ಬಿಜೆಪಿ ಅಧಿಕಾರಕ್ಕೆ ತರುವ ಏಕೈಕ ಗುರಿ: ಬಿಎಸ್‍ವೈ
ಶಿಕಾರಿಪುರ: ಮುಂದಿನ ದಿನಗಳಲ್ಲಿ ರಾಜ್ಯದ ಉದ್ದಗಲಕ್ಕೆ ಓಡಾಟ ಮಾಡಿ ಕರ್ನಾಟಕದಲ್ಲಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವ ಒಂದೇ ಒಂದು ಗುರಿ ನನ್ನದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದ್ದಾರೆ.
84ನೇ ಜನ್ಮದಿನದ ಅಂಗವಾಗಿ ಯಡಿಯೂರಪ್ಪ ಅವರಿಗೆ ಹುಟ್ಟೂರಲ್ಲಿ ಸಂಭ್ರಮೋತ್ಸವ ಏರ್ಪಡಿಸಿದ್ದು, ಈ ಸಂದರ್ಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು. ಪಕ್ಷ ಅಧಿಕಾರಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಪ್ರಕಟಿಸಿದರು. ಅದಕ್ಕೆ ನಿಮ್ಮೆಲ್ಲರ ಬೆಂಬಲ- ಸಹಕಾರ ನೀಡಬೇಕೆಂದು ವಿನಂತಿಸಿದರು.
ಸಾಧನೆ ಮಾತನಾಡಬೇಕು; ಮಾತನಾಡುವುದೇ ಸಾಧನೆ ಆಗಬಾರದು ಎಂದ ಅವರು, ಶೋಷಿತ, ಪೀಡಿತ, ದಲಿತ ಜನಾಂಗಗಳ ಅಭಿವೃದ್ಧಿಗಾಗಿ ನನ್ನ ಶಕ್ತಿ ಮೀರಿ ಪ್ರಾಮಾಣಿಕ ಪ್ರಯತ್ನ ಮಾಡಿದ ವಿಶ್ವಾಸ ನನಗಿದೆ. ನಾನು ಕೊಟ್ಟ ಭಾಗ್ಯಲಕ್ಷ್ಮಿ ಯೋಜನೆ ಇವತ್ತು ಕೋಟ್ಯಂತರ ಜನ ಹೆಣ್ಮಕ್ಕಳ ಬದುಕಿನಲ್ಲಿ ಹೊಸ ಬೆಳಕು ನೀಡಲು ಸಾಧ್ಯವಾಗಿದೆ ಎಂದು ವಿಶ್ಲೇಷಿಸಿದರು.
ನಾಡಿನ ರೈತಬಂಧುಗಳು ನೆಮ್ಮದಿಯಿಂದ, ಗೌರವ, ಸ್ವಾಭಿಮಾನದಿಂದ ಬಾಳಿ ಬದುಕುವಂತಾಗಬೇಕು; ಇದಕ್ಕಾಗಿ ನೀರಾವರಿ ಯೋಜನೆಗೆ ಆದ್ಯತೆ ಕೊಟ್ಟಿದ್ದೇನೆ. ಶಿಕಾರಿಪುರ ಮಾತ್ರವಲ್ಲ; ಇಡೀ ರಾಜ್ಯದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ತಿಳಿಸಿದರು. ರಾಜ್ಯದ ಭ್ರಷ್ಟ ವ್ಯವಸ್ಥೆಯನ್ನು ಕಿತ್ತೊಗೆದು ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸಬೇಕೆಂದು ಮನವಿ ಮಾಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಂಸದರಾದ ಬಿ.ವೈ.ರಾಘವೇಂದ್ರ, ಗೋವಿಂದ ಕಾರಜೋಳ, ಪಿ.ಸಿ.ಮೋಹನ್, ಮಾಜಿ ಸಚಿವರಾದ ಬಿ.ಶ್ರೀರಾಮುಲು, ಸಿ.ಟಿ.ರವಿ, ಶಾಸಕರು, ಮಾಜಿ ಶಾಸಕರು, ವಿಧಾನಪರಿಷತ್ ಸದಸ್ಯರು, ವಿವಿಧ ಮಠಾಧೀಶರು, ತಾಲ್ಲೂಕಿನಇದಕ್ಕೂ ಹೆಚ್ಚು ಸಮಾಜಗಳ ಅಧ್ಯಕ್ಷರು, ಪಕ್ಷದ ಪ್ರಮುಖರು ಪಾಲ್ಗೊಂಡಿದ್ದರು.
