# ವಳ್ಳೂರು ಗ್ರಾಮದಲ್ಲಿ ನರಿ ದಾಳಿ: ಮಹಿಳೆ ಸೇರಿ ಮೂವರಿಗೆ ಗಾಯ
### ಮುತ್ಯಾಲಮ್ಮಗೆ ಗಂಭೀರ ಗಾಯ; ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು
ಪಾವಗಡ: ತಾಲ್ಲೂಕಿನ ವಳ್ಳೂರು ಗ್ರಾಮದ ಎಸ್‌ಸಿ ಕಾಲೋನಿ ವ್ಯಾಪ್ತಿಯಲ್ಲಿ ನರಿ ದಾಳಿ ನಡೆಸಿದ್ದು, ಮಹಿಳೆ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.
ಸೋಮವಾರ ಬೆಳಿಗ್ಗೆ ಗ್ರಾಮದ ಹೊರವಲಯದಲ್ಲಿ ಬಹಿರ್ದೆಸೆಗೆ ತೆರಳಿದ್ದ ಮುತ್ಯಾಲಮ್ಮ (52) ಅವರ ಮೇಲೆ ಪೊದೆಯಲ್ಲಿ ಅಡಗಿದ್ದ ನರಿ ಏಕಾಏಕಿ ದಾಳಿ ಮಾಡಿದೆ. ಈ ವೇಳೆ ಮುತ್ಯಾಲಮ್ಮ ಅವರ ಕೂಗಾಟ ಕೇಳಿ ರಕ್ಷಿಸಲು ಧಾವಿಸಿದ ರಾಮಣ್ಣ ಮತ್ತು ಹುಸೇನಮ್ಮ ಅವರ ಮೇಲೂ ನರಿ ದಾಳಿ ನಡೆಸಿದ್ದು, ಅವರಿಗೂ ಗಾಯಗಳಾಗಿವೆ.
ತಕ್ಷಣ ಸ್ಥಳೀಯರು ಗಾಯಾಳುಗಳನ್ನು ತಿರುಮಣಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಪಾವಗಡ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುತ್ಯಾಲಮ್ಮ ಅವರ ಮೂಗು ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿರುವ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಲಯ ಅರಣ್ಯಾಧಿಕಾರಿ ರಾಕೇಶ್ ಹಾಗೂ ಉಪ ವಲಯ ಅರಣ್ಯಾಧಿಕಾರಿ ಸಲಾರ್ ಅಹಮದ್ ಅವರು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಮುತ್ಯಾಲಮ್ಮ ಅವರ ಆರೋಗ್ಯ ವಿಚಾರಿಸಿದ್ದಾರೆ.
ಮೂಗಿಗೆ ಹೆಚ್ಚಿನ ಗಾಯವಾಗಿದ್ದು, ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಶಸ್ತ್ರಚಿಕಿತ್ಸೆಯ ವೆಚ್ಚವನ್ನು ಅರಣ್ಯ ಇಲಾಖೆ ಭರಿಸಲಿದೆ ಎಂದು ವಲಯ ಅರಣ್ಯಾಧಿಕಾರಿ ರಾಕೇಶ್ ತಿಳಿಸಿದ್ದಾರೆ.
**ಗ್ರಾಮಸ್ಥರಲ್ಲಿ ಆತಂಕ:** ಗ್ರಾಮದ ಸುತ್ತಮುತ್ತ ನರಿ ಕಾಣಿಸಿಕೊಳ್ಳುತ್ತಿರುವುದರಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದ್ದು ಬೀದಿ ನಾಯಿಗಳು ನರಿಯನ್ನು ಕೊಂದಿವೆ ಎಂದು ಸ್ಥಳಿಯರು ತಿಳಿಸಿದ್ದಾರೆ.
**ಸಪ್ತಸ್ವರ ನ್ಯೂಸ್ | ಪಾವಗಡ**
