IMG 20260823 WA0034

Karnataka : ನೈಸ್ ಯೋಜನೆ ರಾಜ್ಯದ ಅತಿದೊಡ್ಡ ಹಗರಣ….!

Genaral STATE

*ನೈಸ್ ಟೋಲ್ ವಿಷಯದಲ್ಲಿ ನಾನು ಪ್ರಚೋದಿಸುತ್ತಿಲ್ಲ, ಇಷ್ಟೊತ್ತಿಗೆ ಜನರೇ ನುಗ್ಗಬೇಕಿತ್ತು ಎಂದ ಹೆಚ್‍.ಡಿ.ಕುಮಾರಸ್ವಾಮಿ*

*ನೈಸ್ ಯೋಜನೆ ಅಕ್ರಮಗಳ ಬಗ್ಗೆ ವಾಗ್ದಾಳಿ ಮುಂದುವರೆಸಿದ ಕೇಂದ್ರ ಸಚಿವರು*

*ಹೈಕೋರ್ಟ್ ದ್ವಿಸದಸ್ಯ ಪೀಠದ ಅಭಿಪ್ರಾಯಗಳನ್ನು ಇಂದಿನ ಜಾಹೀರಾತು ಒಳಗೊಂಡಿದೆ*

ರಸ್ತೆ ಯೋಜನೆಗೆ ನೈಸ್ ಕಂಪನಿಯವನು ₹5 ಹೂಡಿಕೆ ಮಾಡಿಲ್ಲ; ರೈತರ ಭೂಮಿ ಬ್ಯಾಂಕಿನಲ್ಲಿ ಅಡವಿಟ್ಟು ಸಾಲ ತಂದು ಆಟ ಆಡುತ್ತಿದ್ದಾನೆ!*

*ಮಂಡ್ಯ 23 ಆಗಸ್ಟ್ 2026*ರಾಜ್ಯ ಹೈಕೋರ್ಟ್ ದಾಖಲಿಸಿರುವ ಕಟುವಾದ ಅಭಿಪ್ರಾಯಗಳನ್ನು ಒಳಗೊಂಡ ಅಂಶಗಳೇ ಇವತ್ತಿನ ಪತ್ರಿಕೆಗಳಲ್ಲಿ ಬಂದಿರುವ ಜಾಹೀರಾತಿನಲ್ಲಿ ಕಾಣಿಸಿಕೊಂಡಿವೆ. ಇದೇನು ಕಪೋಲಕಲ್ಪಿತ ಜಾಹೀರಾತಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.

ಮೇಲುಕೋಟೆಯಲ್ಲಿ ಶ್ರೀ ಚೆಲುವನಾರಾಯಣ ದೇವರ ದರ್ಶನ ಪಡೆದ ನಂತರ ಮಾಧ್ಯಮಗಳ ಜತೆ ಮಾತನಾಡಿದರು ಸಚಿವರು.

ಇವತ್ತಿನ ಜಾಹಿರಾತನ್ನು ಯಾರು ಕೂಡ ಕಲ್ಪನೆ ಮಾಡಿ ಕೊಟ್ಟಿಲ್ಲ. ಇತ್ತೀಚೆಗೆ ಹೈಕೋರ್ಟ್ ನ ದ್ವಿಸದಸ್ಯ ಪೀಠ ನೈಸ್ ಯೋಜನೆ ಬಗ್ಗೆ ಕಟುವಾದ ಅಭಿಪ್ರಾಯಗಳನ್ನು ದಾಖಲಿಸಿದೆ. ಅದೇ ಇವತ್ತು ಜಾಹೀರಾತು ರೂಪದಲ್ಲಿ ಪ್ರಕಟವಾಗಿದೆ ಎಂದರು ಅವರು.

