‘ಯುವ ಕರ್ನಾಟಕ – ನವ ಭಾರತ’
80ನೇ ಸ್ವಾತಂತ್ರ್ಯೋತ್ಸವದ ಶುಭಾಶಯದೊಂದಿಗೆ ಸುಭದ್ರ, ಸಮೃದ್ಧ ಹಾಗೂ ತಂತ್ರಜ್ಞಾನ ಆಧಾರಿತ ಕರ್ನಾಟಕ ನಿರ್ಮಾಣಕ್ಕೆ ಮುಖ್ಯಮಂತ್ರಿಗಳ ಸಂಕಲ್ಪ
ಕೃತಕ ಬುದ್ಧಿಮತ್ತೆ (AI) ಶಿಕ್ಷಣ, ‘ಮುಖ್ಯಮಂತ್ರಿ ಉದ್ಯೋಗ ಸಂಕಲ್ಪ’, ‘ರೈತ ಚೈತನ್ಯ’ ಯೋಜನೆಯೊಂದಿಗೆ 3 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ
2047ರ ಹೊತ್ತಿಗೆ 3 ಟ್ರಿಲಿಯನ್ ಡಾಲರ್ ಕರ್ನಾಟಕ: ಭವಿಷ್ಯದ ರಾಜ್ಯಕ್ಕೆ ಮುಖ್ಯಮಂತ್ರಿಗಳ ಮಹತ್ವಾಕಾಂಕ್ಷೆಯ ನೀಲಿನಕ್ಷೆ
ಬೆಂಗಳೂರು, ಆಗಸ್ಟ್ 15, (ಕರ್ನಾಟಕ ವಾರ್ತೆ) : ಈಗಾಗಲೇ ಮಾಡಿರುವ ಕೆಲಸಗಳಿಂದ ತೃಪ್ತಿಪಡುವುದಿಲ್ಲ; ವರ್ತಮಾನವನ್ನು ಭವಿಷ್ಯಕ್ಕೆ ಬೇಕಾದಂತೆ ರೂಪಿಸಬೇಕು ಎಂಬ ಸ್ಪಷ್ಟ ದೃಷ್ಟಿಕೋನದೊಂದಿಗೆ ಕರ್ನಾಟಕದ ಮುಂದಿನ ದಶಕಗಳ ಅಭಿವೃದ್ಧಿಗೆ ಮಹತ್ವಾಕಾಂಕ್ಷೆಯ ದಿಕ್ಕನ್ನು ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
80 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಪ್ರಯುಕ್ತ ಇಂದು ನಗರದ ಮಾಣಿಕ್ ಷಾ ಫೆರೇಡ್ ಮೈದಾನದಲ್ಲಿ ಧ್ವಜಾರೋಹಣ ಮಾಡಿ ಗೌರವ ವಂದನೆ ಸಲ್ಲಿಸಿ ನಂತರ ನಾಡಿನ ಜನತೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಕರ್ನಾಟಕವನ್ನು ಕೇವಲ ಆರ್ಥಿಕವಾಗಿ ಬಲಿಷ್ಠ ರಾಜ್ಯವನ್ನಾಗಿಸುವುದಲ್ಲದೆ, ಉದ್ಯೋಗ, ಶಿಕ್ಷಣ, ಆರೋಗ್ಯ, ಕೃಷಿ, ತಂತ್ರಜ್ಞಾನ ಮತ್ತು ಮೂಲಸೌಕರ್ಯಗಳ ಮೂಲಕ ಸಮಗ್ರ ಅಭಿವೃದ್ಧಿಯ ಮಾದರಿ ರಾಜ್ಯವನ್ನಾಗಿ ರೂಪಿಸುವ ಸಂಕಲ್ಪವನ್ನು ವ್ಯಕ್ತಪಡಿಸಿದರು.
ದೇಶದ ಜನಸಂಖ್ಯೆಯಲ್ಲಿ ಕರ್ನಾಟಕದ ಪಾಲು ಶೇ.5.5ರಷ್ಟಿದ್ದರೂ, ದೇಶದ ಆರ್ಥಿಕತೆಯಲ್ಲಿ ರಾಜ್ಯದ ಪಾಲು ಶೇ.9.19ರಷ್ಟಿದೆ. 2025–26ರಲ್ಲಿ ರಾಜ್ಯದ ಜಿ.ಎಸ್.ಡಿ.ಪಿ ರೂ32.81 ಲಕ್ಷ ಕೋಟಿಗೆ ತಲುಪಿದ್ದು, ಶೇ.8.1ರ ನೈಜ ಆರ್ಥಿಕ ಬೆಳವಣಿಗೆಯನ್ನು ದಾಖಲಿಸಿದೆ. ಈ ಬಲದ ಮೇಲೆ ನಿಂತು ಪ್ರಸ್ತುತ 0.344 ಟ್ರಿಲಿಯನ್ ಡಾಲರ್ ಇರುವ ಕರ್ನಾಟಕದ ಆರ್ಥಿಕತೆಯನ್ನು 2047ರ ವೇಳೆಗೆ 3 ಟ್ರಿಲಿಯನ್ ಡಾಲರ್‍ಗೆ ಕೊಂಡೊಯ್ಯುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದರು.
“ಭಾರತದ ಬಲ ಕರ್ನಾಟಕ” ಎಂಬ ಪರಿಕಲ್ಪನೆಯೊಂದಿಗೆ ರಾಜ್ಯದ ಆರ್ಥಿಕ ಬೆಳವಣಿಗೆ ರಾಷ್ಟ್ರದ ಬೆಳವಣಿಗೆಗೆ ಪೂರಕವಾಗಬೇಕು. ಶಿಕ್ಷಣ, ಆರೋಗ್ಯ, ಕೃಷಿ, ಕೈಗಾರಿಕೆ ಮತ್ತು ಮೂಲಸೌಕರ್ಯಗಳಲ್ಲಿ ಹೂಡಿಕೆ ಹೆಚ್ಚಿಸುವ ಮೂಲಕ ಈ ಗುರಿ ಸಾಧಿಸುವ ದಿಕ್ಕನ್ನು ಹೊಂದಲಾಗಿದೆ. ಆದರೆ ಈ ದೂರದೃಷ್ಟಿ ಕೇವಲ ಬೆಂಗಳೂರಿನ ಅಭಿವೃದ್ಧಿಗೆ ಸೀಮಿತವಾಗಿಲ್ಲ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ಹೂಡಿಕೆ ಮತ್ತು ತಂತ್ರಜ್ಞಾನವನ್ನು ಕೊಂಡೊಯ್ಯುವ “Beyond Bengaluru” ಪರಿಕಲ್ಪನೆಗೆ ವಿಶೇಷ ಒತ್ತು ನೀಡಲಾಗಿದೆ. ಕೆಂಪೇಗೌಡ ವಿಮಾನ ನಿಲ್ದಾಣದ ಬಳಿ ಅತ್ಯಾಧುನಿಕ ಉತ್ಪಾದನಾ ಕ್ಲಸ್ಟರ್‍ಗಾಗಿ ರೂ. 20,000 ಕೋಟಿ ಹೂಡಿಕೆ ಹಾಗೂ 1 ಲಕ್ಷ ಉದ್ಯೋಗ ಸೃಷ್ಟಿಯ ಸಂಕಲ್ಪ ಹೊಂದಿದ್ದೇವೆ ಎಂದು ಹೇಳಿದರು.
ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ–ಧಾರವಾಡ, ಮಂಗಳೂರು ಮತ್ತು ಮೈಸೂರಿನಲ್ಲಿ ಐದು ಜಿಟಿಸಿ (Global Technology Centres) ಸ್ಥಾಪಿಸುವ ಮೂಲಕ ಬೆಂಗಳೂರಿನ ಆಚೆಯೂ ಜಾಗತಿಕ ತಂತ್ರಜ್ಞಾನ ಅವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಸರ್ಕಾರ ಹೊಂದಿರುವುದನ್ನು ವಿವರಿಸಿದರು.
ಬೆಂಗಳೂರು ಬಿಸಿನೆಸ್ ಕಾರಿಡಾರ್ : ರೂ 26,000 ಕೋಟಿ ಅಂದಾಜು ವೆಚ್ಚದಲ್ಲಿ 117 ಕಿ.ಮೀ ಉದ್ದದ ವರ್ತುಲ ರಸ್ತೆ ನಿರ್ಮಾಣ ಯೋಜನೆ.BBC-1 ಅಡಿಯಲ್ಲಿ 68 ಕಿ.ಮೀ ಉದ್ದದ 12 ಪಥದ ರಸ್ತೆ ನಿರ್ಮಿಸಲಾಗುತ್ತಿದೆ.
ಜಿ.ಐ.ಎಸ್ ಆಧಾರಿತ ಭೂ ಬ್ಯಾಂಕ್ ಹಾಗೂ ರೂ. 25,000 ಕೋಟಿ ಹೂಡಿಕೆಗೆ ಏಕಗವಾಕ್ಷಿ ವ್ಯವಸ್ಥೆಯ ಮೂಲಕ ಅನುಮೋದನೆ ನೀಡುವ ಗುರಿಯ ಜೊತೆಗೆ, ಹೂಡಿಕೆಯನ್ನು ಉದ್ಯೋಗವಾಗಿ, ಉದ್ಯೋಗವನ್ನು ಪ್ರಾದೇಶಿಕ ಸಮೃದ್ಧಿಯಾಗಿ ಪರಿವರ್ತಿಸಲಾಗುವುದು.
ಯುವಕರು ಉದ್ಯೋಗಿಗಳಾಗಬೇಕು, ರೈತರು ಸಮೃದ್ಧರಾಗಬೇಕು, ಮಹಿಳೆ ಸ್ವಾವಲಂಬಿಗಳಾಗಬೇಕು, ನಮ್ಮ ಮಕ್ಕಳು ವಿದ್ಯಾವಂತರಾಗಬೇಕು, ಕಾರ್ಮಿಕರು ಗೌರವದಿಂದ ಬದುಕಬೇಕು ಮತ್ತು ಪ್ರತಿಯೊಂದು ಕುಟುಂಬವೂ ಅಭಿವೃದ್ಧಿಯ ಫಲವನ್ನು ಅನುಭವಿಸಬೇಕು ಎನ್ನುವುದು ನಮ್ಮ ದೂರದೃಷ್ಟಿಯ ಕೇಂದ್ರ ಬಿಂದುವಾಗಿದೆ ಎಂದು ವಿವರಿಸಿದರು.
ಸರ್ಕಾರಿ ವಲಯದಲ್ಲಿ ಖಾಲಿ ಇರುವ 72,000 ಪ್ರಮುಖ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಮುಂದಿನ 6 ತಿಂಗಳಲ್ಲಿ ಎಲ್ಲಾ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿಸಿದರು.
ಅತ್ಯಂತ ಹಿಂದುಳಿದ 10 ಜಿಲ್ಲೆಗಳಲ್ಲಿ ನೂತನ ಉದ್ಯೋಗ ಸೃಷ್ಟಿಸುವ ಉದ್ಯಮಿಗಳಿಗೆ, ಪ್ರತಿ ಉದ್ಯೋಗಕ್ಕೆ ತಿಂಗಳಿಗೆ ರೂ. 2,500 ಪ್ರೋತ್ಸಾಹ ಧನವನ್ನು 2 ವರ್ಷಗಳ ಕಾಲ ನೀಡಲಾಗುತ್ತದೆ. ಇದರಿಂದ 1 ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.
6ನೇ ತರಗತಿಯಿಂದಲೇ ಶಾಲಾ ಹಂತದಲ್ಲಿ ‘ಎಐ ಅಕ್ಷರ ಅಭಿಯಾನ’ ಪ್ರಾರಂಭಿಸಲಾಗುತ್ತಿದ್ದು, ನಿಕಟ ಉಚಿತ ‘ಕೋಡಿಂಗ್ ಗುರುಕುಲ’ ತರಗತಿಗಳನ್ನು ಆಯೋಜಿಸಲಾಗುತ್ತದೆ. ಬೆಂಗಳೂರಿನಲ್ಲಿ ಸರ್ಕಾರಿ ಸ್ವಾಮ್ಯದ ಪ್ರತ್ಯೇಕ ಂI ವಿಶ್ವವಿದ್ಯಾಲಯ ಹಾಗೂ ಎಐ ಹಬ್‍ಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.
