IMG 20260818 WA0054

Karnataka : ವಿಧಾನಮಂಡಲ ಅಧಿವೇಶನ; ಜೆಡಿಎಸ್ ಶಾಸಕರ ಸಭೆ….!

Genaral STATE

ಬರ, ನೈಸ್ ಯೋಜನೆ, ಬಿಡದಿ ಟೌನ್ ಶಿಪ್ ಕುರಿತು ಹೋರಾಟ ಶಾಸಕರಿಗೆ ಸೂಚನೆ*

*ವಿಧಾನಮಂಡಲ ಅಧಿವೇಶನ; ಜೆಡಿಎಸ್ ಶಾಸಕರ ಸಭೆ ನಡೆಸಿದ ಹೆಚ್.ಡಿ.ಕುಮಾರಸ್ವಾಮಿ.

*ಬೆಂಗಳೂರು ಆಗಸ್ಟ್ 2026* : ವಿಧಾನಮಂಡಲ ಅಧಿವೇಶನದಲ್ಲಿ ಚರ್ಚಿಸಬೇಕಾದ ಅಂಶಗಳ ಬಗ್ಗೆ ಶಾಸಕರಿಗೆ ಕೆಲವು ನಿರ್ದಿಷ್ಟ ಸೂಚನೆಗಳನ್ನು ಕೊಟ್ಟ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು; ಪ್ರಮುಖವಾಗಿ ರಾಜ್ಯ ಎದುರಿಸುತ್ತಿರುವ ಕಠಿಣ ಬರ ಪರಿಸ್ಥಿತಿ, ನೈಸ್ ಹಗರಣ ಹಾಗೂ ಬಿಡದಿ ಭೂಮಿ ಲೂಟಿಯ ಬಗ್ಗೆ ದನಿಯೆತ್ತುವಂತೆ ಸೂಚಿಸಿದರು.

ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರೊಂದಿಗೆ ಚರ್ಚೆ ನಡೆಸಿದ ಸಚಿವರು; ಸದನದಲ್ಲಿ ಚರ್ಚಿಸಬೇಕಿರುವ ಅಂಶಗಳ ಬಗ್ಗೆ ಶಾಸಕರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಂಡರು.

ರಾಜ್ಯದಲ್ಲಿ ಉಂಟಾಗಿರುವ ಬರಗಾಲದ ಬಗ್ಗೆ ಹಾಗೂ ಬರ ನಿರ್ವಹಣೆಯ ಬಗ್ಗೆ ರಾಜ್ಯ ಕಾಂಗ್ರೆಸ್ ಸರಕಾರ ಸಂಪೂರ್ಣ ವಿಫಲವಾಗಿದ್ದು, ಈ ಬಗ್ಗೆ ಸದನದಲ್ಲಿ ದನಿಯೆತ್ತುವಂತೆ ಶಾಸಕರಿಗೆ ಸೂಚಿಸಿದ ಕೇಂದ್ರ ಸಚಿವರು; ರೈತರ ಪಾಲಿಗೆ ಈ ಸರ್ಕಾರ ಉಪಯೋಗವಿಲ್ಲದಾಗಿದೆ. ಕೇವಲ ಪ್ರಚಾರಕ್ಕೆ ಬಿದ್ದಿರುವ ಸರ್ಕಾರ ಬರ ನಿರ್ವಹಣೆಯಲ್ಲಿ ದೃಢವಾದ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಹೇಳಿದರು.

