R.R ನಗರ ವಿಧಾನಸಭಾ ಕ್ಷೇತ್ರ ಕ್ಕೆ ಡಿ ಕೆ ರವಿ ಹೆಂಡತಿ ಕುಸುಮಾ ‘ ಕೈ ‘ ಅಭ್ಯರ್ಥಿ….?
ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಟಿ ಬಿ ಜಯಚಂದ್ರ ಗೆ ‘ ಕೈ ‘ ಟಿಕೆಟ್…?
*ಹೈಕಮಾಂಡ್ ನಿಂದ ಅಭ್ಯರ್ಥಿಗಳ ತೀರ್ಮಾನ- ಡಿಕೆಶಿ
ಬೆಂಗಳೂರು: ಮುಂಬರುವ ಶಿರಾ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಾಗೂ ವಿಧಾನ ಪರಿಷತ್ ಚುನಾವಣೆಗಳಿಗೆ ಅಭ್ಯರ್ಥಿಗಳ ಶಿಫಾರಸ್ಸು ಪಟ್ಟಿಯನ್ನು ಹೈಕಮಾಂಡ್ ಗೆ ನಾವು ಕಳುಹಿಸಿಕೊಡುತ್ತೇವೆ. ಅಂತಿಮ ತೀರ್ಮಾನವನ್ನು ರಾಷ್ಟ್ರೀಯ ನಾಯಕರು ತೆಗೆದುಕೊಳ್ಳುತ್ತಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಜೆಡಿಎಸ್ ಮುಖಂಡ ಹನುಮಂತರಾಯಪ್ಪ ಅವರ ಪುತ್ರಿ ಕುಸುಮಾ ಎಚ್ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ನೂರಕ್ಕೂ ಹೆಚ್ಚು ಸ್ಥಳೀಯ ನಾಯಕರನ್ನು ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಪಕ್ಷಕ್ಕೆ ಸೇರಿಸಿಕೊಂಡ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ಹೇಳಿದ್ದಿಷ್ಟು:
‘ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾರಾಗಬೇಕು ಎಂದು ಶಿಫಾರಸ್ಸು ಮಾಡಲು ಈಗಾಗಲೇ ಅನೇಕ ಚರ್ಚೆ ಮಾಡಿದ್ದೇವೆ. ಇಂದು ದೆಹಲಿಗೆ ಅಭ್ಯರ್ಥಿಗಳ ಹೆಸರನ್ನು ಶಿಫಾರಸ್ಸು ಮಾಡಲಾಗುವುದು.
ಶಿರಾ ಕ್ಷೇತ್ರದಲ್ಲಿ ನಮ್ಮ ಹಿರಿಯ ನಾಯಕ ಜಯಚಂದ್ರ ಅವರು ಕಳೆದ ಚುನಾವಣೆಯಲ್ಲಿ 10 ಸಾವಿರ ಮತಗಳ ಅಂತರದಲ್ಲಿ ಸೊತ್ತಿದ್ದರು. ಈ ಬಾರಿ ಇಡೀ ಜಿಲ್ಲೆ ಒಟ್ಟಾಗಿ ಪಕ್ಷದ ಗೆಲುವಿಗೆ ಶ್ರಮಿಸಲಿದೆ. ಶಿರಾ ಕ್ಷೇತ್ರದ ಪ್ರಮುಖ ನಾಯಕರು ನಮ್ಮ ಸಿದ್ಧಾಂತ ಹಾಗೂ ನಾಯಕತ್ವ ನಂಬಿ ಪಕ್ಷಕ್ಕೆ ಆಗಮಿಸಿದ್ದಾರೆ. ಈ ರಾಜ್ಯದಲ್ಲಿನ ಆಡಳಿತ, ತಮ್ಮ ಕ್ಷೇತ್ರದಲ್ಲಿನ ಅಹಿತಕರ ಘಟನೆಗಳನ್ನು ಕಂಡು ಮುಂದಿನ ದಿನದಲ್ಲಿ ರಾಜ್ಯಕ್ಕೆ ಕಾಂಗ್ರೆಸ್ ಅನಿವಾರ್ಯ ಎಂದು ಅರಿತು 100ಕ್ಕೂ ಹೆಚ್ಚು ಶಿರಾದ ವಕೀಲರು ಹಾಗೂ ನಾಯಕರು ಪಕ್ಷಕ್ಕೆ ಸೇರಿದ್ದಾರೆ.