1 ರಿಂದ 10ನೇ ತರಗತಿಯವರೆಗೆ ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕೋರ್ಸ್‍ಗಳ ಪ್ರವೇಶಾತಿಯಲ್ಲಿ ಶೇ. 7.5 ರಷ್ಟು ಒಳಮೀಸಲಾತಿ ನೀಡಲಾಗುತ್ತದೆ.
1000 ಸರ್ಕಾರಿ ಶಾಲೆಗಳನ್ನು ಎಲ್.ಕೆ.ಜಿ ಯಿಂದ 12ನೇ ತರಗತಿವರೆಗೆ ‘ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ’ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶೈಕ್ಷಣಿಕವಾಗಿ ಹಾಗೂ ಮೂಲಸೌಕರ್ಯದೊಂದಿಗೆ ಬಲಪಡಿಸಲಾಗುತ್ತದೆ ಎಂದರು.
ಯುವಜನರಲ್ಲಿ ಸಾಮರಸ್ಯ, ಕ್ರೀಡೆ ಮತ್ತು ಸಂಸ್ಕøತಿ ಪ್ರಸಾರಕ್ಕೆ 10,000 ಯುವ ಸಂಘಗಳನ್ನು ಸ್ಥಾಪಿಸಲಾಗುತ್ತಿದ್ದು, ಪ್ರತಿ ಸಂಘಕ್ಕೆ ರೂ. 10 ಲಕ್ಷದಂತೆ ವರ್ಷಕ್ಕೆ ರೂ 1,000 ಕೋಟಿ ಅನುದಾನ ಮೀಸಲಿಡಲಾಗಿದೆ.
ರೈತ–ಗ್ರಾಮೀಣ ಕರ್ನಾಟಕದ ಕಾಳಜಿ
ರೈತ ಸಮೃದ್ಧನಾಗಬೇಕು : ತಂತ್ರಜ್ಞಾನದಿಂದ ಕೃಷಿಗೆ ಹೊಸ ಶಕ್ತಿ ತುಂಬಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಕಲ್ಪ
ರೈತರ ಬದುಕನ್ನು ಕೇವಲ ಪರಿಹಾರ ಮತ್ತು ಸಬ್ಸಿಡಿಗಳ ಮೂಲಕ ನೋಡುವ ಬದಲು, ಆಧುನಿಕ ತಂತ್ರಜ್ಞಾನ, ಮಾರುಕಟ್ಟೆ ಸಂಪರ್ಕ ಮತ್ತು ಯಾಂತ್ರೀಕರಣದ ಮೂಲಕ ಕೃಷಿಯನ್ನು ಹೆಚ್ಚು ಲಾಭದಾಯಕವಾಗಿಸುವ ಮಹತ್ವಾಕಾಂಕ್ಷೆಯನ್ನು ಹೊಂದಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
“ರೈತ ಸಮೃದ್ಧನಾಗಬೇಕು” ಎಂಬುದು ಸರ್ಕಾರದ ಅಭಿವೃದ್ಧಿ ದೃಷ್ಟಿಕೋನದ ಪ್ರಮುಖ ಗುರಿಗಳಲ್ಲಿ ಒಂದಾಗಿದೆ. ಬರದಂತಹ ತುರ್ತು ಸವಾಲುಗಳನ್ನು ಎದುರಿಸುವುದರ ಜೊತೆಗೆ, ಕೃಷಿಯ ಭವಿಷ್ಯವನ್ನು ತಂತ್ರಜ್ಞಾನಕ್ಕೆ ಜೋಡಿಸುವ ದೀರ್ಘಕಾಲೀನ ಕ್ರಮಗಳಿಗೆ ಸರ್ಕಾರ ಮುಂದಾಗಿದೆ ಎಂದರು.
ಬೆಳೆ ವಿಮಾ ಯೋಜನೆಯಡಿ 12.35 ಲಕ್ಷ ರೈತರಿಗೆ ರೂ. 1,300 ಕೋಟಿ ಪರಿಹಾರ ನೀಡಿರುವುದರ ಜೊತೆಗೆ, ಈ ಮುಂಗಾರು ಹಂಗಾಮಿನಲ್ಲಿ ದಾಖಲೆಯ 24.49 ಲಕ್ಷ ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದಾರೆ. 1.85 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ವಿಸ್ತರಿಸಲಾಗಿದ್ದು, 184 ಹೈಟೆಕ್ ಹಾರ್ವೆಸ್ಟರ್ ಹಬ್‍ಗಳನ್ನು ಸ್ಥಾಪಿಸಿರುವುದನ್ನು ಪ್ರಸ್ತಾಪಿಸಿದರು.
ಈಗ ಕೃಷಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು “ಮುಖ್ಯಮಂತ್ರಿ ರೈತ ಚೈತನ್ಯ” ಯೋಜನೆ ಘೋಷಿಸಲಾಗಿದೆ. ಡ್ರೋನ್ ಮತ್ತು ಉಪಗ್ರಹ ಚಿತ್ರಗಳ ಮೂಲಕ ಬೆಳೆ ಸಮೀಕ್ಷೆ ನಡೆಸಿ, ಕೀಟ–ರೋಗಬಾಧೆ, ಬೆಳೆ ಸ್ಥಿತಿ ಮತ್ತು ಮಾರುಕಟ್ಟೆಯ ನೈಜ ಸಮಯದ ಮಾಹಿತಿಯನ್ನು ರೈತರಿಗೆ ತಲುಪಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ. ಈ ಮಾಹಿತಿಯನ್ನು ಕೃಷಿ ಮಾರುಕಟ್ಟೆಯ ಡಿಜಿಟಲ್ ವ್ಯವಸ್ಥೆಯೊಂದಿಗೆ ಜೋಡಿಸಿ, ಆ ಕ್ಷಣದ ಬೆಲೆ ಮಾಹಿತಿಯನ್ನು ರೈತರಿಗೆ ತಲುಪಿಸುವ ಗುರಿ ಹೊಂದಲಾಗಿದೆ. ಅಂದರೆ, ರೈತ ನಿರ್ಧಾರ ತೆಗೆದುಕೊಳ್ಳುವಾಗ ಊಹೆಯ ಬದಲು ನಿಖರ ಮಾಹಿತಿಯನ್ನು ಆಧಾರವಾಗಿಟ್ಟುಕೊಳ್ಳುವ ವ್ಯವಸ್ಥೆ ನಿರ್ಮಾಣವಾಗಲಿದೆ ಎಂದರು.