ನೈಸ್ ಯೋಜನೆ ರಾಜ್ಯದಲಿಯೇ ಅತಿದೊಡ್ಡ ಹಗರಣ ಎಂದರೆ ತಪ್ಪಲ್ಲ. ಈ ಸರ್ಕಾರ ನೈಸ್ ಯೋಜನೆಯ ಹೆಸರಿನಲ್ಲಿ ಆ ಕಂಪನಿ ಜತೆ ಶಾಮೀಲಾಗಿದೆ. ಇದೊಂದೇ ಅಲ್ಲ, ಹಿಂದಿನ ಸರ್ಕಾರಗಳು ಹಾಗೂ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ. ಎಲ್ಲರೂ ಯೋಜನಾ ಚೌಕಟ್ಟು ಒಪ್ಪಂದ (ಪ್ರೇಮ್ ವರ್ಕ್ ಅಗ್ರಿಮೆಂಟ್‌) ಅನ್ನು ಉಲ್ಲಂಘನೆ ಮಾಡಿದ್ದಾರೆ. ಕಂಪನಿ ಮಾಲೀಕನಿಗೆ ರೆಡ್ ಕಾರ್ಪೆಟ್ ಹಾಸಿದ್ದಾರೆ. ರೈತರ ಭೂಮಿಗಳನ್ನು ಲೂಟಿ ಹೊಡೆದಿದ್ದಾರೆ. 20 ವರ್ಷಗಳಾದರೂ ಸಹ ಇನ್ನೂ ರೈತರಿಗೆ ಹಣ ನೀಡಿಲ್ಲ ಎಂದು ಸಚಿವರು ಆರೋಪ ಮಾಡಿದರು.

ನೈಸ್ ಕಂಪನಿ ಯೋಜನೆ ಹೆಸರಿನಲ್ಲಿ ರೈತರಿಂದ ಕಸಿದುಕೊಂಡಿರುವ ಬೆಲೆ ಬಾಳುವ ಭೂಮಿಯನ್ನು ರಿಯಲ್ ಎಸ್ಟೇಟ್ ಉದ್ದೇಶಕ್ಕೆ ಬಳಸಿಕೊಂಡಿದೆ. ದೊಡ್ಡದೊಡ್ಡ ಕಂಪನಿಗಳೊಂದಿಗೆ ಜಂಟಿ ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ. ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿರುವ ನ್ಯಾಯಾಲಯ ಟೋಲ್ ಸಂಗ್ರಹ ಕಾನೂನುಬಾಹಿರ ಎಂದು ಹೇಳಿದೆ. ಈ ಸರ್ಕಾರ ಇನ್ನೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಸಚಿವರು ಕಟುವಾಗಿ ಟೀಕಿಸಿದರು.

*ಲೋಕೋಪಯೋಗಿ ಸಚಿವರಿಗೆ ತರಾಟೆ:*

ಲೋಕೋಪಯೋಗಿ ಸಚಿವರು ಇನ್ನೂ 20 ವರ್ಷ ಅಗ್ರಿಮೆಂಟ್ ಇದೆ ಅಂತಾರೆ. ಯಾವ ಅಗ್ರಿಮೆಂಟ್ ಇದೆ? ಸರ್ಕಾರದವರು ಆ ಕಂಪನಿ ಜತೆ ಸೇರಿಕೊಂಡು ಇನ್ನೂ ಲೂಟಿ ಹೊಡೆಯಿರಿ. ರೈತರು ದಿನ ಕೋರ್ಟ್ ಮುಂದೆ ನಿಂತಿರುತ್ತಾರೆ. ಸರ್ಕಾರ ಇರೋದು ಯಾವೋನೋ ಒಬ್ಬ ವ್ಯಕ್ತಿಗೆ ರಕ್ಷಣೆ ಕೊಡಲು ಅಲ್ಲ. ನಾಡಿನ ಅರೂವರೆ ಕೋಟಿ ಜನರ ರಕ್ಷಣೆಗೆ ಇರೋದೆಂದು ಕೋರ್ಟ್ ತೀರ್ಪು ಕೊಟ್ಟಿದೆ. ಸರ್ಕಾರ ಈ ಕಂಪನಿಗೆ ಸಂಪೂರ್ಣ ಶರಣಾಗತಿಯಾಗಿದೆ. ಸರ್ಕಾರ ಮಾಡಿರುವ ಅವ್ಯವಹಾರವಾಗಿದೆ. ಕರ್ನಾಟಕದ ನಂ.1 ಹಗರಣ ಇದು ಎಂದು ಹೇಳಲಾಗಿದೆ. ಈ ಸರ್ಕಾರದಲ್ಲಿನ ಮುಖ್ಯಮಂತ್ರಿಗಳು, ಮಂತ್ರಿಗಳು ಈ ಕಂಪನಿ ಜತೆ ವ್ಯವಹಾರದ ಇಟ್ಟುಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

*ಖೇಣಿ ಏನೂ ಹೇಳಬೇಕಿಲ್ಲ ಎಂದ ಸಚಿವರು:*

ತಮ್ಮ ಬಗ್ಗೆ ಅಶೋಕ್ ಖೇಣಿ ನೀಡಿದ್ದಾರೆನ್ನಲಾದ ಹೇಳಿಕೆ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು; ನನಗೆ ಖೇಣಿ ಏನು ಹೇಳಬೇಕಿಲ್ಲ. ಅವರನ್ನು ಕಟ್ಟಿಕೊಂಡು ನನಗೆ ಏನು ಆಗಬೇಕಿಲ್ಲ. ನಾನು ಆತನಿಗೇನು ಹೇಳುತ್ತಿಲ್ಲ. ನಾನು ಹೇಳುತ್ತೀರೋದು ಈ ಸರ್ಕಾರಕ್ಕೆ. ಕೋರ್ಟ್ ಆದೇಶ ಕೊಟ್ಟಿರುವುದು ಸರ್ಕಾರಕ್ಕೆ, ಖೇಣಿಗೆ ಅಲ್ಲ ಎಂದರು.

