೀಯ ಸನಾತನ ಧರ್ಮದ ಮಹಾನ್ ಶಕ್ತಿ ಪಡೆದಂತೆಯೇ ಸರಿ. ಈ ನಿಟ್ಟಿನಲ್ಲಿ ಕಳೆದ ವಾರವಷ್ಟೇ ಶ್ರೀ ಶ್ರೀ ಕೃಷ್ಣ ಮಂದಿರದ (ಇಸ್ಕಾನ್, ಇಂದೋರ್, ಮಧ್ಯಪ್ರದೇಶ) ಹಿರಿಯ ಸಾಧುಗಳ ಸಂಪೂರ್ಣ ಸಹಕಾರದಿಂದ ಈ ಒಂದು ಪವಿತ್ರ ತೀರ್ಥಯಾತ್ರೆ ಸಂಯೋಜಿಸಲಾಗಿತ್ತು. ಈ ತೀರ್ಥಯಾತ್ರೆ ಶ್ರೀಕೃಷ್ಣ ಮಂದಿರದ ಪ್ರಭುಗಳ ಆಶ್ರಯದಲ್ಲಿ ನಡೆಯಿತು. ಅದ್ಭುತವಾದ ಹಾಗೂ ಪವಿತ್ರವಾದ ಪ್ರದೇಶದಲ್ಲಿ ಯಾತ್ರಿಕರೆಲ್ಲರನ್ನು ತಂಗುವಂತೆ ಮಾಡಿ (ಪ್ರಯಾಗರಾಜದ ಮಧ್ಯಭಾಗದಲ್ಲಿರುವ ಯಾತ್ರಿಕ-ನಿವಾಸದಲ್ಲಿ ಉಳಿದುಕೊಂಡು) ಅದ್ಭುತ ಆಧ್ಯಾತ್ಮಿಕ ಯಾತ್ರೆಯನ್ನು ನೆರವೇರಿಸಿದಂತಾಯಿತು.
ಪ್ರತಿದಿನ ಪ್ರಯಾಗರಾಜದಲ್ಲಿರುವ ಅತ್ಯಂತ ಪುರಾತನ ಹಾಗೂ ಸನಾತನ ಧರ್ಮದ ಸೂಚ್ಯಕವಾದ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಲು ಸರ್ವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಅವುಗಳಲ್ಲಿ ಮುಖ್ಯವಾಗಿ ಸಮುದ್ರ ಮಂಥನದ ನಂತರ ಸರ್ಪಗಳ ರಾಜ ವಾಸುಕಿ ವಿಶ್ರಮಿಸಲು ಆಯ್ದುಕೊಂಡ ವಾಸುಕಿ ದೇವಾಲಯದ ಪುಣ್ಯಧಾಮದಲ್ಲಿ ಪವಿತ್ರ ವಾಸುಕಿಯನ್ನು ಕಂಡು ಪೂಜೆ ಸಲ್ಲಿಸಿ ತದನಂತರ ಶಕ್ತಿಪೀಠಗಳಲ್ಲಿ ಒಂದಾದ “ಆಲೋಪಿದೇವಿ” ಮಂದಿರವನ್ನು ತಲುಪಿ ಅಲ್ಲಿಯ ಪವಿತ್ರ ಕ್ಷೇತ್ರದಲ್ಲಿ ತಾಯಿ ಆಲೋಪಿದೇವಿಯನ್ನು ಅರ್ಚಿಸಲಾಯಿತು. ಆಲೋಪಿದೇವಿಯು ಭರತ ಭೂಮಿಯ ಶಕ್ತಿಪೀಠಗಳಲ್ಲಿ ಒಂದಾಗಿದ್ದು ಪ್ರಯಾಗರಾಜದ ಪವಿತ್ರ ಸಂಗಮ ಕ್ಷೇತ್ರದ ಸನಿಹದಲ್ಲಿಯೇ ಇದೆ.
