ನಾಗರಿಕ ಸ್ನೇಹಿ ಸೇವೆಗೆ ಕೇಂದ್ರದ ಒತ್ತು – ದೂರುಗಳ ತ್ವರಿತ ವಿಲೇವಾರಿಗೆ ಕಾಲಮಿತಿ ನಿಗದಿ
## ವಿಬಿ-ಜಿ ರಾಮ್ ಜಿ ಕಾಯ್ದೆಯಡಿ ಕುಂದುಕೊರತೆ ಪರಿಹಾರ ನಿಯಮ ಪ್ರಕಟ: 15 ದಿನಗಳೊಳಗೆ ದೂರು ಇತ್ಯರ್ಥ ಕಡ್ಡಾಯ!
### ದೂರು ಸಲ್ಲಿಕೆಗೆ ಹಲವು ಮಾರ್ಗ; 7 ಕೆಲಸದ ದಿನಗಳಲ್ಲಿ ವಿಚಾರಣೆ ಪೂರ್ಣಗೊಳಿಸಲು ಕೇಂದ್ರ ಸರ್ಕಾರದ ಹೊಸ ನಿಯಮ
**ನವದೆಹಲಿ, ನವೆಂಬರ್ 02: ವಿಬಿ-ಜಿ ರಾಮ್ ಜಿ ಕಾಯ್ದೆಯ ಅನುಷ್ಠಾನದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಗ್ರಾಮೀಣಾಭಿವೃದ್ಧಿ ಸಚಿವಾಲಯವು **ವಿಬಿ-ಜಿ ರಾಮ್ ಜಿ ಕುಂದುಕೊರತೆ ಪರಿಹಾರ ನಿಯಮಗಳು–2026** ಅನ್ನು ಪ್ರಕಟಿಸಿದ್ದು, ಸಾರ್ವಜನಿಕರ ದೂರುಗಳನ್ನು ತ್ವರಿತವಾಗಿ ಮತ್ತು ಕಾಲಮಿತಿಯೊಳಗೆ ಪರಿಹರಿಸಲು ಹೊಸ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ.
ಈ ಹೊಸ ನಿಯಮದ ಪ್ರಕಾರ, ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಸಲ್ಲಿಸುವ ದೂರುಗಳ ವಿಚಾರಣೆಯನ್ನು 7 ಕೆಲಸದ ದಿನಗಳೊಳಗೆ ಪೂರ್ಣಗೊಳಿಸಬೇಕು. ಅಲ್ಲದೆ, ದೂರು ಸ್ವೀಕರಿಸಿದ ದಿನಾಂಕದಿಂದ ಗರಿಷ್ಠ 15 ದಿನಗಳೊಳಗೆ ಸಮಸ್ಯೆಯನ್ನು ಪರಿಹರಿಸುವುದು ಕಡ್ಡಾಯವಾಗಿದೆ.
ಗ್ರಾಮ ಪಂಚಾಯಿತಿಯಿಂದ ಜಿಲ್ಲಾ ಮಟ್ಟದವರೆಗೆ ದೂರು ಪರಿಹಾರ ವ್ಯವಸ್ಥೆ
ಗ್ರಾಮ ಪಂಚಾಯಿತಿ, ಬ್ಲಾಕ್ ಹಾಗೂ ಜಿಲ್ಲಾ ಮಟ್ಟದಲ್ಲಿ ಬಹುಹಂತದ ಕುಂದುಕೊರತೆ ಪರಿಹಾರ ವ್ಯವಸ್ಥೆಯನ್ನು ಸ್ಥಾಪಿಸಲು ರಾಜ್ಯ ಸರ್ಕಾರಗಳಿಗೆ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.
ಪ್ರತಿ ಹಂತದಲ್ಲೂ ಗೊತ್ತುಪಡಿಸಿದ ಅಧಿಕಾರಿಗಳು ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿ, ನೋಂದಾಯಿಸಿ, ವಿಚಾರಣೆ ನಡೆಸಿ ಪರಿಹರಿಸುವ ಜವಾಬ್ದಾರಿ ಹೊಂದಿರುತ್ತಾರೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಕಾರ್ಯಕ್ರಮ ಸಂಯೋಜಕರು ದೂರು ಪರಿಹಾರ ವ್ಯವಸ್ಥೆಯ ಮೇಲ್ವಿಚಾರಣೆ ನಡೆಸಲಿದ್ದಾರೆ.
ದೂರು ಸಲ್ಲಿಸಲು ನಾಲ್ಕು ಮಾರ್ಗಗಳು
ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರಲು ಹಲವು ಮಾರ್ಗಗಳನ್ನು ಬಳಸಿಕೊಳ್ಳಬಹುದು.