*ನಾನು ಜನರನ್ನು ಪ್ರಚೋದನೆ ಮಾಡುತ್ತಿಲ್ಲ:*

ನೈಸ್ ರಸ್ತೆ ಟೋಲ್ ವಿಷಯಕ್ಕೆ ಸಂಬಂಧಿಸಿ ನಾನು ಜನರನ್ನು ಪ್ರಚೋದನೆ ಮಾಡುತ್ತಿಲ್ಲ. ಆದರೆ, ಜನರು ಇಷ್ಟೋತ್ತಿಗೆ ನುಗ್ಗಬೇಕಿತ್ತು. ಅದು ಆಗಬೇಕಿದೆ. ನಾನು ಅವನ್ಯಾರಿಗೋ ಉತ್ತರ ಕೊಡೋಕೆ ಬಂದಿಲ್ಲ. ಅನ್ಯಾರೋ ಲೂಟಿ ಮಾಡಲು ಬಂದಿರೋನು. ನೈಸ್ ಯೋಜನೆಗೆ ಐದು ರೂಪಾಯಿ ಹಣ ಹಾಕಿಲ್ಲ ಅವನು. ರಾಜ್ಯ ಸರ್ಕಾರ ಈ ಯೋಜನೆಗೆ 10 ರೂಪಾಯಿ ಲೆಕ್ಕದಲ್ಲಿ ಭೂಮಿಯನ್ನು ಲೀಸ್‌ಗೆ ಕೊಟ್ಟಿದ್ದಾರೆ. ರಾಜ್ಯದ ಆಸ್ತಿಯನ್ನು ಐಸಿಐಸಿಐ ಬ್ಯಾಂಕಿನಲ್ಲಿ ಅಡವಿಟ್ಟು ಸಾಲ ತಂದಿದ್ದಾನೆ. ಸಾಲ ಹಣದಿಂದ ಆಟ ಆಡಿಕೊಂಡು ಕೂತಿದ್ದಾನೆ. ಅದನ್ನು ನೋಡಿಕೊಂಡು ಸರ್ಕಾರ ನಡೆಸೋರು ಮಾರಾಟ ಮಾಡಿಕೊಂಡು ಕೂತಿದ್ದಾರೆ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

2006-07ರಲ್ಲಿ ನಾನು ವಿಧಾನಸಭಾ ಕಲಾಪದಲ್ಲಿ ಪ್ರಶ್ನೆ ಮಾಡಿದ್ದೇನೆ. ಸದನ ಒಪ್ಪುವುದಾದರೆ ಈ ಯೋಜನೆಯನ್ನು ರದ್ದು ಮಾಡೋಣ ಎಂದು ಕೇಳಿದೆ. ಆಗ ಇವರು ಏನು ಹೇಳಲಿಲ್ಲ. ನನಗೆ ಬೆಂಬಲ ಇರಲಿಲ್ಲ. ಇದ್ದದ್ದು 38 ಜನ ಶಾಸಕರ ಬೆಂಬಲ ಅಷ್ಟೇ. 38 ಜನ ಶಾಸಕರಿಂದ ನಾನು ಏನು ರದ್ದು ಮಾಡಲಿ. ಕ್ಯಾಬಿನೆಟ್ ಮುಂದೆ ತಂದಾಗ ನಮ್ಮ ಜತೆ ಅಧಿಕಾರ ಹಂಚಿಕೊಂಡಿದ್ದವರು ಸಂಪುಟ ಸಭೆಗೆ ಬಹಿಷ್ಕಾರ ಹಾಕಿದ್ದರು. ನನಗೆ 134 ಶಾಸಕರು ಇದ್ದಿದ್ದರೆ ಇಂತವರೆಲ್ಲರೂ ಜೈಲಿನಲ್ಲಿ ಇರುತ್ತಿದ್ದರು ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

 

Leave a Reply

Your email address will not be published. Required fields are marked *