ಈ ಪ್ರದೇಶದಲ್ಲಿ ಜಗಜ್ಜನನಿ ಪಾರ್ವತಿಯ ಹಸ್ತ ಹಾಗೂ ಬೆರಳುಗಳು ಬಿದ್ದಿರುವುದರ ಪ್ರತೀಕವಾಗಿ ಈ ಪ್ರದೇಶ ದೈವತ್ವವನ್ನು ಪಡೆದಿದೆ. ಇಲ್ಲಿಯ ಮತ್ತೊಂದು ವಿಶೇಷತೆಯೆಂದರೆ ದೇವಿಯ ಪೂರ್ಣ ರೂಪವಿಲ್ಲದ ಕೇವಲ ಒಂದು ಪವಿತ್ರ ಜಲದ ಕೂಪದ ರೂಪದಲ್ಲಿ ಕೋಟ್ಯಂತರ ಜನರು ಆಲೋಪಿದೇವಿಯನ್ನು ಪೂಜಿಸುತ್ತಾರೆ. ಇಲ್ಲಿ ಒಂದು ಸುಂದರವಾದ ಪಲ್ಲಕ್ಕಿಯಲ್ಲಿ ದೇವಿಯ ರೂಪವನ್ನಿರಿಸಿ ಆ ಕೂಪದ ಮೇಲೆ ಪೂಜೆಯನ್ನು ಸಲ್ಲಿಸುತ್ತಾರೆ. ಇದು ಪ್ರಯಾಗರಾಜದ ಅತ್ಯಂತ ಪ್ರಾಚೀನ ಹಾಗೂ ಪವಿತ್ರವಾದ ಸ್ಥಳ. ಇದೇ ನಿಟ್ಟಿನಲ್ಲಿ ಪ್ರಯಾಗರಾಜದ ಮತ್ತೊಂದು ಪೌರಾಣಿಕ ಹಿನ್ನೆಲೆಯನ್ನು ಹೊಂದಿರುವ ಶ್ರೀ ವೇಣಿಮಾಧವ ಮಂದಿರಕ್ಕೆ ಭೇಟಿ ನೀಡದ ಹೊರತು ಪ್ರಯಾಗ ಕ್ಷೇತ್ರ ಹಾಗೂ ಮಹಾಕುಂಭದ ತೀರ್ಥಯಾತ್ರೆ ಪೂರ್ಣವಾಗದು ಎಂಬ ಪ್ರತೀತಿ ಇದೆ. ಈ ಕಾರಣದಿಂದ ಈ ಮಂದಿರಕ್ಕೆ ಸಾಂಪ್ರದಾಯಿಕವಾಗಿ ಶ್ರೀ ವೇಣಿಮಾಧವನ ದರ್ಶನಕ್ಕೆ ಸಾಧು ಸಂತರು, ಭಕ್ತರು ಕೋಟಿ ಕೋಟಿ ಸಂಖ್ಯೆಯಲ್ಲಿ ಭೇಟಿ ನೀಡಿ ಪುನೀತರಾಗುತ್ತಾರೆ.
WhatsApp Image 2025 02 25 at 11.51.01 AM
ಈ ಮಂದಿರದ ವಿಶೇಷತೆಯೆಂದರೆ ತ್ರೇತಾಯುಗದಲ್ಲಿ ಮಹಾನ್ ರಾಕ್ಷಸ ಗಜಕರ್ಣ ತನ್ನ ಕ್ರೂರತ್ವದಿಂದ ಸಜ್ಜನರಿಗೆ, ಸಾಧುಗಳಿಗೆ ನಿರಂತರವಾಗಿ ಕಷ್ಟ ಕಾರ್ಪಣ್ಯಗಳನ್ನು ಏಕಪ್ರಕಾರವಾಗಿ ನೀಡುತ್ತಿದ್ದ. ಈ ಸಂದರ್ಭದಲ್ಲಿ ನಾರದ ಮುನಿಗಳನ್ನು ಭಗವಾನ್ ವಿಷ್ಣು ಇವನ ಬಳಿಗೆ ಕಳುಹಿಸಿ ಪವಿತ್ರ ತ್ರಿವೇಣಿ ಸಂಗಮದಲ್ಲಿ ಮಿಂದು ತನ್ನ ಕ್ರೂರ ವೃತ್ತಿಗಳನ್ನು ಕೈಬಿಡುವಂತೆ ಸೂಚಿಸಿದನು. ಆದರೆ ಈ ಗಜಕರ್ಣ ಸ್ನಾನಾದಿಗಳನ್ನು ಮಾಡಿದ ನಂತರ ತನ್ನ ಅಪಾರ ಶಕ್ತಿಯಿಂದ ತ್ರಿವೇಣಿ ಸಂಗಮದಲ್ಲಿರುವ ನೀರನ್ನು ಪೂರ್ಣವಾಗಿ ಕುಡಿದುಬಿಟ್ಟನು. ಇದರಿಂದಾಗಿ ಎಲ್ಲೆಡೆಯು ಭಯಂಕರ ಬರಗಾಲ ಹಾಗೂ ನೀರಿನ ಹಾಹಾಕಾರ ಉಂಟಾಗಿ ಜನರ ಸ್ಥಿತಿ ದುಃಸ್ಥಿತಿಯಲ್ಲಿ ಈಡಾಗುವಂತಾಯಿತು. ಆಗ ಪ್ರಯಾಗರಾಜಕ್ಕೆ ಶ್ರೀ ಮಹಾವಿಷ್ಣು ಸ್ವತಃ ಧಾವಿಸಿ ಈ ಗಜಕರ್ಣನನ್ನು ಸಂಹಾರ ಮಾಡಿ ಮತ್ತೆ ತ್ರಿವೇಣಿ ಸಂಗಮದಲ್ಲಿ ಪವಿತ್ರ ನದಿಗಳ ಕಲರವ ಉಂಟಾಗುವಂತಾಯಿತು. ಈ ಕಾರಣದಿಂದಲೇ ವೇಣಿ ಮಾಧವನ ದೇವಸ್ಥಾನ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದ್ದು ತನ್ಮೂಲಕ ಪೂರ್ಣಕುಂಭಕ್ಕೆ ಧಾವಿಸುವವರೆಲ್ಲರೂ ವೇಣಿ ಮಾಧವನ ದರ್ಶನವಿಲ್ಲದೆ ಪೂರ್ಣಗೊಳ್ಳುವುದಿಲ್ಲ ಎಂಬ ಒಂದು ಸಂಪ್ರದಾಯ ಬಂದಿದೆ.
ಪುರಾತನ ಶೈಲಿಯ ಈ ಸುಂದರ ಮಂದಿರದಲ್ಲಿ ವೇಣಿ ಮಾಧವ ತನ್ನ ಸಖಿಯೊಂದಿಗೆ ಹಸನ್ಮುಖಿಯಾಗಿ ನಿಂತಿರುವ ಪವಿತ್ರ ಮೂರ್ತಿ ಎಂತಹವರಿಗಾದರೂ ಹೃದಯದಲ್ಲಿ ಸ್ಥಾಪಿಸಲ್ಪಡುವವನಾಗುತ್ತಾನೆ. ಈ ಪುಣ್ಯ ಕ್ಷೇತ್ರಗಳ ದರ್ಶನದ ನಂತರ ಪೂರ್ಣಕುಂಭದ ಪವಿತ್ರ ಸ್ನಾನಕ್ಕೆ ಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್ ರವರ ತಂಡ ಭೇಟಿ ನೀಡಿತು. ಅತ್ಯಂತ ಪವಿತ್ರವಾದ ಸಂಗಮ ಕ್ಷೇತ್ರಕ್ಕೆ ವಿಶೇಷವಾಗಿ ಏರ್ಪಡಿಸಿದ ಯಾತ್ರೆ ಶ್ರೀ ಶ್ರೀ ಕೃಷ್ಣ ಮಂದಿರದ ಪ್ರಭುಗಳ ಸಾನಿಧ್ಯದಿಂದ ಮತ್ತೂ ವಿಶೇಷತೆಯನ್ನು ಪಡೆದಂತಾಯಿತು.