– ಸಂಬಂಧಪಟ್ಟ ದೂರು ಪರಿಹಾರ ಅಧಿಕಾರಿಗೆ ಖುದ್ದಾಗಿ ದೂರು ಸಲ್ಲಿಕೆ.
– ತಲುಪಿದ ಬಗ್ಗೆ ಪುರಾವೆಯೊಂದಿಗೆ ಸ್ಪೀಡ್ ಪೋಸ್ಟ್ ಮೂಲಕ ದೂರು.
– ಕೇಂದ್ರ ಸರ್ಕಾರ ನಿಗದಿಪಡಿಸಿದ ಡಿಜಿಟಲ್ ಸಾರ್ವಜನಿಕ ವೇದಿಕೆಯ ಮೂಲಕ ದೂರು.
– ದೂರವಾಣಿ, ಸಹಾಯವಾಣಿ ಅಥವಾ ರಾಜ್ಯ ಸರ್ಕಾರ ಸೂಚಿಸುವ ಇತರ ವಿಧಾನಗಳ ಮೂಲಕ ದೂರು.
ಭೌತಿಕವಾಗಿ ಸಲ್ಲಿಸಿದ ದೂರುಗಳನ್ನು ಅದೇ ದಿನ ಅಥವಾ ಸಾಧ್ಯವಾಗದಿದ್ದಲ್ಲಿ ಮುಂದಿನ ಕೆಲಸದ ದಿನದೊಳಗೆ ಡಿಜಿಟಲ್ ವ್ಯವಸ್ಥೆಯಲ್ಲಿ ನೋಂದಾಯಿಸಬೇಕು.
ದೂರು ದಾಖಲಿಸಲು ನಿರಾಕರಿಸುವಂತಿಲ್ಲ!
ಹೊಸ ನಿಯಮದ ಪ್ರಮುಖ ಅಂಶವೆಂದರೆ, ದೂರಿನ ಸ್ವರೂಪ, ಭಾಷೆ, ಸಲ್ಲಿಸುವ ವಿಧಾನ ಅಥವಾ ಪ್ರಕ್ರಿಯೆಯಲ್ಲಿನ ಯಾವುದೇ ಲೋಪದ ಕಾರಣಕ್ಕೆ ದೂರು ನೋಂದಾಯಿಸಲು ನಿರಾಕರಿಸುವಂತಿಲ್ಲ.
ದೂರು ನೋಂದಣಿಯಾದ ಬಳಿಕ ದೂರುದಾರರಿಗೆ ನೋಂದಣಿ ಸಂಖ್ಯೆ, ಸ್ವೀಕೃತಿ ದಿನಾಂಕ ಹಾಗೂ ದೂರು ಸ್ವೀಕರಿಸಿದ ಅಧಿಕಾರಿಯ ವಿವರಗಳಿರುವ ಸ್ವೀಕೃತಿ ಪತ್ರ ನೀಡಲಾಗುತ್ತದೆ.
7 ದಿನಗಳಲ್ಲಿ ವಿಚಾರಣೆ, 15 ದಿನಗಳಲ್ಲಿ ಪರಿಹಾರ
ನೋಂದಾಯಿತ ಪ್ರತಿಯೊಂದು ದೂರಿನ ಕುರಿತು ಸಂಬಂಧಪಟ್ಟ ಅಧಿಕಾರಿ ಅಗತ್ಯ ವಿಚಾರಣೆ ನಡೆಸಬೇಕು. ಇದಕ್ಕಾಗಿ ಸಂಬಂಧಪಟ್ಟ ಇಲಾಖೆಯಿಂದ ದಾಖಲೆಗಳು, ವರದಿಗಳು, ರಿಜಿಸ್ಟರ್ಗಳು ಹಾಗೂ ಇತರ ಮಾಹಿತಿಯನ್ನು ಪಡೆಯಬಹುದು.
ಅಗತ್ಯವಿದ್ದಲ್ಲಿ ದೂರುದಾರರಿಗೆ ತಮ್ಮ ಅಭಿಪ್ರಾಯ ಮಂಡಿಸಲು ಅವಕಾಶ ನೀಡಲಾಗುತ್ತದೆ.
