ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ನೇತೃತ್ವದಲ್ಲಿ ಸಂಘದ ತಾಲ್ಲೂಕು ಘಟಕದ ಶಾಖೆಯ ಉದ್ಘಾಟನೆ ಕಾರ್ಯಕ್ರಮವನ್ನು ಪಾವಗಡ ತಾಲ್ಲೂಕಿನ ಅಂಬೇಡ್ಕರ್ ಭವನದಲ್ಲಿಂದು ಆಯೋಜನೆ ಮಾಡಲಾಗಿತ್ತು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಕರ್ನಾಟಕ ಸಂಪಾದಕ ಮತ್ತು ವರದಿಗಾರ ರ ಸಂಘದ ರಾಜ್ಯಾಧ್ಯಕ್ಷ ವಿಷ್ಣುರವರು ಮಾತನಾಡುತ್ತ…. ನಮ್ಮ ಈ ಸಂಘ ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಬೇರುಬಿಟ್ಟಿದೆ. ಇಂದಿನ ಪತ್ರಿಕೋದ್ಯಮದಲ್ಲಿ ಜಾತಿ ಬೇಧ ಭಾವ, ಸಣ್ಣ ಪತ್ರಿಕೆ ದೊಡ್ಡ ಪತ್ರಿಕೆಗಳೆಂಬ ಅಸ್ಪೃಶ್ಯತೆಯ ತುಚ್ಚ ವ್ಯತಿರಿಕ್ತ ಭಾವನೆಗಳಿಗೆ ತುತ್ತಾದ ಪತ್ರಕರ್ತರನ್ನು ಸಂಘಟಿಸಿ ಅವರಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಸರ್ಕಾರದಿಂದ ಪಾರದರ್ಶಕವಾದ ನ್ಯಾಯ ದೊರಕಿಸಿ ಕೊಡುವುದೇ ಸಂಘದ ಮುಖ್ಯ ಧ್ಯೇಯವಾಗಿದೆ ಎಂದರು.
ನಂತರ ಕಾರ್ಯಕಾರಿ ಸದಸ್ಯ ಮುನಿಯಪ್ಪ ಮಾತನಾಡಿ ಇಂದಿನ ಕಾಲಘಟ್ಟದಲ್ಲಿ ಸೃಜನಾತ್ಮಕ ಪತ್ರಕರ್ತರಿಗೆ ಮೌಲ್ಯವಿಲ್ಲದಂತಾಗಿದೆ.ಅಂತಹ ಪತ್ರಕರ್ತರನ್ನು ಸಂಘಟಿಸಿ ಅವರ ಆರ್ತನಾದ ಅರಿತು ಬೆನ್ನೆಲುಬಾಗಿ ನಿಲ್ಲುವ ಪ್ರಾಮಾಣಿಕ ಪ್ರಯತ್ನ ನಮ್ಮ ಸಂಘ ಮಾಡುತ್ತಿದೆ ಎಂದು ಹೆಮ್ಮೆಯಿಂದ ತಿಳಿಸಿದರು.
ನೂತನ ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ ಪಾವಗಡ ಗಡಿನಾಡು ಮಿತ್ರ ಪತ್ರಿಕೆ ಸಂಪಾದಕ ರಾಮಾಂಜಿನಪ್ಪ ಅವರನ್ನು ಆಯ್ಕೆ ಮಾಡಿ ಗುರುತಿನ ಚೀಟಿಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯ ವೇಲು, ಸಂಘದ ಖಜಾಂಚಿ ಮುನಿರಾಜು, ಜಿಲ್ಲಾ ಉಪಾಧ್ಯಕ್ಷ ರಾಜ್ ಕುಮಾರ್, ರಮೇಶ್, ನಮ್ಮಹಕ್ಕು ಗಿರೀಶ್ ಸೇರಿಂದಂತೆ ಹಲವರು ಉಪಸ್ಥಿತರಿದ್ದರು.
ವರದಿ: ನವೀನ್ .