ರಾಜ್ಯ ಕಾಂಗ್ರೆಸ್ ಸರಕಾರ ರೈತರ ಹಿತಕ್ಕೆ ವಿರುದ್ಧವಾಗಿ ರೂಪಿಸಿರುವ ಅವೈಜ್ಞಾನಿಕ ಬಿಡದಿ ಟೌನ್ ಶಿಪ್ ಯೋಜನೆಯ ಬಗ್ಗೆಯೂ ಸದನದಲ್ಲಿ ಹೋರಾಟ ನಡೆಸಬೇಕು. ಈ ಯೋಜನೆಯಿಂದ ರೈತರು ಸಾವಿರಾರು ಎಕರೆ ಫಲವತ್ತಾದ ಭೂಮಿ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ನಮ್ಮ ಪಕ್ಷ ರೈತರ ಪರವಾಗಿ ನಿಲ್ಲಬೇಕು. ಇತ್ತೀಚೆಗೆ ರಾಜ್ಯ ಹೈಕೋರ್ಟ್ ನೈಸ್ ಯೋಜನೆಯ ಬಗ್ಗೆ ವ್ಯಕ್ತಪಡಿಸಿರುವ ಖಾರವಾದ ಅಭಿಪ್ರಾಯಗಳನ್ನು ಸದನದಲ್ಲಿ ಪ್ರಸ್ತಾಪಿಸಿ ಎಂದು ಸಚಿವರು ಸೂಚಿಸಿದರು.

ನೈಸ್‌ ಯೋಜನೆಯ ಬಗ್ಗೆಯೂ ಸದನದಲ್ಲಿ ದನಿಯೆತ್ತಬೇಕು. ರಸ್ತೆ ಮಾಡುವ ಉದ್ದೇಶಕ್ಕೆ ಭೂಮಿಯನ್ನು ಪಡೆದುಕೊಂಡು, ಅದನ್ನು ರಿಯಲ್ ಎಸ್ಟೇಟ್ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತಿದೆ. ಸಾವಿರಾರು ರೈತರಿಗೆ ಈವರೆಗೆ ಪರಿಹಾರ ದೊರೆತಿಲ್ಲ ಎಂಬುದರ ಬಗ್ಗೆಯೂ ದನಿಯೆತ್ತುವಂತೆ ಹೇಳಿದರು.

ಹಾಗೆಯೇ ಬಿಡದಿ ಯೋಜನೆ ಬಗ್ಗೆ ಕೂಡ ಪಕ್ಷ ಪ್ರಬಲ ಹೋರಾಟ ನಡೆಸಬೇಕಿದೆ. ಅತ್ಯಂತ ಅಮಾನುಷವಾಗಿ ರೈತರ ಭೂಮಿಯನ್ನು ಕಿತ್ತುಕೊಳ್ಳುವ ದುಸಹಸವನ್ನು ರಾಜ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಶೇಕಡ 80ಕ್ಕೂ ಹೆಚ್ಚು ಜನರು ಭೂಮಿ ಕೊಡಲು ಒಪ್ಪುತ್ತಿಲ್ಲ. ಸ್ವಾಧೀನಕ್ಕೆ ರೈತರ ವಿರೋಧವಿದ್ದರೂ ಪೊಲೀಸರು ಮತ್ತು ರೌಡಿಗಳನ್ನು ಬಿಟ್ಟು ರೈತರನ್ನು ಮತ್ತು ಅವರ ಕುಟುಂಬ ಸದಸ್ಯರನ್ನು ಬೆದರಿಸುವ ಕೆಲಸ ನಡೆಯುತ್ತಿದೆ. ಈ ಬಗ್ಗೆ ಶಾಸಕರು ಅತ್ಯಂತ ಸ್ಪಷ್ಟ ದಿನದಲ್ಲಿ ಸದನದಲ್ಲಿ ಹೋರಾಟ ನಡೆಸಬೇಕು ಎಂದು ಕುಮಾರಸ್ವಾಮಿ ಅವರು ನಿರ್ದೇಶನ ನೀಡಿದರು.

ಪಕ್ಷದ ವಿಧಾನಸಭೆ ಶಾಸಕಾಂಗ ಪಕ್ಷದ ನಾಯಕರಾದ ಸಿ.ಬಿ.ಸುರೇಶ್ ಬಾಬು, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸೇರಿದಂತೆ ಪಕ್ಷದ ಎಲ್ಲಾ ಶಾಸಕರು, ವಿಧಾನಪರಿಷತ್ ಸದಸ್ಯರು ಸಭೆಯಲ್ಲಿ ಭಾಗಿಯಾಗಿದ್ದರು.

 

Leave a Reply

Your email address will not be published. Required fields are marked *