ಸಣ್ಣ ರೈತರಿಗಾಗಿ “ರೈತ ಮಿತ್ರ” ಯೋಜನೆಯನ್ನೂ ಘೋಷಿಸಲಾಗಿದ್ದು, ಟ್ರ್ಯಾಕ್ಟರ್, ರೋಟವೇಟರ್, ಟಿಲ್ಲರ್, ಸೀಡ್ ಡ್ರಿಲ್, ಕೊಯ್ಲು ಯಂತ್ರ ಬಾಡಿಗೆಗೆ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ. ಎರಡು ಹೆಕ್ಟೇರ್ ಅಥವಾ ಅದಕ್ಕಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಬಾಡಿಗೆ ಶುಲ್ಕದ ಮೇಲೆ ಶೇ. 50ರಷ್ಟು ಸಬ್ಸಿಡಿ ನೀಡಲಾಗುತ್ತದೆ.
ಇದರ ಜೊತೆಗೆ “ಕರ್ನಾಟಕ ಪ್ರೋಟೀನ್ ಮಿಷನ್” ಮೂಲಕ ಮೊಟ್ಟೆ, ಕೋಳಿ, ಮೀನು, ಮೇಕೆ ಮತ್ತು ಕುರಿಗಳನ್ನು ಒಳಗೊಂಡ ಪ್ರೋಟೀನ್ ಕ್ಲಸ್ಟರ್‍ಗಳನ್ನು ಅಭಿವೃದ್ಧಿಪಡಿಸಿ, ಕೃಷಿಯನ್ನು ಪಶುಸಂಗೋಪನೆಯೊಂದಿಗೆ ಜೋಡಿಸುವ ಉದ್ದೇಶವೂ ಇದೆ. ಇದರಿಂದ ಗ್ರಾಮೀಣ ಕುಟುಂಬಗಳಿಗೆ ಹೆಚ್ಚುವರಿ ಆದಾಯ ಮತ್ತು ಉದ್ಯೋಗದ ಅವಕಾಶಗಳನ್ನು ಸೃಷ್ಟಿಸುವ ಗುರಿ ಇದೆ ಎಂದರು.
ರೈತರ ಬದುಕಿಗೆ ತಂತ್ರಜ್ಞಾನ, ನೀರು, ಮಾರುಕಟ್ಟೆ ಮತ್ತು ಯಾಂತ್ರೀಕರಣ ಈ ನಾಲ್ಕು ಶಕ್ತಿಗಳನ್ನು ಜೋಡಿಸುವ ಮೂಲಕ ಕೃಷಿಯನ್ನು ಹೊಸ ಆರ್ಥಿಕ ಚಟುವಟಿಕೆಯಾಗಿ ರೂಪಿಸಲಾಗುವುದು ಎಂದು ಹೇಳಿದರು.
ಹೈನುಗಾರಿಕೆ ಬೆಂಬಲ: ನಂದಿನಿ ಯೋಜನೆಗಳ ಮೂಲಕ 9 ಲಕ್ಷ ಹಾಲು ಉತ್ಪಾದಕ ರೈತರ ಖಾತೆಗೆ ರೂ. 2,600 ಕೋಟಿ ನೇರ ವರ್ಗಾವಣೆ (ಡಿಬಿಟಿ) ಮಾಡಲಾಗಿದ್ದು, 38 ಲಕ್ಷ ರೈತರಿಗೆ ರೂ. 30,000 ಕೋಟಿ ಸಾಲ ಸೌಲಭ್ಯ ನೀಡಲಾಗಿದೆ.
ಬೆಂಗಳೂರು ನಗರ ನವೀಕರಣ ಮತ್ತು ಭದ್ರತೆ
ಗ್ರೇಟರ್ ಬೆಂಗಳೂರು ಪ್ರಾಧಿಕಾರ: ಸುಲಭ ಆಡಳಿತಕ್ಕಾಗಿ 5 ಹೊಸ ಮಹಾನಗರ ಪಾಲಿಕೆಗಳು ಹಾಗೂ ಬೆಂಗಳೂರು ನಗರ ಪೆÇಲೀಸ್ ಕಮಿಷನರೇಟ್ ಅನ್ನು 5 ಕಮಿಷನರೇಟ್‍ಗಳಾಗಿ ವಿಂಗಡಣೆ ಮಾಡಲಾಗಿದೆ.
ರೌಡಿ ನಿಗ್ರಹ ದಳ: ಸಾರ್ವಜನಿಕ ಸುರಕ್ಷತೆಗಾಗಿ ಬೆಂಗಳೂರಿನಲ್ಲಿ ಪ್ರತ್ಯೇಕ “ರೌಡಿ ನಿಗ್ರಹ ದಳ” ರಚನೆ ಮಾಡಲಾಗಿದೆ ಎಂದು ಹೇಳಿದರು.
ನೂತನ ವೃಕ್ಷ ಉದ್ಯಾನವನಗಳು (Tree Parks): ತುರಹಳ್ಳಿ, ತೊಟ್ಟಿ ಕಲ್ಲು ಫಾಲ್ಸ್, ನೆಟ್ಟಿಗೆರೆ, ಬಿ.ಎಂ.ಕಾವಲ್ ಮತ್ತು ಬಸವಂತರ/ಮಂಡೂರು-ಜ್ಯೋತಿಪುರ ಪ್ರದೇಶಗಳಲ್ಲಿ ಲಾಲ್‍ಬಾಗ್ ಮಾದರಿಯ ಉದ್ಯಾನವನ ಅಭಿವೃದ್ಧಿ ಪಡಿಸಲಾಗುವುದು. ಅಲ್ಲದೇ, 7 ಪ್ರಮುಖ ಕೆರೆಗಳ ನವೀಕರಣ: ಹೆಸರಘಟ್ಟ, ಬೆಟ್ಟದಕೋಟೆ, ಹೊಸಕೋಟೆ, ಎಲೆ ಮಲ್ಲಪ್ಪ ಶೆಟ್ಟಿ, ಬನ್ನೇರುಘಟ್ಟ, ಬಾಗಲೂರು ಮತ್ತು ಬೈರಮಂಗಲ ಕೆರೆಗಳ ಪುನಶ್ಚೇತನ ಮಾಡಲಾಗುವುದು ಎಂದರು.
