ಕರ್ನಾಟಕ ನಾಡಧ್ವಜಕ್ಕೆ ಅಧಿಕೃತ ಮಾನ್ಯತೆ e1793521429401

ತುಮಕೂರು : ರಾಜ್ಯೋತ್ಸವ ಸಂಭ್ರಮ ನವೆಂಬರ್‌ಗೆ ಸೀಮಿತವಾಗಬಾರದು

DISTRICT NEWS ತುಮಕೂರು
  • ರಾಜ್ಯೋತ್ಸವ ಸಂಭ್ರಮ ನವೆಂಬರ್‌ಗೆ ಸೀಮಿತವಾಗಬಾರದು, ನಿತ್ಯೋತ್ಸವವಾಗಬೇಕು!
  • ಕನ್ನಡ ಭಾಷೆ, ಸಂಸ್ಕೃತಿಯ ಉಳಿವಿಗೆ ಎಲ್ಲರೂ ಕೈಜೋಡಿಸಿ: ಸಚಿವ ಕೃಷ್ಣಬೈರೇಗೌಡ
  • ಕನ್ನಡ ಬಾವುಟಕ್ಕೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರಕ್ಕೆ ಪ್ರಸ್ತಾವನೆ | 71 ಸಾಧಕರಿಗೆ ಜಿಲ್ಲಾ ಮಟ್ಟದ ಸನ್ಮಾನ | ಅದ್ಧೂರಿಯಾಗಿ ನಡೆದ 71ನೇ ಕನ್ನಡ ರಾಜ್ಯೋತ್ಸವ
  • ಐಟಿ-ಬಿಟಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶ: ಸಚಿವ ಕೃಷ್ಣ ಬೈರೇಗೌಡ
  • ರಾಜ್ಯದ ತೆರಿಗೆ ಆದಾಯಕ್ಕೆ ಅನುಗುಣವಾಗಿ ಕರ್ನಾಟಕಕ್ಕೆ ನ್ಯಾಯಯುತ ಪಾಲು ಸಿಗಬೇಕು – ಕೇಂದ್ರದ ವಿರುದ್ಧ ಅಸಮಾಧಾನ

ತುಮಕೂರು, ನವೆಂಬರ್ 1: ಕನ್ನಡ ರಾಜ್ಯೋತ್ಸವದ ಸಂಭ್ರಮ ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗದೆ, ವರ್ಷದ ಪ್ರತಿದಿನವೂ ಕನ್ನಡದ ಹಬ್ಬವಾಗಿ ಆಚರಣೆಯಾಗಬೇಕು. ಕನ್ನಡ ಭಾಷೆ, ನಾಡು, ನುಡಿ ಹಾಗೂ ಸಂಸ್ಕೃತಿಯ ಬಗ್ಗೆ ಪ್ರತಿಯೊಬ್ಬ ಕನ್ನಡಿಗನಲ್ಲೂ ಅಭಿಮಾನ ಮೂಡಬೇಕು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ ಕರೆ ನೀಡಿದರು.

ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ನಾಡು

ಕನ್ನಡ ನಾಡು ಇತಿಹಾಸದಲ್ಲಿ ಹಲವು ರಾಜ ಸಂಸ್ಥಾನಗಳ ಆಡಳಿತಕ್ಕೆ ಒಳಪಟ್ಟಿದ್ದರೂ ತನ್ನದೇ ಆದ ಭೌಗೋಳಿಕ, ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ವೈಶಿಷ್ಟ್ಯವನ್ನು ಸಾವಿರಾರು ವರ್ಷಗಳಿಂದ ಉಳಿಸಿಕೊಂಡು ಬಂದಿದೆ. ಅಮೋಘವರ್ಷ ನೃಪತುಂಗನ ‘ಕವಿರಾಜಮಾರ್ಗ’ ಕೃತಿಯ ಮೂಲಕ ಸ್ಪಷ್ಟ ರೂಪ ಪಡೆದ ಕನ್ನಡ ಭಾಷೆ, ಹಂತ ಹಂತವಾಗಿ ಸಮೃದ್ಧ ಸಾಹಿತ್ಯ ಪರಂಪರೆಯನ್ನು ಬೆಳೆಸಿಕೊಂಡು ಜಗತ್ತಿನ ಪ್ರಮುಖ ಸಾಂಸ್ಕೃತಿಕ ಭಾಷೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ ಎಂದರು.

ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ವಿವಿಧ ಸಂಸ್ಥಾನಗಳಾಗಿ ಹರಿದು ಹಂಚಿಹೋಗಿದ್ದ ಕನ್ನಡಿಗರನ್ನು ಒಂದೇ ಆಡಳಿತ ವ್ಯವಸ್ಥೆಯಡಿ ತರಬೇಕೆಂಬುದು ಕನ್ನಡಿಗರ ಬಹುದಿನಗಳ ಕನಸಾಗಿತ್ತು. ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರ ನೇತೃತ್ವದಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆಗೆ ಒಲವು ವ್ಯಕ್ತವಾದ ಹಿನ್ನೆಲೆಯಲ್ಲಿ 1956ರ ನವೆಂಬರ್ 1ರಂದು ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂತು. ಇದರಿಂದ ಕನ್ನಡಿಗರ ಏಕೀಕರಣದ ಕನಸು ನನಸಾಯಿತು. ಈ ಐತಿಹಾಸಿಕ ಸಾಧನೆಗೆ ಶ್ರಮಿಸಿದ ಎಲ್ಲ ಮಹನೀಯರನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.

1973ರ ನವೆಂಬರ್ 1ರಂದು ವಿಶಾಲ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು ಎಂದು ಸ್ಮರಿಸಿದರು.

ತುಮಕೂರು ಜಿಲ್ಲೆಯ ಕೊಡುಗೆ ಅಪಾರ

ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ ಹಾಗೂ ಕನ್ನಡ ಸಾಹಿತ್ಯ-ಸಂಸ್ಕೃತಿಯ ಬೆಳವಣಿಗೆಯಲ್ಲಿ ತುಮಕೂರು ಜಿಲ್ಲೆಯ ಕೊಡುಗೆ ಮಹತ್ವದ್ದಾಗಿದೆ. ಕಲ್ಪತರು ನಾಡು ಎಂದೇ ಪ್ರಸಿದ್ಧವಾಗಿರುವ ಈ ಜಿಲ್ಲೆ ಕೃಷಿ ಕ್ಷೇತ್ರದ ಜೊತೆಗೆ ಸಾಹಿತ್ಯ, ರಂಗಭೂಮಿ ಮತ್ತು ಸಾಂಸ್ಕೃತಿಕ ಲೋಕಕ್ಕೂ ಅಪಾರ ಕೊಡುಗೆ ನೀಡಿದೆ.

ದೇಶ-ವಿದೇಶಗಳ ಜನರಿಗೆ ಅಕ್ಷರ, ಅನ್ನ ಹಾಗೂ ಆಶ್ರಯದಾಸೋಹ ನೀಡಿದ ಸಿದ್ಧಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ ಆದರ್ಶಗಳು ಇಂದಿಗೂ ವಿಶ್ವದಾದ್ಯಂತ ಜೀವಂತವಾಗಿವೆ. ಇದೇ ಜಿಲ್ಲೆಯ ಸಾಲುಮರದ ತಿಮ್ಮಕ್ಕ ಅವರ ಪರಿಸರ ಪ್ರೇಮ ಇಡೀ ಸಮಾಜಕ್ಕೆ ಸ್ಫೂರ್ತಿಯಾಗಿದೆ ಎಂದು ಬಣ್ಣಿಸಿದರು.

ಭಾಷಾ ಹೇರಿಕೆಗೆ ವಿರೋಧ: ಕನ್ನಡದ ಗೌರವಕ್ಕೆ ಆದ್ಯತೆ

ರಾಜ್ಯದ ಜನರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸರ್ಕಾರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇದರ ಜೊತೆಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೂ ಪೂರಕವಾದ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.

ದೇಶದಲ್ಲಿ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುವ ಪ್ರಯತ್ನಗಳು ನಡೆಯುತ್ತಿರುವುದು ಆತಂಕಕಾರಿ. ಸಂವಿಧಾನ ಪ್ರತಿಯೊಬ್ಬರಿಗೂ ತಮಗೆ ಇಷ್ಟವಾದ ಭಾಷೆಯನ್ನು ಮಾತನಾಡುವ ಸ್ವಾತಂತ್ರ್ಯ ನೀಡಿದೆ. ಅಧಿಕಾರವನ್ನು ಬಳಸಿಕೊಂಡು ಒಂದು ಭಾಷೆಯನ್ನು ಹತ್ತಿಕ್ಕಿ ಮತ್ತೊಂದು ಭಾಷೆಯನ್ನು ಹೇರುವ ಪ್ರಯತ್ನವನ್ನು ಪ್ರತಿಯೊಬ್ಬರೂ ವಿರೋಧಿಸಬೇಕು ಎಂದು ಹೇಳಿದರು.