ವಿಚಾರಣೆಯನ್ನು 7 ಕೆಲಸದ ದಿನಗಳೊಳಗೆ ಪೂರ್ಣಗೊಳಿಸಿ, ದೂರನ್ನು 15 ದಿನಗಳೊಳಗೆ ಇತ್ಯರ್ಥಪಡಿಸಬೇಕು. ಕೈಗೊಂಡ ಕ್ರಮ ಹಾಗೂ ತೀರ್ಮಾನವನ್ನು ಡಿಜಿಟಲ್ ವ್ಯವಸ್ಥೆಯಲ್ಲಿ ದಾಖಲಿಸಿ ದೂರುದಾರರಿಗೆ ತಿಳಿಸಬೇಕು.
ಬಗೆಹರಿಯದ ದೂರುಗಳು ಮೇಲಿನ ಹಂತಕ್ಕೆ ವರ್ಗಾವಣೆ
ನಿಗದಿತ 15 ದಿನಗಳೊಳಗೆ ಪರಿಹಾರವಾಗದ ದೂರುಗಳನ್ನು ರಾಜ್ಯ ಸರ್ಕಾರದ ದೂರು ಪರಿಹಾರ ವ್ಯವಸ್ಥೆಯ ಮೂಲಕ ಮುಂದಿನ ಉನ್ನತ ಹಂತಕ್ಕೆ ವರ್ಗಾಯಿಸಲಾಗುತ್ತದೆ.
ದೂರು ಸಂಪೂರ್ಣವಾಗಿ ಇತ್ಯರ್ಥವಾಗುವವರೆಗೂ ಡಿಜಿಟಲ್ ವ್ಯವಸ್ಥೆಯ ಮೂಲಕ ನಿರಂತರ ಮೇಲ್ವಿಚಾರಣೆ ನಡೆಸಲಾಗುತ್ತದೆ. ಇದರಿಂದ ದೂರುಗಳ ಸ್ಥಿತಿಗತಿ ತಿಳಿದುಕೊಳ್ಳಲು ಮತ್ತು ಅಧಿಕಾರಿಗಳ ಜವಾಬ್ದಾರಿಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿದೆ.
ಮೇಲ್ಮನವಿ ಸಲ್ಲಿಸಲೂ ಅವಕಾಶ
ದೂರು ಪರಿಹಾರ ಪ್ರಕ್ರಿಯೆಯಲ್ಲಿ ಹೊರಡಿಸಲಾದ ಆದೇಶಗಳಿಂದ ತೃಪ್ತರಾಗದವರಿಗೆ ಮೇಲ್ಮನವಿ ಸಲ್ಲಿಸಲು ಕೂಡ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ವಿಬಿ-ಜಿ ರಾಮ್ ಜಿ ಕಾಯ್ದೆ–2025ರ ಶೆಡ್ಯೂಲ್-I ಪ್ರಕಾರ ಮೇಲ್ಮನವಿಗಳನ್ನು ಸಲ್ಲಿಸಿ ವಿಲೇವಾರಿ ಮಾಡಲಾಗುತ್ತದೆ.
ಗ್ರಾಮೀಣ ಕುಟುಂಬಗಳ ಹಕ್ಕುಗಳಿಗೆ ಬಲ
ಒಟ್ಟಿನಲ್ಲಿ, ವಿಬಿ-ಜಿ ರಾಮ್ ಜಿ ಯೋಜನೆಯ ಅನುಷ್ಠಾನದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ನೀಡುವುದು, ದೂರುಗಳ ನೋಂದಣಿ ಕಡ್ಡಾಯಗೊಳಿಸುವುದು, ಡಿಜಿಟಲ್ ಟ್ರ್ಯಾಕಿಂಗ್ ವ್ಯವಸ್ಥೆ ರೂಪಿಸುವುದು ಹಾಗೂ ನಿರ್ದಿಷ್ಟ ಕಾಲಮಿತಿಯಲ್ಲಿ ಪರಿಹಾರ ಒದಗಿಸುವುದು ಈ ಹೊಸ ನಿಯಮಗಳ ಪ್ರಮುಖ ಉದ್ದೇಶವಾಗಿದೆ.
ಇದರಿಂದ ಗ್ರಾಮೀಣ ಕುಟುಂಬಗಳಿಗೆ ಯೋಜನೆಯಡಿ ದೊರೆಯಬೇಕಾದ ಹಕ್ಕುಗಳು ಮತ್ತು ಸವಲತ್ತುಗಳನ್ನು ತಲುಪಿಸುವಲ್ಲಿ ಆಡಳಿತಾತ್ಮಕ ಹೊಣೆಗಾರಿಕೆ ಹೆಚ್ಚಾಗುವ ನಿರೀಕ್ಷೆಯಿದೆ.
ಸಪ್ತಸ್ವರ ನ್ಯೂಸ್ –
್ವ