 ಮುಂಜಾನೆ ಐದು ಗಂಟೆಗೆ ಪ್ರಯಾಣ ಬೆಳೆಸಿ ಚಿಕ್ಕ ಚಿಕ್ಕ ಯಾಂತ್ರಿಕ ದೋಣಿಗಳಲ್ಲಿ ಸಂಗಮ ಕ್ಷೇತ್ರಕ್ಕೆ ಬಂದಿಳಿದಾಗ ಸನಾತನ ಧರ್ಮದ ಸಹಸ್ರ ಸಹಸ್ರ ವರ್ಷಗಳಿಂದ ನಡೆದುಕೊಂಡು ಬಂದಂತಹ ಮಹಾನ್ ಸಂಪ್ರದಾಯದಲ್ಲಿ ಭಾಗಿಗಳಾಗುವಂತಾಯಿತು ಪೂಜ್ಯ ಸ್ವಾಮಿ ಜಪಾನಂದಜೀ ರವರ ತಂಡ. ಸಂನ್ಯಾಸಿಗಳಿಗೆ ವಿಶೇಷವಾಗಿ ಅವಕಾಶ ನೀಡಿದ್ದು ಅಲ್ಲಿ ಮಿಂದು ತದನಂತರ ವಿಶೇಷವಾಗಿ ಧ್ಯಾನಕ್ಕೆ ಕುಳಿತು ನಂತರ ಶ್ರೀ ಶ್ರೀ ದುರ್ಗಾಸಪ್ತಶತಿ ಪಾರಾಯಣವನ್ನು ಪವಿತ್ರ ತ್ರಿವೇಣಿ ಸಂಗಮದಲ್ಲಿ ಲೋಕ ಕಲ್ಯಾಣಕ್ಕಾಗಿ ಪೂಜ್ಯ ಸ್ವಾಮಿ ಜಪಾನಂದಜೀ ರವರು ನೆರವೇರಿಸಿದ್ದನ್ನು ಅಲ್ಲಿ ಆಗಮಿಸಿದ ಭಕ್ತರ ತಂಡ ಪವಿತ್ರ ವಾತಾವರಣದಲ್ಲಿ ಮಿಂದಂತಾಯಿತು. ಅಂದು ಬೆಳಿಗ್ಗೆ ಆರಂಭಿಸಿದ ಈ ಪೂರ್ಣ ಕುಂಭ ಪವಿತ್ರ ಸ್ನಾನ ಯಾತ್ರೆ ಸಂಜೆಯವರೆವಿಗೆ ನಿರಾತಂಕವಾಗಿ ನೆರವೇರಿತು.
  ಶ್ರೀ ಶ್ರೀ ಪ್ರಭುಗಳ ಸಹಕಾರದಿಂದ ಒಬ್ಬ ಸಾಂಪ್ರದಾಯಿಕ ಪುರೋಹಿತರನ್ನು ಕರೆಯಿಸಿ ತನ್ಮೂಲಕ ಸಮಸ್ತ ಭಕ್ತರ ಸ್ವಹಸ್ತದಿಂದ ವಿಶೇಷ ಪೂಜೆಯನ್ನು ತ್ರಿವೇಣಿ ಸಂಗಮದ ನಡುಗಡ್ಡೆಯಲ್ಲಿ ಶಾಂತಿಯ ವನದಲ್ಲಿ ನಡೆಸಿದಂತಾಯಿತು. ಇದಲ್ಲದೆ ವಿಶೇಷವಾಗಿ ಅಪರ ಕಾರ್ಯಗಳನ್ನು (ಪಿಂಡ ಪ್ರದಾನ ಇತ್ಯಾದಿ) ಈ ಸಾಂಪ್ರದಾಯಿಕ ಪುರೋಹಿತರ ಮೂಲಕ ನೆರವೇರಿಸಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಸನಿಹದ ತ್ರಿವೇಣಿ ಸಂಗಮದ ದಂಡೆಯಲ್ಲಿ ಪೂಜ್ಯ ಸ್ವಾಮಿ ಜಪಾನಂದಜೀ ರವರು ಭಗವನ್ನಾಮ ಸ್ಮರಣೆ, ಹರಿನಾಮ ಸ್ಮರಣೆ ಇತ್ಯಾದಿಗಳನ್ನು ನಡೆಸಿದ್ದು ಪೂರ್ಣಕುಂಭ ಯಾತ್ರೆಗೆ ಶಿಖರಪ್ರದಾನವಾಗಿತ್ತು. ಶ್ರೀ ಶ್ರೀ ಪ್ರಭುಗಳ ಆಶ್ರಯದಲ್ಲಿ ಹರಿನಾಮ ಸ್ಮರಣೆ ಹಾಗೂ ಜಪತಪಾದಿಗಳು ಡೋಲ್ ಹಾಗೂ ಇತರ ಕಂಜರಿ, ಖೋಲ್, ಮೃದಂಗಗಳ ಸಹಿತ ನಾಮಸಂಕೀರ್ತನೆ ತ್ರಿವೇಣಿ ಸಂಗಮದಲ್ಲಿ ನಡೆದಿದುದ್ದು ಪರಮ ಪೂಜ್ಯ ಶ್ರೀಮತ್ ಸ್ವಾಮಿ ಜಪಾನಂದಜೀ ಹಾಗೂ ಇಂದೋರಿನ ಶ್ರೀ ಶ್ರೀ ಹರಿಕೃಷ್ಣ ಮಂದಿರದ ಮುಖ್ಯಸ್ಥರೂ ಆದ ಆಚಾರ್ಯ ರತ್ನದಾಸ ಹಾಗೂ ಸಂಗಡಿಗರ ಪವಿತ್ರ ಸತ್ಸಂಗದ ಮೂಲಕ ಪೂರ್ಣಕುಂಭದ ಯಾತ್ರೆ ಮುಕ್ತಾಯವಾಯಿತು.