ಕರ್ನಾಟಕ ರಾಜ್ಯ ಮೋಟಾರು ವಾಹನ ವಿಮಾ ಸಂಸ್ಥೆ: ಸಾರ್ವಜನಿಕರಿಗೆ ಕಡಿಮೆ ವೆಚ್ಚದಲ್ಲಿ ವಿಮಾ ಸೇವೆ ನೀಡಲು ಪ್ರತ್ಯೇಕ ರಾಜ್ಯ ಸಂಸ್ಥೆ ಸ್ಥಾಪನೆ ಮಾಡಲಾಗುವುದು ಎಂದರು.
ರಾಜ್ಯದಲ್ಲಿ ಗೃಹ ದೌರ್ಜನ್ಯ/ಬಂಧನ ಪ್ರಮಾಣ ಶೇ. 44ರಿಂದ ಶೇ. 14ಕ್ಕೆ ಇಳಿಕೆಯಾಗಿದ್ದು, ಅಪೌಷ್ಟಿಕತೆ ಪ್ರಮಾಣ ಶೇ. 35ರಿಂದ ಶೇ. 26ಕ್ಕೆ ತಗ್ಗಿದೆ ಎಂದು ತಿಳಿಸಿದರು.
ಯುವಜನರ ಶಿಕ್ಷಣ ಮತ್ತು ಉದ್ಯೋಗದ ಕುರಿತ ಆತಂಕಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಹೇಳಿದ ಮುಖ್ಯಮಂತ್ರಿಗಳು “ಯುವ ಕರ್ನಾಟಕ–ನವ ಭಾರತ”ವನ್ನು ತಮ್ಮ ಧ್ಯೇಯವಾಕ್ಯವಾಗಿ ಘೋಷಿಸಲಾಗಿದೆ. ಯುವಜನರ ಮೇಲೆ ಹೂಡಿಕೆ ಮಾಡುವ ಮೂಲಕ ಬಲವಾದ ಕರ್ನಾಟಕವನ್ನು ಕಟ್ಟುವ ಸಂಕಲ್ಪವನ್ನು ಹೊಂದಲಾಗಿದೆ ಎಂದು ತಿಳಿಸಿದರು.
“ಯುವ ಉದ್ಯೋಗ ಸೇತು” ಯೋಜನೆಯ ಮೂಲಕ ಉದ್ಯೋಗ ಹುಡುಕುವ ಯುವಕರು, ಉದ್ಯೋಗ ನೀಡುವ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಒಂದೇ ಡಿಜಿಟಲ್ ವೇದಿಕೆಗೆ ತರಲು ಉದ್ದೇಶಿಸಲಾಗಿದೆ.
100 ಸರ್ಕಾರಿ ಐಟಿಐ ಗಳನ್ನು ಉದ್ಯೋಗ ಆಧಾರಿತ ಕ್ಯಾಂಪಸ್‍ಗಳಾಗಿ ಪರಿವರ್ತಿಸಿ, ಕೈಗಾರಿಕೆಗಳ ಸಹಯೋಗದಲ್ಲಿ 10,000 ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಗುರಿಯೂ ಇದೆ ಎಂದರು.
ಇದರ ಜೊತೆಗೆ ರಾಜ್ಯದ ಅತ್ಯಂತ ಹಿಂದುಳಿದ 10 ಜಿಲ್ಲೆಗಳಲ್ಲಿ ಹೊಸ ಉದ್ಯೋಗ ಸೃಷ್ಟಿಸುವ ಉದ್ಯಮಿಗಳಿಗೆ ಪ್ರತಿ ಹೊಸ ಉದ್ಯೋಗಕ್ಕೆ ತಿಂಗಳಿಗೆ ರೂ. 2,500 ಪ್ರೋತ್ಸಾಹಧನ ನೀಡುವ “ಉದ್ಯೋಗ ನಿಧಿ” ಯೋಜನೆ ಘೋಷಿಸಲಾಗಿದೆ.
ದೇಶದ ಪ್ರಪ್ರಥಮ ಸರ್ಕಾರಿ ಸ್ವಾಮ್ಯದ ಎಐ ವಿಶ್ವವಿದ್ಯಾಲಯವನ್ನು ಜನವರಿ 2027ರ ವೇಳೆಗೆ ಆರಂಭಿಸುವ ಘೋಷಣೆಯೂ ಕರ್ನಾಟಕವನ್ನು ಭವಿಷ್ಯದ ತಂತ್ರಜ್ಞಾನ ಮಾನವ ಸಂಪನ್ಮೂಲದ ಕೇಂದ್ರವನ್ನಾಗಿಸುವ ಮಹತ್ವಾಕಾಂಕ್ಷೆಯನ್ನು ತೋರಿಸುತ್ತದೆ ಎಂದ ಅವರು, ಯುವಕರ ಆತಂಕಕ್ಕೆ ಉತ್ತರ ನೀಡುವುದು, ಅವರ ಪ್ರತಿಭೆಗೆ ಅವಕಾಶ ಕಲ್ಪಿಸುವುದು ಮತ್ತು “ಶಿಕ್ಷಣದಿಂದ ಉದ್ಯೋಗದವರೆಗೆ” ಸರ್ಕಾರ ಯುವಜನರ ಕೈಹಿಡಿಯುವ ಉದ್ದೇಶ ಹೊಂದಿದೆ ಎಂದರು.
ಜನರ ಬದುಕಿನ ಗುಣಮಟ್ಟ ಹೆಚ್ಚಬೇಕು ಮತ್ತು ಸಮಗ್ರ ಅಭಿವೃದ್ಧಿಯ ಫಲ ಪ್ರತಿ ಕುಟುಂಬವೂ ಅನುಭವಿಸಬೇಕು:
ಜನಕೇಂದ್ರಿತ ಕರ್ನಾಟಕದ ನಿರ್ಮಾಣಕ್ಕೆ ಮುಖ್ಯಮಂತ್ರಿಗಳ ಕರೆ
ಅಭಿವೃದ್ಧಿಯ ಅರ್ಥ ಕೇವಲ ದೊಡ್ಡ ಹೂಡಿಕೆಗಳು, ರಸ್ತೆಗಳು ಅಥವಾ ಕಟ್ಟಡಗಳ ನಿರ್ಮಾಣವಲ್ಲ. ಅದರ ಅಂತಿಮ ಫಲ ಪ್ರತಿಯೊಂದು ಕುಟುಂಬದ ಬದುಕಿನಲ್ಲಿ ಕಾಣಿಸಬೇಕು ಎನ್ನುವುದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ 80ನೇ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಹೊರಹೊಮ್ಮಿದೆ.
