IMG 20260818 WA0037 scaled

ವಿಧಾನಪರಿಷತ್ :ಸರ್ಕಾರಿ ಶಾಲೆಯ ಮಕ್ಕಳಿಗೆ ಶೂ-ಸಾಕ್ಸ್ ಹಾಗೂ ಸ್ಯಾಂಡಲ್ ವಿತರಣೆ: ಆಗಸ್ಟ್ ಅಂತ್ಯದೊಳಗೆ ಪೂರ್ಣ….!

Genaral STATE

 

2026-27ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಶಾಲಾ ಮಕ್ಕಳಿಗೆ ಶೂ-ಸಾಕ್ಸ್ ಹಾಗೂ ಸ್ಯಾಂಡಲ್ ವಿತರಣೆ: ಆಗಸ್ಟ್ ಅಂತ್ಯದೊಳಗಾಗಿ ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮ – ಸಚಿವ ಎಸ್. ಮಧು ಬಂಗಾರಪ್ಪ
ಬೆಂಗಳೂರು, ಆಗಸ್ಟ್ 17, (ಕರ್ನಾಟಕ ವಾರ್ತೆ) : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಂದಾಜು 36.56 ಲಕ್ಷ ವಿದ್ಯಾರ್ಥಿಗಳಿಗೆ “ವಿದ್ಯಾವಿಕಾಸ ಯೋಜನೆ”ಯಡಿ ಉತ್ತಮ ಗುಣಮಟ್ಟದ ಉಚಿತ ಶೂ-ಸಾಕ್ಸ್ ಹಾಗೂ ಸ್ಯಾಂಡಲ್  ವಿತರಿಸಲು ಕ್ರಮ ಕೈಗೊಳ್ಳಲಾಗಿದ್ದು, ಆಗಸ್ಟ್ ಅಂತ್ಯದೊಳಗಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ವಿತರಣೆ ಪೂರ್ಣಗೊಳಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್. ಮಧು ಬಂಗಾರಪ್ಪ ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಕಲಾಪದ ವೇಳೆ, ಪರಿಷತ್ ಸದಸ್ಯರಾದ ಶ್ರೀಮತಿ ಬಲ್ಕೀಸ್ ಬಾನು ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ  ಸಚಿವರು, 2026-27ನೇ ಶೈಕ್ಷಣಿಕ ಸಾಲಿನಲ್ಲಿ ಒಟ್ಟು ರೂ. 104.00 ಕೋಟಿ ಅಂದಾಜು ವೆಚ್ಚದಲ್ಲಿ ರಾಜ್ಯಮಟ್ಟದಲ್ಲಿ ಪಾರದರ್ಶಕ ಟೆಂಡರ್ (KTPP ಕಾಯ್ದೆ 1999) ಮೂಲಕ ಶೂ-ಸಾಕ್ಸ್ ಮತ್ತು ಸ್ಯಾಂಡಲ್‌ಗಳ ಖರೀದಿಗೆ ಅನುಮೋದನೆ ನೀಡಲಾಗಿದೆ.
ಒಟ್ಟು 36,61,267 ಪ್ರಮಾಣದ ಪೂರೈಕೆಗೆ ಕಾರ್ಯಾದೇಶ ನೀಡಲಾಗಿದ್ದು, ಈ ಪೈಕಿ ಈಗಾಗಲೇ 21,92,529 ಪ್ರಮಾಣ ಶಾಲೆಗಳಿಗೆ ತಲುಪಿ ವಿತರಣೆಯಾಗಿದೆ. 12,59,298 ಪ್ರಮಾಣ ತಾಲೂಕುಗಳಿಗೆ ಸಾಗಣೆಯಲ್ಲಿದ್ದು, 2,09,440 ಪ್ರಮಾಣ ಉತ್ಪಾದನಾ ಹಂತದಲ್ಲಿದೆ.
ಅಧಿಕ ಮಳೆಯಾಗುವ ಪ್ರದೇಶಗಳ ಹಾಗೂ ಎಸ್‌ಡಿಎಮ್‌ಸಿ ವಿನಂತಿಸಿದ ಶಾಲೆಗಳ ವಿದ್ಯಾರ್ಥಿಗಳಿಗೆ ಶೂಗಳ ಬದಲಿಗೆ ಗುಣಮಟ್ಟದ ವ್ಯಾಲ್ಕ್ರೋ ಸ್ಯಾಂಡಲ್‌ಗಳನ್ನು (Velcro Sandals) ಪೂರೈಸಲಾಗುತ್ತಿದೆ.IMG 20260818 WA0034
ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಈ ಯೋಜನೆಯಡಿ ಉಚಿತ ಶೂ-ಸಾಕ್ಸ್ ವಿತರಿಸುವ ಸೌಲಭ್ಯ ಇರುವುದಿಲ್ಲ.  ಉತ್ಪನ್ನಗಳ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರದ ಫುಟ್‌ವೇರ್ ಡಿಸೈನ್ & ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್ (FDDI), ಭಾರತೀಯ ವಿಜ್ಞಾನ ಸಂಸ್ಥೆ (IISc) ಬೆಂಗಳೂರು, ಸುರತ್ಕಲ್‌ನ NITK ಹಾಗೂ ಲಿಡ್ಕರ್ (LIDKAR) ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ಉನ್ನತ ಮಟ್ಟದ ತಾಂತ್ರಿಕ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಸರಬರಾಜಿಗೆ ಮೊದಲು ‘ಪೂರ್ವ-ಸಾಗಣೆ ತಪಾಸಣೆ’ (Pre-dispatch inspection) ನಡೆಸಲಾಗುತ್ತಿದ್ದು, FDDI ಸಂಸ್ಥೆಯಿಂದ ತೃಪ್ತಿಕರ ಪರೀಕ್ಷಾ ವರದಿ ಬಂದ ನಂತರವೇ ಪೂರೈಕೆಗೆ ಅನುಮತಿ ನೀಡಲಾಗುತ್ತಿದೆ.
ಸರಬರಾಜು ಆದೇಶ ನೀಡಿದ 60 ದಿನಗಳ ಒಳಗೆ ಪೂರೈಕೆ ಪೂರ್ಣಗೊಳಿಸಬೇಕು. ಶೂ-ಸಾಕ್ಸ್ ಹಾಗೂ ಸ್ಯಾಂಡಲ್‌ಗಳ ಅಳತೆಯಲ್ಲಿ ವ್ಯತ್ಯಾಸಗಳಿದ್ದರೆ ಮುಂದಿನ 15 ದಿನಗಳ ಒಳಗೆ ಉಚಿತವಾಗಿ ಬದಲಾಯಿಸಿ ನೀಡಲು ತಿಳಿಸಲಾಗಿದೆ. ನಿಗದಿತ ಅವಧಿಯಲ್ಲಿ ಸರಬರಾಜು ಮಾಡದಿದ್ದಲ್ಲಿ ಶೇ. 0.75 ರಷ್ಟು ವಿಳಂಬ ದಂಡ ವಿಧಿಸಲಾಗುವುದು ಹಾಗೂ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು.
ಜಿಲ್ಲಾ, ತಾಲೂಕು ಮತ್ತು ಶಾಲಾ ಮಟ್ಟದಲ್ಲಿ ಉಸ್ತುವಾರಿ ಸಮಿತಿಗಳನ್ನು ರಚಿಸಲಾಗಿದ್ದು, ನೋಡಲ್ ಅಧಿಕಾರಿಗಳನ್ನು ನೇಮಿಸಿ ಹಂಚಿಕೆ ಪ್ರಕ್ರಿಯೆಯನ್ನು ಕ್ಷಿಪ್ರವಾಗಿ ನಿರ್ವಹಿಸಲಾಗುತ್ತಿದೆ. ಜುಲೈ 31ರವರೆಗೆ ಶಾಲೆಗಳಲ್ಲಿ ದಾಖಲಾತಿಗೆ ಅವಕಾಶವಿದ್ದುದರಿಂದ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಕಾಲಳತೆಗೆ ತಕ್ಕಂತೆ ವಿತರಿಸುವ ಪ್ರಕ್ರಿಯೆಯಿಂದ ಸ್ವಲ್ಪ ವಿಳಂಬವಾಗಿದ್ದು, ಆಗಸ್ಟ್ ಮಾಹೆಯ ಅಂತ್ಯದ ವೇಳೆಗೆ ರಾಜ್ಯದ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಶೂ-ಸಾಕ್ಸ್ ಹಾಗೂ ಸ್ಯಾಂಡಲ್ ಸಿಗಲಿದೆ ಎಂದು ಸಚಿವರು ಭರವಸೆ ನೀಡಿದರು.

Leave a Reply

Your email address will not be published. Required fields are marked *