ಭಾರತ ಬಹುಭಾಷೆ ಮತ್ತು ಬಹುಸಂಸ್ಕೃತಿಗಳ ಒಕ್ಕೂಟವಾಗಿದೆ. ಎಲ್ಲ ಭಾಷೆ ಹಾಗೂ ಸಂಸ್ಕೃತಿಗಳಿಗೆ ಸಮಾನ ಗೌರವ ದೊರೆಯಬೇಕು. ಯಾವುದೇ ಭಾಷೆ ಅಥವಾ ಸಂಸ್ಕೃತಿಯನ್ನು ತುಳಿಯುವ ಪ್ರಯತ್ನ ದೇಶದ ಐಕ್ಯತೆಗೆ ಧಕ್ಕೆ ಉಂಟುಮಾಡುತ್ತದೆ ಎಂದು ಎಚ್ಚರಿಸಿದರು.

ಕನ್ನಡ ಬಾವುಟಕ್ಕೆ ಅಧಿಕೃತ ಸ್ಥಾನಮಾನಕ್ಕೆ ಪ್ರಸ್ತಾವನೆ

ಕನ್ನಡ ನಾಡಿನ ನಾಡಗೀತೆಗೆ ಇರುವ ಗೌರವದಂತೆಯೇ ಹಳದಿ-ಕೆಂಪು ಬಣ್ಣದ ಕನ್ನಡ ಬಾವುಟಕ್ಕೂ ಅಧಿಕೃತ ಸ್ಥಾನಮಾನ ದೊರೆಯಬೇಕು. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ ದೊರೆಯುವ ವಿಶ್ವಾಸವಿದೆ ಎಂದು ಸಚಿವರು ತಿಳಿಸಿದರು.

ನಮ್ಮ ಮನೆ-ಮನ ಕನ್ನಡವಾಗಬೇಕು. ನಮ್ಮ ಆಲೋಚನೆಗಳಲ್ಲೂ ಕನ್ನಡದ ಅಭಿಮಾನ ಇರಬೇಕು. ಬರೆದಂತೆ ಓದುವ, ಓದಿದಂತೆ ಬರೆಯುವ ಅದ್ಭುತ ಭಾಷೆ ಕನ್ನಡ. ಹಿರಿಯ ತತ್ವಜ್ಞಾನಿ ವಿನೋಬಾ ಭಾವೆ ಅವರು ಕನ್ನಡ ಲಿಪಿಯನ್ನು ವಿಶ್ವ ಲಿಪಿಗಳ ರಾಣಿ ಎಂದು ಪ್ರಶಂಸಿಸಿರುವುದು ನಮ್ಮೆಲ್ಲರ ಹೆಮ್ಮೆ. ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ ಎಂದು ಕರೆ ನೀಡಿದರು.

71 ಸಾಧಕರಿಗೆ ಸನ್ಮಾನ

ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ವಿವಿಧ ಕ್ಷೇತ್ರಗಳ ಜಿಲ್ಲಾ ಮಟ್ಟದ 71 ಹಾಗೂ ತಾಲ್ಲೂಕು ಮಟ್ಟದ 24 ಸಾಧಕರನ್ನು ಸನ್ಮಾನಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಇದಕ್ಕೂ ಮುನ್ನ ಬೆಳಿಗ್ಗೆ 7.45ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಿಂದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದವರೆಗೆ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು, ಜನಪದ ಕಲಾತಂಡಗಳೊಂದಿಗೆ ತಾಯಿ ಭುವನೇಶ್ವರಿಯ ಭಾವಚಿತ್ರವನ್ನು ಅಲಂಕೃತ ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಲಾಯಿತು.

ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮಗಳು

ನಗರದ ಬಟವಾಡಿಯ ಸೇಂಟ್ ಮೇರೀಸ್ ಶಾಲೆಯ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ‘ಕನ್ನಡ ನಾಡಿನ ರನ್ನದ ರತ್ನ ಕೇಳೋ ಕತೆಯನ್ನ’, ಕ್ಯಾತ್ಸಂದ್ರ ಸರ್ಕಾರಿ ಪ್ರೌಢಶಾಲೆಯ ಮಕ್ಕಳ ‘ದೇಶಕ್ಕೆ ಯೋಧ, ನಾಡಿಗೆ ರೈತ’, ಬಿ.ಎಚ್. ರಸ್ತೆಯ ಶ್ರೀ ಸಿದ್ಧಗಂಗಾ ಪ್ರೌಢಶಾಲೆಯ ‘ಜನುಮ ನೀಡುತ್ತಾಳೆ ನಮ್ಮ ತಾಯಿ’ ಹಾಗೂ ವಿಜಯ ಪಿಯು ಕಾಲೇಜಿನ ವಿದ್ಯಾರ್ಥಿಗಳ ‘ಹಚ್ಚೇವು ಕನ್ನಡ ದೀಪ’ ಗೀತೆಗಳ ನೃತ್ಯ ಪ್ರದರ್ಶನಗಳು ಪ್ರೇಕ್ಷಕರ ಗಮನ ಸೆಳೆದವು.

ಕನ್ನಡ ನಾಡಿನ ಇತಿಹಾಸ, ಹಿರಿಮೆ-ಗರಿಮೆ, ಸಾಹಿತಿಗಳು ಹಾಗೂ ವಿವಿಧ ಕ್ಷೇತ್ರಗಳ ಸಾಧಕರ ಕೊಡುಗೆಗಳನ್ನು ಬಿಂಬಿಸಿದ ನೃತ್ಯರೂಪಕಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು.

ಪಥಸಂಚಲನದಲ್ಲಿ ವಿಜೇತರಿಗೆ ಬಹುಮಾನ

ರಾಜ್ಯೋತ್ಸವದ ಅಂಗವಾಗಿ ನಡೆದ ಪಥಸಂಚಲನದಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

  • ಪೊಲೀಸ್ ವಿಭಾಗ: 12ನೇ ಪಡೆ ಕೆಎಸ್‌ಆರ್‌ಪಿ ತಂಡಕ್ಕೆ ಪ್ರಥಮ, ಡಿಎಆರ್ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ತಂಡಕ್ಕೆ ದ್ವಿತೀಯ ಬಹುಮಾನ.
  • ಎನ್‌ಸಿಸಿ ವಿಭಾಗ: ಸರ್ವೋದಯ ಕಾಲೇಜಿನ ಬಾಲಕರ ತಂಡಕ್ಕೆ ಪ್ರಥಮ, ಸಿದ್ಧಗಂಗಾ ಕಾಲೇಜಿನ ಬಾಲಕರ ತಂಡಕ್ಕೆ ದ್ವಿತೀಯ ಬಹುಮಾನ.
  • ಸ್ಕೌಟ್ಸ್ ಮತ್ತು ಗೈಡ್ಸ್: ಆರ್ಯನ್ ಪ್ರೌಢಶಾಲೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತಂಡಗಳಿಗೆ ಬಹುಮಾನ.
  • ಸೇವಾದಳ ವಿಭಾಗ: ಕನ್ನಿಕಾ ಆಂಗ್ಲಶಾಲೆಗೆ ಪ್ರಥಮ, ಬಾಪೂಜಿ ಸಂಯುಕ್ತ ಪದವಿಪೂರ್ವ ಕಾಲೇಜಿಗೆ ದ್ವಿತೀಯ ಬಹುಮಾನ.

  ರಾಜ್ಯದ ಐಟಿ-ಬಿಟಿ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಬೇಕು. ಉದ್ಯೋಗ ನೇಮಕಾತಿಯಲ್ಲಿ ಕನ್ನಡ ಭಾಷಿಕರಿಗೆ ಆದ್ಯತೆ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಐಟಿ-ಬಿಟಿ ಸೇರಿದಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವುದು ಸರ್ಕಾರದ ಆಶಯವಾಗಿದೆ ಎಂದರು.