ಬಿಎಸ್‍ವೈ ಅವರನ್ನು ರಾಜ್ಯ, ದೇಶಕ್ಕೆ ಪರಿಚಯಿಸಿದ
ಶಿಕಾರಿಪುರದ ಮತದಾರರು: ವಿಜಯೇಂದ್ರ
4 ಬಾರಿ ರಾಜ್ಯದ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ್ದಷ್ಟೇ ಅಲ್ಲ; ರಾಜ್ಯಕ್ಕೆ ನಾಲ್ಕಕ್ಕೂ ಹೆಚ್ಚು ಮುಖ್ಯಮಂತ್ರಿಗಳನ್ನು ಕೊಟ್ಟ ಕೀರ್ತಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 84ನೇ ಜನ್ಮದಿನದ ಅಂಗವಾಗಿ ಹುಟ್ಟೂರಲ್ಲಿ ಸಂಭ್ರಮೋತ್ಸವ ಏರ್ಪಡಿಸಿದ್ದು, ಈ ಸಂದರ್ಭದಲ್ಲಿ ಅವರು ಮಾತನಾಡಿದರು. ಮಂಡ್ಯ ಜಿಲ್ಲೆಯ ಬೂಕನಕೆರೆಯಲ್ಲಿ ಜನಿಸಿ ಶಿಕಾರಿಪುರ ತಾಲ್ಲೂಕನ್ನು ಕರ್ಮಭೂಮಿಯನ್ನಾಗಿ ಮಾಡಿಕೊಂಡ ಯಡಿಯೂರಪ್ಪ ಅವರು ಸತತ 8 ಬಾರಿ ಶಾಸಕರಾಗಿ, ಸಂಸದರಾಗಿ, ರಾಜ್ಯದಲ್ಲಿ ವಿಪಕ್ಷ ನಾಯಕರಾಗಿ ಕಾರ್ಯ ನಿರ್ವಹಿಸಿದವರು ಎಂದರು.
ಯಡಿಯೂರಪ್ಪ ಅವರನ್ನು ಇಡೀ ರಾಜ್ಯ, ದೇಶಕ್ಕೆ ಪರಿಚಯಿಸುವ ಕೆಲಸವನ್ನು ಶಿಕಾರಿಪುರದ ಮತದಾರರು ಮಾಡಿದ್ದಾರೆ ಎಂದು ವಿಶ್ಲೇಷಿಸಿದರು.
ಯಡಿಯೂರಪ್ಪನವರಲ್ಲಿ ನಾಯಕತ್ವದ ಗುಣವನ್ನು ಗುರುತಿಸಿ, ರಾಜ್ಯ, ದೇಶಕ್ಕೆ ಪರಿಚಯಿಸಿದ 70ಕ್ಕೂ ಹೆಚ್ಚು ಸಮಾಜಗಳ ಪ್ರಮುಖರನ್ನು ವೇದಿಕೆ ಮೇಲೆ ಕೂರಿಸಿದ್ದೇವೆ. ಈ ಬಾರಿ ಜನ್ಮದಿನವನ್ನು ಎಲ್ಲಿ ಆಚರಿಸಬೇಕೆಂದು ನಾನು, ರಾಘಣ್ಣ, ಗುರುಮೂರ್ತಿಯವರು, ಪಕ್ಷದ ಮುಖಂಡರು ಚರ್ಚಿಸಿದೆವು. ಯಡಿಯೂರಪ್ಪನವರಿಗೆ ಶಕ್ತಿ ನೀಡಿದ ನಮ್ಮ ಊರಿನ ಮತದಾರರು, ನಮ್ಮ ಸಮಾಜದ ಗಣ್ಯರಿಗೆ ಗೌರವ ಕೊಡುವ ಕೆಲಸ ಮಾಡಬೇಕೆಂದು ಚಿಂತನೆ ಮಾಡಿದೆವು. ಅದಕ್ಕಾಗಿ ಇಲ್ಲಿ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು.
