ತುಮಕೂರು :- ಕಾಂಗ್ರೆಸ್ ಹಾಗೂ ಟಿ.ಬಿ ಜಯಚಂದ್ರ ಅವರು ಈ ಕ್ಷೇತ್ರಕ್ಕೆ ಮಾಡಿರುವ ಕೆಲಸಗಳನ್ನು ಮೆಚ್ಚಿರುವ ಶಿರಾ ಕ್ಷೇತ್ರದ ಮತದಾರರು ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸಲು ನಿರ್ಧರಿಸಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಶಿರಾ ಕ್ಷೇತ್ರದ ಭೂವನಕಹಳ್ಳಿ, ಸೋರೆಗುಂಟೆ, ಪಂಜಿಗಾನಹಳ್ಳಿ, ದ್ವಾರಾಳು ಗೇಟ್, ಚನ್ನನಕುಂಟೆ, ಹೊನ್ನಗೊಂಡನಹಳ್ಳಿ, ಮಾಗೋಡು ಗೊಲ್ಲರಹಟ್ಟಿ, ಮಾಗೋಡು, ಯರಗುಂಟೆ ಗೇಟ್, ಗುಳಿಗೇನಹಳ್ಳಿ, ತಗ್ಗಿಹಳ್ಳಿ ಪದ್ಮಾಪುರ, ಯಲಿಯೂರು ಗೇಟ್ ಮತ್ತಿತರ ಕಡೆ ಅಭ್ಯರ್ಥಿ ಜತೆ ಮಂಗಳವಾರ ಬಿರುಸಿನ ಪ್ರಚಾರ ನಡೆಸಿದ ಡಿ.ಕೆ ಶಿವಕುಮಾರ್ ಅವರು ರೋಡ್ ಶೋ, ಸಭೆ ಹಾಗೂ ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯ ಪ್ರಮುಖ ಅಂಶಗಳು ಹೀಗಿವೆ:
* ಕಾಂಗ್ರೆಸ್ ಸರ್ಕಾರ ತಾಂಡಗಳು ಹಾಗೂ ಇತರೆ ಬುಡಕಟ್ಟು ಜನರ ಪ್ರದೇಶವನ್ನು ರೇವೆನ್ಯೂ ಗ್ರಾಮಗಳಾಗಿ ಪರಿವರ್ತನೆ ಮಾಡಿದೆ.
* ಟಿ.ಬಿ ಜಯಚಂದ್ರ ಅವರು ಈ ಕ್ಷೇತ್ರಕ್ಕೆ ಎರಡೂವರೆ ಸಾವಿರ ಕೋಟಿ ರುಪಾಯಿ ಅನುದಾನ ತಂದು ಅಭಿವೃದ್ಧಿ ಮಾಡಿದ್ದಾರೆ. ಹೀಗಾಗಿ ಜನರಿಗೆ ಕಾಂಗ್ರೆಸ್ ಮೇಲೆ ವಿಶೇಷ ಪ್ರೀತಿ ಇದ್ದು, ಈಗ ಸಿಕ್ಕಿರುವ ಅವಕಾಶದಲ್ಲಿ ಜಯಚಂದ್ರ ಅವರನ್ನು ಗೆಲ್ಲಿಸಲು ತೀರ್ಮಾನಿಸಿದ್ದಾರೆ.
* ಬಿಜೆಪಿಯವರು ಹಣ ಹಂಚುತ್ತಿರುವ ಬಗ್ಗೆ ಅವರ ಕಾರ್ಯಕರ್ತರೇ ದಾಖಲೆಗಳನ್ನು ಕೊಟ್ಟಿದ್ದಾರೆ. ಈ ವಿಚಾರದಲ್ಲಿ ನಮ್ಮ ನಾಯಕರು ಚುನಾವಣಾ ಆಯೋಗಕ್ಕೆ ದೂರು ನೀಡಲಿದ್ದಾರೆ.
* ಬಿಜೆಪಿಯವರು ಮನೆ ಮನೆಗೆ ಹಣ ಹಂಚುತ್ತಿದ್ದಾರೆ ಅಂತಾ ತಿಳಿಯಿತು. ಯಾವುದನ್ನು ಬಿಡಬೇಡಿ. ಆದರೆ ಈ ಕ್ಷೇತ್ರಕ್ಕೆ ಕೆಲಸ ಮಾಡಿದವರು ಯಾರು ಎಂಬುದನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಮತ ಚಲಾಯಿಸಿ.