WhatsApp Image 2025 02 25 at 11.52.27 AM
  ಪರಮ ಪೂಜ್ಯ ಸ್ವಾಮಿ ಜಪಾನಂದಜೀ ರವರು ಅಂದು ಸಂಜೆ ಸ್ಥಳೀಯ ಶ್ರೀರಾಮಕೃಷ್ಣ ಮಠಕ್ಕೆ ಭೇಟಿಯಿತ್ತು ಅಂದಿನ ಸಾಯಂಕಾಲದ ಆರತಿಯ ಸಂದರ್ಭದಲ್ಲಿ ಭಾಗವಹಿಸಿ ತಮ್ಮ ಗುರುಭಾಯಿಗಳ ಒತ್ತಾಯದ ಮೇರೆಗೆ ಭಜನೆ ಮತ್ತು ನಾಮಸಂಕೀರ್ತನೆಯನ್ನು ನಡೆಸಿಕೊಟ್ಟಿದ್ದು ವಿಶೇಷದಲ್ಲಿ ವಿಶೇಷವಾಗಿತ್ತು. ಶ್ರೀರಾಮಕೃಷ್ಣ ಆಶ್ರಮ ಪ್ರಯಾಗಕ್ಷೇತ್ರದಲ್ಲಿ ಅತ್ಯಂತ ಪುರಾತನವಾದದ್ದು ಹಾಗೂ ಮೇ 1ನೇ ತಾರೀಖು 1897ರಲ್ಲಿ ಸ್ವಾಮಿ ವಿವೇಕಾನಂದರಿಂದಲೇ ಆರಂಭವಾಯಿತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ತದನಂತರ ಶ್ರೀರಾಮಕೃಷ್ಣ ಪರಮಹಂಸರ ಪ್ರತ್ಯಕ್ಷ ಶಿಷ್ಯರಲ್ಲಿ ಒಬ್ಬರಾದ ಶ್ರೀಮತ್ ಸ್ವಾಮಿ ವಿಜ್ಞಾನಾನಂದಜೀ ರವರು ಸತತವಾಗಿ ಮೂರು ದಶಕಗಳ ಕಾಲ ಆಧ್ಯಾತ್ಮಿಕದ ಸಾಧನೆಯಲ್ಲಿ ತೊಡಗಿದ ಮಹಾನ್ ಪುಣ್ಯಕ್ಷೇತ್ರ ಇದಾಗಿದೆ. 1989ರ ದಶಕದಲ್ಲಿ ಸ್ವಾಮಿ ಜಪಾನಂದಜೀ ರವರ ಆಧ್ಯಾತ್ಮಿಕ ಮಾರ್ಗದರ್ಶಕರಲ್ಲಿ ಒಬ್ಬರಾಗಿದ್ದ ಪರಮ ಪೂಜ್ಯ ಸ್ವಾಮಿ ಹರ್ಷಾನಂದಜೀ ಮಹಾರಾಜ್ ರವರು ಇಲ್ಲಿ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಇದ್ದುದ್ದನ್ನು ಇಲ್ಲಿ ನೆನಪಿಸಿಕೊಳ್ಳಬೇಕಾಗಿದೆ. ಇದೇ ಸಂದರ್ಭದಲ್ಲಿ ನಡೆದ ಪೂರ್ಣಕುಂಭದಲ್ಲಿ ಶ್ರೀ ಸ್ವಾಮಿ ಜಪಾನಂದಜೀ ರವರು, ಸ್ವಾಮಿ ಹರ್ಷಾನಂದಜೀ ರವರೊಂದಿಗೆ ಇಲ್ಲಿ ತಂಗಿದ್ದನ್ನು ಸ್ಮರಿಸಬಹುದಾಗಿದೆ.