ಎಲ್ಲ ಸಮುದಾಯಗಳ ಧ್ವನಿಯಾಗಿ ಹೋರಾಟ ಮಾಡಿದವರು
ಯಡಿಯೂರಪ್ಪನವರು ವಿಪಕ್ಷ ನಾಯಕರಾಗಿ ನಾಡಿನ ಬಡವರು, ರೈತರು, ಕೂಲಿಕಾರರು, ಪರಿಶಿಷ್ಟ ಜಾತಿ, ಪಂಗಡದ ಎಲ್ಲ ಸಮುದಾಯಗಳ ಧ್ವನಿಯಾಗಿ ಹೋರಾಟ ಮಾಡಿದವರು. ರಾಜ್ಯದ ಲಕ್ಷಾಂತರ ಕಾರ್ಯಕರ್ತರ ತಪಸ್ಸಿನ ಫಲದಿಂದ, ಈ ನಾಡಿನ ಎಲ್ಲ ಜಗದ್ಗುರುಗಳು, ಹರಗುರು ಚರಮೂರ್ತಿಗಳ ಆಶೀರ್ವಾದದಿಂದ, ನಾಡಿನ ಪರಿವಾರದ ಹಿರಿಯರ ಆಶೀರ್ವಾದದಿಂದ 4 ಬಾರಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ.
ವಿಪಕ್ಷದ ನಾಯಕರಿದ್ದಾಗಲೇ ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗಿ ಹೋರಾಟ ಮಾಡಿಕೊಂಡು ಬಂದಿದ್ದರು ಎಂದು ವಿವರಿಸಿದರು.
ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ ಶೋಷಿತ, ಪೀಡಿತ ಸಮುದಾಯಗಳಿಗೆ ನ್ಯಾಯ ಕೊಡುವ ಕೆಲಸವನ್ನು ಅವರು ಮಾಡಿದ್ದಾರೆ. ತಮಗೆ ಶಕ್ತಿ ನೀಡಿದ ರೈತರನ್ನು ಅವರು ಮರೆಯಲಿಲ್ಲ ಎಂದು ನುಡಿದರು. ರಾಜ್ಯದ ಇತಿಹಾಸದಲ್ಲಿ ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಏಕೈಕ ಮುಖ್ಯಮಂತ್ರಿ ಅವರು ಎಂದು ತಿಳಿಸಿದರು.
ಯಡಿಯೂರಪ್ಪನವರ ಕರ್ತೃತ್ವ ಶಕ್ತಿ ಕಾರಣ: ಪ್ರಲ್ಹಾದ್ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಮಾತನಾಡಿ, ಶಿಕಾರಿಪುರ ಎಂದರೆ ಯಡಿಯೂರಪ್ಪ, ಯಡಿಯೂರಪ್ಪ ಎಂದರೆ ಶಿಕಾರಿಪುರ ಎಂದು ಗುರುತಿಸಲು ಯಡಿಯೂರಪ್ಪನವರ ಕರ್ತೃತ್ವ ಶಕ್ತಿ ಕಾರಣ ಎಂದು ವಿಶ್ಲೇಷಿಸಿದರು. ಅವರ ಕ್ರಿಯಾಶೀಲತೆಯ ಕಾರಣದಿಂದ, ಜನಬೆಂಬಲದಿಂದ ಪೂರ್ಣಚಂದ್ರನಂತೆ ಹೊಳೆಯುತ್ತಿದ್ದಾರೆ ಎಂದು ತಿಳಿಸಿದರು.
