*ಭಾರತದಲ್ಲಿ ಧೂಮಪಾನಿಗಳಲ್ಲದವರಲ್ಲಿ ¼ ರಷ್ಟು ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳು ದಾಖಲು: ತಜ್ಞ ವೈದ್ಬರು
ಬೆಂಗಳೂರು, ಆಗಸ್ಟ್ 1, 2025:* ಭಾರತದಲ್ಲಿ ದಾಖಲಾಗುತ್ತಿರುವ ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳ ಪೈಕಿ ಶೇ.10-30 ರಷ್ಟು ಪ್ರಕರಣಗಳು ಎಂದಿಗೂ ಧೂಮಪಾನ ಮಾಡದೇ ಇರುವ ವ್ಯಕ್ತಿಗಳಲ್ಲಿ ಕಂಡುಬರುತ್ತಿವೆ. ಇನ್ನೊಂದು ಆಶ್ಚರ್ಯದ ಸಂಗತಿಯೆಂದರೆ ಕೆಲವು ಭಾರತೀಯ ಅಧ್ಯಯನಗಳು ಈ ಪ್ರಕರಣ ಸಂಖ್ಯೆ ಶೇ.40 ಕ್ಕಿಂತ ಅಧಿಕವಾಗಿದೆ ಎಂದು ತಿಳಿಸಿವೆ.
ಸೆಕೆಂಡ್ ಹ್ಯಾಂಡ್ ಸ್ಮೋಕ್ ಅಂದರೆ ಧೂಮಪಾನಿಗಳಿಂದ ಹೊರಸೂಸುವ ಹೊಗೆಯ ಘಮಲು, ಉರುವಲು ಅಥವಾ ಕಲ್ಲಿದ್ದಲು, ಮಾಲಿನ್ಯ ಉಂಟು ಮಾಡುವ ವಸ್ತುಗಳು ಮತ್ತು ಶ್ವಾಸಕೋಶ ರೋಗದಿಂದ ಬಳಲುತ್ತಿರುವುದು ಸೇರಿದಂತೆ ಒಳಾಂಗಣ ಮಲಿನಯುಕ್ತ ಗಾಳಿ ಸೇವನೆಯಿಂದಾಗಿ ಕಾರ್ಸಿನೋಜೆನ್ಸ್ ಗೆ ಒಳಪಡುವುದರಿಂದ ಧೂಮಪಾನಿಗಳಲ್ಲದವರಿಗೂ ಶ್ವಾಸಕೋಶ ಕ್ಯಾನ್ಸರ್ ಬರುತ್ತಿದೆ. ಹ್ಯೂಮನ್ ಕಾರ್ಸಿನೋಜೆನ್ಸ್ ಎಂದು ಕರೆಯಲ್ಪಡುವ ಫೀಮೇಲ್ ಸೆಕ್ಸ್ ಹಾರ್ಮೋನ್ ಗಳ ಗುಂಪುಗಳಾಗಿರುವ ಈಸ್ಟ್ರೋಜೆನ್ಸ್ ಗೆ ಎಕ್ಸ್ ಪೋಸ್ ಆಗುವುದರಿಂದಲೂ ಕೆಲವರಿಗೆ ಶ್ವಾಸಕೋಶ ಕ್ಯಾನ್ಸರ್ ಬರುತ್ತದೆ.
ಕ್ಯಾನ್ಸರ್ ತಡೆ ದಿನದ ಹಿನ್ನೆಲೆಯಲ್ಲಿ ಮಾತನಾಡಿರುವ ಬೆಂಗಳೂರಿನ ಸಂಪ್ರದ ಹಾಸ್ಪಿಟಲ್ ನ ಮೆಡಿಕಲ್ ಆಂಕಾಲಾಜಿ, ಹೆಮೊಟೋಲಾಜಿ & ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟೇಶನ್ ಮುಖ್ಯಸ್ಥರಾದ ಡಾ.ರಾಧೇಶ್ಯಾಂ ನಾಯಕ್ ಅವರು ಈ ಅಂಕಿಅಂಶಗಳನ್ನು ತಿಳಿಸಿದ್ದಾರೆ.