ರಾಜ್ಯದ ತೆರಿಗೆ ಪಾಲಿನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಬಾರದು

ಕೇಂದ್ರ ಸರ್ಕಾರ ಜಿಎಸ್‌ಟಿ ವ್ಯವಸ್ಥೆಯಲ್ಲಿ ಬದಲಾವಣೆ ತಂದ ನಂತರ ರಾಜ್ಯದ ಆದಾಯದಲ್ಲಿ ಕಡಿತವಾಗಿದೆ. ದೇಶದಲ್ಲಿ ಅತಿ ಹೆಚ್ಚು ಜಿಎಸ್‌ಟಿ ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಬೆಂಗಳೂರು ನಗರವು ದೇಶದಲ್ಲೇ ಅತಿ ಹೆಚ್ಚು ಆದಾಯ ತೆರಿಗೆ ಸಂಗ್ರಹವಾಗುವ ನಗರಗಳಲ್ಲಿ ಎರಡನೇ ಸ್ಥಾನದಲ್ಲಿದ್ದರೂ, ರಾಜ್ಯಕ್ಕೆ ದೊರೆಯಬೇಕಾದ ತೆರಿಗೆ ಪಾಲು ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಭಿವೃದ್ಧಿಯಲ್ಲಿ ಹಿಂದುಳಿದ ರಾಜ್ಯಗಳಿಗೂ ಕೇಂದ್ರ ಸರ್ಕಾರ ಅಗತ್ಯ ನೆರವು ನೀಡಬೇಕು. ಆದರೆ ಕರ್ನಾಟಕದಿಂದ ಸಂಗ್ರಹವಾಗುವ ತೆರಿಗೆ ಹಣದಲ್ಲಿ ರಾಜ್ಯಕ್ಕೆ ನ್ಯಾಯಯುತ ಪಾಲು ದೊರೆಯುವುದು ಅತ್ಯಗತ್ಯ. ಹೆದ್ದಾರಿ ನಿರ್ಮಾಣ ಸೇರಿದಂತೆ ದೇಶದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಕರ್ನಾಟಕದ ತೆರಿಗೆ ಆದಾಯ ಬಳಕೆಯಾಗುತ್ತಿದೆ ಎಂದು ಹೇಳಿದರು.

ಕರ್ನಾಟಕ ಆರ್ಥಿಕವಾಗಿ ಬಲಿಷ್ಠವಾದರೆ ದೇಶದ ಆರ್ಥಿಕ ಬೆಳವಣಿಗೆಗೂ ಹೆಚ್ಚಿನ ಬಲ ದೊರೆಯಲಿದೆ. ಹೀಗಾಗಿ ರಾಜ್ಯ ಪಾವತಿಸುವ ತೆರಿಗೆಗೆ ಅನುಗುಣವಾಗಿ ಹೆಚ್ಚಿನ ಪಾಲು ನೀಡಬೇಕು. ಇದರಿಂದ ರಾಜ್ಯಕ್ಕೆ ನ್ಯಾಯ ದೊರೆಯುವುದರ ಜೊತೆಗೆ ದೇಶದ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದರು.

ಭಾಷೆ, ಸಂಸ್ಕೃತಿಗೆ ಸಮಾನ ಗೌರವ ಅಗತ್ಯ

ಭಾಷೆ ಮತ್ತು ಸಂಸ್ಕೃತಿಯ ಆಧಾರದಲ್ಲಿ ಜನರನ್ನು ವಿಭಜಿಸುವ ಬದಲು ಎಲ್ಲ ಭಾಷೆ ಹಾಗೂ ಸಂಸ್ಕೃತಿಗಳಿಗೆ ಸಮಾನ ಗೌರವ ನೀಡಬೇಕು. ಪರಸ್ಪರ ಗೌರವ ಮತ್ತು ಸಹಬಾಳ್ವೆಯಿಂದ ಮಾತ್ರ ಸಮಾಜದಲ್ಲಿ ಒಗ್ಗಟ್ಟು ಸಾಧ್ಯ ಎಂದು ಸಚಿವರು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಸಚಿವ ಡಾ. ಜಿ. ಪರಮೇಶ್ವರ್ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಶೀಘ್ರ ಗುಣಮುಖರಾಗಿ ಮತ್ತೆ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ನಗರ ಶಾಸಕ ಜಿ.ಬಿ. ಜ್ಯೋತಿ ಗಣೇಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ. ಅಶ್ವಿಜ, ಮಹಾನಗರ ಪಾಲಿಕೆ ಆಯುಕ್ತೆ ಶುಭ, ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ತಹಶೀಲ್ದಾರ್ ರಾಜೇಶ್ವರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ ಕು. ಮಿರ್ಜಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

 

Leave a Reply

Your email address will not be published. Required fields are marked *