“ಪ್ರತಿ ಕುಟುಂಬಕ್ಕೂ ಭದ್ರತೆ, ಪ್ರತಿ ನಾಗರಿಕನಿಗೂ ಗೌರವ, ಯುವಜನರಿಗೆ ಅವಕಾಶ” ಎಂಬ ಮೂಲತತ್ವದೊಂದಿಗೆ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳನ್ನು ಅವರು ಜನರ ಮೇಲಿನ ಹೂಡಿಕೆ ಎಂದು ಬಣ್ಣಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಡಿ 1.28 ಕೋಟಿ ಮಹಿಳೆಯರಿಗೆ ತಿಂಗಳಿಗೆ ರೂ. 2,000 ತಲುಪುತ್ತಿದ್ದು, ಗೃಹಜ್ಯೋತಿ ಯೋಜನೆಯಡಿ 1.65 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ದೊರೆಯುತ್ತಿದೆ. ಶಕ್ತಿ ಯೋಜನೆಯಡಿ 3.5 ಕೋಟಿ ಮಹಿಳೆಯರು ಸುಮಾರು 796 ಕೋಟಿ ಉಚಿತ ಪ್ರಯಾಣಗಳನ್ನು ಮಾಡಿದ್ದಾರೆ.
ಸರ್ಕಾರ ಗ್ಯಾರಂಟಿಗಳಿಗೆ ಸೀಮಿತವಾಗಿಲ್ಲ. ಇಷ್ಟಕ್ಕೇ ನಿಲ್ಲುವುದಿಲ್ಲ. ಆರೋಗ್ಯ, ಶಿಕ್ಷಣ, ನೀರು, ಮೂಲಸೌಕರ್ಯ, ಸಾಮಾಜಿಕ ನ್ಯಾಯ ಮತ್ತು ಉತ್ತಮ ಆಡಳಿತವನ್ನು ಒಟ್ಟುಗೂಡಿಸಿ ಸಮಗ್ರ ಅಭಿವೃದ್ಧಿಯ ಮಾದರಿಯನ್ನು ನಿರ್ಮಿಸುವ ಗುರಿಯನ್ನು ಹೋದಿದೆ ಎಂದು ತಿಳಿಸಿದರು.
ಜಲ ಭದ್ರತೆಯನ್ನು ಸರ್ಕಾರದ ಮೊದಲ ಆದ್ಯತೆಯಾಗಿ ಗುರುತಿಸಿರುವ ಅವರು, ಈ ವರ್ಷವೇ ರೂ. 15,908 ಕೋಟಿ ಮೊತ್ತದ 112 ಪ್ರಮುಖ ಜಲಸಂಪನ್ಮೂಲ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.
ಎತ್ತಿನಹೊಳೆ ಯೋಜನೆಯ ಮೊದಲ ಹಂತ ಪೂರ್ಣಗೊಂಡಿದ್ದು, ಜಲ ಜೀವನ್ ಮಿಷನ್ ಅಡಿಯಲ್ಲಿ 90 ಲಕ್ಷ ಗ್ರಾಮೀಣ ಕುಟುಂಬಗಳಿಗೆ ಕೊಳವೆ ಮೂಲಕ ಕುಡಿಯುವ ನೀರು ಒದಗಿಸಲಾಗಿದೆ. ಆರೋಗ್ಯ ಕ್ಷೇತ್ರದಲ್ಲೂ ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳನ್ನು ಬಲಪಡಿಸುವ ಹೊಸ ಗುರಿಯನ್ನು ಘೋಷಿಸಲಾಗಿದೆ.
ಮುಂದಿನ ಸ್ವಾತಂತ್ರ್ಯೋತ್ಸವ ದಿನಾಚರಣೆಯೊಳಗೆ ಖಾಲಿ ವೈದ್ಯರು, ತಜ್ಞ ವೈದ್ಯರು, ದಾದಿಯರು ಮತ್ತು ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡುವುದರ ಜೊತೆಗೆ 100 ತಾಲೂಕು ಆಸ್ಪತ್ರೆಗಳನ್ನು ಡಯಾಗ್ನೋಸ್ಟಿಕ್ ಸೌಲಭ್ಯ, ಪ್ರಯೋಗಾಲಯ ಮತ್ತು ಡಿಜಿಟಲ್ ಎಕ್ಸ್‍ರೇ ಸೇವೆಗಳೊಂದಿಗೆ ಮೇಲ್ದರ್ಜೆಗೇರಿಸುವ ಯೋಜನೆ ಇದೆ ಎಂದರು.
ಸಾಮಾಜಿಕ ನ್ಯಾಯವೂ ಅಭಿವೃದ್ಧಿ ಪರಿಕಲ್ಪನೆಯ ಪ್ರಮುಖ ಭಾಗ. “ಸಮಾನ ಅವಕಾಶ ಸೃಷ್ಟಿಯಾದಾಗ ಮಾತ್ರ ಸಾಮಾಜಿಕ ನ್ಯಾಯ ನಿಜವಾಗುತ್ತದೆ” ಎಂಬ ನಿಲುವಿನೊಂದಿಗೆ ಪರಿಶಿಷ್ಟ ಜಾತಿ–ಪಂಗಡಗಳ ಕಲ್ಯಾಣಕ್ಕೆ ರೂ. 44,631 ಕೋಟಿ ಮೀಸಲಿಡಲಾಗಿದೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಸತಿ ಮತ್ತು ಶಿಕ್ಷಣದ ಅವಕಾಶಗಳನ್ನು ವಿಸ್ತರಿಸಲಾಗುತ್ತಿದೆ ಎಂದರು.