`ಕಳೆದ ಮೂರು ದಶಕಗಳಿಂದ ದೆಹಲಿ, ಬೆಂಗಳೂರು ಮತ್ತು ಚೆನ್ನೈನಂತಹ ಮೆಟ್ರೋ ನಗರಗಳಲ್ಲಿನ ಪುರುಷರು ಮತ್ತು ಮಹಿಳೆಯರಲ್ಲಿ ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿರುವುದು ಕಂಡುಬಂದಿದೆ. ಇದಕ್ಕೆ ಪ್ರಮುಖ ಕಾರಣ ಧೂಮಪಾನ, ಒಳಾಂಗಣ ಮತ್ತು ಹೊರಾಂಗಣಗಳಲ್ಲಿನ ವಾಯು ಮಾಲಿನ್ಯ ಮತ್ತು ನಿಯಮಿತವಾಗಿ ಆರೋಗ್ಯ ತಪಾಸಣೆಗಳ ಬಗ್ಗೆ ನಾಗರಿಕರಲ್ಲಿ ಜಾಗೃತಿಯ ಕೊರತೆ’’ ಎಂದು ಡಾ.ರಾಧೇಶ್ಯಾಂ ನಾಯಕ್ ತಿಳಿಸಿದ್ದಾರೆ.
“ಜಾಗತಿಕ ವಾಯು ಮಾಲಿನ್ಯದಲ್ಲಿ ಭಾರತ 5 ನೇ ಸ್ಥಾನದಲ್ಲಿದೆ. ಭಾರತದ ಅರ್ಧದಷ್ಟು ಮಂದಿ ವಯಸ್ಕರು ಮನೆ, ಉದ್ಯೋಗದ ಸ್ಥಳ ಅಥವಾ ಪ್ರಯಾಣದ ಸಂದರ್ಭದಲ್ಲಿ ಸೆಕೆಂಡ್ –ಹ್ಯಾಂಡ್ ಸ್ಮೋಕ್ ಗೆ ಗುರಿಯಾಗುತ್ತಿದ್ದಾರೆ. ಒಳಾಂಗಣ ಮಾಲಿನ್ಯವು ಭಾರತದಲ್ಲಿನ ಶ್ವಾಸಕೋಶ ಕ್ಯಾನ್ಸರ್ ಗೆ ಶೇ.4-6 ರಷ್ಟು ಕಾರಣವಾಗುತ್ತಿದೆ. ಶ್ವಾಸಕೋಶ ಕ್ಯಾನ್ಸರ್ ಗೆ ಕಾರಣವಾಗುವ ಉರುವಲು ಅಥವಾ ಕಟ್ಟಿಗೆ, ಬೆರಣಿ ಅಥವಾ ಕಲ್ಲಿದ್ದಲಿನಂತಹ ಅಡುಗೆ ಇಂಧನ ಮೂಲಗಳ ಮೇಲೆ ಶೇ.75 ರಷ್ಟು ಭಾರತೀಯರು ಅವಲಂಬಿತರಾಗಿದ್ದಾರೆ. ಮನೆಯೊಳಗೆ ಅಥವಾ ಇನ್ನಿತರ ಒಳಾಂಗಣ ಪ್ರದೇಶಗಳಲ್ಲಿ ಇಂತಹ ಧೂಪದ್ರವ್ಯಗಳನ್ನು ದೀರ್ಘಕಾಲದವರೆಗೆ ಸುಡುವುದರಿಂದ ಅದರಿಂದ ಹೊರಸೂಸಲ್ಪಡುವ ಹೊಗೆಯಿಂದ ಶ್ವಾಸಕೋಶದ ಕ್ಯಾನ್ಸರ್ ಬರುವ ಅಪಾಯಗಳು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗುತ್ತವೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ 40 ವರ್ಷಗಳಿಗಿಂತಲೂ ಅಧಿಕ ಕಾಲದಿಂದ ಮನೆಯೊಳಗೆ ಅಡುಗೆ ಮಾಡಲು ಬಳಸುವ ಉರುವಲು ಅಥವಾ ಕಲ್ಲಿದ್ದಲಿನಂತ ಧೂಪದ್ರವ್ಯದಿಂದಾಗಿ ಇದರ ಹೊಗೆ ಸೇವಿಸುವವರಿಗೆ ಧೂಮಪಾನ ಮಾಡದೇ ಇರುವವರಿಗಿಂತ ಶ್ವಾಸಕೋಶ ಕ್ಯಾನ್ಸರ್ ನಾಲ್ಕು ಪಟ್ಟು ಹೆಚ್ಚಾಗಿದೆ ಎಂಬುದು ಕಂಡುಬಂದಿದೆ’’ ಎಂದು ಅವರು ಹೇಳಿದರು.