ಯಡಿಯೂರಪ್ಪ ಅವರೊಬ್ಬ ದಣಿವರಿಯದ ನಾಯಕ. ಯಡಿಯೂರಪ್ಪ ಅವರ ಮೇಲೆ ಹಲ್ಲೆ ನಡೆದಾಗ ಅವರು ಜಗತ್ತಿನ ಸಣ್ಣ ಪಕ್ಷದ ಮುಖಂಡರಾಗಿದ್ದರು ಎಂದು ನೆನಪಿಸಿದರು. ಶಿಕಾರಿಪುರದ ಜನರು ಒಬ್ಬ ಧೀಮಂತ ನಾಯಕ, ಮುಖ್ಯಮಂತ್ರಿಯನ್ನು ಕೊಟ್ಟಿದ್ದಾರೆ. ನಿಮಗೆ ನಮಸ್ಕಾರ ಎಂದರು. ಬಿಜೆಪಿ, ಮೋದಿಜೀ ಅವರ ನೇತೃತ್ವದಲ್ಲಿ ಇದೀಗ ವಿಶ್ವದ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಹೇಳಿದರು. ಸತತ ಹೋರಾಟ, ಅಹೋರಾತ್ರಿ ಧರಣಿಯನ್ನು ಈ ರಾಜ್ಯಕ್ಕೆ ಕೊಟ್ಟ ನಾಯಕ ಯಡಿಯೂರಪ್ಪ ಅವರು ಎಂದು ತಿಳಿಸಿದರು. ಯುವಕರು ನಾಚುವಂಥ ವ್ಯಕ್ತಿತ್ವ ಯಡಿಯೂರಪ್ಪ ಅವರದು ಎಂದರು. ಅವರು 100 ವರ್ಷಗಳ ಕಾಲ ಇದ್ದು ನಮ್ಮೆಲ್ಲರಿಗೂ ಮಾರ್ಗದರ್ಶನ ಮಾಡಲಿ ಎಂದು ಆಶಿಸಿದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಂಸದರಾದ ಬಿ.ವೈ.ರಾಘವೇಂದ್ರ, ಗೋವಿಂದ ಕಾರಜೋಳ, ಪಿ.ಸಿ.ಮೋಹನ್, ಮಾಜಿ ಸಚಿವರಾದ ಬಿ.ಶ್ರೀರಾಮುಲು, ಸಿ.ಟಿ.ರವಿ, ಶಾಸಕರು, ಮಾಜಿ ಶಾಸಕರು, ವಿಧಾನಪರಿಷತ್ ಸದಸ್ಯರು, ವಿವಿಧ ಮಠಾಧೀಶರು, ತಾಲ್ಲೂಕಿನ 70ಕ್ಕೂ ಹೆಚ್ಚು ಸಮಾಜಗಳ ಅಧ್ಯಕ್ಷರು, ಪಕ್ಷದ ಪ್ರಮುಖರು ಭಾಗವಹಿಸಿದ್ದರು. ಯಡಿಯೂರಪ್ಪ ಅವರ ಹೋರಾಟದ ಹಾದಿ ಕುರಿತ ವಿಡಿಯೋ ಪ್ರದರ್ಶನ ಮಾಡಲಾಯಿತು.
ಬೆಳಿಗ್ಗೆ ಬಿ.ಎಸ್.ಯಡಿಯೂರಪ್ಪ ಅವರು ಶಿಕಾರಿಪುರದ ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ತದನಂತರ ವಿಕಲಚೇತನ ವ್ಯಕ್ತಿಗಳಿಗೆ ಮೊಟಾರ್ ಸೈಕಲ್ ಮತ್ತು ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಿದರು. ಸ್ಥಳೀಯ ಪ್ರಮುಖರು ಇದ್ದರು.