 ಪೂರ್ಣಕುಂಭ ಯಾತ್ರೆಯ ಅಂತಿಮ ದಿನದಂದು ಪರಮ ಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್ ರವರು ತಮ್ಮೊಂದಿಗೆ ಆಗಮಿಸಿದ ಸರಿಸುಮಾರು 32 ಬೆಂಗಳೂರು, ಮೈಸೂರು, ಮಹಾರಾಷ್ಟ್ರ ಮುಂತಾದ ಪ್ರದೇಶಗಳಿಂದ ಬಂದಿದ್ದ ಭಕ್ತರಿಗೆ ವಿಶೇಷವಾದ ಸತ್ಸಂಗ ಕಾರ್ಯಕ್ರಮ ಹಾಗೂ ಪ್ರವಚನವನ್ನು ನೆರವೇರಿಸಿಕೊಟ್ಟರು. ಪೂರ್ಣಕುಂಭದ ಹಿನ್ನೆಲೆ, ಆಧ್ಯಾತ್ಮಿಕ ಜೀವನದ ಗುರಿ, ಜೀವನಲ್ಲಿ ಶಿವನ ಕಾಣುವ ಆಧ್ಯಾತ್ಮಿಕ ಮಾರ್ಗ ಮುಂತಾದ ವಿಚಾರಗಳ ಮೇಲೆ ಸುದೀರ್ಘವಾದ ಪ್ರವಚನವನ್ನು ಇಂಗ್ಲೀಷಿನಲ್ಲಿ ನೀಡಿದರು. ಕಾರಣ ಬೇರೆ ಬೇರೆ ರಾಜ್ಯಗಳಿಂದ ಬಂದಂತಹ ಭಕ್ತರಿಗೆ ಅರ್ಥವಾಗುವಂತೆ ಇಂಗ್ಲೀಷ್ ಭಾಷೆಯಲ್ಲಿ ವೇದಗಳು, ಉಪನಿಷತ್ತುಗಳು ಹಾಗೂ ಶ್ರೀರಾಮಕೃಷ್ಣ ಪರಂಪರೆಯ ವಿಚಾರಗಳನ್ನು ಮನಮುಟ್ಟುವಂತೆ ಪ್ರವಚನ ನೀಡಿದ್ದು, ಪೂರ್ಣಮಹಾಕುಂಭದ ಯಾತ್ರೆಯ ಶಿಖರಪ್ರಾಯವಾಗಿತ್ತು ಎನ್ನಬಹುದು.
Swami Japanandaji at Prayagraj Mahakumbha Mela 4
ಈ ಸಂದರ್ಭದಲ್ಲಿ ಶ್ರೀರಾಮಕೃಷ್ಣ ಸೇವಾಶ್ರಮದ ನಿಕಟವರ್ತಿಗಳಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ಅಧ್ಯಕ್ಷರು, ಅದಮ್ಯ ಚೇತನ ಹಾಗೂ ಆರ್.ಎಸ್.ಎಸ್. ಮುಖಂಡರು ಹಾಗೂ ಮೂಲತಃ ಪಾವಗಡದವರೇ ಆದ ಶ್ರೀ ಮುಕುಂದ್ ರವರು ಪೂಜ್ಯ ಸ್ವಾಮೀಜಿ ರವರನ್ನು ಪ್ರಯಾಗರಾಜ್‍ನಲ್ಲಿ ಭೇಟಿಯಾದರು.