ಬೆಂಗಳೂರಿನ ಸಂಪ್ರದ ಹಾಸ್ಪಿಟಲ್ ನ ಪ್ರಿವೆಂಟಿವ್ ಆಂಕಾಲಾಜಿ ಕನ್ಸಲ್ಟೆಂಟ್ ಡಾ.ವಿನೋದ್ ಕೆ ರಮಣಿ ಅವರು ಮಾತನಾಡಿ, “ಶ್ವಾಸಕೋಶದ ಮುನ್ಸೂಚನೆ ಕಂಡುಬರುವ ಹಂತದಲ್ಲಿಯೇ ಧೂಮಪಾನಿಗಳು ಮತ್ತು ಧೂಮಪಾನ ಮಾಡದೇ ಇರುವ ವ್ಯಕ್ತಿಗಳು ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ. ಕೆಮ್ಮು, ಎದೆನೋವು ಮತ್ತು ತೂಕದಲ್ಲಿ ಕಡಿಮೆಯಾಗುವುದು ಕ್ಷಯರೋಗ ಮತ್ತು ಶ್ವಾಸಕೋಶ ಕ್ಯಾನ್ಸರ್ ನ ಲಕ್ಷಣಗಳಾಗಿವೆ. ಇದು ಧೂಮಪಾನಿ ಅಥವಾ ಧೂಮಪಾನ ಮಾಡದೇ ಇರುವ ವ್ಯಕ್ತಿಗಳಲ್ಲೂ ಕಂಡುಬರುತ್ತದೆ.
ಭಾರತದಲ್ಲಿ ಕ್ಷಯರೋಗ ಹೆಚ್ಚಿನ ಹರಡುವಿಕೆ ಮತ್ತು ರೋಗಲಕ್ಷಣಗಳ ಹರಡುವಿಕೆಯನ್ನು ಗಮನಿಸಿದರೆ ಹೆಚ್ಚಿನ ಜನರು ಶ್ವಾಸಕೋಶದ ಕ್ಯಾನ್ಸರ್ ಅನ್ನು ಕ್ಷಯರೋಗವೆಂದು ತಪ್ಪಾಗಿ ರೋಗನಿರ್ಣಯ ಮಾಡಬಹುದು. ಇದು ರೋಗ ನಿರ್ಣಯ ಮತ್ತು ಚಿಕಿತ್ಸೆಯಲ್ಲಿ ಗಮನಾರ್ಹವಾದ ವಿಳಂಬಕ್ಕೆ ಕಾರಣವಾಗಬಲ್ಲದು’’ ಎಂದು ತಿಳಿಸಿದರು.
ಬೆಂಗಳೂರು ಸಂಪ್ರದ ಹಾಸ್ಪಿಟಲ್ ನ ಸರ್ಜಿಕಲ್ ಆಂಕಾಲಾಜಿಯ ಕನ್ಸಲ್ಟೆಂಟ್ ಡಾ.ಪಿಎಸ್ ಪ್ರಭಾಕರನ್ ಅವರು ಮಾತನಾಡಿ, “ಶ್ವಾಸಕೋಶದ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಇಮ್ಯುನೊಥೆರಪಿ ಮತ್ತು ಟಾರ್ಗೆಟೆಡ್ ಥೆರಪಿಯಂತಹ ಆಯ್ಕೆಗಳು ಮತ್ತು ಶ್ವಾಸಕೋಶ ಕ್ಯಾನ್ಸರ್ ಲಸಿಕೆಗಳನ್ನು ಶಸ್ತ್ರಚಿಕಿತ್ಸೆಯ ನಂತರ ರೋಗ ಮರುಕಳಿಸುವುದನ್ನು ತಡೆಗಟ್ಟಲು ನೀಡಲಾಗುತ್ತದೆ. ಕ್ಯಾನ್ಸರ್ ರೋಗಿಗಳ ಕುಟುಂಬ ಸದಸ್ಯರು ಶ್ವಾಸಕೋಶ ಕ್ಯಾನ್ಸರ್ ಸೇರಿದಂತೆ ಯಾವುದೇ ಕ್ಯಾನ್ಸರ್ ನ ಹೆಚ್ಚಿನ ಅಪಾಯದ ಬಗ್ಗೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆ, ಸೂಚನೆ, ಮಾರ್ಗದರ್ಶನ ಪಡೆಯಬೇಕು. ದೀರ್ಘಕಾಲದ ಕೆಮ್ಮು, ಕಫದಲ್ಲಿ ರಕ್ತ ಮತ್ತು ತೂಕ ನಷ್ಟದಂತಹ ಲಕ್ಷಣಗಳ ಬಗ್ಗೆ ಎಚ್ಚರ ವಹಿಸಬೇಕು. ಧೂಮಪಾನ ಮಾಡದಿರುವವರು ಶ್ವಾಸಕೋಶದ ಕ್ಯಾನ್ಸರ್ ಗೆ ನಿಯತಕಾಲಿಕವಾಗಿ ಸ್ಕ್ರೀನಿಂಗ್ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಇದರ ಜೊತೆಗೆ ಪ್ರತಿ ಮೂರು ವರ್ಷಗಳಿಗೊಮ್ಮೆ ಇಡೀ ದೇಹದ ಎಂಆರ್ ಐ ಸ್ಕ್ಯಾನ್ ಅನ್ನು ಮಾಡಿಸಿಕೊಳ್ಳುವುದು ಉತ್ತಮ’’ ಎಂದು ಸಲಹೆ ನೀಡಿದರು.