ಜನಸ್ನೇಹಿ ಆಡಳಿತಕ್ಕಾಗಿ ಪ್ರಜಾಸೇವೆ ವ್ಯವಸ್ಥೆ, ಒಂದೇ ಡಿಜಿಟಲ್ ವೇದಿಕೆಯಲ್ಲಿ ಸರ್ಕಾರಿ ಸೇವೆಗಳು, ಎ.ಐ ಡೇಟಾ ಅನಾಲಿಟಿಕ್ಸ್, ಕ್ಲೌಡ್ ತಂತ್ರಜ್ಞಾನ ಮತ್ತು ಡಿಜಿಟಲ್ ದಾಖಲೆ ನಿರ್ವಹಣೆಯ ಬಳಕೆಯ ಮೂಲಕ ಸರ್ಕಾರವನ್ನು ಜನರ ಮನೆಬಾಗಿಲಿಗೆ ಕೊಂಡೊಯ್ಯುವ ಪ್ರಯತ್ನಕ್ಕೂ ಒತ್ತು ನೀಡಲಾಗಿದೆ.
ನಮ್ಮ ಸರ್ಕಾರದ ಜೊತೆ ಕನ್ನಡದ ಕೋಟಿ ಕೈಗಳು ಕೈಜೋಡಿಸಬೇಕು :
ಯುವಕ ಯುವತಿಯರು ಉದ್ಯೋಗಿಗಳಾಗಬೇಕು, ರೈತ ಸಮೃದ್ಧನಾಗಬೇಕು, ಮಹಿಳೆ ಸ್ವಾವಲಂಬಿಯಾಗಬೇಕು, ಮಗು ವಿದ್ಯಾವಂತವಾಗಬೇಕು, ಕಾರ್ಮಿಕ ಗೌರವದಿಂದ ಬದುಕಬೇಕು, ಹಿರಿಯ ನಾಗರಿಕ ಸುರಕ್ಷಿತವಾಗಿರಬೇಕು ಮತ್ತು ಪ್ರತಿಯೊಂದು ಕುಟುಂಬವೂ ಅಭಿವೃದ್ಧಿಯ ಫಲವನ್ನು ಅನುಭವಿಸಬೇಕುÉನ್ನುವುದು ನಮ್ಮ ಸರ್ಕಾರದ ಆಶಯವಾಗಿದೆ ಎಂದು ತಿಳಿಸಿದರು. ಈ ಗುರಿ ಸಾಧಿಸಲು “ನನ್ನ ಎರಡು ಕೈಗಳು ಸಾಲುವುದಿಲ್ಲ; ಕನ್ನಡನಾಡಿನ ಕೋಟಿಯ ಕೈಗಳು ನನ್ನ ಜೊತೆ ಕೈಜೋಡಿಸಬೇಕು” ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕರೆ ನೀಡಿದರು.
ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ಜನರ ಸಹಭಾಗಿತ್ವವನ್ನು ಜೋಡಿಸಿದರೆ ಇದು ಹೊಸ ರಾಜಕೀಯ –ಸಾಮಾಜಿಕ ಸಂದೇಶವಾಗಿ ಹೊರಹೊಮ್ಮಲಿದೆ. ಸರ್ಕಾರದ ಸಾಧನೆಗಳ ಪಟ್ಟಿ ಅಥವಾ ಹೊಸ ಯೋಜನೆಗಳು ಘೋಷಣೆಯಾಗಿ ಉಳಿಯದೆ, ಒಂದೇ ರಾಜ್ಯದ ನಾಲ್ಕು ಪೀಳಿಗೆಗಳ ವಿಭಿನ್ನ ಆಶಯಗಳನ್ನು ಒಂದೇ ಅಭಿವೃದ್ಧಿಯ ದೃಷ್ಟಿಕೋನದಲ್ಲಿ ಜೋಡಿಸುವ ಪ್ರಯತ್ನವಾಗಿ ಕಾಣಿಸುತ್ತದೆ ಎಂದು ತಿಳಿಸಿದರು.
ಹಿರಿಯ ಪೀಳಿಗೆಯ ಸುರಕ್ಷೆ ಮತ್ತು ಗೌರವಯುತ ಬದುಕಿನ ಆಶಯದಿಂದ ಆರಂಭವಾಗಿ, ಮಧ್ಯವಯಸ್ಕರ ಕುಟುಂಬದ ಭದ್ರತೆ ಮತ್ತು ಆರ್ಥಿಕ ಸ್ಥಿರತೆ, ಯುವ ಪೀಳಿಗೆಯ ಉದ್ಯೋಗ–ಅವಕಾಶಗಳ ನಿರೀಕ್ಷೆ ಹಾಗೂ ಮಕ್ಕಳ ಭವಿಷ್ಯದ ಶಿಕ್ಷಣ–ತಂತ್ರಜ್ಞಾನದವರೆಗೆ ಸರ್ಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ಅವರು ತಿಳಿಸಿದರು.
ಜಲ ಭದ್ರತೆ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಬಲವರ್ಧನೆ, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳ ಉನ್ನತೀಕರಣ, ಹಿರಿಯ ನಾಗರಿಕರ ಸುರಕ್ಷಿತ ಬದುಕು ಮುಂತಾದ ಅಂಶಗಳು ಅಭಿವೃದ್ಧಿಯ ಮಾನದಂಡವನ್ನು ಜನರ ದೈನಂದಿನ ಬದುಕಿಗೆ ತರುತ್ತವೆ ಎಂದ ಮುಖ್ಯಮಂತ್ರಿಗಳು, ಮುಂದಿನ ಸ್ವಾತಂತ್ರ್ಯ ದಿನಾಚರಣೆಯೊಳಗೆ ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಹಾಗೂ 100 ತಾಲೂಕು ಆಸ್ಪತ್ರೆಗಳನ್ನು ಆಧುನಿಕ ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೇರಿಸಲಾಗುವುದು ಎಂದು ಹೇಳಿದರು.
ಮಧ್ಯವಯಸ್ಕ ಪೀಳಿಗೆಗೆ ಕುಟುಂಬದ ಹೊಣೆಗಾರಿಕೆ, ಮಕ್ಕಳ ಶಿಕ್ಷಣ, ಮಹಿಳೆಯರ ಆರ್ಥಿಕ ಸ್ವಾವಲಂಬನೆ ಮತ್ತು ಕುಟುಂಬದ ಖರ್ಚಿನ ಒತ್ತಡ ಪ್ರಮುಖ ಪ್ರಶ್ನೆಗಳು. ಈ ಹಿನ್ನೆಲೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು “ಉಚಿತ ಯೋಜನೆಗಳು” ಎಂದು ನೋಡದೆ, ಜನರ ಮೇಲಿನ ಹೂಡಿಕೆಯಾಗಿದೆ ಎಂದು ತಿಳಿಸಿದರು.