* ಜಯಚಂದ್ರ ಅವರು ಅಭಿವೃದ್ಧಿ ಕೆಲಸಗಳಿಗೆ ಮತ್ತೊಂದು ಹೆಸರು. ಇಲ್ಲಿನ ಅಂತರ್ಜಲ ಹೆಚ್ಚಿಸಲು ಜಯಚಂದ್ರ ಕಾರಣ. ಇವರು ಮಾಡಿರುವ ಕೆಲಸಕ್ಕೆ ಕೂಲಿಯಾಗಿ ಮತ ಕೇಳುತ್ತಿದ್ದೇವೆ.
* ಎಲ್ಲ ಜಾತಿ, ಸಮುದಾಯ, ಜನಾಂಗದವರು ತಮ್ಮ ಭಿನ್ನಾಭಿಪ್ರಾಯವನ್ನು ಮರೆತು ಕಾಂಗ್ರೆಸ್ ಗೇ ಮತ ಹಾಕಿ, ಜಯಚಂದ್ರ ಅವರನ್ನು ವಿಧಾನ ಸೌಧಕ್ಕೆ ಕಳುಹಿಸಬೇಕು.
* ಬೇರೆ ಅಭ್ಯರ್ಥಿಗಳು ನಿಮ್ಮ ಪರವಾಗಿ ಸರ್ಕಾರ, ಸಚಿವರ ಜತೆ ಮಾತನಾಡುವುದಿರಲಿ, ಅಧಿಕಾರಿಗಳನ್ನು ಕೇಳುವ ಶಕ್ತಿಯನ್ನೂ ಪಡೆದಿಲ್ಲ.
* ಅನೇಕ ಜನ ಪಕ್ಷಕ್ಕೆ ಸೇರುತ್ತಿದ್ದಾರೆ ಅಂತಾ ನಮ್ಮ ಪ್ರವಾಸವನ್ನು ಅರ್ಧಕ್ಕೆ ನಿಲ್ಲಿಸಿ ಶಿರಾಗೆ ಬಂದಿದ್ದೇನೆ. ಹಿಂದೆ ನಾವು ಯಾಕೆ ಸೋತೆವು ಎಂಬುದನ್ನು ಮರೆತು, ಸಿಕ್ಕಿರುವ ಈ ಅವಕಾಶವನ್ನು ಬಳಸಿಕೊಳ್ಳಿ.
* ಟಿ.ಬಿ ಜಯಚಂದ್ರ ಅವರು ಮಕ್ಕಳ ಭವಿಷ್ಯಕ್ಕಾಗಿ ಮೊರಾರ್ಜಿ ದೇಸಾಯಿ ಶಾಲೆಗಳನ್ನು ತಂದಿದ್ದಾರೆ. ನೀರಾವರಿಗೆ ಇನ್ನಿಲ್ಲದ ಒತ್ತು ಕೊಟ್ಟಿದ್ದಾರೆ. ವಲಸೆ ತಪ್ಪಿಸಲು ಕೈಗಾರಿಕಾ ಪ್ರದೇಶ ನಿರ್ಮಿಸಿದ್ದಾರೆ. ನಾನು ಮಂತ್ರಿಯಾಗಿದ್ದಾಗ ಕ್ವಾರೆಗಳನ್ನು ಪರಿಶಿಷ್ಟ ಸಮುದಾಯದವರಿಗೆ ನೀಡಲು ಇವರೇ ವ್ಯವಸ್ಥೆ ಮಾಡಿದ್ದಾರೆ.
* ಹಿಂದುಳಿದ ವರ್ಗದವರನ್ನು ಬಿಜೆಪಿಯವರು ಯಾವುದೇ ಕಾರಣಕ್ಕೂ ನಂಬುವುದಿಲ್ಲ. ನಾವು ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ.
* ಬಿಜೆಪಿಯವರು, ಜೆಡಿಎಸ್ ನವರು ಏನೇನು ಮಾಡುತ್ತಿದ್ದಾರೆ ಅಂತಾ ನೀವು ನೋಡಿದ್ದೀರಿ. ದುಡ್ಡು ಹಂಚುತ್ತಿರುವ ಬಗ್ಗೆ ಮಾಹಿತಿ ಪಡೆದಿದ್ದೇನೆ. ನಮಗೆ ನಿಮ್ಮ ಬೆಂಬಲ ಸಾಕು. ಅವರು ಏನೇ ಕೊಟ್ಟರೂ ತೆಗೆದುಕೊಳ್ಳಿ, ಮತ ಹಾಕುವಾಗ ಕಾಂಗ್ರೆಸ್ ಗೆ ಹಾಕಿ.
* ರೈತ ಮುಖಂಡ ಮಾರುತಿ ಮಾನ್ಪಡೆ ಅವರ ಸಾವಿಗೆ ನಾವು ಕಾರಣ ಎನ್ನುತ್ತಿರುವ ಬಿಜೆಪಿ ನಾಯಕರು ಮೊದಲು ಪ್ರಕರಣ ದಾಖಲಿಸಲಿ.