ಇವರ ಸಾವಿರಾರು ಮಂದಿ ಹಿಂಬಾಲಕರು ಪಕ್ಷಕ್ಕೆ ಸೇರಲು ಮುಂದಾಗಿದ್ದಾರೆ. ಎಲ್ಲರನ್ನೂ ಕಾಂಗ್ರೆಸ್ ಕಚೇರಿಗೆ ಕರೆತರಲು ಆಗದ ಕಾರಣ 100 ಮಂದಿ ಮಾತ್ರ ಇಲ್ಲಿಗೆ ಬಂದು ಪಕ್ಷಕ್ಕೆ ಸೇರಿದ್ದಾರೆ.
*ಕಾಂಗ್ರೆಸ್ ಸೇರಲು ಯುವಕರ ಒಲವು:*
ಕಾಂಗ್ರೆಸ್ ಸೇರಲು ಬಹಳ ಸಂಖ್ಯೆಯಲ್ಲಿ ಯುವಕರು ಉತ್ಸಾಹ ತೋರುತ್ತಿದ್ದಾರೆ. ನಾನು ಶ್ರೀಮತಿ ಸೋನಿಯಾ ಗಾಂಧಿ ಅವರ ಪರವಾಗಿ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರ ಪರವಾಗಿ ಶಿರಾ ಮುಖಂಡರಿಗೆ ಸ್ವಾಗತ ಕೋರುತ್ತೇನೆ. ಇವರ ಆಗಮನ ಪಕ್ಷಕ್ಕೆ ಜಯ ತಂದುಕೊಡಲಿದೆ ಎಂಬ ವಿಶ್ವಾಸ ಇದೆ. ಇವರು ಪ್ರತಿ ಹಳ್ಳಿ, ಬೂತ್ ಮಟ್ಟದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ನಡೆಸುವ ನಂಬಿಕೆ ಇದೆ.
ಇಲ್ಲಿ ಹೊಸಬರು ಹಳಬರು ಎಂದು ನೋಡದೇ ಒಂದು ಕುಟುಂಬವಾಗಿ ಕೆಲಸ ಮಾಡಬೇಕಿದೆ. ಇಡೀ ರಾಜ್ಯ ಶಿರಾ ಕ್ಷೇತ್ರದ ಮತದಾರ ಯಾವ ತೀರ್ಪು ನೀಡಲಿದ್ದಾರೆ ಎಂದು ಕಾದುಕುಳಿತಿದೆ. ನಮ್ಮ ಸಿದ್ಧಾಂತ ನಂಬಿ ಷರತ್ತು ಇಲ್ಲದೆ ಬರುವವರನ್ನು ಸೇರಿಸಿಕೊಳ್ಳುವ ಬಗ್ಗೆ ಸಮಿತಿಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು.
*ಯಾರು ಎಷ್ಟೇ ಕುತಂತ್ರ ಮಾಡಿದರೂ ಗೆಲುವು ನಮ್ಮದೇ:*
ಸರ್ಕಾರ ಇದೆ ಹೀಗಾಗಿ ಉಪಚುನಾವಣೆ ಗೆಲ್ಲುತ್ತೇವೆ ಎಂದು ಹೇಳುತ್ತಿರುವ ಸಮಯದಲ್ಲಿ ನೂರಾರು ಸ್ಥಳೀಯ ನಾಯಕರು ತಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತಿವೆ ಎಂದರೆ ಇದು ಪ್ರಮುಖ ಬೆಳವಣಿಗೆಯಾಗಿದೆ.
ಈ ಕ್ಷೇತ್ರದಲ್ಲಿ ಯಾವುದೇ ಪಕ್ಷ ಯಾವುದೇ ಕುತಂತ್ರ ಮಾಡಿದರೂ ಇಲ್ಲಿ ಜಯ ನಮ್ಮದು. ಈ ಚುನಾವಣೆ ಟಿ.ಬಿ ಜಯಚಂದ್ರ, ಡಾ.ಜಿ ಪರಮೇಶ್ವರ್, ರಾಜಣ್ಣ ಹಾಗೂ ಚಂದ್ರಪ್ಪ ಅವರ ನೇತೃತ್ವದಲ್ಲಿ ನಡೆಯಲಿದೆ. ನಾನು, ಸಿದ್ದರಾಮಯ್ಯನವರು ಹಾಗೂ ಪಕ್ಷದ ಇತರ ಹಿರಿಯ ನಾಯಕರು ಇವರ ಜತೆ ಜವಾಬ್ದಾರಿ ಹೊರುತ್ತೇವೆ.