ಪಾವಗಡದಲ್ಲಿ ರೈತರಿಗೆ ಉಚಿತ ಹಣ್ಣಿನ ಸಸಿಗಳ ವಿತರಣೆ
5,000 ಹಣ್ಣಿನ ಸಸಿಗಳ ವಿತರಣೆ; ಸಸಿ ಸಂರಕ್ಷಣೆ, ನೀರು ಮತ್ತು ಕೀಟ ನಿಯಂತ್ರಣ ಕುರಿತು ರೈತರಿಗೆ ಮಾಹಿತಿ
ಪಾವಗಡ: ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ರಾಯಚೆರುವು ಗ್ರಾಮದಲ್ಲಿ ರೈತರಿಗೆ ಉಚಿತವಾಗಿ ಹಣ್ಣಿನ ಸಸಿಗಳನ್ನು ವಿತರಿಸಲಾಯಿತು. 5,000 ಹಣ್ಣಿನ ಸಸಿಗಳ ವಿತರಣೆ ಕಾರ್ಯಕ್ರಮವನ್ನು ಕುಸುಮಗಿರಿ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ವತಿಯಿಂದ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಜಿಕೆವಿಕೆ ವಿಜ್ಞಾನಿ ಕಿರಣ್ ಸಾಗರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ರೈತರೊಂದಿಗೆ ಸಸಿಗಳನ್ನು ನೆಟ್ಟರು. ಸಸಿಗಳ ಸಂರಕ್ಷಣೆ, ನೀರಿನ ನಿರ್ವಹಣೆ, ಗೊಬ್ಬರ ಬಳಕೆ ಹಾಗೂ ರೋಗ–ಕೀಟ ನಿಯಂತ್ರಣದ ಕುರಿತು ರೈತರಿಗೆ ಮಾಹಿತಿ ನೀಡಿದರು.
ಕಂಪನಿಯ ನಿಯಮಾನುಸಾರ ಮುಂಚಿತವಾಗಿ ಗುಂಡಿಗಳನ್ನು ಸಿದ್ಧಪಡಿಸಿಕೊಂಡ ಅರ್ಹ ರೈತರಿಗೆ ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು. ರೈತರು ಸಸಿಗಳನ್ನು ಸಮರ್ಪಕವಾಗಿ ನೆಟ್ಟು ನಿರಂತರವಾಗಿ ಸಂರಕ್ಷಿಸುವಂತೆ ಸೂಚಿಸಲಾಯಿತು.
ಕುಸುಮಗಿರಿ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್‌ನ ಸಿಇಒ ಡಾ. ಡಿ.ಎಂ. ನರಸಿಂಹ ಮೂರ್ತಿ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು. ವೆಂಕಟಪ್ಪ, ನಾಗರಾಜು, ಸಿಬ್ಬಂದಿ ರಾಮ್ ಗೌತಮ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ರೈತರ ಆದಾಯ ಹೆಚ್ಚಿಸುವುದು, ಪರಿಸರ ಸಂರಕ್ಷಣೆ, ಹಣ್ಣಿನ ತೋಟಗಳ ವಿಸ್ತರಣೆ ಹಾಗೂ ಸುಸ್ಥಿರ ಕೃಷಿ ಪದ್ಧತಿಗಳಿಗೆ ಉತ್ತೇಜನ ನೀಡುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
