ಸರ್ಕಾರಿ ಕಚೇರಿಗಳಲ್ಲಿ ಅನಗತ್ಯವಾಗಿ ವಿಡಿಯೋ ಮಾಡುವ ಖಾಸಗಿ ವ್ಯಕ್ತಿಗಳ ಮೇಲೆ ಕ್ರಮವಹಿಸಿ.
ಪಾವಗಡ: ಇತ್ತೀಚಿನ ದಿನಗಳಲ್ಲಿ ಆರ್.ಟಿ.ಐ., ಭ್ರಷ್ಟಚಾರ ನಿಗ್ರಹ ಮತ್ತು ಮುಂತಾದ ಹೆಸರಿನಲ್ಲಿ ಸರ್ಕಾರಿ ಕಛೇರಿಗಳಲ್ಲಿ ಸರ್ಕಾರಿ ನೌಕರರನ್ನು ಗುರಿಯಾಗಿಸಿಕೊಂಡು ವಿಡೀಯೋ ಮಾಡಿ ಸಾಮಾಜಿಕ ಜಾಲತಾಣ ದಲ್ಲಿ ಅಪ್ಲೋಡ್ ಮಾಡುತ್ತಿದ್ದು, ನೌಕರರಿಗೆ ಕಿರಿಕಿರಿ ಉಂಟುಮಾಡುತ್ತಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಶುಕ್ರವಾರ ತಹಶೀಲ್ದಾರ್ ಕಚೇರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರ ಸಲ್ಲಿಸಿದ ನಂತರ ನೌಕರ ಸಂಘದ ಅಧ್ಯಕ್ಷ ರವಿಕುಮಾರ್ ಮಾತನಾಡಿ,
ಸರ್ಕಾರಿ ಕಚೇರಿಗಳಲ್ಲಿ ವಿಡಿಯೋ ಮಾಡುವ ಅವಕಾಶವನ್ನು ಕೆಲ ಖಾಸಗಿ ವ್ಯಕ್ತಿಗಳು ದುರುಪಯೋಗ ಪಡಿಸಿಕೊಂಡು
ಸುಖಾ ಸುಮ್ಮನೆ ತಮ್ಮದಲ್ಲದ ಕೆಲಸಗಳಿಗೆ ಭೇಟಿ ನೀಡಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ನೌಕರರ ತೇಜೋವದೆ ಗೆ ಕಾರಣವಾಗಿರುವ ಸಂಗತಿಗಳು ಇತ್ತೀಚೆಗೆ ಬೆಳಕಿಗೆ ಬರುತ್ತಿದ್ದು,
ಸರ್ಕಾರಿ ನೌಕರರು ತಮಗಾಗುತ್ತಿರುವ ತೊಂದರೆ ಬಗ್ಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಕಂದಾಯ ಇಲಾಖೆಯ ಸಾಕಷ್ಟು ಮಹಿಳಾ ನೌಕರರು ತಮ್ಮ ಸಮಸ್ಯೆಗಳ ಬಗ್ಗೆ ಸಂಘಟನೆಗೆ ಮೌಖಿಕ ದೂರುಗಳು ಸ್ವೀಕೃತವಾಗುತ್ತಿರುತ್ತವೆ ಎಂದರು.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಕಛೇರಿಗಳಲ್ಲಿ ಮಹಿಳಾ ನೌಕರರು ಕರ್ತವ್ಯ ನಿರ್ವಹಿಸುವುದು ಬಹಳ ಕಷ್ಟಕರವಾದ ಕೆಲಸವಾಗಿದೆ. ಸರ್ಕಾರದ ಕೆಲವೊಂದು ನಿಯಮಗಳನ್ನು ದುರುಪಯೋಗ ಮಾಡಿಕೊಂಡ ಕೆಲವರು ಸರ್ಕಾರದ ನಿಯಮಗಳನ್ನು ಮೀರಿ ತಮಗೆ ಬೇಕಾದ ರೀತಿ ಕೆಲಸ ಮಾಡಿಕೊಡದ ಕಛೇರಿಯ ನೌಕರರನ್ನು ಅದರಲ್ಲೂ ಮಹಿಳಾ ನೌಕರರನ್ನು ಗುರಿಯಾಗಿಸಿಕೊಂಡು ಆರ್.ಟಿ.ಐ. ಕಾರ್ಯಕರ್ತರ ಹೆಸರಿನಲ್ಲಿ, ಭ್ರಷ್ಟಚಾರ ನಿಗ್ರಹ ಹೆಸರಿನಲ್ಲಿ ಕಛೇರಿಯ ಕರ್ತವ್ಯದ ವೇಳೆಯಲ್ಲಿ ಕಛೇರಿಗೆ ಭೇಟಿ ನೀಡಿ ಕಡತಗಳ ಬಗ್ಗೆ ವಿಚಾರಿಸುವ ನೆಪದಲ್ಲಿ ಮಹಿಳಾ ನೌಕರರ ಉಡುಗೆ-ತೊಡಿಗೆಯನ್ನು ಕೇಂದ್ರಿಕರಿಸಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿ, ಸದರಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದು ನೌಕರರನ್ನು ಹೆದರಿಸುವುದು, ಹಣಕ್ಕೆ ಬೇಡಿಕೆ ಇಡುವುದು, ಅವರಿಗೆ ಬೇಕಾದ ರೀತಿ ಕಡತಗಳನ್ನು ಸಿದ್ಧಡಿಸುವಂತೆ ಒತ್ತಡ ಹೇರಿ ಬ್ಲಾಕ್ ಮೇಲ್ ಮಾಡುತ್ತಿರುವುದರಿಂದ ಮಾನಸಿಕವಾಗಿ ಹಿಂಸೆ ಆಗುತ್ತಿದ್ದು, ಕಛೇರಿಗಳಲ್ಲಿ ಕೆಲಸ ನಿರ್ವಹಿಸುವುದು ಬಹಳ ಕಷ್ಟಕರವಾದ ಕೆಲಸವಾಗುತ್ತಿದೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಯನ್ನು ಪರಿಹರಿಸಬೇಕೆಂದು ತಿಳಿಸಿದರು.
ಮನವಿ ಸ್ವೀಕರಿಸಿದ ನಂತರ ತಹಶೀಲ್ದಾರ್ ವರದರಾಜು ಮಾತನಾಡಿ ಸರ್ಕಾರಿ ನೌಕರರ ಸಮಸ್ಯೆ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಈ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಮಾರುತೇಶ್ ಎಂ ಎಲ್, ಖಜಾಂಚಿ ಶೇಖರಬಾಬು, ರಾಜ್ಯಪರಿಷತ್ ಸದಸ್ಯರಾದ ಗಂಗಾಧರ, ಉಪಾಧ್ಯಕ್ಷರಾದ ಗಂಗಾಧರ, ರಾಮಾಂಜನೇಯ ಕೆ, ನಿರ್ದೇಶಕರಾದ ರವಿಪ್ರಕಾಶ್, ಮುಕ್ತಿಯಾರ್, ಕಂದಾಯ ಇಲಾಖೆಯ ರಾಜೇಶ್, ರಾಜಗೋಪಾಲ್ ಹಾಗೂ ಸಂಘದ ಇತರ ಪದಾಧಿಕಾರಿಗಳು, ನಿರ್ದೇಶಕರು ಮತ್ತು ಕಂದಾಯ ಇಲಾಖೆಗಳ ವಿವಿಧ ಸಂಘಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಜರಿದ್ದರು
ವರದಿ : ಶ್ರೀನಿವಾಸಲು ಎ