ವಾಯು ಮಾಲಿನ್ಯ ಸಂಬಂಧಿತ ಕ್ಯಾನ್ಸರ್ ಅಪಾಯಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಜನರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಮಾತನಾಡಿದ ಬೆಂಗಳೂರಿನ ಸಂಪ್ರದ ಹಾಸ್ಪಿಟಲ್ ನ ಮೆಡಿಕಲ್ ಆಂಕಾಲಾಜಿಯ ಕನ್ಸಲ್ಟೆಂಟ್ ಡಾ.ವಿಶ್ವಜೀತ್ ಪೈ ಅವರು, ಜನರು ಹೊರಗಿನ ಕಳಪೆ ಗುಣಮಟ್ಟದ ಅಥವಾ ಕೆಟ್ಟ ಗಾಳಿಗೆ ಒಡ್ಡಿಕೊಂಡಾಗ ಸ್ಯಾನಿಟರಿ ಮಾಸ್ಕ್ ಅನ್ನು ಧರಿಸಬೇಕು. ಕಾರ್ಸಿನೊಜೆನಿಕ್ ಅಂಶಗಳುಳ್ಳ ಫಾಸಿಲ್ ಫ್ಯುಯೆಲ್ ಕಂಬಶನ್ ನ ಗ್ಯಾಸ್ ಗೆ ಒಡ್ಡಿಕೊಳ್ಳುವುದರಿಂದ ದೂರವಿರಬೇಕು. ಏಕೆಂದರೆ, ಇದು ಕ್ಯಾನ್ಸರ್ ತರುವ ವಸ್ತುಗಳು ಮತ್ತು ಅಂಶಗಳನ್ನು ಒಳಗೊಂಡಿರುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ.
ಅಡುಗೆ ತಯಾರಿಸಲು ಉರುವಲು ಬಳಸುವ ಬದಲು ಎಲ್ ಪಿಜಿ ಬಳಸಬೇಕು. ಕಾಲಕಾಲಕ್ಕೆ ಮನೆಯೊಳಗಿನ ಗಾಳಿಯ ಗುಣಮಟ್ಟವನ್ನು ಪರಿಶೀಲಿಸಬೇಕು. ಅಂದರೆ, ಮನೆ ಅಥವಾ ಕಟ್ಟಡದ ಕೆಳಗಿನ ಭೂಮಿಯಲ್ಲಿನ ಮಣ್ಣಿನಿಂದ ಹೊರಸೂಸಲ್ಪಡುವ ವಿಕಿರಣಶೀಲ ರೇಡಾನ್ ಅನಿಲದ ಬಗ್ಗೆ ಪರೀಕ್ಷೆ ನಡೆಸಬೇಕು. ಏಕೆಂದರೆ, ಇದು ಶ್ವಾಸಕೋಶದ ಕ್ಯಾನ್ಸರ್ ಬರುವ ಅಪಾಯವನ್ನು ಉಂಟುಮಾಡುತ್ತದೆ’’ ಎಂದು ಮಾರ್ಗದರ್ಶನ ನೀಡಿದರು.