ಉದ್ಯೋಗ, ಕೌಶಲ್ಯ ಮತ್ತು ಸ್ವಂತ ಬದುಕಿನ ಅವಕಾಶ :
ಇಂದಿನ ಯುವ ಪೀಳಿಗೆಯ ಪ್ರಮುಖ ಪ್ರಶ್ನೆ “ನನ್ನ ಭವಿಷ್ಯ ಏನು?” ಎಂಬುದು. ಇದಕ್ಕೆ ಉತ್ತರ ನೀಡುವ ಪ್ರಯತ್ನವೇ ಭಾಷಣದ ಅತ್ಯಂತ ಮಹತ್ವದ ಭಾಗ. “ಯುವ ಕರ್ನಾಟಕ–ನವ ಭಾರತ” ಎಂಬ ಧ್ಯೇಯವಾಕ್ಯದಿಂದ ಹಿಡಿದು “ಮುಖ್ಯಮಂತ್ರಿ ಉದ್ಯೋಗ ಸಂಕಲ್ಪ”, “ಯುವ ಉದ್ಯೋಗ ಸೇತು” ಮತ್ತು “ಉದ್ಯೋಗ ನಿಧಿ”ವರೆಗೆ ಉದ್ಯೋಗವನ್ನು ಸರ್ಕಾರದ ಪ್ರಮುಖ ಆದ್ಯತೆಯಾಗಿ ರೂಪಿಸಲಾಗಿದೆ.
“ಶಿಕ್ಷಣದಿಂದ ಉದ್ಯೋಗದವರೆಗೆ ಸರ್ಕಾರ ಯುವಜನರ ಕೈಹಿಡಿಯಲಿದೆ” ಎಂಬ ಪರಿಕಲ್ಪನೆ, ಯುವಕರನ್ನು ಕೇವಲ ಫಲಾನುಭವಿಗಳಾಗಿ ನೋಡುವ ಬದಲು ರಾಜ್ಯದ ಭವಿಷ್ಯದ ನಿರ್ಮಾತೃಗಳನ್ನಾಗಿ ರೂಪಿಸುವ ಆಶಯವನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು.
ಹಿಂದಿನ ಪೀಳಿಗೆಯ ತ್ಯಾಗದಿಂದ ಪಡೆದ ಸ್ವಾತಂತ್ರ್ಯವನ್ನು, ಇಂದಿನ ಪೀಳಿಗೆಯ ನೆಮ್ಮದಿಯಾಗಿ ಮತ್ತು ಮುಂದಿನ ಪೀಳಿಗೆಯ ಅವಕಾಶವಾಗಿ ಪರಿವರ್ತಿಸುವ ಕರ್ನಾಟಕವನ್ನು ಕಟ್ಟುವ ತಮ್ಮ ಮಹತ್ವಾಕಾಂಕ್ಷೆಯನ್ನು ಹೊಂದಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಮೃತ್ಯುಂಜಯ ದೊಡ್ಡವಾಡ, ಸುಮಾ ಪ್ರಸಾದ್ ಮತ್ತು ಕಲಾ ತಂಡದವರಿಂದ “ನಾಡಗೀತೆ ಮತ್ತು ರೈತಗೀತೆ” ಪ್ರಸ್ತುತ ಪಡಿಸಲಾಯಿತು. ಥಣಿಸಂದ್ರ ಸರ್ಕಾರಿ ಪ್ರೌಢಶಾಲೆಯ ಸುಮಾರು 800 ಮಕ್ಕಳಿಂದ ವಂದೇ ಮಾತರಂ ನೃತ್ಯ ರೂಪಕ, ಬೆಂಗಳೂರು ಉತ್ತರ ನಗರ ಪಾಲಿಕೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸುಮಾರು 750 ಮಕ್ಕಳಿಂದ “ಸ್ವಾತಂತ್ರ್ಯ ಸಂಗ್ರಾಮದ ವೈಭವ”, ಬೀದರ್ ಜಿಲ್ಲೆಯ 70 ಮಹಿಳಾ ಸಿಬ್ಬಂದಿ ಹಾಗೂ ಬೆಂಗಳೂರು ನಗರದ 100 ಮಹಿಳಾ ಪೊಲೀಸ್ ಸಿಬ್ಬಂದಿಗಳ ತಂಡದಿಂದ “ಅಕ್ಕ ಪಡೆಯ ಕಾರ್ಯಕ್ರಮ” ಹಾಗೂ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ, ರಾಜೀವ್ ಗಾಂಧಿ ವಿಶ್ವವಿದ್ಯಾಲಯ, ರೇವಾ ವಿಶ್ವವಿದ್ಯಾಲಯ, ಬೆಂಗಳೂರು ಸಿಟಿ ವಿಶ್ವವಿದ್ಯಾಲಯ ಮತ್ತು ವಿಟಿ.ಯು ಕಾಲೇಜಿನ ಸುಮಾರು 600 ವಿದ್ಯಾರ್ಥಿಗಳಿಂದ “ಭಾರತ್ ಜೋಡೋ ಯುವ ಸಂಘ” ಯೋಜನೆ ಬಗ್ಗೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಅಲ್ಲದೇ ಪೆರೇಡ್ ಕಮಾಂಡರ್, ದ್ವಿತೀಯ ಕಮಾಂಡರ್, ತೆಲಂಗಾಣ ರಾಜ್ಯ ಪೊಲೀಸ್, ಶ್ವಾನದÀಳ, ರಮಣ ಮಹರ್ಷಿ ಅಂಧರ ಶಾಲೆ, ಸಮರ್ಥನಂ ಅಂಗವಿಕಲರ ಶಾಲೆ, ಸಿ.ಎ.ಆರ್. ಬ್ಯಾಂಡ್, ಕೆ.ಎಸ್.ಆರ್.ಪಿ. ಬ್ಯಾಂಡ್ ಮತ್ತು ಮೈಸೂರು ಇಂಗ್ಲೀಷ್ ಬ್ಯಾಂಡ್ ತಂಡಗಳಿಂದ ಕವಾಯತು ಪ್ರದರ್ಶನ ಏರ್ಪಡಿಸಲಾಗಿತ್ತು.
