ಪಾವಗಡದಲ್ಲಿ ಸೂಡೋ ನಕ್ಸಲ್ ವೆಂಕಟೇಶ ಬಂಧನ
₹5 ಲಕ್ಷಕ್ಕೆ ಬೆದರಿಕೆ ಪತ್ರ ಪ್ರಕರಣ; ಹಲವು ಗಂಭೀರ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿ ಬಂಧನ
ಪಾವಗಡ: ₹5 ಲಕ್ಷ ಹಣ ನೀಡುವಂತೆ ಬೆದರಿಕೆ ಪತ್ರ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕನಿಕಲಬಂಡೆ ವೆಂಕಟೇಶ ಅಲಿಯಾಸ್ ವೆಂಕಟೇಶ್ ಕೆ.ಎಸ್. ಅವರನ್ನು ಪಾವಗಡ ಪೊಲೀಸರು ಬಂಧಿಸಿದ್ದಾರೆ.
ಗಂಗಸಾಗರ ಗ್ರಾಮದ ನಾಗಭೂಷಣ್ @ ಭೂಷಣ್ ಅವರು ನೀಡಿದ ದೂರಿನ ಮೇರೆಗೆ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸೆ.9ರಂದು ಗಂಗಸಾಗರದ ಸರ್ವೆ ನಂ.31/1ರ ಜಮೀನಿನ ಶೆಡ್‌ಗೇಟ್‌ಗೆ ಸಿಪಿಐ(ಎಂಎಲ್), ಸಿಪಿಎಂ ಪೀಪಲ್ಸ್ ವಾರ್, ಜನಶಕ್ತಿ ಪಕ್ಷ ಹಾಗೂ ದೇವಣ್ಣ ದಳಂ ಹೆಸರಿನಲ್ಲಿ ₹5 ಲಕ್ಷಕ್ಕೆ ಬೇಡಿಕೆ ಇಟ್ಟು ಬೆದರಿಕೆ ಪತ್ರ ಹಾಕಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಅಶೋಕ್ ಕೆ.ವಿ., ಐಪಿಎಸ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿ ತನಿಖೆ ನಡೆಸಲಾಗಿತ್ತು. ಸೆ.15ರ ರಾತ್ರಿ ಕಡಮಲಕುಂಟೆ ಗ್ರಾಮದ ಹೊರವಲಯದ ಬೆಟ್ಟದಲ್ಲಿ ಆರೋಪಿ ಅಡಗಿರುವ ಮಾಹಿತಿ ಆಧರಿಸಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ವೆಂಕಟೇಶ್ ವಿರುದ್ಧ ಪಾವಗಡ ಹಾಗೂ ಕಲ್ಯಾಣದುರ್ಗ ತಾಲೂಕುಗಳಲ್ಲಿ ಒಟ್ಟು 12 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಕೊಲೆ, ದರೋಡೆ, ಸುಲಿಗೆ, ಜಾತಿನಿಂದನೆ ಹಾಗೂ ಸ್ಫೋಟಕ ವಸ್ತುಗಳ ಅಧಿನಿಯಮಕ್ಕೆ ಸಂಬಂಧಿಸಿದ ಪ್ರಕರಣಗಳೂ ಸೇರಿವೆ.
ಆರೋಪಿಯನ್ನು ಬಂಧಿಸಿದ ವಿಶೇಷ ತನಿಖಾ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಅಶೋಕ್ ಕೆ.ವಿ. ಹಾಗೂ ಕೇಂದ್ರ ವಲಯ ಡಿಐಜಿ ಎಸ್. ಗಿರೀಶ್ ಶ್ಲಾಘಿಸಿದ್ದಾರೆ.
