ಪಾವಗಡ ತಾಲ್ಲೂಕಿನ ಬಿ.ಎ/ಬಿ.ಕಾಂ/ಬಿ.ಕಾಂ. ಸಿ.ಎಸ್ ಪರೀಕ್ಷಾರ್ಥಿಗಳಿಗೆ ಸಮಯೋಚಿತವಾದ ಸಹಾಯಹಸ್ತ
ದಿ.29-8-2020 ಸೇವೆ ಮಾಡುವ ಮನಸ್ಸು ಹಾಗೂ ಶಕ್ತಿ ಇದ್ದಲ್ಲಿ ಯಾವ ಸೇವೆ ಬೇಕಾದರೂ ಮಾಡಲು ಸಾಧ್ಯ
.
ಸ್ವಾಮಿ ವಿವೇಕಾನಂದರ ಶಕ್ತಿಯೊಂದಿದ್ದರೆ ಸಾಕು. ಇಂದು ನಮ್ಮ ಸಂಸ್ಥೆಗೊಂದು ಪತ್ರ ಬಂದಿತು.
ಪತ್ರದ ಸಾರಾಂಶ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇದೇ ಸೆಪ್ಟಂಬರ್ ಒಂದನೇ ತಾರೀಖಿನಿಂದ ಬಿ.ಎ./ ಬಿ.ಕಾಂ/ ಬಿ.ಕಾಂ ಸಿ.ಎಸ್.ನ ವಾರ್ಷಿಕ ಪರೀಕ್ಷೆಗಳು ನಡೆಯುತ್ತವೆ. ಕೊರೊನಾದ ಕಾರಣದಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುಮಾರು 32 ಕೊಠಡಿಗಳನ್ನು ನೈರ್ಮಲ್ಯೀಕರಣಗೊಳಿಸಿ ಔಷಧಿ ಸಿಂಪಡಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.
ಈ ಕಾರ್ಯಕ್ರಮ ನಮ್ಮ ಪ್ರೀತಿಯ ಹಾಗೂ ಮುಂದಿನ ಭವಿಷ್ಯ ಭಾರತದ ಪ್ರಜೆಗಳಾಗುವ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗಾಗಿ ಕೈಗೊಳ್ಳುತ್ತಿದ್ದೇವೆ ಎಂದು ಪೂಜ್ಯ ಸ್ವಾಮಿ ಜಪಾನಂದಜೀ ರವರು ತಿಳಿಸಿದ್ದಾರೆ. ಇಂದು ಪ್ರಾಂಶುಪಾಲರ ವಿನಂತಿಗೆ ಸ್ಪಂದಿಸಿದ ಶ್ರೀರಾಮಕೃಷ್ಣ ಸೇವಾಶ್ರಮ ಹಾಗೂ ಇನ್ಫೋಸಿಸ್ ಫೌಂಡೇಷನ್ ಸಹಕಾರದೊಂದಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೊಠಡಿಗಳನ್ನು ರೋಗ ನಿರೋಧಕ ಔಷಧಿಗಳನ್ನು ಸಿಂಪಡಿಸುವ ಕಾರ್ಯಕ್ರಮ ನೆರವೇರಿಸಲಾಯಿತು. ಸ್ವಾಮಿ ವಿವೇಕಾನಂದರ ಕನಸಿನ ಭವ್ಯ ಭಾರತ ನಿರ್ಮಾಣ ಈ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ನೆರವೇರಲಿ ಎಂಬುದೇ ಪೂಜ್ಯ ಸ್ವಾಮಿ ಜಪಾನಂದಜೀ ಹಾಗೂ ಸ್ವಯಂಸೇವಕರಾದ ವಿವೇಕಾನಂದ ಬ್ರಿಗೇಡ್‍ರವರ ಮಹದಾಸೆ.
ಇದೇ ಸಂದರ್ಭದಲ್ಲಿ ಪಾವಗಡದ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರ ಮನವಿಗೆ ಓಗೊಟ್ಟು ಇಂದು ತಾ.1-9-2020ರಿಂದ ಆರಂಭವಾಗುವ 19 ದಿವಸಗಳ ಬಿ.ಎ./ಬಿ.ಕಾಂ./ಬಿ.ಕಾಂ. ಸಿ.ಎಸ್. ಪರೀಕ್ಷೆಗೆ ಭಾಗವಹಿಸುವ ಸುಮಾರು 300 ವಿದ್ಯಾರ್ಥಿನಿಯರಿಗೆ ಸ್ಯಾನಿಟೈಸೇಷನ್, ಮಾಸ್ಕ್, ಶಕ್ತಿವರ್ಧಕ ಪಾನೀಯ ಮುಂತಾದವುಗಳನ್ನು ಪ್ರಾಂಶುಪಾಲರಿಗೆ ಹಸ್ತಾಂತರಗೊಳಿಸಲಾಯಿತು. ಒಟ್ಟಿನಲ್ಲಿ ಕೋವಿಡ್ 19 ನಿಯಂತ್ರಣ ಯೋಜನೆಯಡಿಯಲ್ಲಿ ತಾಲ್ಲೂಕಿನ ಎಲ್ಲಾ ಎಸ್.ಎಸ್.ಎಲ್.ಸಿ. ಪರೀಕ್ಷಾರ್ಥಿಗಳು ಸುಮಾರು 3300, ಪಿ.ಯು.ಸಿ.ಯ 2400 ವಿದ್ಯಾರ್ಥಿಗಳು ಹಾಗೂ ಪ್ರಥಮ ದರ್ಜೆ ಕಾಲೇಜಿನ ಮತ್ತು ಮಹಿಳಾ ಕಾಲೇಜಿನ ಪರೀಕ್ಷಾರ್ಥಿಗಳಿಗೆ ನೈರ್ಮಲ್ಯೀಕರಣ ಹಾಗೂ ಸ್ಯಾನಿಟೈಸರ್, ಮುಖಗವಸುಗಳನ್ನು ನೀಡುತ್ತಾ ಅತ್ಯಂತ ಪರಿಣಾಮಕಾರಿಯಾದ ಸಹಾಯಹಸ್ತವನ್ನು ಇನ್ಫೋಸಿಸ್ ಸಹಕಾರದೊಂದಿಗೆ ಪೂಜ್ಯ ಸ್ವಾಮೀಜಿಯವರು ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಶ್ರೀ ಮಾರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಅಧಿಕಾರಿಗಳಾದ ಶ್ರೀ ಬಸವರಾಜು, ಸರ್ಕಾರಿ ಸಹಾಯಕ ಅಭಿಯೋಜಕರಾದ ಶ್ರೀ ವಿ.ಮಂಜುನಾಥ್ ಹಾಜರಿದ್ದರು. ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಪೂಜ್ಯ ಸ್ವಾಮೀಜಿಯವರ ಹಾಗೂ ಇನ್ಫೋಸಿಸ್ ಫೌಂಡೇಷನ್ ಸಹಕಾರವನ್ನು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ ಮತ್ತು ಈ ಸಹಕಾರ ಅತ್ಯಂತ ಕಠಿಣ ಸ್ಥಿತಿಯಲ್ಲಿ ದೊರೆತಿರುವುದು ನಮ್ಮ ಅದೃಷ್ಟವೇ ಸರಿ ಎಂದು ತಿಳಿಸಿದರು.