ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ e1793460271518

ತುಮಕೂರು : ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡ್ಡಾಯ…!

DISTRICT NEWS ತುಮಕೂರು

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡ್ಡಾಯ…!

ಬೆಳಗ್ಗೆ, ಮಧ್ಯಾಹ್ನ ಮೊಬೈಲ್ ಆ್ಯಪ್‌ನಲ್ಲಿ ಹಾಜರಾತಿ ದಾಖಲಿಸದಿದ್ದರೆ ಶಿಕ್ಷಕರು, ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ – ಅಶ್ವಿಜ ಬಿ.ವಿ.

ತುಮಕೂರು, ಅ.31: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ದಾಖಲಿಸುವಲ್ಲಿ ಯಾವುದೇ ನಿರ್ಲಕ್ಷ್ಯ ತೋರಬಾರದು. ಪ್ರತಿದಿನ ಬೆಳಗ್ಗೆ ಮತ್ತು ಮಧ್ಯಾಹ್ನ ನಿರಂತರ ಮೊಬೈಲ್ ಆ್ಯಪ್ ಮೂಲಕ ಮಕ್ಕಳ ಹಾಜರಾತಿಯನ್ನು ಕಡ್ಡಾಯವಾಗಿ ದಾಖಲಿಸಬೇಕು. ಈ ನಿಯಮ ಪಾಲಿಸದ ಶಿಕ್ಷಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶ್ವಿಜ ಬಿ.ವಿ. ಎಚ್ಚರಿಕೆ ನೀಡಿದ್ದಾರೆ.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮಕ್ಕಳ ಶೈಕ್ಷಣಿಕ ಪ್ರಗತಿ, ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ, ನಿರಂತರ ಆ್ಯಪ್‌ನಲ್ಲಿ ಹಾಜರಾತಿ ದಾಖಲಿಸುವ ಪ್ರಗತಿ ಹಾಗೂ ಮಕ್ಕಳು ಶಾಲೆಗೆ ಗೈರುಹಾಜರಾಗುತ್ತಿರುವುದಕ್ಕೆ ಕಾರಣಗಳ ಕುರಿತು ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.

ಶಾಲೆಯ ಎಲ್ಲ ಮಕ್ಕಳ ಹಾಜರಾತಿಯನ್ನು ನಿಯಮಾನುಸಾರ ದಾಖಲಿಸಬೇಕು. ಸರ್ಕಾರದಿಂದ ಮಕ್ಕಳಿಗೆ ವಿತರಿಸಲಾಗುತ್ತಿರುವ ಶೂ ಮತ್ತು ಸಾಕ್ಸ್‌ಗಳು ಪ್ರತಿಯೊಬ್ಬ ವಿದ್ಯಾರ್ಥಿಗೂ ತಲುಪುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ನಿರಂತರ ಆ್ಯಪ್ ಬಳಕೆಗೆ ಕಟ್ಟುನಿಟ್ಟಿನ ಸೂಚನೆ

ಮಕ್ಕಳ ಹಾಜರಾತಿ ದಾಖಲಿಸುವ ನಿರಂತರ ಆ್ಯಪ್‌ನ ಕಾರ್ಯನಿರ್ವಹಣೆಯ ಮೇಲೆ ಅಧಿಕಾರಿಗಳು ನಿರಂತರ ನಿಗಾ ವಹಿಸಬೇಕು. ಪ್ರತಿದಿನ ಬೆಳಗ್ಗೆ ಹಾಗೂ ಮಧ್ಯಾಹ್ನ ಕಡ್ಡಾಯವಾಗಿ ಹಾಜರಾತಿ ದಾಖಲಿಸುವಂತೆ ಶಿಕ್ಷಕರಿಗೆ ಸೂಚನೆ ನೀಡಬೇಕು. ಹಾಜರಾತಿ ದಾಖಲಾತಿಯ ಪ್ರಗತಿಯನ್ನು ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳು ನಿಯಮಿತವಾಗಿ ಜಿಲ್ಲಾ ಪಂಚಾಯಿತಿಗೆ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದರು.

ಅಕ್ಷರ ದಾಸೋಹದ ಆಹಾರದ ಗುಣಮಟ್ಟಕ್ಕೆ ಆದ್ಯತೆ

ಅಕ್ಷರ ದಾಸೋಹ ಯೋಜನೆಯಡಿ ಮಕ್ಕಳಿಗೆ ವಿತರಿಸಲಾಗುತ್ತಿರುವ ಆಹಾರದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ವಿಶೇಷವಾಗಿ ಮೊಟ್ಟೆ ಮತ್ತು ಬಾಳೆಹಣ್ಣಿನ ವಿತರಣೆಯ ಕುರಿತು ಅಕ್ಷರ ದಾಸೋಹ ಅಧಿಕಾರಿಗಳು ಪ್ರತಿನಿತ್ಯ ಮಾಹಿತಿ ಸಂಗ್ರಹಿಸಬೇಕು ಎಂದು ಸೂಚಿಸಿದರು.

ಶಾಲಾವಾರು ಎಷ್ಟು ಮಕ್ಕಳು ಮೊಟ್ಟೆ ಸೇವಿಸುತ್ತಿದ್ದಾರೆ ಹಾಗೂ ಎಷ್ಟು ಮಕ್ಕಳು ಮೊಟ್ಟೆಯ ಬದಲಿಗೆ ಬಾಳೆಹಣ್ಣು ಪಡೆಯುತ್ತಿದ್ದಾರೆ ಎಂಬ ನಿಖರ ದತ್ತಾಂಶ ಸಂಗ್ರಹಿಸಿ, ಅದರ ಆಧಾರದ ಮೇಲೆ ಸೂಕ್ತ ಮೇಲ್ವಿಚಾರಣೆ ನಡೆಸಬೇಕು ಎಂದರು.

ಮಕ್ಕಳಲ್ಲಿ ಮೊಟ್ಟೆ ಸೇವನೆಯಿಂದ ದೊರೆಯುವ ಪೌಷ್ಟಿಕಾಂಶ ಹಾಗೂ ಆರೋಗ್ಯದ ಪ್ರಯೋಜನಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ಆಯೋಜಿಸಬೇಕು. ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕತೆಯ ಹಿತದೃಷ್ಟಿಯಿಂದ ಅಕ್ಷರ ದಾಸೋಹ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ (ಅಭಿವೃದ್ಧಿ) ಕೆ.ಪಿ. ಸಂಜೀವಪ್ಪ, ಉಪ ಕಾರ್ಯದರ್ಶಿ (ಆಡಳಿತ) ಈಶ್ವರಪ್ಪ, ಮುಖ್ಯ ಲೆಕ್ಕಾಧಿಕಾರಿ ನರಸಿಂಹಮೂರ್ತಿ, ಯೋಜನಾ ನಿರ್ದೇಶಕ ನಾರಾಯಣಸ್ವಾಮಿ, ಮುಖ್ಯ ಯೋಜನಾಧಿಕಾರಿ ಸಣ್ಣ ಮಸಿಯಪ್ಪ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

– ಸಪ್ತಸ್ವರ ನ್ಯೂಸ್, ತುಮಕೂರು

Leave a Reply

Your email address will not be published. Required fields are marked *